More

    ಮಹಾಮೈತ್ರಿ ಬಲ ಬಿಜೆಪಿಯಲ್ಲಿ ತಳಮಳ?

    | ರಾಘವ ಶರ್ಮ ನಿಡ್ಲೆ ಗುವಾಹಟಿ (ಅಸ್ಸಾಂ)

    ಬೋಡೋ ಬುಡಕಟ್ಟು ಸಮುದಾಯದ ಪ್ರತ್ಯೇಕ ರಾಜ್ಯ ಬೇಡಿಕೆ ಹೆಸರಲ್ಲಿ ಈಶಾನ್ಯ ರಾಜ್ಯಗಳ ಹೆಬ್ಬಾಗಿಲು ಅಸ್ಸಾಂ ಸಾಕಷ್ಟು ಸಂಘರ್ಷ, ಹಿಂಸಾಚಾರ, ಸಾವಿರಾರು ಮಂದಿಯ ಹತ್ಯೆಗಳಿಗೆ ಸಾಕ್ಷಿಯಾಗಿದೆ. ಈ ಸಂಘರ್ಷಗಳು 1980ರ ದಶಕದಲ್ಲಿ ಮೊದಲ್ಗೊಂಡು ನಂತರ 1993ರಲ್ಲಿ ಬೋಡೋ ಲಿಬರೇಷನ್ ಮುಖಂಡರು ಕೇಂದ್ರದೊಂದಿಗೆ ಮೊದಲ ಶಾಂತಿ ಒಪ್ಪಂದ ಮಾಡಿಕೊಳ್ಳುವ ಮೂಲಕ ಸಂಘರ್ಷ ತಕ್ಕಮಟ್ಟಿಗೆ ಕಡಿಮೆಯಾಯಿತು. ನಂತರ 2003ರಲ್ಲಿ ಹೊಸ ಒಪ್ಪಂದ ಮೂಲಕ ಶಸ್ತ್ರ ತ್ಯಜಿಸಿದ ಬೋಡೋಲ್ಯಾಂಡ್ ಬಂಡುಕೋರರು ರಾಜಕೀಯದ ಮುಖ್ಯವಾಹಿನಿಗೆ ಬಂದರು. ಮಾಜಿ ಬೋಡೋ ಬಂಡುಕೋರ ಹಗ್ರಾಮ ಮೊಹಿಲರಿ ಇವರಲ್ಲಿ ಪ್ರಮುಖರು. ಬೋಡೋ ಪೀಪಲ್ಸ್ ಫ್ರಂಟ್ (ಬಿಪಿಎಫ್) ರಾಜಕೀಯ ಪಕ್ಷದ ನಾಯಕನಾಗಿರುವ ಮೊಹಿಲರಿ ಈ ಚುನಾವಣೆಯಲ್ಲಿ ಮಹಾಮೈತ್ರಿಯಲ್ಲಿ ಕಾಣಿಸಿಕೊಂಡಿದ್ದು, ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಲು ಪಣತೊಟ್ಟಿದ್ದಾರೆ.

    ಮಹಾಮೈತ್ರಿ ಬಲ ಬಿಜೆಪಿಯಲ್ಲಿ ತಳಮಳ?ರಾಜ್ಯದ ಕೊಖ್ರಾಜರ್, ಚಿರಾಂಗ್, ಉದಲ್​ಗುರಿ ಮತ್ತು ಬಕ್ಸಾ ಎಂಬ ನಾಲ್ಕು ಜಿಲ್ಲೆಗಳಲ್ಲಿ ಬೋಡೋ ಜನಸಂಖ್ಯೆಯ ಗಾತ್ರ ದೊಡ್ಡದಿದೆ. ಕಳೆದ ಚುನಾವಣೆಯಲ್ಲಿ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿದ್ದ ಬಿಪಿಎಫ್, ಈ ನಾಲ್ಕು ಜಿಲ್ಲೆಗಳ ಎಲ್ಲ 12 ವಿಧಾನಸಭೆ ಸೀಟುಗಳನ್ನೂ ಗೆದ್ದುಕೊಂಡಿತ್ತು. ಬಿಪಿಎಫ್​ನ ಮೂವರು ಶಾಸಕರು ಸಿಎಂ ಸರ್ಬಾನಂದ ಸೊನೋವಾಲ್ ಸರ್ಕಾರದಲ್ಲಿ ಮಂತ್ರಿಗಿರಿಯನ್ನೂ ಪಡೆದಿದ್ದರು.

    2006 ಮತ್ತು 2011ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜತೆಗೆ ಮೈತ್ರಿಯಲ್ಲಿದ್ದ ಬಿಪಿಎಫ್, 2014ರ ಲೋಕಸಭೆ ಚುನಾವಣೆ ವೇಳೆ ಬಿಜೆಪಿಯನ್ನು ಮಿತ್ರನಾಗಿ ಪರಿಗಣಿಸಿತು. 2016ರಲ್ಲೂ ಇದು ಮುಂದುವರಿಯಿತು. 2021 ಫೆಬ್ರವರಿಯಲ್ಲಿ ಕಾಂಗ್ರೆಸ್ ನೇತೃತ್ವದ ಮಹಾಮೈತ್ರಿ ಸೇರಿಕೊಂಡಿರುವ ಬಿಪಿಎಫ್​ಗೆ ಇದು ಮಾಡು ಇಲ್ಲವೇ ಮಡಿ ಚುನಾವಣೆ ಎಂದೂ ಹೇಳಲಾಗುತ್ತಿದೆ. ಬಿಪಿಎಫ್​ನ ಈ ಸ್ಥಿತಿಗೆ ಸೈದ್ಧಾಂತಿಕ ಬದ್ಧತೆ ಇಲ್ಲದಿರುವುದೇ ಕಾರಣ ಎನ್ನುತ್ತಾರೆ ಗುವಾಹಟಿ ನಿವಾಸಿ ಮೃಣ್ಮಯ್ ಹಜಾರಿಕಾ. ಬಿಪಿಎಫ್ ಮತ್ತು ಮುಸ್ಲಿಂ ನಾಯಕ ಮೌಲಾನಾ ಬದ್ರುದ್ದಿನ್ ಅಜ್ಮಲ್ ನೇತೃತ್ವದ ಎಐಯುಡಿಎಫ್ (ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್) ಮೈತ್ರಿಯಿಂದಾಗಿ ಕಾಂಗ್ರೆಸ್ ಬಲ ದ್ವಿಗುಣಗೊಂಡಿದೆ. ವಾಸ್ತವದಲ್ಲಿ ಇದು ಬಿಜೆಪಿಯ ಆತಂಕ ಹೆಚ್ಚಿಸಿರುವುದು ಸುಳ್ಳೇನಲ್ಲ.

    ತೃತೀಯ ದಳ

    ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ರಾಜ್ಯಾದ್ಯಂತ ಹೋರಾಟ ನಡೆಸಿದ್ದ ಸಾಮಾಜಿಕ ಕಾರ್ಯಕರ್ತ ಅಖಿಲ್ ಗೋಗೋಯ್ ಮತ್ತು ಯುವ ನಾಯಕ ಲುರಿಂಜ್ಯೋತಿ ಪ್ರತ್ಯೇಕ ಪಕ್ಷಗಳನ್ನು ಕಟ್ಟಿಕೊಂಡು ತೃತೀಯ ದಳದ ಹೆಸರಲ್ಲಿ ಚುನಾವಣೆ ಎದುರಿಸುತ್ತಿದ್ದಾರೆ. ರಾಜ್ಯದ ಸಿಎಎ ಸಂಘರ್ಷದ ಹಿಂದೆ ಅಖಿಲ್ ಗೋಗೋಯ್ ಕೈವಾಡವಿದೆ ಎಂದು ರಾಷ್ಟ್ರೀಯ ತನಿಖಾ ದಳ ಅಖಿಲ್​ರನ್ನು ಬಂಧಿಸಿದೆ. ಅವರಿಗೆ ಇನ್ನೂ ಜಾಮೀನು ಸಿಕ್ಕಿಲ್ಲ. ಜೈಲಿನಿಂದಲೇ ಶಿವಸಾಗರ ಕ್ಷೇತ್ರದ ಅಭ್ಯರ್ಥಿಯಾಗಿ ಅವರು ಕಣಕ್ಕಿಳಿದಿದ್ದಾರೆ. 84 ವರ್ಷದ ಅಖಿಲ್ ತಾಯಿ ಮಗನ ಪರ ಪ್ರಚಾರ ನಡೆಸುತ್ತಿದ್ದಾರೆ. ‘ಬಿಜೆಪಿ ಸೋಲಿಸಬಲ್ಲ ಅಭ್ಯರ್ಥಿಗೆ ಮತನೀಡಿ, ಅಸ್ಸಾಂನ್ನು ರಕ್ಷಿಸಿ’ ಎಂದು ಅಖಿಲ್ ಜೈಲಿನಿಂದಲೇ ಪತ್ರ ಬರೆದಿದ್ದಾರೆ. ಆಲ್ ಇಂಡಿಯಾ ಅಸ್ಸಾಂ ಸ್ಟೂಡೆಂಟ್ ಯೂನಿಯನ್​ನ ಮಾಜಿ ಪ್ರಧಾನ ಕಾರ್ಯದರ್ಶಿ ಲುರಿಂಜ್ಯೋತಿ ಗೋಗೋಯ್ ಅಸ್ಸಾಂ ಜಾತೀಯ ಪರಿಷತ್ ಪಕ್ಷ ಸ್ಥಾಪಿಸಿ, ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಇವರೆಲ್ಲರೂ, ಮಹಾಮೈತ್ರಿಯೊಂದಿಗೆ ರಹಸ್ಯ ಮೈತ್ರಿ ಮಾಡಿಕೊಂಡಿದ್ದಾರೆನ್ನುವುದು ಬಿಜೆಪಿ ಆರೋಪ. ಮುಖ್ಯಮಂತ್ರಿ ಸರ್ಬಾನಂದ ಸೊನೋವಾಲ್ ಮತ್ತು ಪವರ್​ಫುಲ್ ನಾಯಕ ಹಿಮಾಂತ ಬಿಸ್ವ ಶರ್ಮರಂತಹ ಸ್ಥಳೀಯ ನಾಯಕರ ಬಲದ ಜತೆಗೆ 5 ವರ್ಷಗಳ ಸದೃಢ ಆಡಳಿತ ಕೊಟ್ಟ ಬಿಜೆಪಿಯಲ್ಲಿ ಚುನಾವಣೆ ಗೆಲ್ಲುವ ವಿಶ್ವಾಸವೇನೋ ಕಾಣುತ್ತಿದೆ. ಆದರೆ, ಪ್ರಾದೇಶಿಕ ಪಕ್ಷಗಳು ಒಗ್ಗೂಡಿ ಮಹಾಮೈತ್ರಿ ಬೆನ್ನಿಗೆ ನಿಂತಿರುವುದರಿಂದ ಗೆಲುವಿನ ದಡ ಸೇರುವ ಹಾದಿ ಕಠಿಣಗೊಂಡಿರುವುದನ್ನು ಸ್ಥಳೀಯ ಬಿಜೆಪಿ ನಾಯಕರೂ ಒಪ್ಪಿಕೊಳ್ಳುತ್ತಾರೆ.

    ಬಿಟಿಸಿ ರಚನೆ

    ಬೋಡೋಗಳ ಪ್ರತ್ಯೇಕ ರಾಜ್ಯ ಬೇಡಿಕೆ ಬದಲಿಗೆ, ಸಂವಿಧಾನದಲ್ಲಿ ತಿದ್ದುಪಡಿ ತಂದು ಬೋಡೋಲ್ಯಾಂಡ್ ಟೆರಿಟೋರಿಯಲ್ ಕೌನ್ಸಿಲ್​ನ್ನು (ಬಿಟಿಸಿ) ರಚನೆ ಮಾಡಲಾಗಿದೆ. 2003ರಲ್ಲಿ ಕೇಂದ್ರದೊಂದಿಗಿನ ಒಪ್ಪಂದದಿಂದ ಇದು ಸಾಧ್ಯವಾಗಿದೆ. ಬೋಡೋಗಳ ಅಭಿವೃದ್ಧಿಗೆಂದು ಕೇಂದ್ರ ಸರ್ಕಾರದಿಂದಲೇ ಈ ಕೌನ್ಸಿಲ್​ಗೆ ಹಣ ಬಿಡುಗಡೆಯಾಗುತ್ತದೆ. ಪ್ರತ್ಯೇಕ ಸರ್ಕಾರದಂತಿರುವ ಕೌನ್ಸಿಲ್​ಗೆ 5 ವರ್ಷಕ್ಕೊಮ್ಮೆ ಚುನಾವಣೆಗಳೂ ನಡೆಯುತ್ತವೆ. 40 ಸದಸ್ಯರ ಕೌನ್ಸಿಲ್​ಗೆ 2020ರ ಡಿಸೆಂಬರ್​ನಲ್ಲಿ ನಡೆದ ಚುನಾವಣೆಯಲ್ಲಿ ಯುನೈಟೆಡ್ ಪೀಪಲ್ಸ್ ಪಾರ್ಟಿ ಲಿಬರಲ್ (ಯುಪಿಪಿಎಲ್) 12, ಬಿಜೆಪಿ 9, ಕಾಂಗ್ರೆಸ್ 1 ಮತ್ತು ಬಿಪಿಎಫ್ 17 ಸೀಟುಗಳನ್ನು ಗೆದ್ದಿತ್ತು. ಆದರೆ, ಬಿಪಿಎಫ್ ಜತೆ ಮೈತ್ರಿಗೆ ಹಿಂದೇಟು ಹಾಕಿದ್ದ ಬಿಜೆಪಿ, ಯುಪಿಪಿಎಲ್ ಜತೆ ಕೈಜೋಡಿಸಿದೆ. ಕೌನ್ಸಿಲ್​ನ ಅನುದಾನಗಳ ದುರುಪಯೋಗ ಕುರಿತು ಬಿಜೆಪಿ ಬಿಪಿಎಫ್ ಬಗ್ಗೆ ಆಕ್ರೋಶಗೊಂಡಿತ್ತೆನ್ನಲಾಗಿದೆ. ಸದ್ಯ ಯುಪಿಪಿಎಲ್ ಮುಖಂಡ ಪ್ರಮೋದ್ ಬೋಡೋ ಈ ಕೌನ್ಸಿಲ್​ನ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಯುಪಿಪಿಎಲ್ 8 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದ್ದು, 3 ಕ್ಷೇತ್ರಗಳಲ್ಲಿ ಬಿಜೆಪಿ ವಿರುದ್ಧ ‘ಫ್ರೆಂಡ್ಲಿ ಫೈಟ್’ಗೆ ಮುಂದಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts