More

    ದಿಕ್ಸೂಚಿ ಅಂಕಣ: ಕಿತ್ತೂರು ಚೆನ್ನಮ್ಮ, ಝಾನ್ಸಿರಾಣಿಯರನ್ನು ನೆನೆಯುತ್ತ…

    ಉನ್ನತ ಸೇನಾ ಹುದ್ದೆಗಳ ನೇಮಕಾತಿ ವಿಷಯದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಹೀಗಾಗಿ ಇನ್ನು ನಮ್ಮ ಸೇನೆಯಲ್ಲಿಯೂ ಮಹಿಳೆಯರು ಕಮಾಂಡರ್, ಕರ್ನಲ್, ಬ್ರಿಗೇಡಿಯರ್ ಮುಂತಾದ ಹುದ್ದೆಗಳಲ್ಲಿ ಮಿಂಚುವ ದಿನಗಳು ಬಂದಾವು. ಅಷ್ಟಕ್ಕೂ ಹೋರಾಟ ಎಂಬುದು ಹೆಣ್ಣಿಗೆ ರಕ್ತಗತವಾಗಿಯೇ ಬಂದಿರುತ್ತದೆಯೇನೋ!

    ದಿಕ್ಸೂಚಿ ಅಂಕಣ: ಕಿತ್ತೂರು ಚೆನ್ನಮ್ಮ, ಝಾನ್ಸಿರಾಣಿಯರನ್ನು ನೆನೆಯುತ್ತ...‘ಕಪ್ಪವಂತೆ ಕಪ್ಪ! ನಾವೇಕೆ ಕೊಡಬೇಕು ಕಪ್ಪ…’- ಹೀಗೆಂದು ಕಿತ್ತೂರು ಚೆನ್ನಮ್ಮ ಗರ್ಜಿಸಿದಾಗ ಬ್ರಿಟಿಷರ ಎದೆ ನಡುಗಿರಬೇಕು! ದತ್ತುಪುತ್ರನ ಸ್ವೀಕಾರದ ನೆಪದಲ್ಲಿ ಬ್ರಿಟಿಷರಿಗೂ-ಚೆನ್ನಮ್ಮನಿಗೂ ಸಮರವೇ ನಡೆಯುತ್ತದೆ. ಧಾರವಾಡದ ಕಲೆಕ್ಟರ್ ಥ್ಯಾಕರೆ ಕಿತ್ತೂರು ಸೈನ್ಯದ ಹೊಡೆತಕ್ಕೆ ಸಿಕ್ಕು ಹತನಾಗುತ್ತಾನೆ. ಚೆನ್ನಮ್ಮಳಿಗೆ ವೀರರಾಣಿ ಎಂಬ ನಾಮಧೇಯ ಶಾಶ್ವತವಾಗುತ್ತದೆ.

    ಝಾನ್ಸಿ ರಾಣಿ ಲಕ್ಷ್ಮಿಬಾಯಿ ಯಾರಿಗೆ ಗೊತ್ತಿಲ್ಲ? ಸ್ವತಃ ರಣಾಂಗಣದಲ್ಲಿ ನೇತೃತ್ವ ವಹಿಸಿ ಬ್ರಿಟಿಷರ ವಿರುದ್ಧ ಹೋರಾಡಿದ ದಿಟ್ಟೆ. ಅಷ್ಟೇ ಅಲ್ಲ, ಆಕೆಯದು ಮಹಿಳಾ ಸೈನ್ಯ ಸಹ ಇತ್ತು. ಬ್ರಿಟಿಷ್ ಸೈನ್ಯದ ನಾಯಕ ಹಗ್ ರೋಸ್ ಝಾನ್ಸಿ ರಾಣಿಯನ್ನು ವರ್ಣಿಸಿದ್ದು ಹೀಗೆ: ‘ಅತಿ ಸುಂದರಿ, ಅತಿ ಬುದ್ಧಿವಂತೆ, ದೃಢನಿಷ್ಠೆಯವಳು. ಅಷ್ಟೇ ಅಪಾಯಕಾರಿ ದಂಗೆಕೋರ ನಾಯಕಿ’. ಅಂದರೆ, ಬ್ರಿಟಿಷರಿಗೆ ಆಕೆ ಅದಿನ್ಯಾವ ಪರಿ ಕಾಡಿರಬಹುದು!

    ಸುಭಾಷಚಂದ್ರ ಬೋಸರ ಆಜಾದ್ ಹಿಂದ್ ಫೌಜ್​ನ (ಐಎನ್​ಎ)ಮಹಿಳಾ ಸೇನೆಯ ನೇತೃತ್ವ ವಹಿಸಿದ ಸಾಹಸಿ ಕ್ಯಾಪ್ಟನ್ ಲಕ್ಷ್ಮಿ ಸೆಹಗಲ್. ವೈದ್ಯಕೀಯ ಪದವಿ ಪಡೆದಿದ್ದ ಇವರು ಅಸ್ಪಶ್ಯತೆ ವಿರುದ್ಧವೂ ಹೋರಾಡಿದ್ದರು. ಬೋಸರು ಐಎನ್​ಎಗೆ ಮಹಿಳೆಯರನ್ನು ಸೇರಿಸಲು ಉತ್ಸುಕರಾಗಿದ್ದರು ಎಂಬ ಸಂಗತಿ ತಿಳಿದ ಲಕ್ಷ್ಮಿಯವರು ಬೋಸರನ್ನು ಭೇಟಿಯಾಗಿ ಸಂಘಟನೆ ಸೇರುವ ಇಚ್ಛೆ ವ್ಯಕ್ತಪಡಿಸಿದ್ದರಂತೆ. ಆಗ ಮಹಿಳಾ ಸೇನೆ ಕಟ್ಟುವ ಹೊಣೆಯೇ ಅವರಿಗೆ ಸಿಕ್ಕಿತಂತೆ.

    ಮಣಿಪುರದ ಇತಿಹಾಸದಲ್ಲಿ ರಾಣಿ ಗೈದಿನ್ಲು ಹೆಸರು ಚಿರಸ್ಥಾಯಿ. ಈಕೆ ತನ್ನ 13ನೇ ವಯಸ್ಸಿನಲ್ಲೇ ಬ್ರಿ್ರಷರ ವಿರುದ್ಧ ಸಶಸ್ತ್ರ ದಂಗೆ ನಡೆಸಿದ ದಿಟ್ಟೆ. ಇದರಿಂದಾಗಿ ಬ್ರಿಟಿಷರು ಆಕೆಯನ್ನು ಬಂಧಿಸಿ (ಆಕೆಗೆ ಆಗ 16 ವರ್ಷ) ಸೆರೆಮನೆಗೆ ತಳ್ಳಿದರು. ಆಕೆಗೆ ‘ರಾಣಿ’ ಎಂಬ ನಾಮಧೇಯವಿತ್ತವರು ಜವಾಹರಲಾಲ್ ನೆಹರು. 1937ರಲ್ಲಿ ಶಿಲಾಂಗ್ ಜೈಲಿನಲ್ಲಿ ಗೈದಿನ್ಲುರನ್ನು ನೆಹರು ಭೇಟಿಯಾಗಿದ್ದರು. ಮಹಿಳಾ ಸೇನೆಯನ್ನು ಸಂಘಟಿಸಿದ ಬೆಳವಡಿ ಮಲ್ಲಮ್ಮ, ವಸಾಹತುಶಾಹಿಗಳ ವಿರುದ್ಧ ದಿಟ್ಟವಾಗಿ ಹೋರಾಡಿದ ರಾಣಿ ಅಬ್ಬಕ್ಕ… ಹೀಗೆ ವೀರವನಿತೆಯರ ಕುರಿತು ಹೇಳುತ್ತ ಹೋದರೆ ಅದು ಮುಗಿಯದ ಯಾದಿ. ಭಾರತದ ಇತಿಹಾಸದಲ್ಲಿ ಇಂಥ ಶೂರ ಸ್ತ್ರೀಯರ ಉಜ್ವಲ ಅಧ್ಯಾಯಗಳು ಬೇಕಾದಷ್ಟಿವೆ. ಈ ಎಲ್ಲರ ಜೀವನ ನೀಡುವ ಸಂದೇಶವೆಂದರೆ- ಮಹಿಳೆ ಯಾವುದಕ್ಕೂ ಅಂಜುವವಳಲ್ಲ, ಹಿಂದೆಗೆಯುವವಳಲ್ಲ. ಆಡಳಿತಕ್ಕೂ ಸೈ ಸಮರಕ್ಕೂ ಸೈ. ಇದೆಲ್ಲ ಈಗ ನೆನಪಾಗಲು ಕಾರಣ-ಸುಪ್ರೀಂ ಕೋರ್ಟ್ ಈಚೆಗೆ ನೀಡಿದ ಒಂದು ಮಹತ್ವದ ತೀರ್ಪ. ಸೇನೆಯಲ್ಲಿ ಮಹಿಳೆಯರಿಗೂ ಸಮಾನ ಅವಕಾಶವಿರಬೇಕು ಎಂಬುದು ಈ ಆದೇಶದ ಒಟ್ಟಾರೆ ಸಾರ.

    ಸುಪ್ರೀಂ ಕೋರ್ಟಿನ ಆದೇಶವನ್ನು ಸರಳವಾಗಿ ಸ್ಥೂಲವಾಗಿ ಹೇಳುವುದಿದ್ದರೆ- ಸೇನೆಯ ಷಾರ್ಟ್ ಸರ್ವಿಸ್ ಕಮಿಷನ್ (ಎಸ್​ಎಸ್​ಸಿ)ಮೂಲಕ ನೇಮಕವಾಗುವ ಮಹಿಳೆಯರಿಗೆ ಕಮಾಂಡರ್ ಹುದ್ದೆಗೇರುವ ಅವಕಾಶ ಇಲ್ಲ. ಅದೇ ಪುರುಷರು

    ಎಸ್​ಎಸ್​ಸಿ ಮೂಲಕ ಸೇವೆಗೆ ಸೇರಿದರೂ ನಂತರದಲ್ಲಿ ಆದ್ಯತೆಯ ಮೇಲೆ ಪರ್ಮನೆಂಟ್ ಕಮಿಷನ್ ಸವಲತ್ತು ದೊರೆಯುತ್ತದೆ. ಮಹಿಳೆಯರನ್ನು ಕಾಂಬ್ಯಾಟಿಂಗ್ ಅಂದರೆ ಯುದ್ಧದ ಕಾರ್ಯಾಚರಣೆಯ ಹೊಣೆಯಿಂದ ದೂರವೇ ಇಡಲಾಗಿದೆ. ಇದಕ್ಕೆ ಕಾರಣ-ಮಹಿಳೆಯರ ದೈಹಿಕ ಸ್ಥಿತಿಗತಿ, ಎದುರಾಗಬಹುದಾದ ಅಪಾಯಕಾರಿ ಸನ್ನಿವೇಶಗಳು ಇತ್ಯಾದಿ.

    1993ರಲ್ಲಿ ಮಹಿಳೆಯರಿಗೆ ಷಾರ್ಟ್ ಸರ್ವಿಸ್ ಕಮಿಷನ್ ಮೂಲಕ ನೇಮಕಾತಿ ಆರಂಭಿಸಲಾಯಿತು. ಈ ಮೂಲಕ ಅವರು ಗರಿಷ್ಠ 14 ವರ್ಷ ಸೇವೆ ಸಲ್ಲಿಸಬಹುದು. ಆಗಲೂ ಈ ಬಗ್ಗೆ ಭಿನ್ನ ಭಿನ್ನ ಅಭಿಪ್ರಾಯಗಳು ಕೇಳಿಬಂದಿದ್ದವು. ಆದರೆ ಮಹಿಳಾಧಿಕಾರಿಗಳಿಗೆ ಆರಂಭದಿಂದಲೂ ಈ ವಿಷಯದಲ್ಲಿ ಅಸಂತೋಷಗಳಿದ್ದೇ ಇದ್ದವು. ಪುರುಷರಿಗೆ ಪರ್ಮನೆಂಟ್ ಕಮಿಷನ್ ಮೂಲಕ ಉನ್ನತ ಹುದ್ದೆಗೇರುವ ಅವಕಾಶವಿರಬೇಕಾದರೆ ಅವರಷ್ಟೇ ಶಕ್ತಿಸಾಮರ್ಥ್ಯವಿರುವ ನಮಗೂ ಈ ಅವಕಾಶ ಬೇಡವೆ ಎಂಬ ದನಿ ನಿಧಾನಕ್ಕೆ ಬಲಪಡೆಯುತ್ತ ವಿಷಯ ಕೋರ್ಟ್ ಮೆಟ್ಟಿಲೇರಿತು. ದೀರ್ಘ ಕಾನೂನು ಹೋರಾಟದ ಬಳಿಕ, 2011ರಲ್ಲಿ ಸರ್ಕಾರ ಈ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದಿಟ್ಟಿತು. ಸೇನೆಯ ಶಿಕ್ಷಣ ಮತ್ತು ನ್ಯಾಯಾಂಗ ವಿಭಾಗಗಳಾದ ಸೇನಾ ಶಿಕ್ಷಣ ಕೋರ್ (Army Educational Corps) ಮತ್ತು ಜಡ್ಜ್ ಅಡ್ವೋಕೇಟ್ ಜನರಲ್ ಬ್ರಾಂಚ್ (Judge Advocate General branch)ಗಳಿಗೆ ಸೀಮಿತವಾಗಿ ಮಹಿಳಾ ಪರ್ಮನೆಂಟ್ ಕಮಿಷನ್ ಸೌಲಭ್ಯ ನೀಡುವುದಾಗಿ ಹೇಳಿತು. ಆದರೆ ಇದು ಮಹಿಳೆಯರ ಹೋರಾಟದಲ್ಲಿನ ಅರ್ಧಮಾತ್ರದ ಜಯವಾಗಿತ್ತು. ನಂತರದಲ್ಲಿ ಸೇನೆಯ ಇನ್ನಷ್ಟು ವಿಭಾಗಗಳಲ್ಲಿ ಮಹಿಳೆಯರಿಗೆ ಪರ್ಮನೆಂಟ್ ಕಮಿಷನ್ ಸವಲತ್ತು ನೀಡಲಾಯಿತು. ಯುದ್ಧೋಪಕರಣಗಳು ಮತ್ತು ಮೂಲಸೌಕರ್ಯ ಒದಗಿಸುವಂತಹ ವಿಭಾಗಗಳಲ್ಲಿ ಯುನಿಟ್ ಕಮಾಂಡರ್​ಗಿಂತ ಕೆಳಗಿನ ಹುದ್ದೆಯನ್ನು ಮಹಿಳೆಯರಿಗೆ ನೀಡಲಾಗುತ್ತ ಬರಲಾಗಿದೆ. ದೈಹಿಕ ಕ್ಷಮತೆ ಪರೀಕ್ಷೆಯಲ್ಲೂ ಮಹಿಳೆಯರಿಗೆ ಕೆಲ ರಿಯಾಯಿತಿಗಳನ್ನು ನೀಡಲಾಗುತ್ತದೆ. ಹೀಗಿದ್ದರೂ ಕಾಂಬ್ಯಾಟಿಂಗ್ ವಿಭಾಗದಲ್ಲಿ ಈ ಅವಕಾಶ ಇಲ್ಲ. ಹೀಗಾಗಿ ಕಮಾಂಡರ್​ನಂಥ ಉನ್ನತ ಹುದ್ದೆಯ ಅವಕಾಶ ಅವರಿಗೆ ಸಿಗುವುದಿಲ್ಲ. ಕಮಾಂಡಿಂಗ್ ಹುದ್ದೆ ಸಿಗದಿದ್ದರೆ ಮುಂದೆ ಬ್ರಿಗೇಡ್, ಡಿವಿಜನ್ ಇತ್ಯಾದಿ ಸೇನೆಯ ಅಂಗಗಳನ್ನು ಮುನ್ನಡೆಸುವ ಹೊಣೆ ದಕ್ಕುವುದಿಲ್ಲ. ಅರ್ಹತೆಯಿದ್ದರೆ ಉನ್ನತ ಸ್ಥಾನ್ಕಕೇರಬೇಕು ಎಂಬ ಹಂಬಲ ಇಟ್ಟುಕೊಂಡರೆ ತಪ್ಪೇನು ಇಲ್ಲವಲ್ಲ?

    ಕೇಂದ್ರದ 2019ರ ನಿಯಮಾವಳಿ ಪ್ರಕಾರ, ಪರ್ಮನೆಂಟ್ ಕಮಿಷನ್​ನಲ್ಲಿ ಮಹಿಳಾ ಅಧಿಕಾರಿಗಳು ಸ್ಟಾಫ್ ಪೋಸ್ಟಿಂಗ್​ಗಳಿಗೆ ಸೀಮಿತವಾಗಿದ್ದರು. ಕಮಾಂಡ್ ಪೋಸ್ ್ಟ ಗಳ ಅವಕಾಶ ಇರಲಿಲ್ಲ. ಅಪಾರ ದೈಹಿಕ ಸಾಮರ್ಥ್ಯ ಹಾಗೂ ಮಾನಸಿಕ ಸಶಕ್ತತೆಯ ಅಗತ್ಯವಿರುವ ವಿಭಾಗಗಳಲ್ಲಿ (ಕಾಂಬ್ಯಾಟ್) ಮಹಿಳೆಯರಿಗೆ ಅವಕಾಶ ನೀಡಲು ಅಸಾಧ್ಯ. ಅವರ ಸೀಮಿತ ದೈಹಿಕ ಸಾಮರ್ಥ್ಯ ಹಾಗೂ ಕೆಲ ಕೌಟುಂಬಿಕ ವಿಷಯಗಳಿಂದಾಗಿ ಸೇನೆಯ ಕಠಿಣ ಸವಾಲು ಹಾಗೂ ಅಪಾಯಗಳನ್ನು ಎದುರಿಸಲು ಕಷ್ಟವಾದೀತು. ಪುರುಷರಿಗೆ ಮುಖ್ಯವಾಗಿ ಗ್ರಾಮೀಣ ಭಾಗದಿಂದ ಬಂದ ಪುರುಷ ಸೇನಾನಿಗಳಿಗೆ ತಮ್ಮ ಯೂನಿಟ್​ಗಳನ್ನು ಮಹಿಳಾ ಅಧಿಕಾರಿ ಮುನ್ನಡೆಸುವುದನ್ನು ಒಪ್ಪಿಕೊಳ್ಳುವುದು ಸ್ವಲ್ಪಮಟ್ಟಿಗೆ ಕಷ್ಟವಾಗಬಹುದು ಎಂದು ಕೇಂದ್ರ ಸರ್ಕಾರ ವಾದಿಸಿತ್ತು.

    ಆದರೆ ಈ ವಾದ ತಳ್ಳಿಹಾಕಿರುವ ಸುಪ್ರೀಂ ಕೋರ್ಟಿನ ನ್ಯಾಯಪೀಠ, ಇಂಥದ್ದೊಂದು ಅವಕಾಶದಿಂದ ಮಹಿಳೆಯರನ್ನು ವಂಚಿತಗೊಳಿಸುವುದು ಸಂವಿಧಾನದ ಆರ್ಟಿಕಲ್ 14 ಮತ್ತು 16ನ್ನು ಉಲ್ಲಂಘಿಸುತ್ತದೆ. ಕಮಾಂಡ್ ಹುದ್ದೆಗಳಿಂದ ಮಹಿಳೆಯರನ್ನು ಹೊರಗಿಡುವಂತಿಲ್ಲ. ಸಮರ್ಥ ಮಹಿಳಾ ಅಧಿಕಾರಿಗಳನ್ನು ಗುರುತಿಸಿ ಆಯ್ಕೆ ಮಾಡಬೇಕು. ಪುರುಷರು ದೈಹಿಕವಾಗಿ ಸಬಲರು ಮತ್ತು ಮಹಿಳೆಯರು ದುರ್ಬಲರು ಎಂಬ ನಮ್ಮ ಗ್ರಹಿಕೆಯೇ ದೋಷಪೂರಿತವಾದದ್ದು. ಮಹಿಳೆಯರು ಕೌಟುಂಬಿಕ ಅಥವಾ ಮನೆಯ ಜವಾಬ್ದಾರಿಗಳಿಗೆ ಮಾತ್ರ ಸೀಮಿತವಲ್ಲ ಎಂದೂ ಹೇಳುವ ಮೂಲಕ, ಲಿಂಗಸಮಾನತೆಯ ಮತ್ತೊಂದು ಆಯಾಮವನ್ನು ತೆರೆದಿಟ್ಟಿತು.

    ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ 13 ಮಹಿಳಾ ಸೇನಾಧಿಕಾರಿಗಳ ಸಾಧನೆಯನ್ನು ಉಲ್ಲೇಖಿಸಿದೆ. ಅವರೆಂದರೆ- 2006ರಲ್ಲಿ ಬಹುರಾಷ್ಟ್ರಗಳ ಪಾಲ್ಗೊಳ್ಳುವಿಕೆಯ ಸೇನಾಸಮರಾಭ್ಯಾಸದಲ್ಲಿ ಭಾರತೀಯ ತಂಡದ ನೇತೃತ್ವ ವಹಿಸಿದ್ದ ಲೆಫ್ಟಿನಂಟ್ ಕರ್ನಲ್ ಸೋಫಿಯಾ ಖುರೇಷಿ, ಬುರುಂಡಿಯಲ್ಲಿ ವಿಶ್ವಸಂಸ್ಥೆಯ ಸೇನಾ ವೀಕ್ಷಕರ ತಂಡದ ಮಹಿಳಾ ತಂಡದ ನೇತೃತ್ವ ವಹಿಸಿದ್ದ ಲೆಫ್ಟಿನಂಟ್ ಕರ್ನಲ್ ಅನುವಂದನಾ ಜಗ್ಗಿ, ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ವಿರುದ್ಧದ ಹೋರಾಟದಲ್ಲಿ ಭಾಗವಹಿಸಿ ಸೇನಾಪದಕ ಪಡೆದ ಮೇಜರ್ ಮಧುಮಿತಾ, ಸೇನಾಸಾಮಗ್ರಿಗಳನ್ನು ತುಂಬಿದ ವಾಹನಗಳನ್ನು ಲೇಹ್​ನಿಂದ ಪಠಾನ್​ಕೋಟ್​ಗೆ ಸಾಗಿಸುವಲ್ಲಿ ಕಾನ್ವಯ್ ಕಮಾಂಡರ್ ಆಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ ಮೇಜರ್ ಗೋಪಿಕಾ ಭಟ್ಟಿ, ಲೆಬನಾನ್​ನಲ್ಲಿ ವಿಶ್ವಸಂಸ್ಥೆಯ ಮಧ್ಯಂತರ ತಂಡದ ಶಾಂತಿಪಾಲನಾ ಪದಕ ಪಡೆದ ಮೇಜರ್ ಗೋಪಿಕಾ ಪವಾರ್, ಕಾಂಗೋದಲ್ಲಿ ವಿಶ್ವಸಂಸ್ಥೆ ಯೋಜನೆಯಲ್ಲಿ ಸೇನಾ ಸದಸ್ಯರಾಗಿ ಅರ್ಹತಾ ಸೇವೆಯನ್ನು ಯಶಸ್ವಿಯಾಗಿ ಪೂರೈಸಿದ ಮೇಜರ್ ಮಧು ರಾಣಾ, ಪ್ರೀತಿ ಸಿಂಗ್ ಮತ್ತು ಅನುಜಾ ಯಾದವ್, ಗಣರಾಜ್ಯೋತ್ಸವ ಪರೇಡ್​ನಲ್ಲಿ ಪುರುಷರ ತಂಡವನ್ನು ಮುನ್ನಡೆಸಿದ ಕ್ಯಾಪ್ಟನ್ ತಾನಿಯಾ ಶೇರ್ಗಿಲ್, 2007ರಲ್ಲಿ ಸೇವಾ ಪದಕ ಪಡೆದ ಕ್ಯಾಪ್ಟನ್ ಅಶ್ವಿನಿ ಪವಾರ್, ಕ್ಯಾಪ್ಟನ್ ಶಿಪ್ರಾ ಮಜುಂದಾರ್, ಪುರುಷರ ಸೇನಾ ತಂಡ ಮುನ್ನಡೆಸಿದ ಮೊದಲ ಮಹಿಳೆ ಎಂಬ ಖ್ಯಾತಿಯ ಲೆಫ್ಟಿನಂಟ್ ಭಾವನಾ ಕಸ್ತೂರಿ ಮತ್ತು 2010ರಲ್ಲಿ ಸ್ವಾರ್ಡ್ ಆಫ್ ಆನರ್ ಪಡೆದ ಲೆಫ್ಟಿನಂಟ್ ಎ. ದಿವ್ಯಾ.

    ಇಷ್ಟೆಲ್ಲ ನಿದರ್ಶನಗಳನ್ನು ನೀಡಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು, ಮಹಿಳೆಯರಿಗೆ ಕಮಾಂಡಿಂಗ್ ಅವಕಾಶ ನೀಡುವ ನಿಟ್ಟಿನಲ್ಲಿ ‘ಆಡಳಿತಾತ್ಮಕ ಇಚ್ಛಾಶಕ್ತಿ ಮತ್ತು ಮನಸ್ಥಿತಿ ಬದಲಾವಣೆಯ ಅಗತ್ಯವಿದೆ’ ಎಂದು ಷರಾ ಬರೆದರು. ಈ ಮೂಲಕ, ಮಹಿಳೆಯರಿಗೂ ಪರ್ಮನೆಂಟ್ ಕಮಿಷನ್ ಮುಖಾಂತರ ಕಮಾಂಡಿಂಗ್ ಹುದ್ದೆ ದೊರೆಯುವ ನಿರೀಕ್ಷೆ ಈಡೇರುವುದಕ್ಕೆ ಹಾದಿ ಸುಗಮವಾಯಿತು. ಇನ್ನು ಮಹಿಳೆಯರಿಗೆ ಕೂಡ ಕಾಂಬ್ಯಾಟಿಂಗ್ ವಿಭಾಗದಲ್ಲಿ ಅಂದರೆ ನೇರವಾಗಿ ಶತ್ರುಗಳನ್ನು ಎದುರಿಸಬೇಕಾದ ಕಾಲ್ದಳ ಯುನಿಟ್, ಆಮ್್ಡರ್ ರೆಜಿಮೆಂಟ್ ಮುಂತಾದ ಕಡೆಗಳಲ್ಲಿ ಕಮಾಂಡಿಂಗ್ ಹುದ್ದೆಗಳನ್ನು ನೀಡಬೇಕಾಗುತ್ತದೆ. ಈ ಆದೇಶದಿಂದಾಗಿ, ಸದ್ಯ ಷಾರ್ಟ್ ಸರ್ವಿಸ್ ಕಮಿಷನ್ ಮೂಲಕ ಆಯ್ಕೆಯಾಗಿರುವ ಸುಮಾರು 600 ಮಹಿಳಾ ಸೇನಾಧಿಕಾರಿಗಳಿಗೆ ಪ್ರಯೋಜನವಾಗುತ್ತದೆ ಎಂದು ಅಂದಾಜಿಸಲಾಗಿದೆ. ತಜ್ಞರು ಹೇಳುವ ಪ್ರಕಾರ, ಮಹಿಳೆಯರಿಗೆ ಈ ತೆರನಾದ ತರಬೇತಿ ನೀಡುವುದು ಸುಲಭವಲ್ಲ. ಇದೇನೇ ಇದ್ದರೂ, ನಮ್ಮ ವೀರವನಿತೆಯರು ಈ ಪರೀಕ್ಷೆಯನ್ನೂ ಯಶಸ್ವಿಯಾಗಿ ಎದುರಿಸಬಲ್ಲರೆಂಬ ವಿಶ್ವಾಸವನ್ನು ಧಾರಾಳವಾಗಿ ಇಡಬಹುದು.

    ಮಹಿಳಾ ಅಧಿಕಾರಿಗಳು ದೈಹಿಕವಾಗಿ ಸಮರ್ಥರಿದ್ದರೆ ಅವಕಾಶ ನೀಡಲು ಏನು ತೊಂದರೆ? ವಾಯುಪಡೆಯ ಎಲ್ಲ ವಿಭಾಗಗಳಲ್ಲಿ ಮಹಿಳಾ ಅಧಿಕಾರಿಗಳಿಗೆ ಅವಕಾಶ ಇದೆ. ಭೂಸೇನೆಯಲ್ಲಿ ಏಕಿಲ್ಲ? ಸೇನೆಯಲ್ಲಿ ಮಹಿಳಾ ಅಧಿಕಾರಿಯಿಂದ ಪುರುಷರು ಆದೇಶ ಪಡೆಯುವುದನ್ನು ಅವಮಾನ ಎಂದು ನೋಡುವುದು ಸರಿಯಲ್ಲ- ಇದು ಪರವಾಗಿರುವವರ ಪ್ರತಿಪಾದನೆ. ಇನ್ನು ನಮ್ಮ ಸೇನೆಯಲ್ಲಿಯೂ ಮಹಿಳೆಯರು ಕಮಾಂಡರ್, ಕರ್ನಲ್, ಬ್ರಿಗೇಡಿಯರ್ ಮುಂತಾದ ಉನ್ನತ ಹುದ್ದೆಗಳಲ್ಲಿ ಮಿಂಚುವ ದಿನಗಳು ಬಂದಾವು… ದಿಟ್ಟ ಮಹಿಳೆಗೆ ಒಂದು ಸೆಲ್ಯೂಟ್!

    ಸೇನೆಯಲ್ಲಿ ಸ್ತ್ರೀಶಕ್ತಿ

    • ಭಾರತೀಯ ಸಶಸ್ತ್ರಪಡೆಗಳಲ್ಲಿ ಒಟ್ಟು ಅಧಿಕಾರಿಗಳ ಸಂಖ್ಯೆ-65,000
    • 1993ರಿಂದ ಭೂ ಸೇನೆಗೆ ಸೇರಿದ ಮಹಿಳೆಯರ ಸಂಖ್ಯೆ- 1,653
    • ಭಾರತೀಯ ವಾಯುಸೇನೆಯಲ್ಲಿ ಮಹಿಳೆಯರ ಸಂಖ್ಯೆ–1,905
    • ಭಾರತೀಯ ನೌಕಾಸೇನೆಯಲ್ಲಿ ಮಹಿಳೆಯರ ಸಂಖ್ಯೆ-490
    • 2016ರಿಂದ ನೌಕಾಸೇನೆಯಲ್ಲಿ ಎಂಟು ಮಹಿಳಾ ಯುದ್ಧವಿಮಾನ ಚಾಲಕರಿದ್ದು, ಮುಂಚೆ ಈ ಅವಕಾಶ ಇರಲಿಲ್ಲ.

    ಭಾರತೀಯ ಸೇನೆಯ ಒಟ್ಟು ಶೇ. 70 ಭಾಗ ಕಾಂಬ್ಯಾಟ್ ವಿಭಾಗವಾದ ಇನ್​ಫೆಂಟ್ರಿ, ಆರ್ಟಿಲರಿ, ಆಮ್್ಡರ್ ಕೋರ್ ಮುಂತಾದವನ್ನು ಒಳಗೊಂಡಿದೆ. ಈ ವಿಭಾಗಗಳಲ್ಲಿ ಮಹಿಳೆಯರಿಗೆ ಅವಕಾಶವಿಲ್ಲ.

    ಫಿನ್ಲೆಂಡ್, ಐಸ್ಲೆಂಡ್, ನಾರ್ವೆ, ಡೆನ್ಮಾರ್ಕ್, ಸ್ವೀಡನ್, ಇಸ್ರೇಲ್, ಉತ್ತರ ಕೊರಿಯಾ, ಅಮೆರಿಕ, ಬ್ರಿಟನ್, ಕೆನಡಾ, ಆಸ್ಟ್ರೇಲಿಯಾ ಮುಂತಾದ ದೇಶಗಳಲ್ಲಿ ಯುದ್ಧತುಕಡಿಗಳಲ್ಲಿ ಮಹಿಳೆಯರಿಗೆ ಅವಕಾಶವಿದೆ.

    ಕೊನೇ ಮಾತು: ಮಾನವಸಹಿತ ಗಗನಯಾನದ ಪೂರ್ವಭಾವಿಯಾಗಿ ಬಾಹ್ಯಾಕಾಶಕ್ಕೆ ಕಳಿಸಲಿರುವ ರೋಬಾಟನ್ನು ಇಸ್ರೋ ಸಂಸ್ಥೆಯು ಈಚೆಗೆ ಬೆಂಗಳೂರಿನಲ್ಲಿ ಸಾರ್ವಜನಿಕವಾಗಿ ಪರಿಚಯಿಸಿತು. ಅಂದಹಾಗೆ, ಇದು ವುಮನಾಯ್್ಡ ಅಂದರೆ ಮಹಿಳಾ ರೋಬಾಟ್. ಹೆಸರು-ವ್ಯೋಮಮಿತ್ರ. ‘ಹಲೊ, ನನ್ನ ಹೆಸರು ವ್ಯೋಮಮಿತ್ರ. ಮೊದಲ ಮಾನವಸಹಿತ ಗಗನಯಾನಕ್ಕಾಗಿ ನನ್ನನ್ನು ಸಿದ್ಧಪಡಿಸಲಾಗಿದೆ’ಎಂದು ಅದು ತನ್ನನ್ನು ತಾನು ಪರಿಚಯಿಕೊಂಡಾಗ ಅಲ್ಲಿದ್ದವರಿಗೆಲ್ಲ ಅಚ್ಚರಿಯ ಖುಷಿ. ತಾನು ಗಗನಯಾನಿಗಳನ್ನು ಗುರುತಿಸಿ ಅವರೊಡನೆ ಸಂಭಾಷಿಸಬಲ್ಲೆ; ಅವರ ಪ್ರಶ್ನೆಗಳಿಗೆ ಉತ್ತರಿಸಬಲ್ಲೆ ಎಂದೂ ಅದು ಹೇಳಿತು. ಅಂದಹಾಗೆ, ಈ ವುಮನಾಯ್್ಡ ಮುಂದೊಂದು ದಿನ ಭಾರತದ ಹೆಣ್ಣುಮಗಳೊಬ್ಬಳು ಬಾಹ್ಯಾಕಾಶಕ್ಕೆ ತೆರಳುವ ಮುನ್ಸೂಚನೆಯೇ? ಕಾದುನೋಡೋಣ!

    (ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts