More

    ಅಜ್ಜನ ಕಥೆ ಮತ್ತು ಅರಸನ ಅರಮನೆ!

    ಕೃಷಿಯೆಂದರೆ ಬರೀ ಕೆಲಸವಲ್ಲ, ಬೆಳೆ ಬೆಳೆಯುವುದಲ್ಲ. ಅಲ್ಲಿ ಹಣದ ಲೆಕ್ಕಾಚಾರ ಬೇಕೇ ಬೇಕು. ಆದರೆ ಎಲ್ಲವೂ ಹಣವೇ ಅಲ್ಲ. ಅದೊಂದು ಸಂಸ್ಕಾರ, ಸಂಸ್ಕೃತಿ. ಅದೊಂದು ಸುಂದರ ಪರಂಪರೆ. ಕೃಷಿಯಲ್ಲಿ ನಮಗೇ ಅರಿವಾಗದಂತೆ ನಾವು ಜೀವನದ ಅಮೂಲ್ಯ ಪಾಠಗಳನ್ನು ಕಲಿಯುತ್ತಿರುತ್ತೇವೆ. ಆ ಕೊಂಡಿ ಯಾವುದೇ ಕಾರಣಕ್ಕೂ ಸಡಿಲವಾಗದಿರಲಿ.

    ಅಜ್ಜನ ಕಥೆ ಮತ್ತು ಅರಸನ ಅರಮನೆ!ಅದು ಒಬ್ಬ ಅರಸನ ಅರಮನೆ. ಅಂದಮೇಲೆ ಕೇಳಬೇಕೆ? ಬಹು ವಿಸ್ತಾರ ಜಾಗದಲ್ಲಿ ಹರಡಿಕೊಂಡಿತ್ತು. ರಾಜ ಮನಸ್ಸು ಮಾಡಿದರೆ ಜಾಗವೊಂದು ಲೆಕ್ಕವೆ! ಊರಿಗೆ ಊರೇ ಹಬ್ಬಿ ನಿಂತೀತು. ಆ ಅರಮನೆಯನ್ನು ವರ್ಣಿಸಲು ಪದಗಳು ಸಾಲುವುದಿಲ್ಲ. ಅದರ ಒಂದೊಂದು ಭಾಗ ವಿವರಿಸಲೇ ದಿನಗಟ್ಟಲೆ ಬೇಕು. ಅರಮನೆಯ ಬಾಗಿಲುಗಳೋ, ದೈತ್ಯ ಗಾತ್ರದವು. ಬಹು ಅಮೂಲ್ಯ ಜಾತಿಯ ಮರಗಳಿಂದ ಮಾಡಿದವು. ಅದನ್ನು ದಿನಾಲೂ ಸಂಜೆ ಮುಚ್ಚಿ, ಬೆಳಗ್ಗೆ ತೆರೆಯಲು ಮೂರ್ನಾಲ್ಕು ಕೆಲಸಗಾರರೇ ಬೇಕಾಗುತ್ತಿದ್ದರು.ಅಷ್ಟು ಭಾರ. ಇನ್ನು ಆ ಬಾಗಿಲಿಗೆ ಮಾಡಿದ ಕುಸುರಿಯೋ ಅನುಪಮ, ಅಷ್ಟೇ ವೈವಿಧ್ಯಮಯ. ಆ ಪ್ರಾಂತ್ಯದ ಎಲ್ಲ ಕಲಾಕೌಶಲ ಅಲ್ಲಿ ಮೇಳೈಸಿತ್ತು. ಹತ್ತೆಂಟು ಕುಶಲಕರ್ವಿುಗಳು ವರ್ಷಗಟ್ಟಲೆ ಶ್ರಮವಹಿಸಿ ಮಾಡಿದ ಬಾಗಿಲದು. ಒಂದೇ ಮಾತಿನಲ್ಲಿ ಹೇಳಬೇಕೆಂದರೆ, ನಮ್ಮ ಪುರಾಣದಲ್ಲಿ ಬರುವ ಯಾವ ಅರಸರ ಅರಮನೆಯ ದ್ವಾರಕ್ಕೂ ಸರಿಮಿಗಿಲೆನಿಸುವ ಸೌಂದರ್ಯ ಮತ್ತು ವೈಭವ ಅದರದು….

    ಇದೇನು ಕಥೆ ಮುಂದುವರಿಯುತ್ತಲೇ ಇಲ್ಲ; ಬಾಗಿಲು ದಾಟಿ ಅರಮನೆಯ ಒಳಗೆ ಹೋಗಿ, ಒಳಾಂಗಣದ ವೈಭವದ ವಿವರಣೆ ಕೇಳುವುದು ಯಾವಾಗ ಎಂದು ಯೋಚನೆ ಮಾಡುತ್ತಿದ್ದೀರಾ? ಹೌದು, ಈ ಕಥೆ ಇರೋದೆ ಹೀಗೆ, ಅರ್ಥಾತ್ ಕಥನಕಾರನ ಶೈಲಿ ಇದು. ನಾವು ಚಿಕ್ಕವರಿದ್ದಾಗ ನಮ್ಮ ಅಜ್ಜನಮನೆಯಲ್ಲಿ ಅಜ್ಜ ಹೇಳುತ್ತಿದ್ದ ಕಥೆಯ ಒಂದು ಝುಲಕ್ ಇದು. ಅಷ್ಟಕ್ಕೂ ಈ ಕಥೆ ಹೇಳುವುದು ಯಾವಾಗ ಅಂತೀರಿ? ಕೊರೆಯುವ ಚಳಿಯಲ್ಲಿ ಮನೆಯ ಅಂಗಳದಲ್ಲಿ ಅಡಕೆ ಸುಲಿಯುತ್ತಿದ್ದಾಗ. ಆಗೆಲ್ಲ ಅಜ್ಜಮನೆಗೆ ಓಡುವುದಕ್ಕೆ ಇದ್ದ ಪ್ರಮುಖ ಸೆಳೆತಗಳಲ್ಲಿ ಇದೂ ಒಂದು. ರಾತ್ರಿ ಊಟ ಮಾಡಿದ ನಂತರ ಎಲ್ಲರೂ ಅಂಗಳಕ್ಕೆ ಬರಬೇಕಿತ್ತು. ಅಲ್ಲಿ ಸಾಲಾಗಿ ಮೆಟ್ಟಗತ್ತಿಗಳನ್ನು ಹಾಕಿಕೊಂಡು ಅಡಕೆ ಸುಲಿಯುವ ಕೆಲಸ. ಬರೀ ಮಕ್ಕಳು ಮಾತ್ರವಲ್ಲ, ಮನೆ ಮಂದಿಯೆಲ್ಲ ಬರುತ್ತಿದ್ದರು. ಮಕ್ಕಳಿಗೆ ರಾತ್ರಿ ನಿದ್ರೆ ಬೇಗ ಬರುತ್ತದೆಯಲ್ಲವೆ? ಅದೂ ಗಡಗಡ ಚಳಿ ಬೇರೆ. ಅಂಗಳದ ಮಧ್ಯೆ ಸ್ವಲ್ಪ ಕಟ್ಟಿಗೆ ಹಾಕಿ ಬೆಂಕಿ ಉರಿಸುತ್ತಿದ್ದರು. ಅಷ್ಟೆ. ಆಗೆಲ್ಲ ಈಗಿನ ಹಾಗೆ ಬಾಯಾಡಲು ಕುರ್​ಕುರೆ, ಲೇಯ್್ಸೕಯ್್ಸ ಇತ್ಯಾದಿ ಏನಿರಲಿಲ್ಲ. ಮಕ್ಕಳನ್ನು ಎಚ್ಚರದಲ್ಲಿ ಇರಿಸಿ, ಅಡಕೆ ಸುಲಿಯುವ ಕೆಲಸ ಬೋರ್ ಆಗದಂತೆ ಹಿಡಿದಿಟ್ಟುಕೊಳ್ಳಲು ಅಜ್ಜ ಮಾಡುತ್ತಿದ್ದ ಉಪಾಯ ಹೀಗೆ ಕಥೆ ಹೇಳುವುದು! ಅದೇನು ಒಂದು ದಿನಕ್ಕೆ ಒಂದು ಕಥೆ ಅಂತೀರಾ? ಚಾನ್ಸೇ ಇಲ್ಲ. ಮೇಲೆ ಹೇಳಿದ ಹಾಗೆ ಒಂದೊಂದು ವರ್ಣನೆ, ವಿವರಣೆಗೆ ಮೂರ್ನಾಲ್ಕು ದಿನಗಳೇ ಬೇಕಾಗುತ್ತಿದ್ದವು. ಅರಸನ ಮಗನ ಮದುವೆ ವರ್ಣನೆಗೆ ಅಜ್ಜ ನಿಂತನೆಂದರೆ, ಅಬ್ಬಬ್ಬಾ ಅದೇನದು! ನಮಗೋ ಮುಂದೆ ಕೇಳಬೇಕೆಂಬ ಕುತೂಹಲ. ಆದರೆ ಒಂದೆರಡು ದಿನಕ್ಕೆ ಕಥೆ ಮುಗಿಸಿಬಿಟ್ಟರೆ ಮಕ್ಕಳನ್ನು ಅಡಕೆ ಸುಲಿಯಲು ಎಳೆತರುವುದು ಸುಲಭವೇ? ಹೀಗಾಗಿಯೇ ಅಜ್ಜ ಒಂದೊಂದು ಕಥೆಯನ್ನೂ ಹಿಂಜಿಹಿಂಜಿ ವಿಳಂಬಿಸುತ್ತಿದ್ದ. ಒಂದು ಕುತೂಹಲದ ಘಟಕ್ಕೆ ತಂದು ‘ಮುಂದಿನ ಕಥೆ ನಾಳೆ’ ಎಂದು ಘೋಷಿಸಿ ಮೆಟ್ಟಗತ್ತಿ ಮಣೆ ಮೇಲಿಂದ ಎದ್ದು ತಾಂಬೂಲ (ಅಪ್ಪಟ ಹಳ್ಳಿಭಾಷೆಯಲ್ಲಿ ಹೇಳಬೇಕೆಂದರೆ ಕವಳ) ತೂಪಲು ನಡೆದುಬಿಡುತ್ತಿದ್ದ. ಅಲ್ಲಿಗೆ ಆ ದಿನದ ‘ಕಥೆ’ ಮುಗಿಯಿತೆಂದರ್ಥ. ನಾವು ಮರುದಿನದ ಕಥೆ ಕನವರಿಕೆಯಲ್ಲಿ ಮಲಗುತ್ತಿದ್ದೆವು. ಮರುದಿನ ಮತ್ತೆ ಕಥೆಯ ಮುಂದುವರಿಕೆ….

    ಮಕ್ಕಳಾದ ನಮಗೆ ಆಗ ಇದರ ಹಿಂದಿನ ಮರ್ಮ ಅರಿವಿಗೆ ಬರುತ್ತಿರಲಿಲ್ಲ. ಅಡಕೆ ಸುಲಿಯಲು ಹೋದರೆ ಅಜ್ಜನಿಂದ ಬಗೆಬಗೆಯ ಕಥೆಗಳನ್ನು ಕೇಳಬಹುದು ಎಂಬುದು ಮಾತ್ರ ಮನಸ್ಸಿನಲ್ಲಿರುತ್ತಿತ್ತು. ಅಂದಹಾಗೆ ಇಲ್ಲಿ ಉಲ್ಲೇಖಿಸಿದ್ದು ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ತಾಲೂಕಿನ ಉಮಚಗಿ ಸನಿಹದ ಹಿರೇಸರ ಎಂಬ ಪುಟ್ಟ ಹಳ್ಳಿಯ ಬಗ್ಗೆ. ಈಗ ಒಮ್ಮೆ ಆಲೋಚಿಸಿದರೆ, ಅಲ್ಲಿ ಎಂಥ ಅದ್ಭುತ ಜೀವನ ಪಾಠ ಇರುತ್ತಿತ್ತಲ್ಲವೆ ಎನಿಸಿ ಅಚ್ಚರಿಯಾಗುತ್ತದೆ. ಶ್ರಮ ಸಂಸ್ಕೃತಿ ಮಹತ್ವ ಮತ್ತು ಕಷ್ಟಪಟ್ಟರೆ ಸುಖ ಸಿಗುತ್ತದೆ ಎಂಬುದು ಅಗೋಚರವಾಗಿ ಮನಸಲ್ಲಿ ಇಳಿದಿತ್ತೇನೋ! ಈಗ ಅಜ್ಜ ಇಲ್ಲ. ಅಡಕೆ ಕೃಷಿಯ ಸ್ವರೂಪವೂ ಮೊದಲಿನ ಹಾಗಿಲ್ಲ. ಈಗೆಲ್ಲ ಮನೆಯಂಗಳದಲ್ಲಿ ಸಾಲು ಸಾಲು ಮೆಟ್ಟಗತ್ತಿಗಳನ್ನು ಹಾಕಿಕೊಂಡು ಮಕ್ಕಳು, ಮಹಿಳೆಯರು, ವಯಸ್ಸಾದವರು…. ಹೀಗೆ ಎಲ್ಲರೂ ಅಡಕೆ ಸುಲಿಯುವ ದೃಶ್ಯ ವಿರಳ. ಕೃಷಿ ಕುಟುಂಬಗಳೂ ಚಿಕ್ಕದಾಗಿವೆ. ಇನ್ನೊಂದೆಡೆ, ಕೃಷಿ ಕಾರ್ವಿುಕರ ಸಮಸ್ಯೆಯೂ ತೀವ್ರವಾಗಿದೆ. ಬೆಳೆಗೆ ದರವಿದ್ದರೂ, ಅದನ್ನು ಸೂಕ್ತ ಕಾಲದಲ್ಲಿ ಕೊಯ್ಲು ಮಾಡುವುದು ದೊಡ್ಡ ಸಮಸ್ಯೆಯಾಗಿದೆ. ಇದು ಬಹುತೇಕ ಎಲ್ಲ ಬೆಳೆಗಳಿಗೂ ಅನ್ವಯಿಸುವ ಮಾತು. ಹಾಗಂತ ಕೃಷಿಕ ನಿರಾಶಾವಾದಿ ಆಗಿದ್ದಾನೆ ಎಂದಲ್ಲ. ಸಮಸ್ಯೆ ಪರಿಹಾರದ ಯತ್ನಗಳು ನಡೆದೇ ಇವೆ. ಉದಾ: ಅಡಕೆ ಸುಲಿಯಲು ಕಾರ್ವಿುಕರ ತುಟಾಗ್ರತೆ ಇರುವುದರಿಂದ, ಯಂತ್ರಗಳನ್ನು ಆವಿಷ್ಕರಿಸಲಾಗಿದೆ. ಇನ್ನು, ಕೆಲವೆಡೆ, ‘ಸಾಮೂಹಿಕ ತತ್ತ್ವ’ದ ಆಧಾರದ ಮೇಲೆ ಕೃಷಿ ಕೆಲಸಗಳನ್ನು ಮಾಡಿಕೊಳ್ಳಲಾಗುತ್ತದೆ. ಯಲ್ಲಾಪುರ ತಾಲೂಕಿನ ಶೀಗೇಮನೆ ಎಂಬ ಹಳ್ಳಿಯಲ್ಲಿ ಅನೇಕ ವರ್ಷಗಳಿಂದ ಈ ಪದ್ಧತಿ ಇದೆ. ಇದರಿಂದ ಎಲ್ಲರಿಗೂ ಅನುಕೂಲ. ಯಾರ ಮನೆಯಲ್ಲೂ ಕೃಷಿ ಕೆಲಸ ಹಿಂದೆಬಿತ್ತು ಎಂಬ ಚಿಂತೆ ಇಲ್ಲ. ಇನ್ನು, ಅಡಕೆ ಕೊಯ್ಲಿನ ಸಂದರ್ಭದಲ್ಲಿ ಕೊನೆಗೌಡರ (ಅಂದರೆ ಕೊನೆ ಕೊಯ್ಯುವವರು) ಕೊರತೆ ಬಹುವಾಗಿದೆ. ಇದು ಬಹು ಕೌಶಲ ಮತ್ತು ಧೈರ್ಯವನ್ನು ಅಪೇಕ್ಷಿಸುವ ಕೆಲಸ; ಅಡಕೆ ಮರ ಏರಿ ಕೊನೆ ಕೊಯ್ಯುವಾಗ ತುಸು ಎಚ್ಚರ ತಪ್ಪಿದರೂ ಅಥವಾ ಸ್ವಲ್ಪಅಜಾಗ್ರತೆಯಾದರೂ ಅಪಾಯ ಕಟ್ಟಿಟ್ಟ ಬುತ್ತಿ. ಹೀಗಾಗಿ ಈ ಕೆಲಸ ಕಲಿಯುವವರ ಸಂಖ್ಯೆ ಕಮ್ಮಿಯಾಗಿದೆ. ಇರುವ ಕೆಲವೇ ಮಂದಿ ಮೇಲೇ ಏಕಕಾಲಕ್ಕೆ ಒತ್ತಡ ಬಿಳುತ್ತದೆ. ಅಡಕೆ ಮರ ಏರುವ ಏಣಿಯನ್ನು ಸಿದ್ಧಪಡಿಸಲಾಗಿದೆಯಾದರೂ ಅದಿನ್ನೂ ವ್ಯಾಪಕವಾಗಿ ಬಳಕೆಗೆ ಬರಬೇಕಿದೆ. ಏನೇ ಕಷ್ಟ ಬಂದರೂ ಕೃಷಿಕ ಸುಲಭದಲ್ಲಿ ಹಿಂದೆಗೆಯುವವನಲ್ಲ; ಅದು ನಿಸರ್ಗ ಅವನಿಗೆ ಕಲಿಸಿದ ಪಾಠ.

    ಮಲೆನಾಡಿನ ಹಲವು ಪ್ರದೇಶಗಳಲ್ಲಿ ಅಡಕೆ ಕೊಯ್ಲು ನಡೆಯುತ್ತಿದ್ದಂತೆ ಅಥವಾ ಮುಗಿಯುತ್ತಿದ್ದಂತೆ ನಡೆಯುವ ಮತ್ತೊಂದು ಪ್ರಮುಖ ಕೃಷಿ ಚಟುವಟಿಕೆಯೆಂದರೆ ಆಲೆಮನೆ. ಬೆಳಗಾವಿ ಅಥವಾ ಮಂಡ್ಯದ ಹಾಗೆ ಇಲ್ಲಿನ ಕಬ್ಬು ಸಕ್ಕರೆ ಉತ್ಪಾದನೆಗೆಂದು ಕಾರ್ಖಾನೆಗಳಿಗೆ ಹೋಗುವುದಿಲ್ಲ. ಹೆಚ್ಚಿನವರು ಮನೆಖರ್ಚಿಗೆಂದು ಕಬ್ಬು ಬೆಳೆಯುತ್ತಾರೆ. ಇನ್ನು ಸ್ವಲ್ಪ ಜಾಸ್ತಿ ಪ್ರಮಾಣದಲ್ಲಿ ಬೆಳೆಯುವವರು ಬೆಲ್ಲ ತಯಾರಿಸಿ ಮನೆಬಳಕೆಗೆ ಇಟ್ಟುಕೊಂಡು ಹೆಚ್ಚಿಗೆ ಉಳಿದರೆ ಸ್ಥಳೀಯವಾಗಿಯೇ ಮಾರಾಟ ಮಾಡುತ್ತಾರೆ. ಈ ಆಲೆಮನೆ ಇದೆಯಲ್ಲ, ಅದೂ ಒಂಥರಾ ಜೀವನದ ರಸಾನುಪಾಕವೇ. ‘ಕೈ ಕೆಸರಾದರೆ ಬಾಯಿ ಮೊಸರು’ ಎಂಬ ಗಾದೆಗೆ ಸೂಕ್ತವಾಗಿ ಹೊಂದುತ್ತದೆ. ಏಕೆಂದರೆ, ಆಲೆಮನೆಯ ಪ್ರತಿ ಕಾರ್ಯವೂ ಶ್ರಮದ್ದೇ. ಅಂತಿಮವಾಗಿ ಬೆಲ್ಲವೆಂಬ ಸಿಹಿ ದಕ್ಕುತ್ತದೆ. ಅಪಾರ ಶ್ರಮ, ಕೂಲಿ ಕಾರ್ವಿುಕರ ಕೊರತೆ, ಶ್ರಮಪಟ್ಟು ಬೆಳೆದರೂ ಹೆಚ್ಚೇನೂ ಲಾಭ ದೊರಕದಿರುವುದು ಮುಂತಾದ ಕಾರಣಗಳಿಂದಾಗಿ ಈಗ ಹೆಚ್ಚಿನವರು ಕಬ್ಬು ಬೆಳೆಯುವುದನ್ನು ನಿಲ್ಲಿಸಿಬಿಟ್ಟಿದ್ದಾರೆ. ಹಿಂದೆಲ್ಲ ಭತ್ತದ ಗದ್ದೆಗಳಲ್ಲಿ ಕಬ್ಬು ಸಾಮಾನ್ಯವಾಗಿತ್ತು. ಯಾವಾಗ ಗದ್ದೆಗಳಲ್ಲಿ ಅಡಕೆ ಗಿಡಗಳು ತಲೆಯೆತ್ತಿದವೋ ಆಗ ಕಬ್ಬಿನ ಸಿಹಿ ಬಗ್ಗೆ ಒಲವು ತಗ್ಗಿತು. ಈ ಕಬ್ಬಿನ ಆಲೆಮನೆಯೆಂಬುದಿದೆಯಲ್ಲ, ಅದು ಅತಿಥಿ ಸತ್ಕಾರದ ಉತ್ತಮಾಂಶವನ್ನು ತನ್ನೊಡಲಲ್ಲೇ ಅಡಗಿಸಿಕೊಂಡಿದೆ ಮತ್ತು ಅದು ಲೋಕಕ್ಕೆ ಸಿಹಿ ಹಂಚುವ ಮಾಧ್ಯಮವೂ ಹೌದು. ಮೇಲೆ ಉಲ್ಲೇಖಿಸಿದೆನಲ್ಲ, ಹಿರೇಸರ ಎಂಬ ಊರು, ಅದರ ಇನ್ನೊಂದು ವೈಶಿಷ್ಟ್ಯವಿದೆ. ಆ ಊರಿಂದ ಕಿಲೋಮೀಟರ್ ದೂರದಲ್ಲಿ ನೂರೆಕರೆಗಿಂತ ಹೆಚ್ಚು ವಿಸ್ತಾರದ ಗುಡ್ಡ ಪ್ರದೇಶವಿದೆ. ಸ್ಥಳೀಯವಾಗಿ ‘ಕಾನಬೇಣ’ ಎಂತಲೇ ಹೆಸರು. ಇಡೀ ಊರಿಗೆ ಸೇರಿದ ಗುಡ್ಡ ಅದು. ಅಲ್ಲಿ ಮರಗಿಡಗಳು ವಿರಳ. ಹುಲ್ಲು ಚೆನ್ನಾಗಿ ಬೆಳೆಯುತ್ತದೆ. ಅದನ್ನು ದನಕರುಗಳಿಗೆ ಮತ್ತು ತೋಟಪಟ್ಟಿಗಳಿಗೆ ಹಾಸಲು ಬಳಸುತ್ತಾರೆ. ಹಿಂದೆ ಅಲ್ಲಿ ಗಡಿಗುರುತುಗಳಿರಲಿಲ್ಲ. ಕಣ್ಣಂದಾಜಿಗೆ ಆ ಮನೆಯವರದು ಇದು, ಈ ಮನೆಯವರದು ಇದು ಎಂದು ಜಾಗ ಗುರುತು ಮಾಡಿಕೊಳ್ಳಲಾಗಿತ್ತು. ಅದಕ್ಕೆ ತಕ್ಕಂತೆ ಆ ಜಾಗದಲ್ಲಿ ಮಾತ್ರ ಅವರವರು ಹುಲ್ಲು ತರುತ್ತಿದ್ದರು. ಉಳಿದಂತೆ, ಸ್ಥಳೀಯರಿಗೆ ಕ್ರಿಕೆಟ್ ಪಂದ್ಯಕ್ಕೆ ಬಳಕೆಯಾಗುತ್ತಿತ್ತು. ಈಗೆ ಕೆಲ ವರ್ಷಗಳ ಹಿಂದೆ ಆ ಬೇಣವನ್ನು ಹಿಸೆ ಮಾಡಿ, ಗಡಿ ಗುರುತು ಮಾಡಲಾಗಿದೆ. ಆ ಗುಡ್ಡದ ಕೆಳಭಾಗದಲ್ಲಿ ಗದ್ದೆತೋಟಗಳಿದ್ದು, ಅಲ್ಲಿ ಕಬ್ಬನ್ನು ಬೆಳೆಯುವುದರಿಂದ ಆಲೆಮನೆ ನಡೆಯುತ್ತದೆ. ಮೊದಲೆಲ್ಲ ಕೋಣನ ಕಣೆ (ಆಲೆಗಾಣ ಅರ್ಥಾತ್ ಕಬ್ಬು ಅರೆಯುವುದು) ಗಳೇ ಇದ್ದವು. ಈಗ ಮಷಿನ್ ಕಣೆ ಬಂದಿದೆ. ಆ ಕಡೆಯಲ್ಲಿ ಆಲೆಮನೆ ಎಂದರೆ, ಒಂದು ರೀತಿಯಲ್ಲಿ ಕಬ್ಬಿನಹಾಲು ಮತ್ತು ಬಿಸಿ ಬೆಲ್ಲದ ಸಂತರ್ಪಣೆಯೇ ಸರಿ. ಯಾರ ಮನೆಯ ಆಲೆಮನೆಯೋ ಅವರ ಸಂಬಂಧಿಕರು, ಪರಿಚಯಸ್ಥರು ಮಾತ್ರವಲ್ಲ, ಆ ಊರಿನ ಆಸುಪಾಸಿನ ಊರಿನ ಹಲವರೂ ಬರುವುದು ವಾಡಿಕೆ. ಇದಕ್ಕೆ ಪರಿಚಯಗಿರಿಚಯ ಅಂತೇನು ಇಲ್ಲ. ಹಾಗೆ ಬಂದವರಿಗೆ ತಾಜಾ ಕಬ್ಬಿನಹಾಲು, ನೊರೆಬೆಲ್ಲ ಮತ್ತು ಹೋಗುವಾಗ ಒಂದಷ್ಟು ಕಬ್ಬು ಕೊಡುವುದು ರೂಢಿ. ಹೀಗೆ ಬರುವವರು ಸಾಯಂಕಾಲವೇ ಹೆಚ್ಚು. ಏಕೆಂದರೆ ಬೆಳಗಿನ ಜಾವ ನಾಲ್ಕು ಗಂಟೆಗೇ ಆಲೆಗಾಣ ಶುರುವಾಗುವುದರಿಂದ ಆಗ ಬರಲಾಗದು. ಸಾಯಂಕಾಲ ಎಷ್ಟು ಹೊತ್ತಾದರೂ ಬಾನಿ ತುಂಬುವುದೇ ಇಲ್ಲ (ಕಬ್ಬಿನಹಾಲು ಸಂಗ್ರಹಿಸುವ ಡ್ರಂ). ಆಲೆಮನೆಗೆ ಬರುವವರಿಗೆ ಕಬ್ಬಿನಹಾಲು ಕೊಡುವ ಕೆಲಸ ನಿರಂತರವಾಗಿ ನಡೆಯುತ್ತಿರುತ್ತದೆ. ಈ ನಡುವೆ, ಕಬ್ಬಿನಹಾಲಿಗೆ ನಿಂಬೆಹಣ್ಣು, ಶುಂಠಿ ಸೇರಿಸಿ ರುಚಿಯನ್ನು ಹೆಚ್ಚಿಸಿಕೊಳ್ಳುವವರೂ ಇರುತ್ತಾರೆ. ಆಲೆಮನೆಗೆ ಬಂದವರಿಗೆ ಆತಿಥ್ಯ ನೀಡುವ ಕೆಲಸ ಸಾಮಾನ್ಯವಾಗಿ ಮಕ್ಕಳದೇ ಆಗಿರುತ್ತಿತ್ತು (ಹೇಗೂ ಸಂಜೆ ವೇಳೆಗೆ ಶಾಲೆ ಮುಗಿದಿರುತ್ತಿತ್ತಲ್ಲ). ಕಾನಬೇಣ ಎಂದೆನಲ್ಲ, ಅಲ್ಲಿ ಜನರು ನಡೆದಾಡಲು ಒಂದು ಸಣ್ಣ ಕಾಲುದಾರಿ ಮಾತ್ರ ಇತ್ತು. ಜನರು ನಡೆದು ನಡೆದು ಹಾದಿ ಸವೆದು ದೂರದಿಂದಲೂ ಸ್ಪಷ್ಟವಾಗಿ ಕಾಣುತ್ತಿತ್ತು; ಹೆಂಗಸರ ತಲೆ ಮೇಲಿನ ಬೈತಲೆಯಂತೆ. ಆಲೆಮನೆ ಸಂದರ್ಭದಲ್ಲಿ ಆ ಗುಡ್ಡದಿಂದ ಜನರು ಇಳಿದಿಳಿದು ಬರುವ ದೃಶ್ಯ ಈಗಲೂ ಕಣ್ಣಿಗೆ ಕಟ್ಟಿದಂತಿದೆ. ಆಲೆಮನೆ ಕೆಲಸ ಏನು ಕಡಿಮೆ ಅಲ್ಲ. ಅಕ್ಷರಶಃ ಹೈರಾಣಾಗಬೇಕು. ಆದರೆ, ಕಬ್ಬಿನಹಾಲು ಕೊಪ್ಪರಿಗೆಯಲ್ಲಿ ಕುದಿಯುತ್ತ ಬೆಲ್ಲವಾಗುವ ಆಗುವ ಪರಿ ಇದೆಯಲ್ಲ, ಆ ಪ್ರಕ್ರಿಯೆ ಕಂಡಾಗ ಕೆಲಸದ ನೋವು, ಆಯಾಸವೆಲ್ಲ ಮರೆತು ಹೊಸ ಉತ್ಸಾಹವೊಂದು ಉಕ್ಕೇರಿಬಿಡುತ್ತದೆ. ಎಷ್ಟೆಲ್ಲ ಕಷ್ಟ, ಸಮಸ್ಯೆಗಳ ನಡುವೆಯೂ ಕೃಷಿಯನ್ನು ಇಷ್ಟಪಟ್ಟು ಮಾಡಲು ಬಹುಶಃ ಇಂಥದು ಕಾರಣವಿರಬೇಕು.

    ಕೃಷಿಯೆಂದರೆ ಬರೀ ಕೆಲಸವಲ್ಲ, ಬೆಳೆ ಬೆಳೆಯುವುದಲ್ಲ. ಅಲ್ಲಿ ಹಣದ ಲೆಕ್ಕಾಚಾರ ಬೇಕೇ ಬೇಕು. ಆದರೆ ಎಲ್ಲವೂ ಹಣವೇ ಅಲ್ಲ. ಅದೊಂದು ಸಂಸ್ಕಾರ, ಸಂಸ್ಕೃತಿ. ಅದೊಂದು ಸುಂದರ ಪರಂಪರೆ. ಕೃಷಿಯಲ್ಲಿ ನಮಗೇ ಅರಿವಾಗದಂತೆ ನಾವು ಜೀವನದ ಅಮೂಲ್ಯ ಪಾಠಗಳನ್ನು ಕಲಿಯುತ್ತಿರುತ್ತೇವೆ. ಆ ಕೊಂಡಿ ಯಾವುದೇ ಕಾರಣಕ್ಕೂ ಸಡಿಲವಾಗದಿರಲಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts