More

    ನಗರದ ರಸ್ತೆಗಳನ್ನು ತಕ್ಷಣ ಸರಿಪಡಿಸಿ

    ವಿಜಯಪುರ: ಸಾರ್ವಜನಿಕರ ಹಿತದೃಷ್ಟಿಯಿಂದ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ನಗರದ ರಸ್ತೆಗಳನ್ನು ತಕ್ಷಣ ಸರಿಪಡಿಸುವಂತೆ ಜಿಲ್ಲಾಧಿಕಾರಿ ಪಿ. ಸುನೀಲಕುಮಾರ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

    ನಗರದ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ನಗರದಲ್ಲಿ ಹದಗೆಟ್ಟಿರುವ ರಸ್ತೆಗಳ ದುರಸ್ತಿ ಕಾರ್ಯವನ್ನು ತಕ್ಷಣ ಕೈಗೊಳ್ಳಬೇಕು. ಯಾವುದೇ ರೀತಿಯ ಅಪಘಾತ, ಸಾವು ಪ್ರಕರಣಗಳು ದಾಖಲಾದ ಸಂದರ್ಭದಲ್ಲಿ ಸಂಬಂಧಪಟ್ಟ ಪಾಲಿಕೆ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡುವುದಾಗಿ ಎಚ್ಚರಿಕೆ ನೀಡಿದರು.

    ಜಿಲ್ಲಾ ಮಟ್ಟದ ರಸ್ತೆ ಸುರಕ್ಷತೆಗೆ ಸಂಬಂಧಪಟ್ಟಂತೆ ಈಗಾಗಲೇ ಕರಡು ಕ್ರಿಯಾಯೋಜನೆ ಸಿದ್ಧಪಡಿಸಲಾಗಿದ್ದು, ಆಡಳಿತ ಮತ್ತು ಮುಂದಾಳತ್ವ, ಜಿಲ್ಲಾ ಕ್ರೀಯಾ ಯೋಜನೆ, ಜಿಲ್ಲೆಯಲ್ಲಿ ಆಗುತ್ತಿರುವ ರಸ್ತೆ ಅಪಘಾತಗಳ ವಿಶ್ಲೇಷಣೆ, ಮಾಹಿತಿ ಮತ್ತು ದತ್ತಾಂಶಗಳು, ರಸ್ತೆ ಸುರಕ್ಷತೆ ಬಗ್ಗೆ ಸಾರ್ವಜನಿಕರಲ್ಲಿ ಅರಿವು, ಪ್ರವರ್ಧನ ಹಾಗೂ ಇಂಜಿನಿಯರಿಂಗ್ ಚಟುವಟಿಕೆ, ಅಪಘಾತ ಮತ್ತು ತುರ್ತು ಚಿಕಿತ್ಸೆ, ಮೇಲ್ವಿಚಾರಣೆ, ಪರಿಶೀಲನೆ ಮತ್ತು ನಿರಂತರ ಮೌಲ್ಯಮಾಪನ ಹಾಗೂ ರಸ್ತೆ ಸುರಕ್ಷತೆ ಅರಿವು ಮತ್ತು ತರಬೇತಿ ಚಟುವಟಿಕೆಯನ್ನು ಪರಿಣಾಮಕಾರಿಯಾಗಿ ಹಮ್ಮಿಕೊಳ್ಳುವ ಬಗ್ಗೆ ಕ್ರಮ ಕೈಗೊಳ್ಳುವಂತೆ ತಿಳಿಸಿದರು.

    ಕ್ರಿಯಾಯೋಜನೆಗೆ ತಕ್ಕಂತೆ ರಸ್ತೆ ಸುಧಾರಣೆ ಮತ್ತು ಸಾಧನ ಸಲಕರಣೆಗಳ ಅಳವಡಿಕೆಗೆ ಪ್ರಾದೇಶಿಕ ಸಾರಿಗೆ ಕೇಂದ್ರ ಕಚೇರಿಯಿಂದ ಅನುದಾನ ಲಭ್ಯವಾಗಲಿದ್ದು, ಪೊಲೀಸ್ ಇಲಾಖೆ ಮೂಲಕ ರಸ್ತೆ ಸುರಕ್ಷತೆಗೆ ಸಂಬಂಧಪಟ್ಟಂತೆ ರಸ್ತೆ ಸಾಧನ ಸಲಕರಣೆಗಳ ಖರ್ಚು-ವೆಚ್ಚ ವರದಿ ಪಡೆಯಬೇಕು. ಮಹಾನಗರ ಪಾಲಿಕೆಯೊಂದಿಗೆ ಸಮನ್ವಯತೆ ಸಾಧಿಸಿ ಕಾರ್ಯನಿರ್ವಹಿಸುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಸೂಚಿಸಿದರು.

    ನಗರದ ಗೋದಾವರಿ ಹೋಟೆಲ್‌ನಿಂದ ಇಟಗಿ ಪೆಟ್ರೋಲ್ ಪಂಪ್, ಅಲ್ ಅಮೀನ್ ಮತ್ತು ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾಲಯವರೆಗಿನ ಚತುಷ್ಪಥ ರಸ್ತೆಯನ್ನು ಮಳೆಗಾಲ ಮುಗಿಯುವವರೆಗೆ ತಾತ್ಕಾಲಿಕವಾಗಿ ತಗ್ಗು-ಗುಂಡಿಗಳನ್ನು ಮುಚ್ಚಿ ಸರಿಪಡಿಸಬೇಕು. ರಸ್ತೆ ಮೇಲಿನ ಮಳೆ ನೀರು ಸರಾಗವಾಗಿ ಹರಿದು ಹೋಗಲು ಸೂಕ್ತ ಕ್ರಮ ಕೈಗೊಳ್ಳಬೇಕು. ಕನಕದಾಸ ವೃತ್ತದಿಂದ ಕಾಮತ್ ಹೋಟೆಲ್‌ವರೆಗಿನ ರಸ್ತೆ ದುರಸ್ತಿ ಕಾರ್ಯ ಕೈಗೊಳ್ಳಲು ಉದ್ದೇಶಿಸಲಾಗಿದೆ. ಈ ಸಭೆಗೆ ಗೈರಾದ ಕಲಬುರಗಿ ಹಾಗೂ ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಂದ ಸಮರ್ಪಕ ಉತ್ತರ ಪಡೆಯುವಂತೆ ಜಿಲ್ಲಾಧಿಕಾರಿಗಳು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.

    ನಗರದ ಐದು ವೃತ್ತಗಳಾದ ಇಟಗಿ ಪಂಪ್ ವೃತ್ತ, ವಲ್ಲಭಬಾಯಿ ವೃತ್ತ, ತಿಕೋಟಾ ವೃತ್ತ, ಸಿಂದಗಿ ವೈ ಜಂಕ್ಷನ್, ಬಬಲೇಶ್ವರ ವೈ ಜಂಕ್ಷನ್ ಸುಧಾರಣೆಗೆ ಲೋಕೋಪಯೋಗಿ ಇಲಾಖೆಯಿಂದ ಕ್ರಮಕೈಗೊಳ್ಳಲಾಗುತ್ತಿದೆ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿ ತಿಳಿಸಿದರು. ಈ ಕುರಿತು ಟ್ರಾಫಿಕ್ ಇನ್‌ಚಾರ್ಜ್ ಮತ್ತು ಮಹಾನಗರ ಪಾಲಿಕೆ ಆಯುಕ್ತರೊಂದಿಗೆ ಸಮನ್ವಯ ಸಾಧಿಸಿ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು. ಪ್ರಾದೇಶಿಕ ಸಾರಿಗೆ ಅಧಿಕಾರಿ ಆನಂದ ಪಾರ್ಥನಳ್ಳಿ ಸ್ವಾಗತಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts