More

    ಹೇಗಿದ್ದ ಚೀನೀಯ ಹೇಗಾಗಿ ಹೋದ!

    ಸಂಸ್ಕೃತಿಯ ಬದಲಾಗಿ ಹಣ ಮತ್ತು ಸೈನಿಕರನ್ನು ಬಳಸಿ ಸಾಮ್ರಾಜ್ಯ ಸ್ಥಾಪಿಸುವ ಚೀನೀಯರ ಪ್ರಯತ್ನ ಎಲ್ಲೆಡೆ ಕುಸಿದುಬೀಳುತ್ತಿರುವುದನ್ನು ಕಾಣುತ್ತಿದ್ದೇವೆ. ಈ ಪ್ರಕ್ರಿಯೆ ಚೀನಾದ ಗಡಿಯೊಳಗಿನ ಚೀನೀಯೇತರ ಪ್ರದೇಶಗಳಲ್ಲೂ ಕಾಣಿಸಿಕೊಳ್ಳುತ್ತಿದೆ. ಇತಿಹಾಸದಿಂದ ಪಾಠ ಕಲಿಯದ್ದಕ್ಕೆ ಇತಿಹಾಸ ನೀಡುತ್ತಿರುವ ಶಿಕ್ಷೆ ಇದು.

    ತತ್ತ್ವಜ್ಞಾನಿ ಪ್ಲೇಟೋ ತನ್ನ ಮಹಾನ್ ಕೃತಿ ‘ದ ರಿಪಬ್ಲಿಕ್’ನಲ್ಲಿ ತನ್ನ ‘ಆದರ್ಶ ರಾಜ್ಯ’ದ ಚಿತ್ರಣ ನೀಡಿದ್ದಾನೆ. ಆ ಆದರ್ಶ ರಾಜ್ಯದಲ್ಲಿ ಮೂರು ವರ್ಗದ ಜನರಿರುತ್ತಾರೆ- 1) ಹೇಗಿದ್ದ ಚೀನೀಯ ಹೇಗಾಗಿ ಹೋದ!ಗಾರ್ಡಿಯನ್ ವರ್ಗ 2) ಸೈನಿಕರು 3) ರೈತರು ಮತ್ತು ಕುಶಲಕರ್ವಿುಗಳು. ಗಾರ್ಡಿಯನ್ ವರ್ಗದ ಜನ ರಾಜ್ಯದ ಸಾಂಸ್ಕೃತಿಕ ಹಾಗೂ ಆಡಳಿತಾತ್ಮಕ ಮುಖ. ಇವರು ಕಲೆ, ಸಾಹಿತ್ಯ ಚಟುವಟಿಕೆಗಳ ಮೂಲಕ ಆದರ್ಶ ರಾಜ್ಯದ ಸಾಂಸ್ಕೃತಿಕ ರೂಪವನ್ನು ಸೃಷ್ಟಿಸುತ್ತಾರೆ ಮತ್ತದನ್ನು ನಿರಂತರವಾಗಿ ಗಟ್ಟಿಗೊಳಿಸುತ್ತಿರುತ್ತಾರೆ. ರಾಜ್ಯವನ್ನಾಳುವ ‘ಫಿಲಾಸಫರ್ ಕಿಂಗ್’ಗಳನ್ನೂ ಈ ವರ್ಗವೇ ನೀಡುತ್ತದೆ. ಅದಕ್ಕಾಗಿ ಮೂರು ಹಂತದ ಶಿಕ್ಷಣ ಕ್ರಮವನ್ನು ಪ್ಲೇಟೋ ಸೂಚಿಸಿದ್ದಾನೆ. ಸೈನಿಕರು ರಾಜ್ಯದ ರಕ್ಷಣೆಯ ಜವಾಬ್ದಾರಿ ಹೊತ್ತಿರುತ್ತಾರೆ. ರೈತರು ಮತ್ತು ಕುಶಲಕರ್ವಿುಗಳು ಆಹಾರಪದಾರ್ಥಗಳನ್ನೂ, ಬಳಕೆಯ ವಸ್ತುಗಳನ್ನೂ ಉತ್ಪಾದಿಸುತ್ತಾರೆ. ಹೀಗೆ ಮೂರೂ ವರ್ಗದ ಜನರು ಆದರ್ಶ ರಾಜ್ಯಕ್ಕೆ ತಂತಮ್ಮ ಕಾಣಿಕೆಗಳನ್ನು ನೀಡುತ್ತ ಅದರ ಅಸ್ತಿತ್ವಕ್ಕೆ ಕಾರಣರಾಗಿರುತ್ತಾರೆ. ಹಾಗಂತ ವ್ಯಕ್ತಿಯೊಬ್ಬನ ವರ್ಗ ಅವನ ಹುಟ್ಟಿನಿಂದೇನೂ ನಿರ್ಧಾರವಾಗುವುದಿಲ್ಲ. ‘ಶಿಕ್ಷಣ ಹಾಗೂ ಸೂಕ್ತ ತರಬೇತಿ ಮೂಲಕ ತಾಮ್ರದ ಮನುಷ್ಯರು ಬೆಳ್ಳಿಯ ಮನುಷ್ಯರಾಗಬಹುದು, ಬೆಳ್ಳಿಯ ಮನುಷ್ಯರು ಚಿನ್ನದ ಮನುಷ್ಯರಾಗಬಹುದು’ ಎಂದು ಹೇಳುವ ಮೂಲಕ ಆದರ್ಶ ರಾಜ್ಯದ ನಾಗರಿಕರು ಒಂದು ವರ್ಗದಿಂದ ಮತ್ತೊಂದು ವರ್ಗಕ್ಕೆ ‘ಬಡ್ತಿ’ ಹೊಂದಬಹುದು ಎಂದು ಪ್ಲೇಟೋ ಹೇಳಿದ್ದಾನೆ.

    ಪ್ಲೇಟೋನ ಆದರ್ಶ ರಾಜ್ಯದಲ್ಲಿ ವರ್ತಕರೇಕಿಲ್ಲ ಎಂಬ ಪ್ರಶ್ನೆ ಕಾಡಬಹುದು. ಪ್ಲೇಟೋ ಪ್ರಕಾರ ವ್ಯಾಪಾರ ಹಾಗೂ ಹಣಕಾಸಿನ ವ್ಯವಹಾರಗಳಲ್ಲಿ ನಾಗರಿಕರು ತೊಡಗಬಾರದು, ಅದೇನಿದ್ದರೂ ವಿದೇಶೀಯರ ತಲೆನೋವು. ಇಂದು ಅಮೆರಿಕ, ಚೀನಾ, ಯುರೋಪಿಯನ್ ಯೂನಿಯನ್​ಗಳು ಪ್ರಾಮುಖ್ಯ ನೀಡುತ್ತಿರುವ, ಭಾರತವೂ ನೀಡಹೊರಟಿರುವ ಆರ್ಥಿಕ ವ್ಯವಹಾರವನ್ನು ಅಂದರೆ ಆದರ್ಶ ರಾಜ್ಯದ ಜುಟ್ಟನ್ನೇ ಪ್ಲೇಟೊ ಮಹಾಶಯ ವಿದೇಶೀಯರ ಕೈಗೆ ನೀಡಿಬಿಟ್ಟಿದ್ದಾನಲ್ಲ ಎಂದು ಅಚ್ಚರಿಯಾಗಬಹುದು. ಇದಕ್ಕೆ ಕಾರಣವನ್ನು ಪ್ಲೇಟೋನ ಬಾಲ್ಯದ ಅನುಭವದಲ್ಲಿ ಕಾಣಬಹುದು. ಕ್ರಿ.ಪೂ. 427ರಲ್ಲಿ ಅಥೆನ್ಸ್ ನಗರ ರಾಜ್ಯದಲ್ಲಿ ಪ್ಲೇಟೋ ಹುಟ್ಟಿದಾಗ ಪೆಲಪೋನೀಶಿಯನ್ ಯುದ್ಧ ನಡೆಯುತ್ತಿತ್ತು. ಕ್ರಿ.ಪೂ. 431ರಲ್ಲಿ ಆರಂಭವಾಗಿ ಕ್ರಿ.ಪೂ. 404ರಲ್ಲಿ ಮುಕ್ತಾಯವಾದ ಆ ಯುದ್ಧದಲ್ಲಿ ಅಥೆನ್ಸ್ ಮತ್ತದರ ಮಿತ್ರ ನಗರ ರಾಜ್ಯಗಳು ಒಂದು ಕಡೆಯಾದರೆ, ಇನ್ನೊಂದು ಕಡೆ ಸ್ಪಾರ್ಟಾ ಮತ್ತದರ ಮಿತ್ರ ನಗರ ರಾಜ್ಯಗಳಿದ್ದವು. ಕಲೆ, ಸಾಹಿತ್ಯ ಒಟ್ಟಾರೆ ಸಾಂಸ್ಕೃತಿಕ ಬೆಳವಣಿಗೆಗೆ ಆದ್ಯತೆ ಕೊಟ್ಟ ಅಥೆನ್ಸ್ ಯುದ್ಧದಲ್ಲಿ ಸೋತುಹೋಗಿ, ಯುದ್ಧ ತರಬೇತಿಗಷ್ಟೇ ಮಹತ್ವ ನೀಡಿದ ಸ್ಪಾರ್ಟಾ ಜಯಗಳಿಸಿತು. ಕ್ರಿ.ಪೂ. ಎಂಟನೆಯ ಶತಮಾನದಲ್ಲಿ ಬದುಕಿದ್ದಿರಬಹುದೆಂದು ದಂತಕಥೆಯಿರುವ ಲೈಕರ್ಗಸ್ ಎಂಬ ಚಿಂತಕ ಸ್ಪಾರ್ಟಾಗೆ ಕೊಟ್ಟ ಸಂವಿಧಾನ ನಾಗರಿಕರು ಹಣ ಗಳಿಸುವ ಚಟುವಟಿಕೆಗಳಲ್ಲಿ ತೊಡಗುವುದನ್ನು ಪ್ರತಿಬಂಧಿಸಿತ್ತು. ನಾಗರಿಕರ ಕರ್ತವ್ಯ ನಗರ ರಾಜ್ಯವನ್ನು ರಕ್ಷಿಸುವುದು ಮಾತ್ರ. ಹೆಂಡತಿ ಮಕ್ಕಳು ಅಂತೆಲ್ಲ ಇದ್ದರೆ ಮನುಷ್ಯ ಸ್ವಾರ್ಥಿಯಾಗಿ ರಾಜ್ಯದ ರಕ್ಷಣೆಯನ್ನು ಕಡೆಗಣಿಸುತ್ತಾನೆ ಎಂದು ನಂಬಿ ಸ್ಪಾರ್ಟಾದ ಆಡಳಿತಗಾರರು ಕುಟುಂಬ ವ್ಯವಸ್ಥೆಯನ್ನೇ ನಿರ್ಬಂಧಿಸಿದ್ದರು. ಹೆಣ್ಣುಗಂಡು ಎನ್ನದೇ ಎಲ್ಲರಿಗೂ ಮಿಲಿಟರಿ ತರಬೇತಿ ಕಡ್ಡಾಯ. ಈ ನೀತಿ ಅನುಸರಿಸಿದ ಸ್ಪಾರ್ಟಾ ಅಂದಿನ ಜಗತ್ತಿನಲ್ಲಿ ಮಹಾನ್ ಸೇನಾಶಕ್ತಿಯಾಗಿ ಬೆಳೆದಿತ್ತು ಮತ್ತು ಕಲೆ, ಸಾಹಿತ್ಯ ಮುಂತಾದ ಸಾಂಸ್ಕೃತಿಕ ಬದುಕಿಗೆ ಮಹತ್ವ ನೀಡಿದ ಅಥೆನ್ನ್ ಅನ್ನು ಮಣಿಸಿತು.

    ಪೆಲಪೊನೀಶಿಯನ್ ಯುದ್ಧ ಮುಕ್ತಾಯವಾದಾಗ ಪ್ಲೇಟೊಗೆ ಇಪ್ಪತ್ತಮೂರು ವರ್ಷಗಳ ಪ್ರಾಯ. ಯುದ್ಧವನ್ನೂ, ಅದರಲ್ಲಿ ತನ್ನ ತವರು ಅಥೆನ್ಸ್ ನಗರ ರಾಜ್ಯದ ಹಂತಹಂತದ ಪರಾಭವವನ್ನು ನೋಡುತ್ತ ಅಷ್ಟೂ ವರ್ಷಗಳನ್ನು ಕಳೆದ ಪ್ಲೇಟೋನ ಮನಸ್ಸು ವಿಜಯಶೀಲ ಸ್ಪಾರ್ಟಾವನ್ನು ಅಭಿಮಾನದಿಂದ ನೋಡತೊಡಗಿತು. ಸ್ಪಾರ್ಟಾದ ಗೆಲುವಿಗೆ ಕಾರಣ ಅದು ತನ್ನ ನಾಗರಿಕರನ್ನು ಕುಟುಂಬ, ಹಣ, ಆಸ್ತಿಗಳಿಂದ ದೂರವಿರಿಸಿ ಅವರು ತಮ್ಮನ್ನು ರಾಷ್ಟ್ರಸೇವೆಗೆ ಮುಡಿಪಾಗಿರಿಸಿಕೊಳ್ಳುವಂತೆ ಮಾಡಿದ್ದೇ ಕಾರಣ ಎಂದಾತನಿಗೆ ಕಾಣುತ್ತಲೇ ಇತ್ತು. ಹೀಗಾಗಿಯೇ ಆತ ತನ್ನ ಕಲ್ಪನೆಯ ಆದರ್ಶ ರಾಜ್ಯದ ನಾಗರಿಕರ ಕೈಯಿಂದ ವ್ಯಾಪಾರವಹಿವಾಟನ್ನೂ, ಹಣವನ್ನೂ ದೂರವಿರಿಸಿದರೂ ಕಲೆ, ಸಾಹಿತ್ಯ, ವೈಚಾರಿಕತ ಚಿಂತನೆ, ಬೌದ್ಧಿಕ ಕಸರತ್ತುಗಳಲ್ಲೇ ಬದುಕುಪೂರ್ತಿ ತೊಡಗಿಕೊಂಡ ಗಾರ್ಡಿಯನ್ ವರ್ಗವನ್ನು ಸೃಷ್ಟಿಸಿದ ಮತ್ತು ಆ ವರ್ಗದಲ್ಲಿ ನಿಸ್ವಾರ್ಥಿ, ಜನಹಿತತತ್ಪರ ಫಿಲಾಸಫರ್ ಕಿಂಗ್ ಆಡಳಿತಗಾರರನ್ನು ಹುಡುಕಿದ. ಈ ಗಾರ್ಡಿಯನ್ನರು ಸೃಷ್ಟಿಸಿದ ನಾಡನ್ನು ರಕ್ಷಿಸುವವರು ಸೈನಿಕರು, ತಂತಮ್ಮ ಕರ್ತವ್ಯಗಳನ್ನು ನಿರ್ವಹಿಸಲು ಅಗತ್ಯವಾದ ಆಹಾರ, ಉಪಕರಣಗಳು, ಆಯುಧಗಳು ಅಷ್ಟೇಕೆ ಯಥೇಚ್ಛ ಸಮಯವನ್ನು ಈ ಚಿನ್ನದ ಮತ್ತು ಬೆಳ್ಳಿಯ ಮನುಷ್ಯರಿಗೆ ಒದಗಿಸಬೇಕಾದವರು ತಾಮ್ರದ ಮನುಷ್ಯರಾದ ಕೃಷಿಕರು, ಕುಶಲಕರ್ವಿುಗಳು ಎಂದು ಕಂಡುಕೊಂಡ. ಅಂದರೆ ರಾಷ್ಟ್ರನಿರ್ವತೃಗಳೆಂದರೆ ಸಂಸ್ಕೃತಿಯನ್ನು ಬೆಳೆಸುವವರು, ಹಣದ ಹಿಂದೆ ಬೀಳುವವರಲ್ಲ ಎಂದು ಸಾರಿದ. ಪ್ಲೇಟೋ ನಮಗೆ ಮುಖ್ಯವಾಗುವುದು ಇಲ್ಲಿ.

    ಸರಿಸುಮಾರು ಎರಡೂವರೆ ಸಹಸ್ರಮಾನಗಳು ಕಳೆದುಹೋಗಿವೆ. ಅಂದು ಯುದ್ಧದಲ್ಲಿ ಸೋತುಹೋಗಿ ನಲುಗಿದ ಅಥೆನ್ಸ್ ಮತ್ತು ಜಯಗಳಿಸಿ ಬೀಗಿದ ಸ್ಪಾರ್ಟಾಗಳನ್ನು ಇತಿಹಾಸ ಎಲ್ಲೆಲ್ಲಿಟ್ಟಿದೆ? ಪಶ್ಚಿಮದ ನಾಗರಿಕತೆಯ ತೊಟ್ಟಿಲು, ಬೌದ್ಧಿಕತೆಯ ತವರೂರು, ಪ್ರಜಾಪ್ರಭುತ್ವ ಮೌಲ್ಯಗಳ ತಾಯಿ ಎಂದು ಅಥೆನ್ಸ್ ಜಗತ್ತಿನಾದ್ಯಂತ ಕೊಂಡಾಡಲ್ಪಡುತ್ತಿದೆ. ಅಥೆನ್ಸ್ ಇಂದು ಗ್ರೀಸ್​ನ ರಾಜಧಾನಿಯಾಗಿದೆ. ಸ್ಪಾರ್ಟಾ? ಅದರ ಕುರುಹೇ ಇಲ್ಲ!

    ಇಷ್ಟೆಲ್ಲ ಯಾಕೆ ಹೇಳಿದೆನೆಂದರೆ ರಾಷ್ಟ್ರವನ್ನು ನಿರ್ವಿುಸುವುದು ಸಂಸ್ಕೃತಿಯಷ್ಟೇ, ಹಣವಲ್ಲ ಎಂದು ಮನವರಿಕೆ ಮಾಡಿಕೊಡಲು. ಹಾಗಿದ್ದರೆ ರಾಷ್ಟ್ರದಲ್ಲಿ ಆರ್ಥಿಕತೆಯ ಪಾತ್ರವೇನು? ಸಂಸ್ಕೃತಿ ನಿರ್ವಿುಸಿದ ರಾಷ್ಟ್ರದಲ್ಲಿ ನಾಗರಿಕರ ದೈನಂದಿನ ಅಗತ್ಯಗಳನ್ನು (ದುರಾಸೆಯನ್ನಲ್ಲ) ಪೂರೈಸುವುದಷ್ಟೇ ಆರ್ಥಿಕತೆಯ ಕೆಲಸ. ಸಂಸ್ಕೃತಿ ನಿರ್ವಿುಸಿದ ರಾಷ್ಟ್ರವನ್ನು ಹೊರಗಿನ ಮತ್ತು ಒಳಗಿನ ಶತ್ರುಗಳಿಂದ ರಕ್ಷಿಸುವುದು ಸೇನೆಯ ಕರ್ತವ್ಯ. ಸಂಸ್ಕೃತಿಯೊಂದು ನಿರ್ದಿಷ್ಟ ಭೌಗೋಳಿಕ ನೆಲೆಯಲ್ಲಿ ರಾಷ್ಟ್ರವೊಂದನ್ನು ನಿರ್ವಿುಸಿಲ್ಲ ಅಂದರೆ ಅಲ್ಲಿ ಸೇನೆಗೆ ಯಾವ ಕೆಲಸವೂ ಇರುವುದಿಲ್ಲ. ಇಲ್ಲದ ರಾಷ್ಟ್ರವನ್ನು ರಕ್ಷಿಸಲು ಸೇನೆಯೇನಾದರೂ ಹೊರಟರೆ ಅದು ನಿರರ್ಥಕ ಹೆಣಗಾಟವಷ್ಟೇ. ಅಂತಹ ಪ್ರಯತ್ನ ಸೋಲಿನಲ್ಲಿ ಕೊನೆಯಾಗುವುದು ನಿಶ್ಚಯ. ಪ್ಲೇಟೋನ ಕಾಲದಿಂದ ಇಂದಿನವರೆಗಿನ ಜಾಗತಿಕ ಇತಿಹಾಸ ಇದನ್ನೇ ಹೇಳಿದೆ.

    ತನ್ನ ಸಂಸ್ಕೃತಿಯನ್ನು ಯುರೋಪಿನೆಲ್ಲೆಡೆ ಹರಡಿದ ಅಥೆನ್ಸ್ ಆ ಮೂಲಕ ಇಂದಿಗೂ ಅಲ್ಲೆಲ್ಲ್ಲ ಮತ್ತು ಅದರ ವಿಸ್ತರಣೆಯಾದ ಅಮೆರಿಕ ಖಂಡದಲ್ಲಿ ಜೀವಂತವಾಗಿದೆ, ಗುಪ್ತಗಾಮಿನಿಯಾಗಿ ಹರಿಯುತ್ತಿದೆ. ನಂತರದ ಹಣ ಮತ್ತು ಸೈನಿಕರ ಮೂಲಕ ಕಟ್ಟಹೊರಟ ರೋಮನ್ ಸಾಮ್ರಾಜ್ಯ ಹೇಳಹೆಸರಿಲ್ಲದಂತೆ ಕಣ್ಮರೆಯಾಗಿದೆ. ಅದರ ಅಂತಿಮ ಭ್ರಷ್ಟ ರೂಪವಾದ ‘ಪವಿತ್ರ ರೋಮನ್ ಸಾಮ್ರಾಜ್ಯ ಪವಿತ್ರವೂ ಅಲ್ಲ, ರೋಮನ್ ಸಹ ಅಲ್ಲ, ಸಾಮ್ರಾಜ್ಯವೂ ಅಲ್ಲ’ ಎಂದು ವಾಲ್ಟೇರ್ ಅದರ ಸಮಾಧಿ-ಲೇಖ ಬರೆದು ಎರಡೂವರೆ ಶತಮಾನಗಳು ಕಳೆದಿವೆ. ನಂತರ ಸ್ಪೇನ್, ಪೋರ್ತಗಲ್, ಇಂಗ್ಲೆಂಡ್, ಫ್ರಾನ್ಸ್ ಮಂತಾದ ದೇಶಗಳು ಹಣ ಮತ್ತು ಸೈನಿಕರ ಮೂಲಕ ಕಟ್ಟಿದ ವಸಾಹತುಶಾಹಿ ಸಾಮ್ರಾಜ್ಯಗಳೂ ಅದೇ ದಾರಿ ಹಿಡಿದದ್ದನ್ನು ಇತಿಹಾಸ ದಾಖಲಿಸಿದೆ. ಅವುಗಳ ಒಂದುಕಾಲದ ವಸಾಹತುಗಳಲ್ಲಿ ಅವುಗಳ ನೆನಪಿಗಾಗಿ ಇಂದು ಉಳಿದಿರುವುದೆಂದರೆ ಅವು ಹರಡಿದ ಸಂಸ್ಕೃತಿಯಷ್ಟೇ. ಈಗ ನಾನೆತ್ತಿಕೊಳ್ಳುವ ಪ್ರಶ್ನೆ ಇದು- ಚೀನೀ ಕಮ್ಯೂನಿಸ್ಟರೇಕೆ ಇತಿಹಾಸದತ್ತ ನೋಡುತ್ತಿಲ್ಲ, ಅದರಿಂದೇಕೆ ಪಾಠ ಕಲಿಯುತ್ತಿಲ್ಲ?

    ವಿಶ್ವಮಾನ್ಯ ಪುರಾತನ ನಾಗರಿಕತೆಗಳಲ್ಲೊಂದು ಚೀನಾ. ತನ್ನ ಮೂರು ಸಾವಿರ ವರ್ಷಗಳಷ್ಟು ದೀರ್ಘ ಇತಿಹಾಸದಲ್ಲಿ ಚೀನೀ ನಾಗರಿಕತೆ ಮಾನವಜನಾಂಗಕ್ಕೆ ಕೊಟ್ಟಿರುವ ಕೊಡುಗೆ ಅಪಾರ. ಕೆಲವಷ್ಟನ್ನೇ ಉದಾಹರಿಸುವುದಾದರೆ ಅಸಾಮಾನ್ಯ ನಾವಿಕರಾದ ಚೀನೀಯರು ಕ್ರಿಸ್ಟೋಫರ್ ಕೊಲಂಬಸ್​ಗಿಂತಲೂ ಸಾವಿರ ವರ್ಷ ಮೊದಲೇ ವಿಶಾಲ ಪೆಸಿಫಿಕ್ ಸಾಗರವನ್ನು ದಾಟಿ ಹತ್ತುಸಾವಿರ ಕಿಲೋಮೀಟರ್ ಆಚೆಯ ಉತ್ತರ ಅಮೆರಿಕದ ಪಶ್ಚಿಮ ತೀರ ತಲುಪಿದ್ದರು. ರೇಷ್ಮೆ ಚೀನೀಯರದು. ಸಿಡಿಮದ್ದಿನಿಂದ ಆಕಾಶವನ್ನು ಬೆಳಗಿಸಿದವರು ಅವರು. ಅದನ್ನೇ ಉಪಯೋಗಿಸಿ ಅಂತರಿಕ್ಷಕ್ಕೆ ಜಿಗಿಯಲು ಹೋದ ಮೊದಲಿಗ ಒಬ್ಬ ಚೀನೀಯ. ಮಧ್ಯಯುಗದಲ್ಲಿ ಬದುಕಿದ್ದ ವಾನ್ ಹು ಎಂಬ ಹೆಸರಿನ ಆತ ‘ನಾವೆಲ್ಲ ಭೂಮಿಯ ಗುರುತ್ವಾಕರ್ಷಣೆಯಿಂದಾಗಿ ಇಲ್ಲೇ ಬಂಧಿಯಾಗಿದ್ದೇವೆ, ಒಂದು ನಿರ್ದಿಷ್ಟ ವೇಗದ ಮಿತಿಯನ್ನು ದಾಟಿ ನಾವು ಮೇಲೆ ಹಾರಿದರೆ ಭೂಮಿಯ ಗುರುತ್ವಾಕರ್ಷಣೆಯಿಂದ ಕಳಚಿಕೊಂದು ಅಂತರಿಕ್ಷ ಸೇರುತ್ತೇವೆ’ ಎಂದು ಅರಿತುಹೊಂಡಿದ್ದ. ತನ್ನ ತತ್ತ್ವವನ್ನು ಕಾರ್ಯರೂಪಕ್ಕಿಳಿಸಲು ಆತ ಸ್ಪೋಟಕಗಳನ್ನು ಕಟ್ಟಿದ ಕುರ್ಚಿಯೊಂದರ ಮೇಲೆ ಕೂತ, ಬತ್ತಿಗೆ ಬೆಂಕಿಯನ್ನೂ ಹಚ್ಚಿದ. ಸ್ಫೋಟ ಉಂಟುಮಾಡುವ ಶಕ್ತಿ ಕುರ್ಚಿಯನ್ನು ಅಪರಿಮಿತ ವೇಗದಲ್ಲಿ ಮೇಲಕ್ಕೆ ಹಾರಿಸುತ್ತದೆ, ತಾನು ಅಂತರಿಕ್ಷ ತಲುಪುತ್ತೇನೆ ಎಂದು ಆ ಪ್ರಳಯಾಂತಕ ಬುದ್ಧಿವಂತ ನಂಬಿದ್ದ. ಆದರೆ ಸ್ಪೋಟದಲ್ಲಿ ಆತ ಸತ್ತುಹೋದ. ಇಷ್ಟಾಗಿಯೂ, ಭೂಮಿಯ ಗುರುತ್ವಾಕರ್ಷಣೆಯನ್ನು ನಾವು ದಾಟಿಹೋಗಬಹುದು ಎಂದು ತಾತ್ವಿಕವಾಗಿ ನಂಬಿದ ಮೊದಲ ಮಾನವ ಆತ- ಅದಕ್ಕಾಗಿ ಅವನಿಗೆ ಶಹಭಾಷ್​ಗಿರಿ ಸಲ್ಲಲೇಬೇಕು.

    ಇಂತಹ ಸಾಂಸ್ಕೃತಿಕ, ವೈಜ್ಞಾನಿಕ ಪರಂಪರೆಯನ್ನು ಸೃಷ್ಟಿಸಿದ, ಅವೆಲ್ಲವನ್ನೂ ಹೊರಜಗತ್ತಿನೊಂದಿಗೆ ಹಂಚಿಕೊಂಡ ಚೀನೀಯರು ಆ ಹಾದಿಯಲ್ಲೇ ಸಾಗಿ ಅಥೆನ್ಸ್​ನಂತೆ ಇಂದು ಕೊನೇಪಕ್ಷ ಏಷ್ಯಾದಲ್ಲಾದರೂ ಸಾಂಸ್ಕೃತಿಕ ವಿಸ್ತರಣ ಮಾಡಿಕೊಳ್ಳಬಹುದಿತ್ತು. ಸಂಸ್ಕೃತಿಯನ್ನು ಕಡೆಗಣಿಸಿ ಹಣ ಮತ್ತು ಸೇನೆಯ ಮೂಲಕ ಜಗತ್ತಿನಾದ್ಯಂತ ವಸಾಹತುಶಾಹಿ ಸಾಮ್ರಾಜ್ಯವನ್ನು ಕಟ್ಟಹೊರಟದ್ದೇಕೆ? ಚೀನೀಯರಿಗೆ ಈ ಬಗೆಯ ಋಣಾತ್ಮಕ ಮನೋಭಾವ ಯಾವಾಗ ಹೇಗೆ ಬಂತು?

    ಚೀನಾದಲ್ಲಿ ಕಮ್ಯೂನಿಸ್ಟ್ ತತ್ತ್ವಗಳನ್ನು ಸಾರ್ವತ್ರಿಕವಾಗಿ ಬಿತ್ತಲು, ಆ ಮೂಲಕ ತನ್ನ ಅಧಿಕಾರವನ್ನು ಗಟ್ಟಿಗೊಳಿಸಿಕೊಳ್ಳಲು, ಕಮ್ಯೂನಿಸ್ಟ್ ಪಕ್ಷದ ಆಳ್ವಿಕೆಯನ್ನು ಅನೂಚಾನಗೊಳಿಸಲು ಇರುವ ತೊಡಕೆಂದರೆ ಚೀನೀಯರು ಶತಮಾನಗಳಿಂದಲೂ ನಂಬಿ ಪಾಲಿಸಿಕೊಂಡು ಬಂದ ಬೌದ್ಧ, ಕನ್​ಫ್ಯೂಸಿಯನ್, ತಾವೋ ಮೌಲ್ಯಗಳು ಎಂದು ತಿಳಿದ ಸರ್ವಾಧಿಕಾರಿ ಮಾವೋ ತ್ಸೆ ತುಂಗ್ ಅವೆಲ್ಲವನ್ನೂ ನಾಶಮಾಡಲು ಹೂಡಿದ ಹೂಟವೇ ತಥಾಕಥಿತ ‘ಸಾಂಸ್ಕೃತಿಕ ಕ್ರಾಂತಿ’. 1966-74ರ ನಡುವಿನ ಎಂಟು ದುರಂತ ವರ್ಷಗಳಲ್ಲಿ ಸಾವಿರಸಾವಿರ ಪುಸ್ತಕಭಂಡಾರಗಳನ್ನು, ಲಕ್ಷಲಕ್ಷ ಧಾರ್ವಿುಕ, ತತ್ತ್ವಶಾಸ್ತ್ರೀಯ ಗ್ರಂಥಗಳನ್ನು ಸುಟ್ಟುಹಾಕಲಾಯಿತು. ಪಠ್ಯಕ್ರಮವನ್ನು ಬದಲಾಯಿಸಿ, ಕಮ್ಯೂನಿಸಂನ ಗುಣಗಾನಗಳು, ಮಾವೋನ ತತ್ತ್ವಗಳು, ಕಮ್ಯೂನಿಸ್ಟ್ ಸರ್ಕಾರದ ಗುರಿಗಳು ಮತ್ತು ಅವುಗಳನ್ನು ಸಾಧಿಸುವಲ್ಲಿ ಪ್ರತಿಯೊಬ್ಬ ಚೀನೀಯನ ಕರ್ತವ್ಯಗಳು- ಇಂತಹ ವಿಷಯಗಳನ್ನು ತುಂಬಲಾಯಿತು. ಒಟ್ಟಿನಲ್ಲಿ ತನ್ನದೇ ಸಾಂಸ್ಕೃತಿಕ ಪರಂಪರೆಯನ್ನು ಚೀನೀಯನ ಮನಸ್ಸಿನಿಂದ ಅಳಿಸಿಹಾಕಲಾಯಿತು. ಹೊಸಬರಿಗೆ ಶಾಲೆಗಳಲ್ಲಿ ಈ ಶಿಕ್ಷಣಕ್ರಮ ಜಾರಿಯಾದರೆ ಹಳಬರನ್ನು ಪುನರ್ವಿದ್ಯಾಭ್ಯಾಸ ಶಿಬಿರಗಳಿಗೆ ಅಟ್ಟಲಾಯಿತು. ಇದೊಂದು ಭಯಾನಕ ಬ್ರೇನ್​ವಾಷಿಂಗ್ ಕಸರತ್ತು. ಅಲ್ಲಿಂದಾಚೆಗೆ ಚೀನೀಯ ಸಂಪೂರ್ಣವಾಗಿ ಬದಲಾಗಿಹೋದ. ಈ ಹೊಸ ಚೀನೀಯ ಅಧಾರ್ವಿುಕ, ಆಕ್ರಮಣಕಾರಿಯಾಗಿದ್ದ.

    ಭಾರತದ ಸಂದರ್ಭದಲ್ಲೇ ಹೇಳುವುದಾದರೆ ಅಲ್ಲಿಯವರೆಗೆ ಪರಸ್ಪರ ಹಂಚಿಕೊಂಡು ಗಡಿಸಮಸ್ಯೆಯನ್ನು ಪರಿಹರಿಸಿಕೊಳ್ಳೋಣ ಎಂದು ಹೇಳುತ್ತಿದ್ದ ಚೀನೀ ರಾಜತಂತ್ರಜ್ಞರು ಎಲ್ಲವೂ ತಮ್ಮದೇ ಎನ್ನತೊಡಗಿದರು. ನಂತರ ಸುತ್ತಲ ಎಲ್ಲ ದೇಶಗಳ ಬಗ್ಗೆ ಇದೇ ಮನೋಭಾವ ಪ್ರದರ್ಶಿಸತೊಡಗಿದ ಚೀನೀಯರು ಕಳೆದ ಹತ್ತು ವರ್ಷಗಳಿಂದೀಚೆಗೆ ಜಗತ್ತಿನ ಎಲ್ಲೆಡೆ ನೆಲ ಕಬಳಿಸಲು ಮುಂದಾದರು.

    ಸಂಸ್ಕೃತಿಯ ಬದಲಾಗಿ ಹಣ ಮತ್ತು ಸೈನಿಕರನ್ನು ಬಳಸಿ ಸಾಮ್ರಾಜ್ಯ ಸ್ಥಾಪಿಸುವ ಚೀನೀಯರ ಪ್ರಯತ್ನ ಎಲ್ಲೆಡೆ ಕುಸಿದುಬೀಳುತ್ತಿರುವುದನ್ನು ಕಾಣುತ್ತಿದ್ದೇವೆ. ಈ ಪ್ರಕ್ರಿಯೆ ಚೀನಾದ ಗಡಿಯೊಳಗಿನ ಚೀನೀಯೇತರ ಪ್ರದೇಶಗಳಲ್ಲೂ ಕಾಣಿಸಿಕೊಳ್ಳುತ್ತಿದೆ. ಇತಿಹಾಸದಿಂದ ಪಾಠ ಕಲಿಯದ್ದಕ್ಕೆ ಇತಿಹಾಸ ನೀಡುತ್ತಿರುವ ಶಿಕ್ಷೆ ಇದು. ಇದು ಚೀನೀ ಕರ್ಮವಾದರೆ ಭಾರತೀಯರ ಕಥೆಯೇನು? ಅದನ್ನು ಮುಂದಿನವಾರ ಅವಲೋಕಿಸೋಣ.

    (ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts