More

  ತತ್ತ್ವದ ಘನರಹಸ್ಯ

  ಮಹಲಿಂಗರಂಗನು ಪರಮಾತ್ಮಪದವನ್ನು ತಿಳಿದವನಷ್ಟೆ. ಅದು ಅಪರೋಕ್ಷಾನುಭೂತಿಯ ಮೂಲಕ ಅವನಿಗೆ ತಿಳಿದಿದೆ. ಅದ್ವಯ ತತ್ತ್ವದಲ್ಲಿ ತಿಳಿಯುವ ಉಪಕ್ರಮವೇ ಪ್ರಧಾನ. ತಿಳಿದು ತಿಳಿಯಾದಾಗ ವಿಶಿಷ್ಟವಾದ ಪರಮಾತ್ಮನ ಅನುಭವ ಸಾಧಕನಿಗೆ ಉಂಟಾಗುತ್ತದೆ. ಇಲ್ಲಿಯ ವರೆಗೆ ಮಹಲಿಂಗರಂಗನು ನಾನಾ ಪ್ರಕಾರಗಳಲ್ಲಿ ಪರಮಾತ್ಮಪದವನ್ನು ನಿರ್ವಚಿಸಿದ ಅನಂತರ ಹೇಳುವ ಮಾತಿದು:

  ಮೂರು ತನು, ಮೂರಾವಸ್ಥೆಯ,

  ಮೂರು ಗುಣಗಳ, ಮೂರು ಹಮ್ಮಿನ,

  ಮೂರೆನಿಪ ತ್ರಿಪುಟಿಯ, ತ್ರಿವರ್ಗವ, ತ್ರಿಕರಣಂಗಳನು, |

  ಮೂರು ಕಾಲವ, ಮೂರು ಲೋಕವ,

  ಮೂರು ಶಕ್ತಿಯ, ಮೂರು ಗತಿಗಳ,

  ಮೀರಿ ತೋರುವ ತುರ್ಯವೇ ಪರಮಾತ್ಮಪದವೆಂದ || 7.22

  ಈ ಪದ್ಯದ ಅರ್ಥವನ್ನು ಮೊದಲಿಗೆ ತಿಳಿಯೋಣ: ‘‘ಮೂರು ದೇಹಗಳು, ಮೂಬಗೆಯ ಅವಸ್ಥೆಗಳು. ಮೂರು ಗುಣಗಳು ಮತ್ತು ಮೂರು ಅಹಂಕಾರಗಳು, ಮೂರು ಬಗೆಯ ತ್ರಿಪುಟಿಗಳು, ತ್ರಿವರ್ಗ ಮತ್ತು ತ್ರಿಕರಣಗಳು. ಮೂರು ಕಾಲಗಳು, ಮೂರು ಲೋಕಗಳು ಮೂರು ಶಕ್ತಿರೂಪಗಳು ಮೂರುಬಗೆಯ ಗತಿಗಳು. ಇವೆಲ್ಲವನ್ನು ಮೀರಿ ತೋರುವಂಥ ತುರೀಯಾವಸ್ಥೆಯೇ ಪರಮಾತ್ಮಪದ.’’ ಇಲ್ಲಿ ಪರಮಾತ್ಮ ಪದವು ಮೂರು ಬಗೆಯ ವಸ್ತುಸಂಕೇತಗಳನ್ನು ಮೀರಿ ನಿಲ್ಲುತ್ತದೆಂಬ ಆಶಯವನ್ನು ಮಹಲಿಂಗರಂಗ ತಿಳಿಸುತ್ತಿದ್ದಾನೆ. ಪರಮಾತ್ಮಸ್ವರೂಪವು ಸ್ಥೂಲ, ಸೂಕ್ಷ್ಮ ಹಾಗೂ ಪರತನು ಎಂಬ ದೇಹವನ್ನು ಪಡೆದಿದೆ. ಇಲ್ಲಿ ಎಚ್ಚರ, ಕನಸು, ನಿದ್ರೆ ಎಂಬ ಅವಸ್ಥೆಗಳುಂಟು. ಇಷ್ಟು ಮಾತ್ರವಲ್ಲ ಸತ್ತ್ವ, ರಜ, ತಮ ಎಂಬ ಮೂಬಗೆಯ ಗುಣಗಳೂ ಇಲ್ಲಿವೆ. ಇನ್ನು ವೈಕಾರಿಕ, ಅಹಂಕಾರಿಕ ಮತ್ತು ತಾಮಸ ಎಂಬ ಅಹಂಕಾರಗಳು, ತಂದೆ, ತಾಯಿ, ಗುರು ಎಂಬ ತ್ರಿಪುಟಿಗಳು, ಧರ್ಮ-ಅರ್ಥ-ಕಾಮ ಎಂಬ ತ್ರಿವರ್ಗಗಳು, ವಾಕ್ಕು-ಮನಸ್ಸು-ಕಾಯ ಎಂಬ ಮೂರು ಕರಣಗಳು, ವರ್ತಮಾನ-ಭೂತ-ಭವಿಷ್ಯತ್ತೆಂಬ ಮೂರು ಕಾಲಗಳು, ಸ್ವರ್ಗ-ಮರ್ತ್ಯ-ಪಾತಾಳ ಎಂಬ ಕಾಲಗಳು, ಇಚ್ಛಾ-ಜ್ಞಾನ-ಕ್ರಿಯಾ ಎಂಬ ಶಕ್ತಿಗಳು, ದೇವಯಾನ, ಪಿತೃಯಾನ, ಜನನ-ಮರಣ ಎಂಬ ಗತಿಗಳು ಪರಮಾತ್ಮನ ಸ್ವರೂಪವನ್ನು ತಿಳಿಸಲಾರವು. ಇವೆಲ್ಲವುಗಳಿಗಿಂತ ಮೀರಿದುದೆಂಬ ಅಭಿಪ್ರಾಯ ಮಹಲಿಂಗರಂಗನದಾಗಿದೆ.

  ಮಹಲಿಂಗರಂಗನು ಇಲ್ಲಿ ಹೇಳಿರುವ ‘ತ್ರಯಾತ್ಮಕ’ ವಿವರಗಳನ್ನು ಈ ಹಿಂದಿನ ಅನೇಕ ಅಧ್ಯಾಯಗಳಲ್ಲಿ ವಿವರಿಸಿದ್ದಾನೆ. ಸಾಧಕರು ಆಯಾ ಸ್ಥಾನಗಳಲ್ಲಿ ಬಂದಿರುವ ವಿಚಾರಗಳನ್ನು ತತ್ತ್ವದ ದೃಷ್ಟಿಯಿಂದ ಪರಾಂಬರಿಸುವುದು ಸೂಕ್ತ. ಈ ಪದ್ಯದಲ್ಲಿ ‘ಮೂರುಗತಿ’ ಎಂಬ ಮಾತು ಬಂದಿದೆಯಷ್ಟೆ. ಈ ಅಂಶವನ್ನು ಸ್ವಲ್ಪ ವಿವರಿಸಿಕೊಳ್ಳುವುದು ತತ್ತ್ವದ ದೃಷ್ಟಿಯಿಂದ ಸೂಕ್ತ. ದೇವಯಾನವು ದೇವತೋಪಾಸನೆಗೆ ಸಂಬಂಧಿಸಿದ್ದು. ಇದಕ್ಕೆ ಶುಕ್ಲಮಾರ್ಗವೆಂದೂ ಅರ್ಚಿರಾದಿಮಾರ್ಗವೆಂದೂ ಕರೆಯುವುದುಂಟು. ಇನ್ನು ಎರಡನೆಯ ಗತಿ ಪಿತೃಯಾನ. ಇದು ಇಷ್ಟಾಪೂರ್ತಗಳನ್ನು ಯಾರು ಮಾಡಿರುತ್ತಾರೋ ಅವರಿಗೆ ದೊರಕುವ ಸದ್ಗತಿ. ಪಿತೃಯಾನಕ್ಕೆ ಕೃಷ್ಣಮಾರ್ಗ-ಧೂಮಮಾರ್ಗ ಎಂಬ ಪರ್ಯಾಯ ನಾಮಗಳು ಉಂಟು. ಆದರೆ, ಇವು ಹೆಚ್ಚಿಗೆ ಬಳಕೆಯಲ್ಲಿಲ್ಲ. ದೇವಯಾನ-ಪಿತೃಯಾನ ಇವೆರಡಕ್ಕೂ ಅರ್ಹರಲ್ಲದವರದ್ದು ಕ್ಷುದ್ರಜಂತುಗಳ ಜನನ-ಮರಣವೇ ಮೂರನೆಯ ಗತಿ. ಈ ಗತಿಯನ್ನು ವಾಚಸ್ಪತಿಮಿಶ್ರರು ಭಾಮತೀ ವ್ಯಾಖ್ಯಾನದಲ್ಲಿ ‘ನರಕ’ವೂ ಸೇರುತ್ತದೆಂದು ಸೂಚ್ಯವಾಗಿ ತಿಳಿಸಿದ್ದಾರೆ. ಈ ರೀತಿಯಾಗಿ ಪರಮಾತ್ಮಪದವನ್ನು ವೈಶಂಪಾಯನರು ವಿವರಿಸಿದಾಗ ಶುಕಮುನಿಯ ಮನಸ್ಸಿನ ತುಡಿತವು ಪೂರ್ಣವಾಗಿ ಸಮಾಧಾನಗೊಂಡಿತು. ಆಗ ಶುಕಮುನಿಯು ವೈಶಂಪಾಯನರ ಪಾದಗಳಿಗೆ ನಮಸ್ಕರಿಸಿದನು. ಸತ್ಯಸ್ವರೂಪನಾದ ಮೋಕ್ಷಸಂಬಂಧವನ್ನು ಹೊಂದಿದ ಸಹಜಾನಂದ ಗುರುವನ್ನು ಶುಕಮುನಿಯು ಸ್ತುತಿಸಿದನು.

  ಮಹಲಿಂಗರಂಗನು ಇಪ್ಪತ್ತೆರಡು ಪದ್ಯಗಳಲ್ಲಿ ಪರಮಾತ್ಮನ ಸ್ವರೂಪವನ್ನು ತಿಳಿಸಲು ಈ ಅಧ್ಯಾಯದಲ್ಲಿ ಪ್ರಯತ್ನಿಸಿದ್ದಾನೆ. ಶ್ರೀಮಲ್ಲಿಕಾರ್ಜುನನ ಸ್ತುತಿಯೊಡನೆ ಪ್ರಸ್ತುತ ಅಧ್ಯಾಯವು ಮುಗಿಯುತ್ತದೆ.

  ವ್ಯೋಮಕೇಶ, ಮಹೇಶ, ಶಂಕರ,

  ವಾಮದೇವ, ನರೇಣ್ಯ, ವರಗುಣ

  ಧಾಮ, ವಾಸುಕಿಭೂಪ, ವೃಷಭಾರೂಢ, ವಿಶ್ವೇಶ, |

  ಭೀಮ, ಭರ್ಗ, ಕಪರ್ದಿ, ಶಿವ, ಸು

  ತ್ರಾಮನಮಿತ, ಪಿನಾಕಿ, ಗಿರಿಜಾ

  ಕಾಮುಕ, ಶ್ರೀಮಲ್ಲಿಕಾರ್ಜುನ ಸಲಹು ಮೂಜಗವ || 7.24

  ಈ ಪದ್ಯದಲ್ಲಿ ‘ಸುತ್ರಾಮನಮಿತ’ ಎಂದಿದೆ. ಇಂದ್ರನಿಂದ ನಮಸ್ಕಾರ ಪಡೆಯುವಂಥ ಎಂದು ಅರ್ಥ. ‘ಗಿರಿಜಾಕಾಮುಕ’ ಎಂದರೆ ಗಿರಿಜೆಯ ಪತಿ ಎಂದು ತಿಳಿಯಬೇಕು.

  ಮಹಲಿಂಗರಂಗನು ಪ್ರತಿಯೊಂದು ಅಧ್ಯಾಯವನ್ನು ಸೋಪಾನಕ್ರಮವಾಗಿ ‘ತತ್ತ್ವಪದ್ಧತಿ’ಯ ಮೂಲಕ ನಿರೂಪಿಸಿದ್ದಾನೆ. ಆ ಕ್ರಮ ಪದ್ಧತಿಯು ಪ್ರಸ್ತುತ ಅಧ್ಯಾಯ ಮುಗಿದ ನಂತರ ಮುಂದಿನ ಅಧ್ಯಾಯದಲ್ಲಿ ಪ್ರಾರಂಭವಾಗುತ್ತದೆ. ಇಲ್ಲಿಗೆ ಏಳನೆಯ ಅಧ್ಯಾಯವಾದ ‘ಪರಮಾತ್ಮಪದ ನಿರೂಪಣ’ ಮುಗಿಯಿತು.

  (ಲೇಖಕರು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳು. ಕನ್ನಡ ಹಾಗೂ ಸಂಸ್ಕೃತ ವಿದ್ವಾಂಸರು)

  (ಪ್ರತಿಕ್ರಿಯಿಸಿ: [email protected])

  (ನಾಳೆ, ಶ್ರೀ ಗುರು ರಾಘವೇಂದ್ರಸ್ವಾಮಿಗಳ ಬಗೆಗಿನ ಅಂಕಣ ‘ಕಲ್ಪತರು’)

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts