More

  ಜರೂರ್​ ಮಾತು ಅಂಕಣ: ಸೀದಾಸಾದಾ ಕ್ಷೌರಿಕ ಉದ್ಯಮವನ್ನೇ ಕಟ್ಟಿದ ಸ್ಪಿನ್ ಮೋಡಿ!

  ಎಲ್ಲ ವಯಸ್ಸಿನವರೂ ಅದರಲ್ಲೂ ತರುಣರು, ಯುವಕರು ಒಮ್ಮೆ ಮೈಕೊಡವಿ ಕೊಂಡು ಕೇಳಬೇಕಾದ ಕಥೆ ಇದು. ಕುಲಕಸುಬುಗಳು ಕಣ್ಮರೆಯಾಗುತ್ತಿರುವಾಗ ಹೊಸ ಆಶಾವಾದ ಮೂಡಿಸುವ ಸ್ಪಿನ್ ಕಥೆ ಇದು. ಈ ಹುಡುಗ ತಂದೆಯೊಂದಿಗೆ ಸೇರಿ ಹೇರ್​ಕಟಿಂಗ್ ಮಾಡುತ್ತ, ತನ್ನ ಸಾಂಪ್ರದಾಯಿಕ ವೃತ್ತಿಯನ್ನೇ ಪ್ರೀತಿಸತೊಡಗಿದ. ‘ಇದು ನನ್ನ ಹೃದಯದಲ್ಲಿ ಅರಳಿದ ಕಲೆ’ ಎಂದು ಆರಾಧಿಸತೊಡಗಿದ. ಇದಕ್ಕೆ ಆಧುನಿಕತೆಯ ಸ್ಪರ್ಶ ಕೊಟ್ಟರೆ ಹೇಗೆಂದು ಯೋಚಿಸಿ ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿ ಸುಸಜ್ಜಿತ ಹೇರ್ ಸಲೂನ್ ಆರಂಭಿಸಿಯೇ ಬಿಟ್ಟ. ಅಲ್ಲಿಂದ ಹಿಂದೆ ತಿರುಗಿ ನೋಡದೆ ಹೊಸ ವಿಕ್ರಮಗಳನ್ನು ದಾಖಲಿಸುತ್ತ ‘ಸ್ಪಿನ್’ ಎಂಬ ಬ್ರ್ಯಾಂಡ್​ನ್ನೇ ಸ್ಥಾಪಿಸಿ, 22-23 ಸಲೂನ್​ಗಳನ್ನು ಆರಂಭಿಸಿ, 350 ಸಿಬ್ಬಂದಿಗೆ ಅನ್ನದಾತನಾಗಿರುವ ಸಾಧಕ ನಾಮದೇವ್ ನಾಗರಾಜ್. ಓದಿದ್ದು ಬರೀ ಹತ್ತನೇ ತರಗತಿಯವರೆಗೆ. ಆದರೆ, ಹಲವು ಅಂತಾರಾಷ್ಟ್ರೀಯ ಭಾಷೆ ಸೇರಿ ಏಳೆಂಟು ಭಾಷೆಗಳನ್ನು ಪಟಪಟನೇ ಮಾತನಾಡುವ, 20ಕ್ಕೂ ಹೆಚ್ಚು ರಾಷ್ಟ್ರಗಳಿಗೆ ಭೇಟಿ ನೀಡಿ, ಅಲ್ಲಿ ಕಲಿತ ಅಂಶಗಳನ್ನು ಉದ್ಯಮದಲ್ಲಿ ಅಳವಡಿಸಿರುವ, ಸೇವಾ ಚಟುವಟಿಕೆಗಳಿಗಾಗಿಯೇ ಫೌಂಡೇಷನ್ ಸ್ಥಾಪಿಸಿರುವ ನಾಮದೇವರ ಸ್ಪೀನ್​ಗೆ ಸಿನಿಮಾ ತಾರೆಗಳು, ಪ್ರಸಿದ್ಧ ಉದ್ಯಮಿಗಳು ಕಾಯಂ ಗ್ರಾಹಕರು.

  ಜರೂರ್​ ಮಾತು ಅಂಕಣ: ಸೀದಾಸಾದಾ ಕ್ಷೌರಿಕ ಉದ್ಯಮವನ್ನೇ ಕಟ್ಟಿದ ಸ್ಪಿನ್ ಮೋಡಿ!ಇದೆಲ್ಲ ಹೇಗೆ ಸಾಧ್ಯವಾಯಿತು ಎಂಬ ಅಚ್ಚರಿಯೇ. ನಾಮದೇವ್ ಬದುಕಿನ ಪಯಣವೇ ಅದಕ್ಕೆ ಉತ್ತರ. 1982ರಲ್ಲಿ ಬೆಂಗಳೂರಿನಲ್ಲಿ ಜನಸಿದ ನಾಮದೇವರದ್ದು ದೊಡ್ಡ ಕುಟುಂಬ. ತಂದೆ, ತಾಯಿ, ಮೂವರು ಸೋದರಿಯರು, ಒಬ್ಬ ತಮ್ಮ. ಇವರ ತಂದೆ ಬೆಂಗಳೂರು ಏರ್​ಫೋರ್ಸ್​ನಲ್ಲಿ ಸಣ್ಣ ಹೇರ್ ಕಟಿಂಗ್ ಅಂಗಡಿ ಇಟ್ಟುಕೊಂಡಿದ್ದರು. ಆ ಅಂಗಡಿ ಸೈನಿಕರಿಗೆ ಮಾತ್ರ ಮೀಸಲು! ಅಪ್ಪನಿಗೆ ಕೆಲಸದಲ್ಲಿ ಸಹಾಯ ಮಾಡುತ್ತಿದ್ದ ನಾಮದೇವ್ 14ನೇ ವಯಸ್ಸಿನಲ್ಲೇ ಅಂದರೆ 8ನೇ ತರಗತಿ ಓದುತ್ತಿದ್ದ ಹೊತ್ತಲ್ಲೇ ಕುಲಕಸುಬನ್ನು ಕರಗತವಾಗಿಸಿಕೊಂಡರು. ಅಲ್ಲಿ ಯೋಧರನ್ನು, ಅವರ ಸೇವೆಯನ್ನು ನೋಡುತ್ತಿದ್ದ ನಾಮದೇವರಿಗೆ ಜೀವನದಲ್ಲಿ ಎಲ್ಲಕ್ಕಿಂತ ಮಿಗಿಲು ಎನಿಸಿದ್ದು ರಾಷ್ಟ್ರಸೇವೆ! ಈ ಮೌಲ್ಯವೇ ಅವರ ಜೀವನಕ್ಕೆ ಬಹುದೊಡ್ಡ ತಾತ್ವಿಕ ಹಾಗೂ ಸಾತ್ವಿಕ ತಳಹದಿ ನಿರ್ವಿುಸಿಬಿಟ್ಟಿತು.

  ಈ ನಡುವೆ ಸಲೂನಿನ ಆದಾಯ ಮನೆ ನಡೆಸಲು ಸಾಕಾಗುತ್ತಿರಲಿಲ್ಲ. ಅದಕ್ಕೆಂದೆ, ಪಾರ್ಟ್ ಟೈಂನಲ್ಲಿ ಹೂ, ಹಣ್ಣು, ತರಕಾರಿ, ಸೊಪು್ಪ ಮಾರಾಟ ಮಾಡುತ್ತಿದ್ದರು. ಈ ಕೆಲಸಗಳ ಜತೆಯೇ ಒಂಬತ್ತನೇ ತರಗತಿ ಪಾಸು ಮಾಡಿಯಾಗಿತ್ತು. ಹತ್ತನೇ ತರಗತಿ ಓದಲು ಹಣಕಾಸಿನ ತೊಂದರೆಯಾಗಿ ತರಕಾರಿ ಮಾರಾಟದಲ್ಲೇ ತೊಡಗಿಕೊಂಡರು. ಅದೊಂದು ದಿನ ಶಾಲಾಶಿಕ್ಷಕರ ಮನೆ ಎದುರಿನಿಂದ ಹೋಗುತ್ತಿರುವಾಗಲೇ ಆ ಶಿಕ್ಷಕರು ಗುರುತು ಹಿಡಿದು, ‘ಚೆನ್ನಾಗಿ ಓದುತ್ತಿದ್ದೆ. ಈಗೇಕೆ ಶಾಲೆಗೆ ಬರುತ್ತಿಲ್ಲ?’ ಎಂದು ಕೇಳಿದಾಗ, ಅಷ್ಟೇ ಮುಗ್ಧವಾಗಿ ‘ಓದುವ ಪರಿಸ್ಥಿತಿ ಇಲ್ಲ’ ಎಂದರು. ‘ಶಾಲೆಗೆ ಬಾ ನಾನು ವ್ಯವಸ್ಥೆ ಮಾಡಿಸ್ತೀನಿ’ ಅಂತ ಆ ಶಿಕ್ಷಕರು ಹೇಳಿ ಹಳೆಯ ವಿದ್ಯಾರ್ಥಿಗಳು ಓದಿದ ಪುಸ್ತಕಗಳನ್ನು ಕೊಡಿಸಿದರಂತೆ. ಆ ಹೊತ್ತಿಗೆ ಶಾಲೆ ಆರಂಭವಾಗಿ ಮೂರು ತಿಂಗಳಾಗಿತ್ತು! ಆದರೂ, ಚೆನ್ನಾಗಿಯೇ ಓದಿದ ನಾಮದೇವರಿಗೆ ಆಗಿನಿಂದಲೇ ಕನ್ನಡದ ಮೇಲೆ ಅಪಾರ ಅಕ್ಕರೆ. 10ನೇ ತರಗತಿಯ ವಾರ್ಷಿಕ ಪರೀಕ್ಷೆಯಲ್ಲಿ ಕನ್ನಡದಲ್ಲಿ 125ಕ್ಕೆ 123 ಅಂಕ. ಆ ಬಳಿಕ ಕಾಲೇಜ್ ಮೆಟ್ಟಿಲು ಹತ್ತಬೇಕೆಂಬ ಆಶಯದಿಂದ ಮಲ್ಲೇಶ್ವರ ಕಾಲೇಜಿನಿಂದ ಅರ್ಜಿ ತಂದರಾದರೂ, ತಂದೆ, ‘ಹತ್ತನೇ ತರಗತಿಯವರೆಗೆ ಓದಿದ್ದೀಯ ಸಾಕು. ನನ್ನ ಕೆಲಸಕ್ಕೆ ಸಹಾಯ ಮಾಡು’ ಎಂದರು. ಕಾಲೇಜಿಗೆ ಹೋಗುವ ಆಸೆ ಕೈಬಿಟ್ಟರೂ ವಿದ್ಯೆ ಪಡೆಯುವ ತುಡಿತವೇನೂ ಕಡಿಮೆ ಆಗಿರಲಿಲ್ಲ. ಹೇಗಾದರೂ ಮಾಡಿ ಓದಲೇಬೇಕೆಂಬ ಕನಸು ಬೆಂಬಿಡದೆ ಕಾಡುತ್ತಿತ್ತು.

  2000ರಲ್ಲಿ ಮಲ್ಲೇಶ್ವರದಲ್ಲಿ ತಂದೆ ಸಣ್ಣ ಸಲೂನ್ ಅಂಗಡಿ ಹಾಕಿದರು. ಅದರಲ್ಲೇ ಅರ್ಧದಿನ ಕೆಲಸ ಮಾಡುತ್ತ ನಾಮದೇವ್ ಉಳಿದ ಹೊತ್ತಲ್ಲಿ ಚಾಲಕರಾಗಿಯೂ ದುಡಿಯುತ್ತಿದ್ದರು. ಬದುಕನ್ನು ಹಳಿಯಲಿಲ್ಲ, ತನ್ನ ವಾರಗೆಯ ಹುಡುಗರು ಕಾಲೇಜ್ ದಿನಗಳನ್ನು ಎಂಜಾಯ್ ಮಾಡುತ್ತಿದ್ದರೆ ಅದನ್ನು ಕಂಡು ಬೇಸರಿಸಿಕೊಳ್ಳಲಿಲ್ಲ. ಕೆಲಸದ ಓಟ, ಮನೆ ನಡೆಸಲು ಅವಶ್ಯವಾದಷ್ಟು ಆದಾಯ ಹೊಂದಿಸುವ ಹೋರಾಟ ನಡೆದೇ ಇತ್ತು. ಪರಿಣಾಮ, ಆರ್ಥಿಕ ಪರಿಸ್ಥಿತಿ ಕೊಂಚ ಸುಧಾರಿಸಿತು.

  ಅಂದಹಾಗೆ, ನಾಮದೇವ್ ಹೈಸ್ಕೂಲ್ ದಿನಗಳಲ್ಲೇ ಸ್ವಾಮಿ ವಿವೇಕಾನಂದರ ಜೀವನಚರಿತ್ರೆ ಓದಿ, ಸ್ವಾಮೀಜಿಯನ್ನು, ಅವರ ವಿಚಾರಗಳನ್ನು ಪ್ರೇರಣೆಯಾಗಿಸಿಕೊಂಡರು. ಹಾಗಾಗಿ, ಗಟ್ಟಿ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಮತ್ತು ತಾನು ಚೆನ್ನಾಗಿ ಬಾಳುತ್ತ ಇತರರಿಗೂ ಉಪಕಾರಿ ಆಗಬೇಕು ಎಂಬ ಆದರ್ಶ ಗಟ್ಟಿಯಾಗಿ ಮನಸ್ಸಿನಲ್ಲಿ ಬೇರೂರಿತು. ಆಂಗ್ಲಭಾಷೆ ಬರುವುದಿಲ್ಲ ಎಂಬ ಕೀಳರಿಮೆ ಹೋಗಲಾಡಿಸಲು ವಿವೇಕಾನಂದ ಇಂಗ್ಲಿಷ್ ಟ್ರೇನಿಂಗ್ ಅಕಾಡೆಮಿ ಸೇರಿ ಇಂಗ್ಲಿಷನ್ನು ಕಲಿತರು.

  2005ರಲ್ಲಿ ಬೆಂಗಳೂರಿನ ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನದ (ಖ್ಗಖಅ) ಸಂಪರ್ಕಕ್ಕೆ ಬಂದಿದ್ದು ದೊಡ್ಡ ತಿರುವನ್ನೇ ನೀಡಿತು. ಅಲ್ಲಿ ಮೂರು ವರ್ಷಗಳ ಕಾಲ ಯೋಗಶಿಕ್ಷಕ ತರಬೇತಿ ಪಡೆದುಕೊಂಡು 2009ರಲ್ಲಿ ಮೊದಲ ಬಾರಿ ವಿದೇಶಕ್ಕೆ ಯೋಗ ಕಲಿಸಲು ಹೋದರು. ನೆದರ್​ಲ್ಯಾಂಡ್​ನ ಮಕ್ಕಳಿಗೆ ಯೋಗ ಹೇಳಿಕೊಡುತ್ತಲ್ಲೇ, ಅಲ್ಲಿನ ಸಂಸ್ಕೃತಿ, ಜೀವನವಿಧಾನವನ್ನು ಅರಿತುಕೊಂಡರು. ಮುಖ್ಯವಾಗಿ, ಕ್ಷೌರಿಕ ವೃತ್ತಿ ಇಲ್ಲಿ ಹೇಗಿದೆ ಎಂಬ ಕುತೂಹಲದಿಂದ ಅವರು ಇಣುಕಿದಾಗ ಅನೇಕ ಅಚ್ಚರಿಯ ಸಂಗತಿಗಳು ಎದುರಾದವು. ಸ್ವಚ್ಛತೆಗೆ ತುಂಬ ಆದ್ಯತೆ, ಪ್ರಾಮಾಣಿಕತೆಯನ್ನು ಬಿಟ್ಟುಕೊಡದ ಬದ್ಧತೆ ಮತ್ತು ಗುಣಮಟ್ಟದ ಕೆಲಸ-ಈ ಮೂರು ಅಂಶಗಳಿಂದ ಪ್ರಭಾವಿತರಾದರು. ಭಾರತಕ್ಕೆ ಬಂದೊಡನೆಯೇ ತಮ್ಮನೊಂದಿಗೆ ಚರ್ಚೆ ಮಾಡಿ ನಾವು ಅಂಥ ಸಾಹಸಕ್ಕೆ ಪ್ರಯತ್ನಿಸಬಹುದಲ್ವ ಅಂತ ಮುಂದಡಿ ಇಟ್ಟರು. ಕೈಯಲ್ಲಿ ದುಡ್ಡಿರಲಿಲ್ಲ. ಬಂಡವಾಳ ಹೊಂದಿಸುವುದು ಕಷ್ಟವಾಗಿತ್ತು. ಅಲ್ಲಿ ಇಲ್ಲಿ ಸಾಲ ಮಾಡಿ ಕಡೆಗೂ 2011ರಲ್ಲಿ ವಿದ್ಯಾರಣ್ಯಪುರದಲ್ಲಿ ಸ್ಪಿನ್ ಹೆಸರಿನ ಮೊದಲ ಸಲೂನ್ ಆರಂಭಿಸಿಯೇ ಬಿಟ್ಟರು. ಆಗ ನಾಮದೇವ್, ಅವರ ತಮ್ಮ ಮತ್ತು ಸೋದರಸಂಬಂಧಿ ಸೇರಿ ಇದ್ದದ್ದು ಒಟ್ಟು ಐದು ಜನ. ಆರಂಭದಲ್ಲಿ ಎಡರುತೊಡರುಗಳು ಎದುರಾದವು. ಜನರೇಟರ್ ವ್ಯವಸ್ಥೆ ಇಲ್ಲದ್ದರಿಂದ ಕೆಲವೊಮ್ಮೆ ಗ್ರಾಹಕರಿಂದ ಬೈಸಿಕೊಂಡಿದ್ದೂ ಆಯಿತು. ಅದೆಲ್ಲವನ್ನು ಖುಷಿಯಿಂದಲೇ ಸ್ವೀಕರಿಸಿದರು. ಸ್ವಚ್ಛತೆ, ಪ್ರಾಮಾಣಿಕತೆ, ಗುಣಮಟ್ಟದ ಸೇವೆಯನ್ನೇ ಧ್ಯೇಯವಾಗಿಸಿ, ಅನುಷ್ಠಾನಕ್ಕೆ ತಂದರು. ನೋಡುನೋಡುತ್ತಲೇ ಇದು ಉದ್ಯಮದ ಸ್ವರೂಪ ಪಡೆದುಕೊಂಡಿತು. ‘ನಮ್ಮ ಹೊಟ್ಟೆ ತುಂಬಿದ ಮೇಲೆ ಈ ವೃತ್ತಿಯಲ್ಲೇ ಉದ್ಯೋಗಗಳನ್ನು ಸೃಷ್ಟಿಸಬೇಕು ಎಂಬ ಸ್ಪಷ್ಟಗುರಿ ಇತ್ತು. ಅದಕ್ಕಾಗಿ, ಕಾರ್ಯನಿರ್ವಹಿಸಿದೆ. ಒಬ್ಬೊಬ್ಬರಿಗೂ ಕೆಲಸ ನೀಡಿದಾಗ ಆಗುತ್ತಿದ್ದ ಸಂತೋಷ ಅಷ್ಟಿಷ್ಟಲ’ ಎಂದು ಖುಷಿಯಿಂದ ಹೇಳುವ ನಾಮದೇವ್ ವೃತ್ತಿಪ್ರೇಮ, ವೃತ್ತಿಘನತೆಯನ್ನು ಎತ್ತಿ ಹಿಡಿದಿದ್ದಾರೆ. ಯಾವ ಕೆಲಸವೂ ಮೇಲಲ್ಲ, ಕೀಳಲ್ಲ ಎಂಬುದನ್ನು ಸಾಕ್ಷಾತ್ಕರಿಸಿದ್ದಾರೆ.

  ಬೆಂಗಳೂರಿನ ಬಗಲಗುಂಟೆ, ಕತ್ರಿಗುಪ್ಪೆ, ಕೊಡಿಗೆಹಳ್ಳಿ, ಇಂದಿರಾ ನಗರ, ಕನಕಪುರ ರಸ್ತೆ, ಮೈಸೂರು, ತುಮಕೂರು ಹೀಗೆ ಒಟ್ಟು 22-23 ಸಲೂನ್​ಗಳು ತಲೆಎತ್ತಿವೆ. ‘ಪಾರಂಪರಿಕ ವೃತ್ತಿಗೆ ಆಧುನಿಕತೆಯ ಸ್ಪರ್ಶ ನೀಡಿದ್ದರಿಂದಲೇ ಇದೆಲ್ಲ ಸಾಧ್ಯವಾಯಿತು’ ಎನ್ನುವ ನಾಮದೇವ್ ಆಧುನಿಕ ಉಪಕರಣಗಳು, ಹೊಸ ಮತ್ತು ಸುಸಜ್ಜಿತ ಸೌಲಭ್ಯಗಳನ್ನು ಒದಗಿಸಿದ್ದಾರೆ. ಹಾಗಾಗಿಯೇ, ಸ್ಪಿನ್​ನ ಪ್ರತಿ ಸಲೂನ್​ಗೆ

  ತಲಾ -ಠಿ; 60-70 ಲಕ್ಷ ಹೂಡಿಕೆ ಮಾಡಿದ್ದಾರೆ. ಕನಕಪುರ ರಸ್ತೆಯಲ್ಲಿನ ಇವರ ಹೊಸ ಸಲೂನ್​ನ್ನು ಉದ್ಘಾಟಿಸಲು ಹೋಗಿದ್ದ ಯುವಾ ಬ್ರಿಗೇಡ್​ನ ಚಕ್ರವರ್ತಿ ಸೂಲಿಬೆಲೆ ನಾಮದೇವ್ ಸಾಧನೆ ಕಂಡು ಬೆರಗಾದರು. ಅದಕ್ಕೆಂದೆ, ನವೋದ್ಯಮಕ್ಕಾಗಿ ಮಾರ್ಗದರ್ಶನ ಮಾಡಲು ಬೆಳಗಾವಿಯಲ್ಲಿ ಆಯೋಜಿಸಲಾಗಿದ್ದ ‘ಫಿಪ್ತ್ ಪಿಲ್ಲರ್’ ಕಾರ್ಯಕ್ರಮಕ್ಕೆ ಅವರನ್ನು ಆಹ್ವಾನಿಸಿದ್ದರು. ಸಾವಿರಕ್ಕೂ ಹೆಚ್ಚು ಯುವಕರಿಗೆ ಉದ್ಯಮ ಕಟ್ಟುವ ಪ್ರೇರಣಾಮಾತುಗಳನ್ನು ನಾಮದೇವ್ ಹಂಚಿದರು.

  ಈ ಉದ್ಯಮ ವಿಸ್ತರಣೆ ನಡುವೆ ಅವರು ಯೋಗವನ್ನು, ಸಂಸ್ಕೃತಿಯ ಶಕ್ತಿಯನ್ನು ಮರೆಯಲಿಲ್ಲ. ನೆದರ್​ಲ್ಯಾಂಡ್, ಫ್ರಾನ್ಸ್, ಜರ್ಮನಿ, ಇಟಲಿ, ಅಮೆರಿಕ, ಸ್ಪೇನ್ ಸೇರಿ ಇಪ್ಪತ್ತಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಸಂಚರಿಸಿ ಯೋಗದ ಮಹಿಮೆಯನ್ನು ಸಾರಿದರು. ಹೊಸ ಭಾಷೆಗಳನ್ನು ಕಲಿತು, ಆತ್ಮೀಯತೆಯಿಂದ ಸಂವಾದಿಸಿದರು.

  ಕ್ಷೌರಿಕ ವೃತ್ತಿಗೆ ಅವಕಾಶವೂ ಇದೆ, ಒಳ್ಳೆ ಆದಾಯವೂ ಇದೆ. ಆದರೆ, ಯುವಕರು ಕೀಳರಿಮೆಯಿಂದ ಈ ಕಸುಬು ತೊರೆಯುತ್ತಿದ್ದಾರೆ. ಅಲ್ಲದೆ, ಇದೇ ವೃತ್ತಿಯಲ್ಲಿರುವವರು ಹೆಚ್ಚಾಗಿ ದುಶ್ಚಟಗಳಲ್ಲಿ ತೊಡಗಿರುವುದರಿಂದ ಆದಾಯ ಸಾಕಾಗುತ್ತಿಲ್ಲ ಎಂಬ ವಾಸ್ತವವನ್ನು ತಮ್ಮ ಓಡಾಟ, ಒಡನಾಟ ಮುಖಾಂತರ ಅರಿತುಕೊಂಡಿರುವ ನಾಮದೇವ್, ಉತ್ತರ ಕರ್ನಾಟಕ ಭಾಗದಲ್ಲಿ ‘ಕ್ಷೌರ ಕುಟೀರ’ ಹೆಸರಿನಲ್ಲಿ ತೀರಾ ಬಡವರಿಗೆ -ಠಿ; 1.15 ಲಕ್ಷ ವೆಚ್ಚದಲ್ಲಿ ಕ್ಷೌರದಂಗಡಿಗಳನ್ನು ಹಾಕಿ ಕೊಡುತ್ತಿದ್ದಾರೆ, ಸಣ್ಣ ಅಂಗಡಿ ಇದ್ದರೆ ಅದನ್ನು ಮೇಲ್ದರ್ಜೆಗೆ ಏರಿಸುತ್ತಿದ್ದಾರೆ. ಈಗಾಗಲೇ ಇಂಥ 11-12 ಕುಟೀರಗಳು ಕಾರ್ಯನಿರ್ವಹಿಸುತ್ತಿವೆ. ವೃತ್ತಿಕೀಳರಿಮೆ ತೊಡೆದು ಹಾಕಲು ಮತ್ತು ಹೊಸತನಕ್ಕೆ ಹೊಂದಿಕೊಳ್ಳಲು ಅನುವಾಗುವಂತೆ ಇತ್ತೀಚೆಗೆ ರಾಜ್ಯದ ಎಲ್ಲ ಜಿಲ್ಲೆಗಳ 600ಕ್ಕೂ ಅಧಿಕ ಯುವಕ್ಷೌರಿಕರನ್ನು ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ಸೇರಿಸಿ ಕಾರ್ಯಾಗಾರ ನಡೆಸಿದ್ದಾರೆ. ಅವರೆಲ್ಲ ದುಶ್ಚಟಗಳಿಂದ ಮುಕ್ತಿ ಪಡೆಯಬೇಕೆಂಬ ಉದ್ದೇಶದಿಂದ ಯೋಗ, ಧ್ಯಾನ ಹೇಳಿಕೊಡುತ್ತಿದ್ದಾರೆ. ಆಯಾ ಜಿಲ್ಲೆಗಳಲ್ಲಿ ಯುವಕ್ಷೌರಿಕರನ್ನು ಶ್ರೀರಾಮಕೃಷ್ಣ ಆಶ್ರಮದ ಸಂಪರ್ಕಕ್ಕೆ ಬರುವಂತೆ ಮಾಡಿದ್ದಾರೆ. ತುಮಕೂರಿನ ಶ್ರೀ ವೀರೇಶಾನಂದ ಸರಸ್ವತಿಯವರ ಪ್ರೇರಣೆಯಿಂದ ಮೂವತ್ತೂ ಜಿಲ್ಲೆಗಳಲ್ಲೂ ಪ್ರತಿ ತಿಂಗಳೂ ‘ಸಲೂನ್ ಸ್ವಚ್ಛತಾ ಅಭಿಯಾನ’ ನಡೆಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣಗಳನ್ನು ರಚನಾತ್ಮಕವಾಗಿ ಬಳಸಿಕೊಳ್ಳುತ್ತಿದ್ದಾರೆ. ಸಿನಿಮಾ ತಾರೆಯರಿಂದ, ಉದ್ಯಮಿಗಳಿಂದ ಕ್ಷೌರಿಕ ವೃತ್ತಿ ಶ್ರೇಷ್ಠತೆಯ ಸಂದೇಶಗಳನ್ನು ಪಡೆದುಕೊಂಡು, ಅವುಗಳನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ಹರಡುತ್ತಿದ್ದಾರೆ. ಮುಂದಿನ ತಿಂಗಳು ಚೆನ್ನೈನಲ್ಲಿ ಸ್ಪಿನ್​ನ ಹೊಸ ಸಲೂನ್ ಕಾರ್ಯಾರಂಭ ಮಾಡಲಿದ್ದು, ಕೇರಳ, ಆಂಧ್ರಪ್ರದೇಶದಲ್ಲೂ ವಿಸ್ತರಣೆಯಾಗಲಿದೆ. 2021ರ ಹೊತ್ತಿಗೆ ರಾಜ್ಯದ ಹಾಸನ, ದಾವಣಗೆರೆ ಸೇರಿ ಹಲವು ಜಿಲ್ಲೆಗಳಿಗೂ ಅಡಿಯಿಡುವ ಯೋಜನೆ ಇದೆ.

  350ಕ್ಕೂ ಹೆಚ್ಚು ಸಿಬ್ಬಂದಿಯನ್ನು ಕುಟುಂಬ ಸದಸ್ಯರಂತೆ ಕಾಣುವ ನಾಮದೇವ್ (90080 7809) ಅವರ ವೈಯಕ್ತಿಕ ಕಷ್ಟಗಳಿಗೂ ಸ್ಪಂದಿಸಿದ್ದಾರೆ. ಆ ಮೂಲಕ ಕುಟುಂಬಗಳ ಆದಾಯ ಹೆಚ್ಚಿಸುವಂತೆ ಮಾಡಿದ್ದಾರೆ. ಜೀವನ ಸರಳವಾಗಿ ಇರಬೇಕು, ಸಂತೃಪ್ತಿ ರೂಢಿಸಿಕೊಳ್ಳಬೇಕು ಎಂಬ ಸಂದೇಶ ನೀಡುತ್ತ, ಅವರ ಮನಸುಗಳನ್ನು ಬದಲಿಸಿದ್ದಾರೆ. ವೃತ್ತಿಪರತೆ, ವೃತ್ತಿಪ್ರೇಮವೇ ಮನುಷ್ಯನಿಗೆ ಘನತೆಯನ್ನು ತಂದುಕೊಡುತ್ತದೆ ಎಂಬುದನ್ನು ಮನದಟ್ಟು ಮಾಡಿಸುತ್ತಿದ್ದಾರೆ. ಹಾಗಾಗಿ ಯುವ ಕ್ಷೌರಿಕರು ನಾಮದೇವರನ್ನು ಪ್ರೇರಣೆಯಾಗಿಸಿಕೊಂಡು, ವೃತ್ತಿಕೌಶಲ ಅಳವಡಿಸಿಕೊಳ್ಳುತ್ತಿದ್ದಾರೆ. ಮುಂಬರುವ ವರ್ಷಗಳಲ್ಲಿ ಇನ್ನೂ ಐನೂರು ಜನರಿಗೆ ಕೆಲಸ ಒದಗಿಸುವ ಗುರಿ ಇರಿಸಿಕೊಂಡಿದ್ದಾರೆ. ತಾವು ಓದಿದ ಶಾಲೆಗೆ 2017ರಲ್ಲಿ ಭೇಟಿ ನೀಡಿ 26 ಬಡವಿದ್ಯಾರ್ಥಿಗಳಿಗೆ ಸ್ಕಾಲರ್​ಶಿಪ್ ಒದಗಿಸಿದ್ದಾರೆ. ‘ಮಾಡುವ ಕೆಲಸವನ್ನೇ ಪ್ರೀತಿಯಿಂದ ಮಾಡಿದರೆ, ಕ್ಷೌರಿಕನೂ ಉದ್ಯಮಿಯಾಗಬಲ್ಲ. ಇಂಥ ಶಕ್ತಿಯನ್ನು ನಮ್ಮ ಎಲ್ಲ ವೃತ್ತಿಬಾಂಧವರಲ್ಲಿ ಮೂಡಿಸುವುದೇ ನನ್ನ ಕನಸು’ ಎನ್ನುವ ನಾಮದೇವ್ ತನಗಾಗಿಯಷ್ಟೇ ಬದುಕದೆ ಸ್ವಾಮಿ ವಿವೇಕಾನಂದರ ಸಂದೇಶದಂತೆ ಇತರರಿಗಾಗಿಯೂ ಬದುಕುತ್ತ ಸಾರ್ಥಕತೆ ಅನುಭವಿಸುತ್ತಿದ್ದಾರೆ. ಯಾವುದೇ ವೃತ್ತಿಯನ್ನು ಹೀಗಳೆಯುವ ಮುನ್ನ ನಾಮದೇವರಂಥ ಸಾಧಕರು ಸಾವಿರ ಬಾರಿ ನೆನಪಾಗಲಿ! ಶ್ರಮಸಂಸ್ಕೃತಿಗೆ ಗೆಲುವಾಗಲಿ, ಯುವಮನಸುಗಳ ಜಾಡ್ಯ ತೊಲಗಲಿ!!

  (ಲೇಖಕರು ‘ವಿಜಯವಾಣಿ’ ಸಹಾಯಕ ಸುದ್ದಿ ಸಂಪಾದಕರು)

  ರಾಜ್ಯೋತ್ಸವ ರಸಪ್ರಶ್ನೆ - 29

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts