More

    ಯೋಗಾತ್ಮ ಶ್ರೀಹರಿಗೆ ಒಲಿದ ‘ವಿಜಯರತ್ನ’ ಗರಿ: ವಿಜಯವಾಣಿ, ದಿಗ್ವಿಜಯ ನ್ಯೂಸ್​ ವಾಹಿನಿಯ ಪ್ರತಿಷ್ಠಿತ ಗೌರವ ಪ್ರದಾನ

    ಬೆಂಗಳೂರು: ಮೈಸೂರಿನಲ್ಲಿ ‘ಯೋಗ’ ಅಂದ ತಕ್ಷಣ ನೆನಪಾಗುವ ಕೆಲವೇ ವ್ಯಕ್ತಿಗಳಲ್ಲಿ ಮುಂಚೂಣಿಯಲ್ಲಿ ನಿಲ್ಲುವುದು ಶ್ರೀಹರಿ ಅವರ ಹೆಸರು. ಮೈಸೂರಿನ ಜನರಿಗೆ ಶ್ರೀಹರಿ ಅತ್ಯಂತ ಚಿರಪರಿಚಿತವಾದ ಹೆಸರು. ಯೋಗ ಮತ್ತು ಸಮಾಜ ಸೇವಾ ಕಾರ್ಯದಲ್ಲಿ ಶ್ರೀಹರಿ ಅವರು ಮಾಡಿರುವ ಸಾಧನೆ ಪರಿಗಣಿಸಿ, ಕನ್ನಡದ ನಂ.1 ದಿನಪತ್ರಿಕೆ ‘ವಿಜಯವಾಣಿ’ ಮತ್ತು ದಿಗ್ವಿಜಯ ನ್ಯೂಸ್ ವಾಹಿನಿಯ ಪ್ರತಿಷ್ಠಿತ ‘ವಿಜಯರತ್ನ-2022’ ಪ್ರಶಸ್ತಿ ಪ್ರದಾನ ಮಾಡಲಾಯಿತು.

    ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ನಾಡಿನಾದ್ಯಂತ ಶಿಕ್ಷಣ, ಉದ್ಯಮ, ಆರೋಗ್ಯ, ಪರಿಸರ ಕಾಳಜಿ, ಸಮಾಜ ಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 42 ಸಾಧಕರಿಗೆ ‘ವಿಜಯರತ್ನ-2022’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ. ಸುಧಾಕರ್, ಚಿತ್ರನಟ ರಮೇಶ್ ಅರವಿಂದ್, ನಟಿ ಶರ್ಮಿಳಾ ಮಾಂಡ್ರೆ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ವಿಆರ್‌ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ. ಆನಂದ ಸಂಕೇಶ್ವರ, ವಿಧಾನ ಪರಿಷತ್ ಸದಸ್ಯ ಬಿ.ಜಿ. ಪಾಟೀಲ್ ಮೊದಲಾದವರು ಉಪಸ್ಥಿತರಿದ್ದರು.

    ಶ್ರೀಹರಿ ಸಾಧನೆಯ ಹಾದಿ: ಶ್ರೀಹರಿ ಅವರ ವೃತ್ತಿ ರಿಯಲ್ ಎಸ್ಟೇಟ್. ಪ್ರವೃತ್ತಿ ಯೋಗ ಹಾಗೂ ಸಮಾಜಸೇವೆ. ಶ್ರೀಹರಿ ಯೋಗದಲ್ಲಿ ಮಾಡಿದ ಸಾಧನೆಯನ್ನು ಗುರುತಿಸಿ ಜನರೇ ಅವರಿಗೆ ‘ಯೋಗಾತ್ಮ’ ಬಿರುದು ನೀಡಿದ್ದಾರೆ. ಸಾಕಷ್ಟು ಜನರು ಪ್ರವೃತ್ತಿಗಾಗಿ ವೃತ್ತಿಯನ್ನು ತೊರೆಯುತ್ತಾರೆ. ಇನ್ನೂ ಕೆಲವರು ವೃತ್ತಿಗೋಸ್ಕರ ಪ್ರವೃತ್ತಿಯನ್ನು ಕೈಬಿಡುತ್ತಾರೆ. ಆದರೆ, ಶ್ರೀಹರಿ ಅವರು ವೃತ್ತಿ ಮತ್ತು ಪ್ರವೃತ್ತಿ ಎರಡರಲ್ಲೂ ಸಮತೊಲನ ಕಾಯ್ದುಕೊಂಡು ಎರಡಕ್ಕೂ ನ್ಯಾಯ ನೀಡಿ ಸಾಧನೆಯ ಶಿಖರ ಏರಿದ ಅಪರೂಪದ ವ್ಯಕ್ತಿ.

    ಬೆಂಗಳೂರಿನ ತ್ಯಾಗರಾಜನಗರ ನಿವಾಸಿ ದ್ವಾರಕನಾಥ್-ವಿಜಯಾ ದ್ವಾರಕನಾಥ್ ದಂಪತಿಯ ಪುತ್ರರಾಗಿ ಶ್ರೀಹರಿ 1966 ಸೆಪ್ಟೆಂಬರ್ 10ರಂದು ಜನಿಸಿದರು. ಬೆಂಗಳೂರು ಅವರ ಜನ್ಮಭೂಮಿಯಾದರೆ, ಮೈಸೂರು ಕರ್ಮಭೂಮಿ. ಮೈಸೂರಿನಲ್ಲಿ 2005ರಿಂದ ನೆಲೆಸಿದ್ದಾರೆ. ಶ್ರೀಹರಿ ಅವರು ಬಿಕಾಂ ವಿದ್ಯಾಭ್ಯಾಸದ ನಂತರ ಜ್ಯೋತಿಷ ಪ್ರವೀಣ, ಜ್ಯೋತಿಷ ವಿಶಾರದ ಸ್ನಾತಕೋತ್ತರ ಪದವಿ ಪಡೆದರು. ಸಂಗೀತದಲ್ಲಿ ಅಪಾರ ಆಸಕ್ತಿ ಹೊಂದಿರುವ ಇವರ ಹಿರಿಯ ಮಗ ಸೂರ್ಯ ಕುವೆಂಪುನಗರದಲ್ಲಿ ಜಿಎಸ್‌ಎಸ್ ಸ್ಕೂಲ್ ಆಫ್ ಮ್ಯೂಸಿಕ್ ನಡೆಸುತ್ತಿದ್ದಾರೆ. ಕಿರಿಯ ಮಗ ವಿಷ್ಣು ಜಿಎಸ್‌ಎಸ್ ವೆಬ್‌ಟೆಕ್ ಡಿಜಿಟಲ್ ಕಂಪನಿಯನ್ನು ಮುನ್ನಡೆಸುತ್ತಿದ್ದಾರೆ. ಪತ್ನಿ ಗೀತಾ ಅವರು ಶ್ರೀಹರಿ ಅವರಿಗೆ ಬೆನ್ನೆಲುಬಾಗಿ ನಿಂತು ಅವರ ವೃತ್ತಿಯಲ್ಲಿ ಸಾಥ್ ನೀಡುತ್ತಿದ್ದಾರೆ.

    ಶ್ರೀಹರಿ 1984 ರಿಂದ 1994ರವರೆಗೆ ಬೆಂಗಳೂರಿನಲ್ಲಿ ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್‌ನ ಉದ್ಯೋಗಿಯಾಗಿ ಸೇವೆ ಸಲ್ಲಿಸಿದರು. ನಂತರ ಬ್ಯಾಂಕ್ ಉದ್ಯೋಗ ತೊರೆದು ಮೈಸೂರಿಗೆ ಆಗಮಿಸಿದರು. ಪ್ರಸ್ತುತ ಜಿಎಸ್‌ಎಸ್ ಪ್ರಾಜೆಕ್ಟ್ ಕನ್ಸಲ್ಟೆಂಟ್ಸ್ ಪ್ರೈ.ಲಿ.ನ ಮ್ಯಾನೇಜಿಂಗ್ ಡೈರೆಕ್ಟರ್ ಹಾಗೂ ಜಿಎಸ್‌ಎಸ್ ಯೋಗಿಕ್ ರಿಸರ್ಚ್ ಫೌಂಡೇಷನ್‌ನ ಮ್ಯಾನೇಜಿಂಗ್ ಟ್ರಸ್ಟಿ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ನಿವೇಶನ ಕೋರಿ ಅರ್ಜಿ ಸಲ್ಲಿಸಲು 2004ರಲ್ಲಿ ಆಗಮಿಸಿದ ಶ್ರೀಹರಿ ಅವರು ಪ್ರಸ್ತುತ ಮೈಸೂರು ಸುತ್ತಮುತ್ತ 50ಕ್ಕೂ ಹೆಚ್ಚು ಬಡಾವಣೆಗಳನ್ನು ನಿರ್ಮಾಣ ಮಾಡಿ, ಪ್ರತಿಯೊಬ್ಬರಿಗೂ ಕೈಗೆಟುಕುವ ದರದಲ್ಲಿ ನಿವೇಶನ ನೀಡಿರುವುದು ಅವರ ಸಾಧನೆಯಾಗಿದೆ.

    ಗಿನ್ನೆಸ್ ದಾಖಲೆಯ ರೂವಾರಿ: ಪ್ರಧಾನಿ ನರೇಂದ್ರ ಮೋದಿ ಅವರ ಕೋರಿಕೆಯ ಮೇರೆಗೆ ವಿಶ್ವಸಂಸ್ಥೆ ಜೂನ್ 21 ಅಂತಾರಾಷ್ಟ್ರೀಯ ಯೋಗ ದಿನವೆಂದು 2014ರಲ್ಲಿ ಘೋಷಿಸಿತು. ಯೋಗ ದಿನವನ್ನು ಮೊದಲ ಬಾರಿಗೆ 2015 ಜೂನ್ 21ರಂದು ವಿಶ್ವದಾದ್ಯಂತ ಆಚರಿಸಲಾಯಿತು. 2015ರಿಂದ ಇಲ್ಲಿಯವರೆಗೆ ಮೈಸೂರು ನಗರ ಯೋಗ ದಿನಾಚರಣೆಯಲ್ಲಿ ಒಂದಲ್ಲ ಒಂದು ಸಾಧನೆ ತೋರುತ್ತ ರಾಷ್ಟ್ರದ ಗಮನ ಸೆಳೆಯುತ್ತಿದೆ. 2017ರಲ್ಲಿ ನಗರದ ರೇಸ್‌ಕೋರ್ಸ್ ಮೈದಾನದಲ್ಲಿ ಹಮ್ಮಿಕೊಂಡ ಯೋಗ ದಿನಾಚರಣೆಯಲ್ಲಿ ನಡೆದ ಸಾಮೂಹಿಕ ಯೋಗ ಪ್ರದರ್ಶನದಲ್ಲಿ 55,506 ಯೋಗಪಟುಗಳು ಯೋಗ ಪ್ರದರ್ಶನ ನೀಡಿದರು. ಈ ಸಾಧನೆ ಗಿನ್ನೆಸ್ ಪುಟಕ್ಕೆ ಸೇರ್ಪಡೆಗೊಂಡಿತು.

    ಮೈಸೂರಿನ ಈ ಸಾಧನೆಯ ಹಿಂದೆ ಹಲವಾರು ಜನರ ಪರಿಶ್ರಮ ಇದೆ. ಆ ಪರಿಶ್ರಮದಲ್ಲಿ ಶ್ರೀಹರಿ ಅವರ ಪಾಲು ದೊಡ್ಡದು. ಅರಮನೆ ಆವರಣದಲ್ಲಿ ಹಮ್ಮಿಕೊಂಡ 2022ರ ವಿಶ್ವ ಯೋಗ ದಿನಾಚರಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಂಡಿದ್ದರು. ಈ ಕಾರ್ಯಕ್ರಮದ ರೂಪುರೇಷೆ ಸಿದ್ಧಪಡಿಸಲು, ಕಾರ್ಯಕ್ರಮದಲ್ಲಿ ಯೋಗಪಟುಗಳು ಹಾಗೂ ಸಾರ್ವಜನಿಕರು ಪಾಲ್ಗೊಳುವಂತೆ ಮಾಡುವಲ್ಲಿ ಶ್ರೀಹರಿ ಅವರ ಪರಿಶ್ರಮವಿದೆ.

    ಸೇವಾ ಕಾರ್ಯಗಳಲ್ಲಿ ಸದಾ ಮುಂದೆ: ಶ್ರೀಹರಿ ಅವರು ಯೋಗದಲ್ಲಿ ಉನ್ನತ ಸಾಧನೆ ತೋರಿದ್ದಾರೆ. ರಿಯಲ್ ಎಸ್ಟೇಟ್‌ನಲ್ಲಿ ಸಾಕಷ್ಟು ಯಶಸ್ಸು ಗಳಿಸಿದ್ದಾರೆ. ಶ್ರೀಹರಿ ಅಂದರೆ ಇಷ್ಟು ಮಾತ್ರವಲ್ಲ, ಹಲವಾರು ಸಮಾಜ ಸೇವಾ ಚಟುವಟಿಕೆಗಳ ಮೂಲಕ ಸಮಾಜವನ್ನು ಕಟ್ಟುವ ಕಾರ್ಯದಲ್ಲಿ ಎಲೆಮರೆ ಕಾಯಿಯಂತೆ ದುಡಿಯುತ್ತಿದ್ದಾರೆ. ಮೈಸೂರು ಸ್ವಚ್ಛತೆಯಲ್ಲಿ ಉತ್ತಮ ಸಾಧನೆ ತೋರುವುದರ ಹಿಂದೆ ಶ್ರೀಹರಿ ಅವರ ಕೊಡುಗೆಯೂ ಇದೆ. ಸ್ವಚ್ಛತೆ ಕುರಿತು ಶ್ರೀಹರಿ ಜಾಗೃತಿ ಮೂಡಿಸಿದ್ದು ಮಾತ್ರವಲ್ಲದೆ, ಸ್ವಚ್ಛಭಾರತ್ ಅಭಿಯಾನದ ಸ್ವಚ್ಛ ಸರ್ವೇಕ್ಷಣ್ ಸಂದರ್ಭ ಹಲವಾರು ಜನರ ಮೂಲಕ ಸಿಟಿಜನ್ ಫೀಡ್‌ಬ್ಯಾಕ್ ಕೊಡಿಸಿದ್ದಾರೆ. ಪರಿಸರ ಸಂರಕ್ಷಣೆಗೂ ಅಮೂಲ್ಯ ಕೊಡುಗೆಗಳನ್ನು ನೀಡುತ್ತಿದ್ದು, ತಾವು ಅಭಿವೃದ್ಧಿಪಡಿಸಿದ ಬಡಾವಣೆಗಳಲ್ಲಿ ಸಸಿಗಳನ್ನು ನೆಟ್ಟು ಅವುಗಳ ಬೆಳವಣಿಗೆ ಬಗ್ಗೆ ಸದಾ ಗಮನಹರಿಸುತ್ತಾರೆ.

    ಯಾವುದೇ ನಗರದಲ್ಲಿ ಜನರು ನೆಮ್ಮದಿಯಾಗಿ ಬದುಕು ನಡೆಸಬೇಕಾದರೆ ಅಲ್ಲಿ ಅಪರಾಧ ಪ್ರಕರಣಗಳು ಕಡಿಮೆ ಇರಬೇಕು. ಅಪರಾಧ ಚಟುವಟಿಕೆ ಹೆಚ್ಚಾದಷ್ಟು ಜನರು ನೆಮ್ಮದಿ ಕಳೆದುಕೊಳ್ಳುತ್ತ ಹೋಗುತ್ತಾರೆ. ಹೀಗಾಗಿ, ಮೈಸೂರಿನಲ್ಲಿ ಅಪರಾಧ ಚಟುವಟಿಕೆ ತಡೆಗೆ ‘ಅಲರ್ಟ್ ಸಿಟಿಜನ್ ಟೀಂ’ ಮೂಲಕ ಶ್ರಮಿಸುತ್ತಿದ್ದಾರೆ. ಕೊಳಚೆ ಪ್ರದೇಶದ ಮಕ್ಕಳಿಗೆ ಅಕ್ಷರಾಭ್ಯಾಸ, ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ಉಚಿತ ಕೌನ್ಸೆಲಿಂಗ್ ಸೇರಿದಂತೆ ಹಲವು ಸೇವಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.

    ಸದಾ ಹಸನ್ಮುಖಿ, ಸ್ನೇಹಜೀವಿ: ಶ್ರೀಹರಿ ಅವರು ಸಾಧನೆಗಳಿಂದ ಮಾತ್ರವಲ್ಲ, ಮಾನವೀಯ ಗುಣಗಳಿಂದ ಜನರಿಗೆ ಬೇಗನೆ ಹತ್ತಿರವಾಗುತ್ತಾರೆ. ಸ್ನೇಹಜೀವಿಯಾದ ಅವರು ಸದಾ ಹಸನ್ಮುಖಿ. ಯಾರನ್ನೇ ಕಂಡರೂ ನಗುಮೊಗದೊಂದಿಗೆ ಮಾತನಾಡುತ್ತಾರೆ. ಸಾರ್ವಜನಿಕರೊಂದಿಗೆ ಮಾತ್ರವಲ್ಲ, ಕಚೇರಿಯಲ್ಲೂ ಅವರು ಹಸನ್ಮುಖಿ. ಈ ಗುಣಗಳ ಕಾರಣದಿಂದಲೇ ಅವರು ಉದ್ಯಮದಲ್ಲಿ ಉನ್ನತ ಸ್ಥಾನಕ್ಕೆ ಏರಿದ್ದಾರೆ.

    ನಾನು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಲು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಾಗೂ ನನ್ನ ತಂದೆ ದ್ವಾರಕನಾಥ್ ಪ್ರಮುಖ ಕಾರಣಕರ್ತರು. ಸಂಘ ಸ್ವಂತಕೋಸ್ಕರ ಏನಾದರೂ ಮಾಡಿಕೋ ಎಂದು ಎಂದಿಗೂ ಸಲಹೆ ನೀಡುವುದಿಲ್ಲ. ಸಮಾಜಕ್ಕೆ ಏನನ್ನಾದರೂ ಕೊಡುಗೆ ನೀಡು ಎಂದು ಸದಾ ನಮ್ಮನ್ನು ಎಚ್ಚರಿಸುತ್ತದೆ. ಇದೇ ಮಾತುಗಳನ್ನು ನನ್ನ ತಂದೆಯೂ ಹೇಳುತ್ತಿದ್ದರು. ಈ ಮಾತುಗಳೇ ನನಗೆ ಸಮಾಜ ಸೇವೆಯಲ್ಲಿ ತೊಡಗಲು ಪ್ರೇರಣೆ ಆದವು. ನನ್ನ ಸಮಾಜಸೇವಾ ಕಾರ್ಯಗಳನ್ನು ಗುರುತಿಸಿ ‘ವಿಜಯವಾಣಿ’ ಹಾಗೂ ದಿಗ್ವಿಜಯ ಪ್ರತಿಷ್ಠಿತ ‘ವಿಜಯರತ್ನ-2022’ ಪ್ರಶಸ್ತಿ ಪ್ರದಾನ ಮಾಡಿರುವುದು ಸಂತಸ ಉಂಟು ಮಾಡಿದೆ.

    ಶಿಕ್ಷಣಪ್ರೇಮಿ ಸೂರಿಬಾಬುಗೆ ವಿಜಯರತ್ನ ಗರಿ: ವಿಜಯವಾಣಿ, ದಿಗ್ವಿಜಯ ನ್ಯೂಸ್​ ವಾಹಿನಿಯ ಪ್ರತಿಷ್ಠಿತ ಗೌರವ ಪ್ರದಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts