More

  ಉಗ್ರಾತಂಕದ ಕರಿನೆರಳು

  ರಾಜ್ಯದಲ್ಲಿ ಭಯೋತ್ಪಾದಕ ಜಾಲಗಳು ತುಂಬ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿವೆ ಎಂಬುದನ್ನು ಗುಪ್ತಚರ ಇಲಾಖೆಯೇ ದೃಢಪಡಿಸಿತ್ತು. ಅದರ ಬೆನ್ನಲ್ಲೇ, ಹಿಂದೂ ನಾಯಕರ ಹತ್ಯೆಗೆ ಸಂಚು ರೂಪಿಸಿದ್ದ ಆರೋಪಿಗಳ ಬಂಧನವಾಯಿತು. ವಿಚಾರಣೆ ವೇಳೆ ಅವರು ಬೆಚ್ಚಿಬೀಳಿಸುವ ಹಲವು ಸಂಗತಿಗಳನ್ನು ಬಾಯ್ಬಿಟ್ಟರಲ್ಲದೆ, ಭಾರತವನ್ನು ಮುಸ್ಲಿಂರಾಷ್ಟ್ರ ಮಾಡುವ ಹುನ್ನಾರದಿಂದ ಇಂಥ ಕೃತ್ಯಗಳಿಗೆ ಸಂಚು ರೂಪಿಸಲಾಗುತ್ತಿದೆ, ಇದಕ್ಕಾಗಿ ಪ್ರತಿ ತಿಂಗಳು ಸಂಬಳವೂ ಪಾವತಿಯಾಗುತ್ತಿತ್ತು ಎಂದಿದ್ದಾರೆ. ಅಲ್ಲದೆ, ಗಣರಾಜ್ಯೋತ್ಸವದ ಮುನ್ನ ಆತಂಕ ಸೃಷ್ಟಿಸಲು ಕೆಲ ಉಗ್ರ ಸಂಘಟನೆಗಳು ಯತ್ನಿಸುತ್ತಿವೆ ಎಂಬ ಸಂಗತಿ ಬೆಳಕಿಗೆ ಬಂದಿತ್ತು. ಈ ಎಲ್ಲ ಬೆಳವಣಿಗೆಗಳ ಮಧ್ಯೆಯೇ ಸೋಮವಾರ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್ ಪತ್ತೆಯಾಗಿ, ಜನರ ಆತಂಕ ಹೆಚ್ಚು ಮಾಡಿತು.

  ಭದ್ರತಾ ಸಿಬ್ಬಂದಿ ಬೆಳಗಿನಿಂದ ಸಂಜೆವರೆಗೆ ಕಾರ್ಯಾಚರಣೆ ನಡೆಸಿ ಬಾಂಬ್​ನ್ನು ನಿಷ್ಕ್ರಿಯಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂಬುದು ಸಮಾಧಾನಕರ ವಿಷಯ. ಅಪರಿಚಿತನೊಬ್ಬ ಸೋಮವಾರ ಬೆಳಗ್ಗೆ ಟಿಕೆಟ್ ಕೌಂಟರ್ ಸಮೀಪ ಬಾಂಬ್ ಇದ್ದ ಬ್ಯಾಗ್ ಇರಿಸಿ, ಪರಾರಿಯಾಗಿದ್ದಾನೆ. ‘ಈ ಪ್ರಕರಣವನ್ನು ಶೀಘ್ರದಲ್ಲಿ ಬೇಧಿಸಲಾಗುವುದು, ಮಂಗಳೂರು, ಬೆಂಗಳೂರು, ಹುಬ್ಬಳ್ಳಿ ವಿಮಾನ ನಿಲ್ದಾಣ ಸೇರಿ ರಾಜ್ಯದೆಲ್ಲೆಡೆ ಕಟ್ಟೆಚ್ಚರ ವಹಿಸಲಾಗುವುದು’ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ. ಇದಲ್ಲದೆ, ಕಳೆದ ಇಪ್ಪತ್ತು ದಿನಗಳಿಂದ ಬೆಂಗಳೂರು ಸಿಸಿಬಿ, ದೆಹಲಿ, ಹಾಗೂ ಚೆನ್ನೈ ಪೊಲೀಸರು ಕಾರ್ಯಾಚರಣೆ ನಡೆಸಿ 18 ಶಂಕಿತ ಉಗ್ರರನ್ನು ಬಂಧಿಸಿದ್ದಾರೆ. ಬೆಂಗಳೂರು, ಚಾಮರಾಜನಗರ, ಕೋಲಾರ, ರಾಮನಗರ, ಶಿವಮೊಗ್ಗ ಇನ್ನಿತರ ಜಿಲ್ಲೆಗಳ ಯುವಕರು ಶಂಕಿತ ಉಗ್ರರ ಜತೆ ಸಂಪರ್ಕ ಹೊಂದಿರುವುದು ತಿಳಿದು ಬಂದಿದೆ. ಕೆಲ ಶಂಕಿತರ ಬಂಧನವೂ ಆಗಬೇಕಿದ್ದು, ಪೊಲೀಸರ ಹುಡುಕಾಟ ಮುಂದುವರಿದಿದೆ.

  ಮುಖ್ಯವಾಗಿ, ಹಲವು ಉಗ್ರ ಸಂಘಟನೆಗಳು ತೆರೆಮರೆಯಲ್ಲಿ ಕಾರ್ಯಾಚರಿಸು ತ್ತಿರುವುದು ಮತ್ತು ಅವು ಸ್ಥಳೀಯ ಯುವಕರನ್ನು ಪ್ರಚೋದಿಸುತ್ತಿರುವುದು ಈ ಎಲ್ಲ ಘಟನೆಗಳಿಂದ ಸ್ಪಷ್ಟವಾಗಿದೆ. ಇವು ನಿಜಕ್ಕೂ ಕಳವಳಕಾರಿ ಮತ್ತು ಆತಂಕದ ಬೆಳವಣಿಗೆಗಳು. ಈ ಹೊಸ ಸವಾಲುಗಳನ್ನು ಹಿಮ್ಮೆಟ್ಟಿಸುವ ಬದ್ಧತೆ, ಪ್ರಬಲ ಇಚ್ಛಾಶಕ್ತಿಯನ್ನು ಈಗ ಮೆರೆಯಬೇಕಿದೆ. ಪೊಲೀಸ್ ಮತ್ತು ಭದ್ರತಾ ಪಡೆಗಳ ಪಾತ್ರ ಇಲ್ಲಿ ಮುಖ್ಯವೇ ಹೌದಾದರೂ ಜನಸಾಮಾನ್ಯರು ಕೂಡ ಜಾಗೃತರಾಗಬೇಕು. ಸಾರ್ವಜನಿಕ ಪ್ರದೇಶಗಳಲ್ಲಿ, ಜನನಿಬಿಡ ಜಾಗಗಳಲ್ಲಿ ಶಂಕಾಸ್ಪದ ವ್ಯಕ್ತಿ, ವಸ್ತುಗಳನ್ನು ಕಂಡರೆ ಕೂಡಲೇ ಪೊಲೀಸ್ ಕಂಟ್ರೋಲ್ ರೂಮ್ೆ ಮಾಹಿತಿ ತಲುಪಿಸಬೇಕು. ಮತ್ತು ಸಾರ್ವಜನಿಕ ಪ್ರದೇಶಗಳಲ್ಲಿ ಭದ್ರತೆ ಇನ್ನಷ್ಟು ಹೆಚ್ಚಿಸಬೇಕಾದ ಮತ್ತು ಮೈಯೆಲ್ಲ ಕಣ್ಣಾಗಿರಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಈ ಉಗ್ರಜಾಲಗಳ ಹಿಂದೆ ಯಾರೆಲ್ಲ ಇದ್ದಾರೆ, ಅವರು ಕರಾವಳಿ ಭಾಗ ಸೇರಿ ಕರ್ನಾಟಕದ ಬೇರೆ ಬೇರೆ ಭಾಗಗಳನ್ನು ಗುರಿಯಾಗಿಸಲು ಏಕೆ ಹವಣಿಸುತ್ತಿದ್ದಾರೆ ಎಂಬುದೆಲ್ಲ ತನಿಖೆ ನಂತರ ಸ್ಪಷ್ಟಗೊಳ್ಳಬೇಕಿದೆ. ಇಂಥ ಹೊತ್ತಲ್ಲಿ ಜನಪ್ರತಿನಿಧಿಗಳು, ರಾಜಕಾರಣಿಗಳು ಸಂಯಮ ತೋರಬೇಕು. ತನಿಖೆ ನಡೆಯುವ ಮುನ್ನವೇ ಕೆಲವರು ವಿಚಿತ್ರ ಹೇಳಿಕೆಗಳನ್ನು ನೀಡುತ್ತಿರುವುದು, ಪೊಲೀಸರನ್ನೇ ಅನುಮಾನಿಸುತ್ತಿರುವುದು ಸರಿಯಾದ ಬೆಳವಣಿಗೆಯಲ್ಲ. ಕರ್ನಾಟಕ ಶಾಂತಿಪ್ರಿಯ ರಾಜ್ಯ. ಹಾಗಾಗಿ, ಉಗ್ರಬೇರುಗಳನ್ನು ಕಿತ್ತೊಗೆಯಲು ಎಲ್ಲ ಪ್ರಯತ್ನಗಳು ಪರಿಣಾಮಕಾರಿಯಾಗಿ ಆಗಬೇಕಿದೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts