More

    ವಿಜಯವಾಣಿ ಜಗದಗಲ ಅಂಕಣ: ಕ್ವಾಡ್ ಇತಿಹಾಸ ಮರುಕಳಿಸುತ್ತಿದೆಯೇ?

    ದ್ವಿತೀಯ ಮಹಾಯುದ್ಧ ಅಂತ್ಯವಾಗುತ್ತಿದ್ದಂತೇ ಸೋವಿಯತ್ ಯೂನಿಯನ್ ಪೂರ್ವ ಯುರೋಪಿನ ದೇಶಗಳಲ್ಲೆಲ್ಲ ಕಮ್ಯೂನಿಸ್ಟ್ ಸರ್ಕಾರಗಳನ್ನು ಸ್ಥಾಪಿಸಿ ಆ ದೇಶಗಳನ್ನೆಲ್ಲ ಒಂದೊಂದಾಗಿ ತನ್ನ ‘ಉಪಗ್ರಹ’ಗಳನ್ನಾಗಿ ಮಾಡಿಕೊಳ್ಳತೊಡಗಿತಷ್ಟೇ. ಸ್ಟಾಲಿನ್​ನ ಈ ಚಟುವಟಿಕೆಗಳನ್ನು ಅಮೆರಿಕದ ಹ್ಯಾರಿ ಟ್ರೂಮನ್ ಸರ್ಕಾರ ಸುಮ್ಮನೆ ನೋಡುತ್ತ ಕುಳಿತಿರಬೇಕಾದ ಸ್ಥಿತಿಯೊದಗಿತ್ತು. ಅದಾದದ್ದು ಹೀಗೆ-

    1945ನೇ ಇಸವಿ ಆರಂಭವಾಗುವ ಹೊತ್ತಿಗೆ ಜರ್ಮನಿಯ ಕಾದುವ ಸಾಮರ್ಥ್ಯ ಇನ್ನು ಕೆಲವೇ ದಿನಗಳಷ್ಟೇ ಎನ್ನುವುದು ಜಗಜ್ಜಾಹೀರಾಗಿತ್ತು. ಪಶ್ಚಿಮದಲ್ಲಿ ಅಮೆರಿಕ ಮತ್ತು ಬ್ರಿಟನ್​ಗಳ ಜಂಟಿ ಸೇನೆ ಫ್ರಾನ್ಸ್ ಅನ್ನು ವಿಮೋಚನೆಗೊಳಿಸಿ ಜರ್ಮನಿಯ ಪಶ್ಚಿಮ ಬಾಗಿಲನ್ನು ತಟ್ಟುತ್ತಿದ್ದರೆ ಇತ್ತ ಪೂರ್ವದಲ್ಲಿ ಸೋವಿಯತ್ ಕೆಂಪು ಸೇನೆ ಬರ್ಲಿನ್​ನತ್ತ ಮುಂದೊತ್ತಿ ಬರುತ್ತಿತ್ತು. ಹೀಗಾಗಿ ಮಿತ್ರದೇಶಗಳಾದ ಅಮೆರಿಕ, ವಿಜಯವಾಣಿ ಜಗದಗಲ ಅಂಕಣ: ಕ್ವಾಡ್ ಇತಿಹಾಸ ಮರುಕಳಿಸುತ್ತಿದೆಯೇ?ಬ್ರಿಟನ್ ಮತ್ತು ಸೋವಿಯತ್ ಯೂನಿಯನ್​ಗಳ ನಾಯಕರು ಯುದ್ಧಾನಂತರ ಯುರೋಪ್​ನಲ್ಲಿ ಶಾಶ್ವತ ಶಾಂತಿಗಾಗಿ ಮತ್ತು ಭವಿಷ್ಯದ ರೂಪುರೇಷೆಗಳನ್ನು ತಯಾರಿಸಲು ಫೆಬ್ರವರಿ 4-11ರ ಅವಧಿಯಲ್ಲಿ ಕಪು್ಪಸಮುದ್ರ ತೀರದ ಯಾಲ್ಟಾದಲ್ಲಿ ಸಭೆ ಸೇರಿದರು. ಅಲ್ಲಿ ಚರ್ಚೆಗೆ ಬಂದ ಮತ್ತೊಂದು ಮುಖ್ಯ ವಿಷಯ ಜಪಾನ್​ನೊಂದಿಗಿನ ನಿಲ್ಲದ ಸಂಘರ್ಷ. ಆಗ ಜಪಾನ್ ಇನ್ನೂ ಒಂದೂವರೆ ವರ್ಷಗಳ ಕಾಲ ಯುದ್ಧವನ್ನು ಮುಂದುವರಿಸುವ ಸಾಮರ್ಥ್ಯ ಹೊಂದಿದ್ದಂತೆ ಕಾಣುತ್ತಿತ್ತು ಮತ್ತು ಆ ಯುದ್ಧದಲ್ಲಿ ಅಮೆರಿಕ ಏಕಾಂಗಿಯಾಗಿ ಹೋರಾಡಬೇಕಾದ ಸ್ಥಿತಿ ಇತ್ತು. ಇದು ಅಧ್ಯಕ್ಷ ಫ್ರಾಂಕ್ಲಿನ್ ರೂಸ್​ವೆಲ್ಟ್​ರಿಗೆ ಸಮ್ಮತವಿರಲಿಲ್ಲ. ಜರ್ಮನಿಯನ್ನು ಮಣಿಸಿದ ಕೆಲವೇ ದಿನಗಳಲ್ಲಿ ಜಪಾನನ್ನೂ ಮಣಿಸಿ ಪೂರ್ವ-ಪಶ್ಚಿಮ ಯುದ್ಧರಂಗಗಳೆರಡರಲ್ಲೂ ಸರಿಸುಮಾರು ಏಕಕಾಲದಲ್ಲಿ ಯುದ್ಧ ನಿಲುಗಡೆಯಾಗಬೇಕಾದರೆ ಸೋವಿಯತ್ ಯೂನಿಯನ್​ನ ಸಹಕಾರ ಅತ್ಯಗತ್ಯ ಎಂದೆಣಿಸಿದ ರೂಸ್​ವೆಲ್ಟ್ ಸಹಕಾರಕ್ಕಾಗಿ ಸೋವಿಯತ್ ಸರ್ವಾಧಿಕಾರಿ ಸ್ಟಾಲಿನ್ ಮುಂದೆ ಬೇಡಿಕೆಯಿತ್ತರು. ಮಹಾ ಚಾಣಾಕ್ಷ ಸ್ಟಾಲಿನ್ ಸಮ್ಮತಿಸಿ, ಜರ್ಮನಿಯ ಶರಣಾಗತಿಯ ನಂತರ ತಮ್ಮ ಸೇನೆಯನ್ನು ಯುರೋಪ್​ನಿಂದ ಪೆಸಿಫಿಕ್ ತೀರಕ್ಕೆ ವರ್ಗಾಯಿಸಲು ಕನಿಷ್ಟ ಮೂರು ತಿಂಗಳು ಬೇಕೆಂದೂ, ಅದಾದೊಡನೇ ಜಪಾನ್ ಮೇಲೆರಗಿ ಅಮೆರಿಕ ಮೇಲಿನ ಒತ್ತಡವನ್ನು ಕಡಿಮೆಗೊಳಿಸುವುದಾಗಿಯೂ ಆಶ್ವಾಸನೆಯಿತ್ತರು, ಮತ್ತು ಈ ‘ಸಹಾಯ’ಕ್ಕೆ ಪ್ರತಿಯಾಗಿ ಪೂರ್ವ ಯುರೋಪ್​ನಲ್ಲಿ ತಮಗೆ ಮುಕ್ತ ಅವಕಾಶ ನೀಡಬೇಕೆಂದು ಬೇಡಿಕೆಯಿತ್ತರು.

    ಪರಾಂಪರಾಗತ ಶತ್ರುಗಳಾದ ಜರ್ಮನ್ನರಿಂದ ನೆಲವನ್ನು ರಕ್ಷಿಸಿಕೊಳ್ಳಬೇಕಾದರೆ ತಮ್ಮ ನಡುವಿರುವ ಇತರ ಪೂರ್ವ ಯುರೋಪಿಯನ್ ದೇಶಗಳು ಮಿತ್ರರಾಗಿರಬೇಕಾದ ಅಗತ್ಯವನ್ನು ರಷ್ಯನ್ನರು ಮನಗಂಡಿದ್ದರು ಮತ್ತು ಅವರ ಆ ಅಗತ್ಯ ಇತರರಿಗೂ ಸಹಜವೇ ಅನಿಸುತ್ತಿತ್ತು. ಹೀಗಾಗಿ ಸ್ಟಾಲಿನ್​ರ ಬೇಡಿಕೆಗೆ ರೂಸ್​ವೆಲ್ಟ್ ಸಮ್ಮತಿಯಿತ್ತರು.

    ಏಪ್ರಿಲ್ 12ರಂದು ರೂಸ್​ವೆಲ್ಟ್ ನಿಧನ ಹೊಂದಿದರು. ಮೇ 7-9ರಂದು ಜರ್ಮನಿ ಶರಣಾಗತಿ ಘೊಷಿಸಿತು. ಯಾಲ್ಟಾದಲ್ಲಿ ಸ್ಟಾಲಿನ್ ಕೇಳಿ ಪಡೆದುಕೊಂಡಿದ್ದ ‘ಮುಕ್ತ ಅವಕಾಶ’ದ ನಿಜವಾದ ಅರ್ಥವೇನೆಂದು ಅಮೆರಿಕದ ಹೊಸ ಅಧ್ಯಕ್ಷ ಹ್ಯಾರಿ ಟ್ರೂಮನ್​ರಿಗೆ ಅರ್ಥವಾಗಲು ಹೆಚ್ಚು ಕಾಲ ಬೇಕಾಗಲಿಲ್ಲ. ಪೂರ್ವ ಯುರೋಪಿಯನ್ ದೇಶಗಳನ್ನು ತಮ್ಮ ಪರವಾಗಿ ಇರಿಸಿಕೊಳ್ಳುವುದು ಅಂದರೆ ಅಲ್ಲೆಲ್ಲ ಇತರೆಲ್ಲ ರಾಜಕೀಯ ಪಕ್ಷಗಳನ್ನೂ ಸಾರಾಸಗಟಾಗಿ ನಿರ್ನಾಮ ಮಾಡಿ ಕಮ್ಯೂನಿಸ್ಟ್ ಕೈಗೊಂಬೆ ಸರ್ಕಾರಗಳನ್ನು ಸ್ಥಾಪಿಸುವುದು ಎಂದು ಸ್ಟಾಲಿನ್ ಪ್ರದರ್ಶಿಸತೊಡಗಿದ್ದರು!

    ಹೀಗೆ ಪೂರ್ವ ಯುರೋಪಿಯನ್ ದೇಶಗಳನ್ನು ನುಂಗಿ ನೊಣೆದ ಸ್ಟಾಲಿನ್, 1946ರ ಉತ್ತರಾರ್ಧದಲ್ಲಿ ಗ್ರೀಸ್ ಮತ್ತು ತುರ್ಕಿಗಳಲ್ಲಿನ ಸರ್ಕಾರಗಳನ್ನು ಉರುಳಿಸಲು ಅಲ್ಲಿನ ಕಮ್ಯೂನಿಸ್ಟರಿಗೆ ಕುಮ್ಮಕ್ಕು ನೀಡತೊಡಗಿದರು. ಟ್ರೂಮನ್ ಕಾಯುತ್ತಿದ್ದುದು ಇದೇ ಅವಕಾಶಕ್ಕಾಗಿ. ಯಾಲ್ಟಾದಲ್ಲಿ ಸ್ಟಾಲಿನ್​ಗೆ ಮುಕ್ತ ಅವಕಾಶ ದೊರಕಿದ್ದ ದೇಶಗಳ ಪಟ್ಟಿಯಲ್ಲಿ ಗ್ರೀಸ್ ಮತ್ತು ತುರ್ಕಿ ಇರಲಿಲ್ಲ. ಹೀಗಾಗಿ ಆ ದೇಶಗಳನ್ನೂ ನುಂಗುವ ಅವರ ಕ್ರಮವನ್ನು ತಡೆಯುವ ‘ಮುಕ್ತ ಅವಕಾಶ’ ಟ್ರೂಮನ್​ರಿಗಿತ್ತು. ಒಳಗಿನ ಅಥವಾ ಹೊರಗಿನ ಕಮ್ಯೂನಿಸ್ಟರ ಉಪಟಳಗಳನ್ನು ಎದುರಿಸುತ್ತಿರುವ ಪ್ರಜಾಪ್ರಭುತ್ವವಾದಿ ದೇಶಗಳಿಗೆ ಎಲ್ಲ ಬಗೆಯ ಆರ್ಥಿಕ, ರಾಜಕೀಯ ಹಾಗೂ ಸೇನಾ ಸಹಕಾರ ನೀಡುವುದು ಅಮೆರಿಕದ ನೀತಿಯಾಗಿರುತ್ತದೆ ಎಂದು ಟ್ರೂಮನ್ 1947 ಮಾರ್ಚ್ 12ರಂದು ಕಾಂಗ್ರೆಸ್​ನಲ್ಲಿ ಘೊಷಿಸಿದರು. ಇತಿಹಾಸದಲ್ಲಿ ‘ಟ್ರೂಮನ್ ನೀತಿ’ ಎಂದು ಪ್ರಸಿದ್ಧವಾಗಿರುವ ಆ ನೀತಿಗನುಗುಣವಾಗಿ ತಕ್ಷಣ ಗ್ರೀಸ್ ಮತ್ತು ತುರ್ಕಿ ಸರ್ಕಾರಗಳಿಗೆ ಅಗತ್ಯ ಸಹಾಯ ನೀಡಿ ಅವು ಕಮ್ಯೂನಿಸ್ಟ್ ವಿದ್ರೋಹಿಗಳನ್ನು ಬಗ್ಗುಬಡಿಯಲು ಟ್ರೂಮನ್ ನೆರವಾದರು. ಅಷ್ಟೇ ಅಲ್ಲ, ಗ್ರೀಸ್ ಮತ್ತು ತುರ್ಕಿಯಲ್ಲಿ ಮಾಡಿದಂತಹ ಹರಕತ್​ಗಳನ್ನು ಇನ್ನಾವುದೇ ದೇಶದಲ್ಲಿ ಸೋವಿಯತ್ ಯೂನಿಯನ್ ಮಾಡಹೊರಟರೆ ಅದನ್ನು ತಡೆಯಲು ಪ್ರಜಾಪ್ರಭುತ್ವವಾದಿ ದೇಶಗಳು ಮೊದಲೇ ತಯಾರಾಗಿರಬೇಕೆಂದು ಹೇಳಿ, ಕೆನಡಾ ಜತೆ ಹತ್ತು ಪಶ್ಚಿಮ ಯುರೋಪಿಯನ್ ದೇಶಗಳನ್ನೂ ಒಪ್ಪಿಸಿ 1949 ಏಪ್ರಿಲ್ 4ರಂದು ಸೋವಿಯತ್ ಯೂನಿಯನ್​ಗೆ ವಿರುದ್ಧವಾಗಿ ‘ನಾರ್ತ್ ಅಟ್ಲಾಂಟಿಕ್ ಟ್ರೀಟಿ ಆರ್ಗನೈಜೇಷನ್’ (ನ್ಯಾಟೋ) ಅನ್ನು ಸ್ಥಾಪಿಸಿಯೂಬಿಟ್ಟರು. ಯಾವುದೇ ಪ್ರತಿಕೂಲ ಸನ್ನಿವೇಶದಲ್ಲಿ ತನ್ನ ಪರವಾಗಿ ‘ಹೋರಾಡುವಂತೆ’ ಪೂರ್ವ ಯುರೋಪಿಯನ್ ಕೈಗೊಂಬೆ ದೇಶಗಳನ್ನು ಒತ್ತಾಯಿಸಲು ಸೋವಿಯತ್ ಯೂನಿಯನ್​ಗೆ ಯಾವುದೇ ಔಪಚಾರಿಕ, ಲಿಖಿತ ಒಪ್ಪಂದದ ಅಗತ್ಯವೇ ಇರಲಿಲ್ಲ. ಈ ಬಗೆಯಲ್ಲಿ ಎರಡು ಸೇನಾ ಬಣಗಳು ಅಸ್ತಿತ್ವಕ್ಕೆ ಬಂದು ಶೀತಲ ಸಮರ ಆರಂಭವಾಯಿತು.

    ಅಮೆರಿಕ, ಭಾರತ, ಜಪಾನ್ ಮತ್ತು ಆಸ್ಟ್ರೇಲಿಯಾಗಳ ನಾಯಕರು ಇದೇ ಮಾರ್ಚ್ 12ರಂದು ವರ್ಚುವಲ್ ಮೀಟಿಂಗ್ ನಡೆಸಿ ‘ಕ್ವಾಡ್’ ಮಾತುಕತೆಯನ್ನು ಉನ್ನತ ಮಜಲಿಗೆ ಒಯ್ದದ್ದನ್ನು ಚೀನಾ ‘ಪೂರ್ವದ ನ್ಯಾಟೋ’ ಎಂದು ಬಣ್ಣಿಸಿದೆ, ಹೀಗೆ ತನ್ನ ವಿರುದ್ಧ ಸೇನಾಕೂಟವೊಂದು ರಚಿತವಾಗುತ್ತಿದೆ ಎಂದು ಹಲುಬತೊಡಗಿದೆ!

    ‘ಕ್ಠಿಚಛ್ಟಜ್ಝಿಚಠಿಛ್ಟಿಚ್ಝ ಖಛ್ಚಿuಜಿಠಿಢ ಈಜಿಚ್ಝಟಜ್ಠಛಿ‘ ಚಿಕ್ಕದಾಗಿ ‘ಕಿಖಿಅಈ‘ (ಚತುಷ್ಪಕ್ಷೀಯ ಭದ್ರತಾ ವಾರ್ತಾಲಾಪ) 2004ರ ಸುನಾಮಿಯ ಸಂದರ್ಭದಲ್ಲಿ ಅಮೆರಿಕ, ಭಾರತ, ಆಸ್ಟ್ರೇಲಿಯಾ ಮತ್ತು ಜಪಾನ್​ಗಳು ಏರ್ಪಡಿಸಿಕೊಂಡ ತಾತ್ಕಾಲಿಕ ಸಹಯೋಗ ವ್ಯವಸ್ಥೆ. ಅದರ ಉದ್ದೇಶ ಸುನಾಮಿಯಿಂದ ತತ್ತರಿಸಿದ ಆಗ್ನೇಯ ಮತ್ತು ದಕ್ಷಿಣ ಏಷ್ಯಾ ದೇಶಗಳಿಗೆ ತತ್​ಕ್ಷಣ ಸಹಕಾರ ನೀಡುವುದಾಗಿತ್ತು. ಈ ನಾಲ್ಕು ದೇಶಗಳು ‘ಸುನಾಮಿ ಕೋರ್ ಗ್ರೂಪ್’ ಎಂಬ ಲಾಂಛನದಡಿಯಲ್ಲಿ ನಲವತ್ತು ಸಾವಿರ ಸುರಕ್ಷಾ ಹಾಗೂ ಪ್ರಾಕೃತಿಕ ವಿಕೋಪ ನಿರ್ವಹಣಾ ಸಿಬ್ಬಂದಿಯ ಜತೆಗೆ ಜಹಜುಗಳು ಮತ್ತಿತರ ವಾಹನಗಳನ್ನೂ ತುರ್ತಾಗಿ ಒಟ್ಟುಗೂಡಿಸಿ ಸಹಾಯಕ್ಕೆ ನಿಂತವು. ಯಾವುದೇ ಲಿಖಿತ ಒಪ್ಪಂದವಿಲ್ಲದೇ, ಔಪಚಾರಿಕ ಕೂಟವನ್ನೂ ರಚಿಸಿಕೊಳ್ಳದೇ ಸಮನ್ವಯ ಸಾಧಿಸಿಕೊಂಡು ಜನಹಿತ ಕಾರ್ಯಯೋಜನೆಗಳನ್ನು ಯಶಸ್ವಿಯಾಗಿ ಸಾಧಿಸಿದ್ದು ಎಲ್ಲೆಡೆ ಮೆಚ್ಚುಗೆ ಗಳಿಸಿತು. ಎರಡು ವರ್ಷಗಳ ನಂತರ ಭಾರತದ ಪ್ರಧಾನಿ ಮನಮೋಹನ್ ಸಿಂಗ್ ಜಪಾನ್​ಗೆ ಭೇಟಿ ನೀಡಿದಾಗ ಸುನಾಮಿ ನಂತರದ ಸಹಯೋಗವನ್ನು ಮತ್ತಷ್ಟು ವಿಸ್ತರಿಸುವ ಬಗ್ಗೆ ಮಾತುಕತೆಗಳಾದವು.

    ಕ್ವಾಡ್ ಬೆಳವಣಿಗೆಯಲ್ಲಿ 2007 ಮಹತ್ವದ ವರ್ಷ. ಏಪ್ರಿಲ್​ನಲ್ಲಿ ಜಪಾನೀ ಪ್ರಧಾನಿ ಶಿಂಜೋ ಅಬೆ ಭಾರತಕ್ಕೆ ಭೇಟಿ ನೀಡಿ ಚತುಷ್ಪಕ್ಷೀಯ ರಕ್ಷಣಾ ಸಹಯೋಗದ ಬಗ್ಗೆ ಮತ್ತಷ್ಟು ಮಾತುಕತೆ ನಡೆಸಿದರು. ಆ ಬೇಸಿಗೆಯಲ್ಲಿ ನಾಲ್ಕೂ ದೇಶಗಳ ನಾಯಕರು ಮನಿಲಾದಲ್ಲಿ ಭೇಟಿಯಾಗಿ ಅಬೆಯವರ ಪ್ರಸ್ತಾಪವನ್ನು ಕಾರ್ಯರೂಪಕ್ಕಿಳಿಸುವ ಬಗ್ಗೆ ಮಾತುಕತೆ ನಡೆಸಿದರು. ಸೆಪ್ಟೆಂಬರ್​ನಲ್ಲಿ ಭಾರತ ಮತ್ತು ಅಮೆರಿಕ ನಡುವೆ ಅದಾಗಲೇ ನಡೆಯುತ್ತಿದ್ದ ಮಲಬಾರ್ ರಕ್ಷಣಾ ಪಡೆಗಳ ಕವಾಯಿತಿಗೆ ಜಪಾನ್ ಮತ್ತು ಆಸ್ಟ್ರೇಲಿಯಾ ಸಹ ಸೇರಿಕೊಂಡವು. ಅಂದರೆ ನಾಲ್ಕೂ ರಾಷ್ಟ್ರಗಳ ಸುರಕ್ಷಾಪಡೆಗಳ ಜಂಟಿ ಸಹಕಾರದ ಆರಂಭ ಅದು. ಆದರೆ ಅಲ್ಲಿಂದಾಚೆಗೆ ಘಟಿಸಿದ್ದು ಮಾತ್ರ ದುರಂತ.

    ಅಂತಾರಾಷ್ಟ್ರೀಯ ಕಾನೂನುಗಳು ಮತ್ತು ಪರಸ್ಪರ ಸಹಯೋಗದ ಆಧಾರದ ಮೇಲೆ ದ್ವಿಪಕ್ಷೀಯ, ತ್ರಿಪಕ್ಷೀಯ, ಬಹುಪಕ್ಷೀಯ ಸಂಬಂಧಗಳ ನಿರ್ಮಾಣ ಮುಂತಾದ ಧನಾತ್ಮಕ ವಿಷಯಗಳ ಬಗ್ಗೆ ಚರ್ಚೆಯಾದದ್ದೇ ಅದಾವುದನ್ನೂ ಪಾಲಿಸದ ಚೀನಾ, ಮನಿಲಾ ಮಾತುಕತೆ ಮತ್ತು ನಂತರದ ಮಲಬಾರ್ ಕವಾಯತು ತನ್ನ ವಿರುದ್ಧ ಕೂಟವೊಂದರ ರಚನೆಯ ಮೊದಲ ಹೆಜ್ಜೆ ಎಂದು ಪರಿಗಣಿಸಿ ಅದರ ವಿರುದ್ಧ ದನಿಯೆತ್ತಿತು. ಆ ಸಮಯದಲ್ಲಿ ನಮ್ಮಲ್ಲಿನ ಯುಪಿಎ ಸರ್ಕಾರದಲ್ಲಿ ಕಾಂಗ್ರೆಸ್ ಜತೆ ಕಮ್ಯೂನಿಸ್ಟ್ ಪಕ್ಷಗಳೂ ಸೇರಿದ್ದವು. ಚೀನಾದ ವಿರುದ್ಧದ ಯಾವುದೇ ಯೋಜನೆಯಲ್ಲಿ ಭಾರತ ಭಾಗವಹಿಸುವುದಾದರೆ ಬೆಂಬಲ ಹಿಂತೆಗೆದುಕೊಳ್ಳುವುದಾಗಿ ಇವು ಎಚ್ಚರಿಕೆ ನೀಡಿದವು. ಅಲ್ಲಿಗೆ ಮನಮೋಹನ ಸಿಂಗ್ ಸರ್ಕಾರ ಕ್ವಾಡ್ ಬಗ್ಗೆ ಮಾತಾಡುವುದನ್ನೇ ನಿಲ್ಲಿಸಿಬಿಟ್ಟಿತು. ಮರುವರ್ಷ ಕಾಂಗ್ರೆಸ್ ಪಕ್ಷವೇ ಚೀನೀ ಕಮ್ಯೂನಿಸ್ಟ್ ಪಕ್ಷದೊಂದಿಗೆ ಒಪ್ಪಂದವೊಂದನ್ನು ಮಾಡಿಕೊಂಡು ತನ್ನ ನಾಯಕಿಯರ/ನಾಯಕರ ನೇತೃತ್ವದಲ್ಲಿದ್ದ ಎನ್​ಜಿಓ ‘ರಾಜೀವ್ ಗಾಂಧಿ ಫೌಂಡೇಷನ್’ಗೆ ಚೀನೀ ಹಣ ಹರಿಯುವಂತೆ ಮಾಡಿಕೊಂಡ ಮೇಲೆ ಕ್ವಾಡ್ ಕಥೆ ಮುಗಿದೇಹೋಯಿತು.

    ಎಲ್ಲ ಬದಲಾದದ್ದು 2017ರಲ್ಲಿ. ಚೀನಾ ಸೆಂಕಾಕು ದ್ವೀಪಗಳ ಸುತ್ತಮುತ್ತ ಚಟುವಟಿಕೆಗಳನ್ನು ವಿಸ್ತರಿಸಿ ಜಪಾನ್​ನ ಸಾರ್ವಭೌಮತ್ವಕ್ಕೆ ಧಕ್ಕೆಯೊಡ್ಡುವ ಕೆಲಸವನ್ನು ವೃದ್ಧಿಸಿತ್ತು, ದೊಕ್ಲಾಂನಲ್ಲಿ ಭಾರತದ ವಿರುದ್ಧ ಕಾಲು ಕೆರೆದು ನಿಂತಿತ್ತು, ಅಂತಾರಾಷ್ಟ್ರೀಯ ಕಾನೂನುಗಳನ್ನು ಉಲ್ಲಂಘಿಸಿ ದಕ್ಷಿಣ ಚೀನಾ ಸಮುದ್ರದ ಶೇಕಡ 90 ಭಾಗದ ಮೇಲೆ ಹತೋಟಿ ಸ್ಥಾಪಿಸಿ, ಅಲ್ಲಿ ಹಾವಳಿ ಎಬ್ಬಿಸುವ ಸೂಚನೆ ನೀಡತೊಡಗಿತ್ತು, ಅಧ್ಯಕ್ಷ ಷಿ ಜಿನ್​ಪಿಂಗ್ ‘ಬೆಲ್ಟ್ ಆಂಡ್ ರೋಡ್’ ಯೋಜನೆ ಮೂಲಕ ವಲಯದ ದೇಶಗಳ ನೆಲವನ್ನು ಕಬಳಿಸಲು ಯೋಜನೆ ರೂಪಿಸಿದ್ದರು, ವಾಷಿಂಗ್​ಟನ್​ನ ‘ಪರಂಪರಾಗತ’ ಮಿತ್ರ ಪಿಲಿಫೀನ್ಸ್ ಅನ್ನು ಸೆಳೆದುಕೊಂಡು ಅಮೆರಿಕಕ್ಕೇ ಈ ವಲಯದಿಂದ ಎತ್ತಂಗಡಿಯಾಗುವಂತೆ ಚೀನಾ ಸಂಚುಹೂಡಿತ್ತು, ಆಸ್ಟ್ರೇಲಿಯಾದ ಕೆಲವು ರಾಜಕಾರಣಿಗಳನ್ನೇ ಲಂಚದ ಮೂಲಕ ತನ್ನ ಪರ ಮಾಡಿಕೊಂಡು ಆ ದ್ವೀಪರಾಷ್ಟ್ರದ ನೀತಿಗಳನ್ನೇ ಪ್ರಭಾವಿಸಲೂ ಪ್ರಯತ್ನಿಸತೊಡಗಿತ್ತು. ಇದರಲ್ಲಿ ಬಹುಪಾಲನ್ನು ಚೀನಾ ದಶಕದ ಹಿಂದೆಯೇ ಆರಂಭಿಸಿದ್ದರೂ, ಈಗ ವಿರೋಧಿಸುವಂಥ ಸನ್ನಿವೇಶ ಉಂಟಾಗಿತ್ತು. ಅದಾದದ್ದು ನಾಲ್ಕೂ ದೇಶಗಳಲ್ಲಾಗಿದ್ದ ನಾಯಕತ್ವ ಬದಲಾವಣೆಯಿಂದಾಗಿ. ಅಮೆರಿಕದಲ್ಲಿ ಚೀನೀ ಕೃತ್ಯಗಳಿಗೆಲ್ಲ ಮೌನಸಮ್ಮತಿ ನೀಡುತ್ತಿದ್ದ ಬರಾಕ್ ಒಬಾಮ ಹೋಗಿ ಡೊನಾಲ್ಡ್ ಟ್ರಂಪ್ ಬಂದಿದ್ದರು, ಭಾರತದಲ್ಲಿ ಮನಮೋಹನ್ ಸಿಂಗ್-ಸೋನಿಯಾ ಗಾಂಧಿ ಹೋಗಿ ನರೇಂದ್ರ ಮೋದಿ ಬಂದಿದ್ದರು, ಜಪಾನ್​ನಲ್ಲಿ ಶಿಂಜೋ ಅಬೆ ಮತ್ತೆ ಅಧಿಕಾರಕ್ಕೆ ಬಂದಿದ್ದರು. ಈ ಗುಂಪಿಗೆ ವರ್ಷದ ನಂತರ ಅಸ್ಟ್ರೇಲಿಯಾದ ಸ್ವಾಭಿಮಾನಿ ಪ್ರಧಾನಿ ಸ್ಕಾಟ್ ಮಾರಿಸನ್ ಸಹ ಸೇರಿಕೊಂಡರು. ಕ್ವಾಡ್ ಮರುಜೀವ ತಳೆಯಲು ಈ ನಾಲ್ವರು ನಾಯಕರ ಮನೋಭಾವ ಮತ್ತು ನೀತಿಗಳು ಕಾರಣ. ಕಳೆದ ಮೂರು ವರ್ಷಗಳಲ್ಲಿ ಈ ನಾಲ್ಕು ದೇಶಗಳ ಪ್ರತಿನಿಧಿಗಳು ನಾಲ್ಕು ಸಲ ಭೇಟಿಯಾಗಿ ಶಾಂತಿ ಮತ್ತು ಸಹಬಾಳ್ವೆಯ ಅಗತ್ಯ, ಅದಕ್ಕಾಗಿ ಚೀನಾದ ಕೈಗಳನ್ನು ಕಟ್ಟಿಹಾಕಬೇಕಾದ ಅಗತ್ಯಗಳ ಕುರಿತು ರ್ಚಚಿಸಿದ್ದಾರೆ. ಇದೆಲ್ಲದರ ಅಂತಿಮ ಪರಿಣಾಮವೇ ಮಾರ್ಚ್ 12ರ ವಿಸõತ ಮಾತುಕತೆ. ನಾಲ್ವರು ನಾಯಕರೂ ‘ದ ಸ್ಪಿರಿಟ್ ಆಫ್ ಕ್ವಾಡ್’ ಎಂಬ ಜಂಟಿ ಹೇಳಿಕೆಯಲ್ಲಿ ಒಮ್ಮೆಯೂ ಚೀನಾದ ಹೆಸರೆತ್ತದೇ, ಅದರ ಕುಕೃತ್ಯಗಳನ್ನು ಮಾತ್ರ ಎಳೆಎಳೆಯಾಗಿ ಪ್ರಸ್ತಾಪಿಸಿ, ಅಂತಹ ಶಾಂತಿಕಂಟಕ ಯೋಜನೆಗಳನ್ನು ತಡೆಯುವುದು ಜಾಗತಿಕ ಶಾಂತಿ ಹಾಗೂ ಅಭಿವೃದ್ಧಿಯ ದೃಷ್ಟಿಯಿಂದ ಅತ್ಯಗತ್ಯ ಎಂದು ಘೊಷಿಸಿದ್ದಾರೆ. ಚೀನಾ ಮಾಡುತ್ತಿರುವ ‘ವ್ಯಾಕ್ಸಿನ್ ರಾಜತಂತ್ರ’ವನ್ನಷ್ಟೇ ಪ್ರಸ್ತಾಪಿಸಿ, ಈ ವಲಯದ ದೇಶಗಳು ಅದಕ್ಕೆ ಬಲಿಯಾಗುವುದನ್ನು ತಡೆಯಲು ಅವುಗಳಿಗೆ 2022ರ ಹೊತ್ತಿಗೆ ಒಂದು ಬಿಲಿಯನ್ ಕೋವಿಡ್ ವ್ಯಾಕ್ಸಿನ್​ಗಳನ್ನು ಪೂರೈಸುವುದಾಗಿ ಹೇಳಿವೆ. ಅದಕ್ಕಾಗಿ ಅಮೆರಿಕದ ತಂತ್ರಜ್ಞಾನ, ಜಪಾನೀ ಹಣ, ಭಾರತದ ಉತ್ಪಾದನಾ ಸಾಮರ್ಥ್ಯ ಮತ್ತು ಆಸ್ಟ್ರೇಲಿಯಾದ ಸಾಗಾಟವ್ಯವಸ್ಥಾ ಸೌಲಭ್ಯಗಳನ್ನು ಒಟ್ಟುಗೂಡಿಸಿ ಕಾರ್ಯ ನಿರ್ವಹಿಸುವುದಾಗಿಯೂ ಹೇಳಿವೆ. ನಾಲ್ಕೂ ದೇಶಗಳ ನಡುವೆ ದೀರ್ಘಕಾಲೀನ ಸಹಕಾರದ ಸ್ಪಷ್ಟ ಸೂಚನೆ ಇದು.

    ಬಾಣ ನಾಟಬೇಕಾದಲ್ಲಿಗೇ ನಾಟಿದೆ. ಚೀನೀ ಕುಪ್ರಚಾರದ ಮುಖವಾಣಿ ‘ಗ್ಲೋಬಲ್ ಟೈಮ್್ಸ’, ‘ಈ ನಾಲ್ಕು ದೇಶಗಳು ಪ್ರಜಾಪ್ರಭುತ್ವದ ಮರೆಯಲ್ಲಿ ತಮ್ಮ ಭೂ-ರಾಜಕೀಯ ಹಿತಾಸಕ್ತಿಗಳನ್ನು ಸಾಧಿಸಹೊರಟಿವೆ’ ಎಂದು ಆಪಾದಿಸಿದೆ. ಈ ವಲಯದ ಎಲ್ಲ ದೇಶಗಳೂ ಪರಸ್ಪರರನ್ನು ಗೌರವಿಸಬೇಕೆಂದೂ, ಪರಸ್ಪರರ ಹಿತಾಸಕ್ತಿಗಳ ವಿರುದ್ಧ ಹೋಗಬಾರದೆಂದೂ ಚೀನೀ ವಿದೇಶಾಂಗ ಇಲಾಖೆಯ ವಕ್ತಾರ ಜಾವೋ ಲಿಜಿಯಾಂಗ್ ಮಹಾಶಯ ಅಪ್ಪಣೆ ಕೊಡಿಸಿದ್ದಾರೆ. ಭೂತದ ಬಾಯಲ್ಲಿ ಭಗವದ್ಗೀತೆ!

    ಮುಂದೇನು?: ಒಂದುವೇಳೆ ಕ್ವಾಡ್ ಔಪಚಾರಿಕವಾಗಿ ಅಸ್ತಿತ್ವಕ್ಕೆ ಬಂದರೆ ಇಂಡೋನೇಷ್ಯಾ, ವಿಯೆಟ್ನಾಂ ಮತ್ತು ಥಾಯ್ಲ್ಯಾಂಡ್ ಅದರಲ್ಲಿ ಸೇರಿಕೊಳ್ಳುವುದು ನಿಶ್ಚಿತ. ಸೇರಲು ತೈವಾನ್ ಅತೀ ಉತ್ಸುಕತೆಯಲ್ಲಿದ್ದರೂ ಅದರ ಸಾರ್ವಭೌಮತ್ವ ಅಸ್ಮಿತೆಯಿನ್ನೂ ನಿರ್ಧರಿತವಾಗಿಲ್ಲದ ಕಾರಣ ತೆರೆಮರೆಯಲ್ಲಿ ಕ್ವಾಡ್​ಗೆ ಸಹಕಾರ ನೀಡುತ್ತದೆ. ಜತೆಗೆ, ಈ ವಲಯದ ಬಹುತೇಕ ಎಲ್ಲ ದೇಶಗಳೂ ಚೀನಾದ ಜತೆ ನೆಲ ಅಥವಾ ಜಲ ಗಡಿವಿವಾದ ಹೊಂದಿರುವ ಹಾಗೂ ಆ ಕಮ್ಯೂನಿಸ್ಟ್ ದೇಶದಿಂದ ಆರ್ಥಿಕ ಹಾನಿ ಅನುಭವಿಸಿರುವ ಕಾರಣ ಅವೆಲ್ಲವೂ ಕ್ವಾಡ್​ಗೆ ಬೆಂಬಲವಾಗಿ ನಿಲ್ಲುತ್ತವೆ. ಚೀನಾದ ಪರ ನಿಲ್ಲಬಹುದಾದ ದೇಶಗಳು ಮೊದಲಿಗ ಪಾಕಿಸ್ತಾನ. ಇರಾನ್ ಮತ್ತು ತುರ್ಕಿಗಳಲ್ಲಿ ಸದ್ಯಕ್ಕೆ ನಾಯಕತ್ವ ಬದಲಾಗದಿದ್ದರೆ ಅವೂ ಪಾಕಿಸ್ತಾನವನ್ನು ಅನುಸರಿಸಬಹುದು. ಜತೆಗೆ, ಕಿರಿಬಾತಿಯಂತಹ ನಿರುಪಯುಕ್ತ ಕಿರುದೇಶವೂ ಚೀನಾ ಪರವಾಗಿ ನಿಲ್ಲುತ್ತದೆ. ಐಲುದೊರೆ ಕಿಮ್ ಜಾಂಗ್-ಉನ್​ನ ಉತ್ತರ ಕೊರಿಯಾದ್ದು ಅನಿಶ್ಚಿತ ಸ್ಥಿತಿ. ಇಂತಹದೊಂದು ಸನ್ನಿವೇಶ ನಿರ್ವಣವಾದರೆ ಜಾಗತಿಕ ರಾಜಕಾರಣ 1950ರ ದಶಕಕ್ಕೆ ಹಿಂತಿರುಗಬಹುದು. ಒಂದೇ ವ್ಯತ್ಯಾಸವೆಂದರೆ ಅಂದು ಪರಸ್ಪರ ವಿರೋಧಿ ಬಣಗಳು ಶಸ್ತ್ರಾಸ್ತ್ರ ಪೈಪೋಟಿಯಲ್ಲಿ ತೊಡಗಿದ್ದರೆ ಇಂದಿನ ವಿರೋಧಿ ಬಣಗಳು ಪರಸ್ಪರರ ಐಟಿ ತಂತ್ರಜ್ಞಾನ, ವೈದ್ಯಕೀಯ ಸಂಶೋಧನೆಯಂತಹ ‘ಸಾಫ್ಟ್ ಪವರ್’ ಅನ್ನು ಹಾಳುಗೆಡವಲು ತಂತ್ರ ರೂಪಿಸುತ್ತವೆ ಮತ್ತು ಆ ಮೂಲಕ ವಿರೋಧಿಗಳ ಆದಾಯ ಕುಗ್ಗುವಂತೆ, ಅದು ಅಂತಿಮವಾಗಿ ಅವುಗಳ ಸೇನಾಸಾಮರ್ಥ್ಯದ ಮೇಲೆ ಋಣಾತ್ಮಕ ಪರಿಣಾಮ ಬೀರುವಂತೆ ಮಾಡುತ್ತವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts