More

    ವಿಜಯವಾಣಿ-ದಿಗ್ವಿಜಯ: ಕೃಷ್ಣ ವೇಷ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ

    ಶಿವಮೊಗ್ಗ: ಶ್ರೀಕೃಷ್ಣನಲ್ಲಿದ್ದ ಸಕಾರಾತ್ಮಕ ಚಿಂತನೆಗಳನ್ನು ಮಕ್ಕಳಲ್ಲಿ ಬೆಳೆಸಬೇಕು. ಮಕ್ಕಳನ್ನು ವಿದ್ಯಾವಂತರನ್ನಾಗಿಸುವ ಜತೆಗೆ ನಮ್ಮ ಸಂಸ್ಕೃತಿ, ಪರಂಪರೆ, ಆಚರಣೆಗಳ ಬಗ್ಗೆ ಮಾಹಿತಿ ಕೊಟ್ಟು, ಅವುಗಳನ್ನು ಮಕ್ಕಳ ಜೀವನದಲ್ಲಿ ಅನುಷ್ಠಾನವಾಗುವಂತೆ ನೋಡಿಕೊಳ್ಳಬೇಕೆಂದು ಸರ್ಜಿ ಫೌಂಡೇಷನ್ ಎಂಡಿ, ಖ್ಯಾತ ಮಕ್ಕಳ ತಜ್ಞ ಡಾ.ಧನಂಜಯ ಸರ್ಜಿ ಸಲಹೆ ನೀಡಿದರು.
    ಬಿದರೆಯ ದಕ್ಷಿಣ ಮಾಯಾಪುರ್ ಧಾಮ್-ಶಿವಮೊಗ್ಗ ಇಸ್ಕಾನ್ ಕೃಷ್ಣ ಮಠದಲ್ಲಿ ಇಸ್ಕಾನ್ ಮತ್ತು ಸರ್ಜಿ ಫೌಂಡೇಷನ್ ಸಹಯೋಗದೊಂದಿಗೆ ಕನ್ನಡದ ನಂ. 1 ಪತ್ರಿಕೆ ವಿಜಯವಾಣಿ ಮತ್ತು ದಿಗ್ವಿಜಯ ಸುದ್ದಿವಾಹಿನಿ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಏರ್ಪಡಿಸಿದ್ದ ಕೃಷ್ಣ ವೇಷ ಭೂಷಣ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಭಾನುವಾರ ಪ್ರಶಸ್ತಿ ವಿತರಿಸಿ ಅವರು ಮಾತನಾಡಿದರು.
    ಇಂದು ಮಕ್ಕಳಲ್ಲಿ ಖಿನ್ನತೆ ಹೆಚ್ಚುತ್ತಿದೆ. ಆತ್ಮಹತ್ಯೆಗೆ ಶರಣಾಗುವ ಮನಸ್ಥಿತಿ ಸೃಷ್ಟಿಯಾಗುತ್ತಿದೆ. ಆತ್ಮವಿಶ್ವಾಸ ಕಡಿಮೆಯಾಗುತ್ತಿದೆ. ಈ ಕಾಲಘಟ್ಟದಲ್ಲಿ ಶ್ರೀಕೃಷ್ಣನಲ್ಲಿದ್ದ ಗುಣಗಳನ್ನು ನಾವು ಮಕ್ಕಳಿಗೆ ವಿವರಿಸಬೇಕು. ಮುಖ್ಯವಾಗಿ ಸಕಾರಾತ್ಮಕ ಆಲೋಚನೆ, ಸಮಸ್ಯೆಗಳನ್ನು ಎದುರಿಸುವ ಆತ್ಮವಿಶ್ವಾಸ ಬೆಳೆಸಬೇಕಿದೆ ಎಂದರು.
    ತಂದೆ- ತಾಯಿ ಮತ್ತು ಸಮಾಜ ಮಕ್ಕಳ ಪಾಲಿಗೆ ಹೆಲ್ಮೆಟ್, ಸೀಟ್‌ಬೆಲ್ಟ್, ಮಾಸ್ಕ್ ಇದ್ದಂತೆ. ಮಕ್ಕಳನ್ನು ಕೆಟ್ಟ ಶಕ್ತಿಗಳಿಂದ ರಕ್ಷಿಸಿ ಅವರನ್ನು ಸರಿದಾರಿಯಲ್ಲಿ ಕೊಂಡೊಯ್ಯಬೇಕಾದ ಜವಾಬ್ದಾರಿ ಪಾಲಕರು ಹಾಗೂ ಸಮಾಜದ್ದು. ಈ ನಿಟ್ಟಿನಲ್ಲಿ ಮಕ್ಕಳ ಸರ್ವತೋಮುಖ ಹಾಗೂ ಗುಣಾತ್ಮಕ ಬೆಳವಣಿಗೆಗೆ ಒತ್ತು ನೀಡಬೇಕಿದೆ ಎಂದು ಹೇಳಿದರು.
    ಶ್ರೀಕೃಷ್ಣನ ಲೀಲೆಗಳು, ತುಂಟತನ, ಆತನ ರೂಪ, ಸ್ಥಿತಪ್ರಜ್ಞೆಯ ಭಾವಕ್ಕೆ ತಲೆದೂಗದವರಿಲ್ಲ. ಕೃಷ್ಣ ಎಲ್ಲರಿಗೂ ಅಚ್ಚುಮೆಚ್ಚು. ಇದೇ ಕಾರಣಕ್ಕೆ ಛದ್ಮವೇಷ ಸ್ಪರ್ಧೆ ಎಂದರೆ ಮಕ್ಕಳ ಮೊದಲ ಆಯ್ಕೆ ಕೃಷ್ಣನೇ ಆಗಿರುತ್ತಾನೆ. ಮಹಾಭಾರತದ ಯುದ್ದದ ಸಂದರ್ಭದಲ್ಲಿ ತನ್ನ ಸಂಬಂಧಿಗಳೊಂದಿಗೆ ಯುದ್ದ ಮಾಡಲು ಹಿಂದೇಟು ಹಾಕಿದ ಅರ್ಜುನನಿಗೆ ಭಗವದ್ಗೀತೆ ಬೋಧನೆ ಮೂಲಕ ಆತನಲ್ಲಿ ಆತ್ಮವಿಶ್ವಾಸ ಮೂಡಿಸಿದ್ದು ಕೃಷ್ಣನ ವಿಶೇಷ ಸಾಮರ್ಥ್ಯಕ್ಕೆ ನಿದರ್ಶನವಾಗಿದೆ ಎಂದು ಡಾ.ಧನಂಜಯ ಸರ್ಜಿ ತಿಳಿಸಿದರು.
    ಇಸ್ಕಾನ್ ಕರ್ನಾಟಕ ಪ್ರಾದೇಶಿಕ ಕಾರ್ಯದರ್ಶಿ, ಶಿವಮೊಗ್ಗ ಇಸ್ಕಾನ್ ಅಧ್ಯಕ್ಷ ಸುಧೀರ ಚೈತನ್ಯದಾಸ್, ಸರ್ಜಿ ಫೌಂಡೇಷನ್‌ನ ಟ್ರಸ್ಟಿ ನಮಿತಾ ಧನಂಜಯ ಸರ್ಜಿ, ಶಿವಮೊಗ್ಗ ಇಸ್ಕಾನ್‌ನ ಪ್ರಮುಖರಾದ ರಸರಾಜ ಗೋಪಾಲದಾಸ್, ರಸಿಕಶೇಖರ ಚೈತನ್ಯದಾಸ್, ವಿಶ್ವಂಭರ ಗೌರಾಂಗದಾಸ್ ಮುಂತಾದವರಿದ್ದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts