More

    ರವಿ ಬೆಳಗೆರೆ ಅಂಕಣ: ಅಪನಂಬಿಕೆಯೆಂಬುದು ದ್ವೇಷಕ್ಕೆ ತಿರುಗುವ ಮುನ್ನ…

    ಅದನ್ನು ಅಪನಂಬಿಕೆ ಅನ್ನುತ್ತಾರೆ.

    ತುಂಬ ಚೆನ್ನಾಗಿರುವ, ಅನ್ಯೋನ್ಯವಾಗಿರುವ ಇಬ್ಬರು ವ್ಯಕ್ತಿಗಳ ಮಧ್ಯೆ ಇದ್ದಕ್ಕಿದ್ದ ಹಾಗೆ, ಕೆಲವೊಮ್ಮೆ ಕಾರಣವೇ ಇಲ್ಲದೆ ಒಂದು ಅಪನಂಬಿಕೆ ಹುಟ್ಟಿಕೊಂಡು ಬಿಡುತ್ತದೆ. ಹುಡುಕಲು ಕುಳಿತರೆ, ಇದು ಎಲ್ಲಿಂದ ಹುಟ್ಟಿಕೊಂಡಿತು ಎಂಬುದೇ ಗೊತ್ತಾಗುವುದಿಲ್ಲ. ಅದಕ್ಕೊಂದು ಬಲವಾದ ಸಾಕ್ಷ್ಯವೂ ಇರುವುದಿಲ್ಲ. ಎಲ್ಲೋ ಮೂಲೆ ಯಲ್ಲಿ ಸತ್ತುಬಿದ್ದ ಇಲಿಯ ವಾಸನೆ ನಿಧಾನವಾಗಿ ಇಡೀ ಮನೆಗೆ ಹರಡಿಕೊಳ್ಳುವಂತೆ ಅನುಮಾನವೆಂಬುದು, ಅಪನಂಬಿಕೆಯ ರೂಪು ತಳೆದು ಮನಸಿನಾದ್ಯಂತ ಹರಡಿಕೊಳ್ಳುತ್ತದೆ.

    ರವಿ ಬೆಳಗೆರೆ ಅಂಕಣ: ಅಪನಂಬಿಕೆಯೆಂಬುದು ದ್ವೇಷಕ್ಕೆ ತಿರುಗುವ ಮುನ್ನ...ಆ ಇಬ್ಬರು ಯಾರು ಬೇಕಾದರೂ ಆಗಬಹುದು. ಗಂಡ- ಹೆಂಡತಿ, ಗೆಳೆಯರು, ನೌಕರ-ಮಾಲೀಕ, ಎರಡು ಜಾತಿಗಳು, ಎರಡು ಪಕ್ಷಗಳು- ಹೀಗೆ. ಅಪನಂಬಿಕೆ ಹುಟ್ಟಿಕೊಂಡ ಮೇಲೆ ಅದು ದ್ವೇಷವಾಗಿ, hatred ಆಗಿ ಪರಿವರ್ತಿತವಾಗುವುದಕ್ಕೆ ತುಂಬ ಸಮಯವೇನೂ ಹಿಡಿಯುವುದಿಲ್ಲ. ಚೆನ್ನಾಗಿ ಮಾತಾಡುತ್ತ, ಒಟ್ಟಿಗೆ ಊಟ ಮಾಡುತ್ತ, ನಗುತ್ತ ಕಲೆಯುತ್ತ ಇದ್ದ ಇಬ್ಬರು ಮಿತ್ರರು ಹಠಾತ್ತನೆ ಒರೆಗಳಿಂದ ಖಡ್ಗ ಹಿಡಿದವರಂತೆ ಕದನಕ್ಕೆ ನಿಲ್ಲುತ್ತಾರೆಂದರೆ ಆ hatredನ ಬೀಜವಿರುವುದು ಅಪನಂಬಿಕೆಯಲ್ಲಿ!

    ‘ನಾಳೆ ಅವರು ನಮ್ಮ ಜಾತಿಯವರ ಮೆರವಣಿಗೆಯ ಮೇಲೆ ದಾಳಿ ಮಾಡು ತ್ತಾರಂತೆ! ನಮ್ಮವರನ್ನು ಸಿಕ್ಕಲ್ಲಿ ಕೊಂದು ಹಾಕುತ್ತಾರಂತೆ’ ಅಂತ ಒಂದು ವದಂತಿ ಹುಟ್ಟಿಕೊಳ್ಳುತ್ತದೆ. ವದಂತಿ ಹುಟ್ಟಿಕೊಳ್ಳುವುದೆಂದರೆ ಅಪನಂಬಿಕೆ ಹುಟ್ಟಿಕೊಂಡಿತು ಅಂತಲೇ ಅರ್ಥ. ಒಂದಿಡೀ ಜಾತಿಯ ಜನ ಇನ್ನೊಂದು ಇಡೀ ಜಾತಿಯವರನ್ನು, ಎಲ್ಲಿ ಯಾವ ಕ್ಷಣದಲ್ಲಿ ಏನು ಮಾಡುತ್ತಾರೆ ಅಂತ ನೋಡುವುದಿದೆಯಲ್ಲ, ಅದಕ್ಕಿಂತ ಅಸಹ್ಯಕರವಾದುದು ಮತ್ತೊಂದಿಲ್ಲ. ನಿನ್ನೆ ಮೊನ್ನೆಯ ತನಕ ಅವರ ಮನೆಯ ಮದುವೆಗಳಿಗೆ ಹೋಗುತ್ತಿದ್ದೆವು. ಅವರ ಹಬ್ಬಗಳಿಗೆ ಊಟಕ್ಕೆ ಕರೆಯುತ್ತಿದ್ದರು. ನಮ್ಮ ಮನೆಯ ಸಾವಿಗೆ, ಮಣ್ಣಿಗೆ ಅವರು ಬರುತ್ತಿದ್ದರು. ವ್ಯಕ್ತಿಗತವಾದ ಯಾವುದೇ ದ್ವೇಷ ಅವರಿಗೂ ಇರಲಿಲ್ಲ. ನಮಗೂ ಇರಲಿಲ್ಲ. ಆದರೆ ಇದೆಲ್ಲಿಂದ ಹುಟ್ಟಿಕೊಂಡಿತು ದ್ವೇಷ? ಒಬ್ಬರನ್ನೊಬ್ಬರು ಇರಿದುಕೊಂಡು ಬಿಡುವಷ್ಟು?

    ದಾಂಪತ್ಯದಲ್ಲಿ ಹೀಗಾಗುವುದಿಲ್ಲವೆಂದುಕೊಳ್ಳಬೇಡಿ. ಇಷ್ಟ ಪಟ್ಟೇ ಮದುವೆಯಾಗಿರುತ್ತೇವೆ. ಮುಗುಳ್ನಗೆಯಿಂದ ಹಿಡಿದು ಮೈ ವಾಸನೆಯ ತನಕ ಎಲ್ಲವೂ ಇಷ್ಟವಾಗುತ್ತದೆ. ಜೊತೆಗೆ ಉಂಡಿರುತ್ತೇವೆ, ಮಲಗಿರುತ್ತೇವೆ, ಮಕ್ಕಳನ್ನು ಈ ಜಗತ್ತಿಗೆ ಕರೆತಂದಿರುತ್ತೇವೆ. ನಾವು ತುಂಬ happy couple ಅಂದುಕೊಂಡಿರುತ್ತೇವೆ. ಆದರೆ ಇದ್ದಕ್ಕಿದ್ದಂತೆ ಒಂದು ಭಿನ್ನಾಭಿಪ್ರಾಯ, ಅಪನಂಬಿಕೆ ಇಬ್ಬರ ಮಧ್ಯೆ ಹುಟ್ಟಿಕೊಂಡು ಬಿಡುತ್ತದೆ. ಆಕೆ ಏನೇ ಮಾಡಿದರೂ ನನ್ನ ವಿರುದ್ಧವೇ ಬೇಕೆಂತಲೇ ಮಾಡುತ್ತಿದ್ದಾಳೆ ಅನ್ನಿಸತೊಡಗುತ್ತದೆ. ಆತನ ಮಾತಿಗೆ ಯಾವತ್ತೂ ಇಲ್ಲದ ಅರ್ಥಗಳು ಹುಟ್ಟಿಕೊಳ್ಳುತ್ತವೆ. ಮನೆಗೆ ಸುಮ್ಮನೆ ನೆಂಟರು ಬಂದರೆ ‘ಇವಳೇ ಕರೆಸಿರಬೇಕು’ ಅನ್ನಿಸತೊಡಗುತ್ತದೆ. ನೋಡ ನೋಡುತ್ತ happy couple ಅಂದುಕೊಂಡವರು ಒಬ್ಬರನ್ನೊಬ್ಬರು ಕಂಡವರೆದುರು ಬೈಕೊಳ್ಳುತ್ತ ಓಡಾಡತೊಡಗುತ್ತಾರೆ. ಚಿಕ್ಕದಾಗಿ ಆರಂಭವಾಗುವ ಅಪನಂಬಿಕೆಯೆಂಬುದು ದ್ವೇಷವಾಗಿ ಪರಿವರ್ತಿತ ಗೊಳ್ಳುವುದಕ್ಕೆ ಎಷ್ಟು ಮಹಾ ಹೊತ್ತೂ ಹಿಡಿಯುವುದಿಲ್ಲ.

    ಮುಂಚೆ, ನಾನು ಭಯಂಕರ ಸಿಟ್ಟಿಗೇಳುತ್ತಿದ್ದ ದಿನಗಳಲ್ಲಿ ತುಂಬ ಹತ್ತಿರದವರ ಮೇಲೆ ಹರಿಹಾಯುತ್ತಿದ್ದೆ. ಕೆಲವು ಒಳ್ಳೆಯ ಗೆಳೆಯ ಗೆಳತಿಯರನ್ನು ಅದರಿಂದಾಗಿ ಕಳೆದುಕೊಂಡೆ. ಇವತ್ತು ಕೂತು ಯೋಚಿಸಿದರೆ, ಅವರ ಮೇಲೆ ನನಗಾಗಲೀ, ನನ್ನ ಮೇಲೆ ಅವರಿಗಾಗಲೀ ಅಂಥ hatred ಇದ್ದೇ ಇರಲಿಲ್ಲ. ನಾನು ತಪ್ಪಿದ್ದೆಲ್ಲಿ ಅಂತ ಹುಡುಕಲು ಹೊರಟರೆ, ಅಪನಂಬಿಕೆ ಆರಂಭವಾದ ಕೂಡಲೆ ಅದನ್ನು ಸರಿಪಡಿಸಿಕೊಂಡು ಬಿಡುವ ಪ್ರಯತ್ನ ಮಾಡುತ್ತಿರಲಿಲ್ಲ. ‘ಅವರು ಬೇಕೆಂತಲೇ ಹೀಗೆ ಮಾಡಿದರು’ ಅಂತ ಒಂದು ಅಸಂಪ್ಷನ್ನಿಗೆ ಬಂದು ಬಿಡುತ್ತಿದ್ದೆ. ನಾವು ಎಚ್ಚರವಹಿಸಬೇಕಾದುದೇ ಆ ಸಂಕ್ರಮಣದ ಅವಧಿಯ ಬಗ್ಗೆ. ಸಣ್ಣಗೆ ಹುಟ್ಟಿಕೊಳ್ಳುವ ಅಪನಂಬಿಕೆ ನೋಡ ನೋಡುತ್ತ

    ದ್ವೇಷವಾಗಿ, ತಿರಸ್ಕಾರವಾಗಿ ಬೆಳೆದು ಬಿಡುತ್ತದೆ ಅಂದೆನಲ್ಲ? ‘ನೋಡ ನೋಡುತ್ತ’ ಕೂಡುವ ತಪ್ಪನ್ನು ಯಾಕೆ ಮಾಡಬೇಕು? ಹುಟ್ಟಿಕೊಂಡ ಅಪನಂಬಿಕೆಯನ್ನು ಆ ಕ್ಷಣದಲ್ಲೇ ಯಾಕೆ ಬಗೆಹರಿಸಿಕೊಂಡು ಬಿಡಬಾರದು?

    ‘ನೋಡೇ, ನೀನು ಹಾಗೆ ಮಾಡ್ತಿರೋದು ನನಗೆ ಸರಿಹೋಗುತ್ತಿಲ್ಲ. ನೀನು ಹಾಗೆ ಮಾಡ್ತಿರೋ ದರಿಂದ ನನಗೆ ಹೀಗನ್ನಿಸುತ್ತಿದೆ’ ಅಂತ ಕೂಡಿಸಿಕೊಂಡು, ಜಗಳದ್ದಲ್ಲದ ದನಿಯಲ್ಲಿ ಹೇಳಿ ನೋಡಿ? ನನಗೆ cool ಆಗಿ ಮಾತನಾಡುವುದು ಅಭ್ಯಾಸವಾದ ಮೇಲೆ ಜಗಳಗಳು ತುಂಬ ಕಡಿಮೆಯಾಗಿವೆ. ಜೊತೆಜೊತೆಯಲ್ಲಿ ದುಡಿಯುವಾಗ, ಬದುಕುವಾಗ ವಿರೋಧಗಳು ಬಂದೇ ಬರುತ್ತವೆ. ಇಲ್ಲವೆಂದಲ್ಲ. ಅಪ ನಂಬಿಕೆ ಗಳೂ ಮೂಡುತ್ತವೆ. ಆದರೆ ಅಷ್ಟೆಲ್ಲ ಹೊಂದಿ ಕೊಂಡಿದ್ದವರು, ಆತ್ಮೀಯರಾಗಿದ್ದವರು, ಅನ್ಯೋನ್ಯವಾಗಿದ್ದವರು ಶರಂಪರ ಬಡಿದಾಡು ವಂತಹ ಶತ್ರುಗಳಾಗುವುದನ್ನು, ಹಾಗೆ ಕೂಲ್ ಆಗಿ ಕೂತು ಮಾತಾಡಬಹುದಲ್ಲ?

    ಹಾಗೆ ಮಾತನಾಡಿ ಬಗೆಹರಿಸಿಕೊಳ್ಳುವುದು ಕೂಡ ಒಂದು ಕಲೆಯೇ. ಅಪನಂಬಿಕೆ ಎಂಬುದು ಆರಂಭದಲ್ಲಿ ಒಂದು ಸಿಡಿಮಿಡಿ ಮೂಡಿಸುತ್ತದೆ. ಮಾತಿಗೆ ಕೂಡುವಾಗ ಆ ಸಿಡಿಮಿಡಿಯನ್ನು ಕಳೆದುಕೊಂಡು ಮುಕ್ತ ಹಾಗೂ ಪ್ರಾಂಜಲ ಮನಸ್ಸಿನಿಂದಿರಬೇಕು. ಸಾಮಾನ್ಯವಾಗಿ ಗೆಳೆಯರು ಸ್ವಲ್ಪ ಅಪನಂಬಿಕೆ ಮೂಡಿದ ತಕ್ಷಣ ಪರಸ್ಪರರನ್ನು ಭೇಟಿಯಾಗುವುದನ್ನೇ ಬಿಟ್ಟುಬಿಡುತ್ತಾರೆ. ಅದಕ್ಕಿಂತ ತಪ್ಪಿನ ಕೆಲಸ ಮತ್ತೊಂದಿಲ್ಲ. ಗೆಳೆಯರು ದೂರವಾಗುತ್ತಿದ್ದಂತೆಯೇ ಮಧ್ಯದವರು ತರಲೆ ಆರಂಭಿಸುತ್ತಾರೆ. ಅವನು ಹೀಗಂದನಂತೆ, ಹಾಗೆ ಮಾಡುತ್ತಾನಂತೆ, ನಿನಗಾಗದವರ ಜೊತೆ ಸೇರಿದ್ದಾನಂತೆ ಬರೀ ಇಂಥದ್ದೇ ಮಾತು, ಚಾಡಿ. ಅಪನಂಬಿಕೆಯೆಂಬುದು ಹೆಮ್ಮರವಾಗಿ, ದ್ವೇಷದ ಬಡಬಾಗ್ನಿಯಾಗಿ ಬೆಳೆಯುವುದೇ ಆವಾಗ. ಒಂದು ಸಲ ದ್ವೇಷ ಬೆಳೆಯಿತೆಂದರೆ ಮುಗಿಯಿತು. ಗೆಳೆತನ, ದಾಂಪತ್ಯದ, ಸಹಬಾಳ್ವೆಯ, ಅನುಬಂಧದ ವರ್ಷಾನುಗಟ್ಟಲೆಯ ಮಾಧುರ್ಯ ನೆನಪು ಕೂಡ ಆಗದಂತೆ ಸತ್ತುಹೋಗಿಬಿಡುತ್ತದೆ. ತಪು್ಪ ಆ ಕಡೆಯವರದೇ ಆಗಿರಲಿ. ಅಪನಂಬಿಕೆ ಅವರಲ್ಲೇ ಹುಟ್ಟಿರಲಿ. ಮೊದಲು ಗುಟುರು ಅವರೇ ಹಾಕಿರಲಿ. ನಾವು ಕೊಂಚ ತಣ್ಣಗಿರೋಣ. ಮೃದುವಾಗಿ ಮಾತನಾಡೋಣ. ಇಷ್ಟರ ಮೇಲೆ ಇಬ್ಬರ ನಡುವಿನ ಸೇತುವೆ ಮುರಿಯಲೇಬೇಕಾ?

    ಸರಿ, ಸದ್ದಿಲ್ಲದೆ ಮುರಿಯೋಣ. ತಣ್ಣಗೆ ಕೂತು ಮಾತು ಮುಗಿಸೋಣ. ಅಷ್ಟು ವರ್ಷಗಳ ಗೆಳೆತನಕ್ಕಾದರೂ ಒಂದು ಗೌರವ ಕೊಡೋಣ, ಅಲ್ಲವೆ?

    (ಲೇಖಕರು ಹಿರಿಯ ಪತ್ರಕರ್ತರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts