More

    ಕರೊನಾ ಲೆಕ್ಕಕ್ಕಿಲ್ಲ-ರಂಗಿನಾಟ ನಿಲ್ಲಕ್ಕಿಲ್ಲ

    ವಿಜಯಪುರ: ಎಲ್ಲೆಡೆ ಕರೊನಾ ಕರಿನೆರಳು ಆವರಿಸಿದ್ದರೂ ಬಿಸಿಲೂರಿನ ಜನ ಮಾತ್ರ ಅದನ್ನು ಲೆಕ್ಕಿಸದೇ ರಂಗಿನೋಕುಳಿಗೆ ಸಜ್ಜಾಗಿದ್ದಾರೆ !
    ಪ್ರಪಂಚದಾದ್ಯಂತ ಭೀತಿ ಸೃಷ್ಟಿಸಿರುವ ಕರೊನಾ ಕರಿನೆರಳು ಬಿಸಿಲೂರಿನ ಮೇಲೆ ಬೀಳಲಿದ್ದು, ಈ ಬಾರಿ ಹೋಳಿ ಮಂಕಾಗಲಿದೆ ಎಂಬ ಲೆಕ್ಕಾಚಾರ ಸುಳ್ಳಾಗಿದೆ. ಭೀಕರ ಬರ ಹಾಗೂ ಕಡು ಬಿಸಿಲು ಲೆಕ್ಕಿಸದ ಜನತೆ ಕರೊನಾ ವೈರಸ್ ಕೂಡ ಲೆಕ್ಕಕ್ಕಿಲ್ಲವೆಂಬಂತೆ ರಂಗಿನೋಕುಳಿಗೆ ಉತ್ಸುಕರಾಗಿದ್ದಾರೆ.
    ತಿಂಗಳ ಮುಂಚೆಯೇ ಹಲಗೆ ಸದ್ದು ಮೊಳಗಿಸಿರುವ ನಗರ ವಾಸಿಗಳು ಸೋಮವಾರ ಸಂಜೆ ಕಾಮದಹನ ಆಚರಣೆ ಮೂಲಕ ರಂಗಿನೋಕುಳಿಗೆ ಚಾಲನೆ ನೀಡಿದರು. ಎಂದಿನಂತೆ ಕುರುಳು, ಕಟ್ಟಿಗೆ ಪೇರಿಸಿ ಪೂಜೆ ನೇರವೇರಿಸಿ ಹಲಗೆ ಬಾರಿಸಿ ಹೋಳಿ ಹಬ್ಬಕ್ಕೆ ಹಸಿರು ನಿಶಾನೆ ತೋರಿದರು.

    ಕಾಮದಹನ ಅರ್ಥಪೂರ್ಣ

    ಕೆಲವೆಡೆ ಸೋಮವಾರವೇ ಕಾಮದಹನ ನೆರವೇರಿಸಿದರೆ ಇನ್ನೂ ಕೆಲವಡೆ ಮಂಗಳವಾರ ದಿನ ನಿಗದಿಗೊಳಿಸಿದ್ದು ಕಂಡು ಬಂತು. ನಗರದಲ್ಲಿ ಸೋಮವಾರ ಸಂಜೆ ಅರ್ಥಪೂರ್ಣವಾಗಿ ಕಾಮದಹನ ಆಚರಿಸಲಾಯಿತು. ಸಂಪ್ರದಾಯವಾದಿಗಳು ಮನೆ ಮುಂದೆ ರಂಗವಲ್ಲಿ ಬಿಡಿಸಿ ಕುರುಳು ಕಟ್ಟಿಗೆ ಇರಿಸಿ ಹೂವಿನ ಅಲಂಕಾರ ಮಾಡಿ ಪೂಜೆ ನೆರವೇರಿಸಿ ಹಬ್ಬ ಪೂರ್ಣಗೊಳಿಸಿದರು. ಕೆಲವರು ಸಮೀಪದ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿ ಹುಣ್ಣಿಮೆ ಆಚರಿಸಿದರು. ಪ್ರಮುಖ ಬಡಾವಣೆಗಳಲ್ಲಿ ಯುವಕರ ತಂಡಗಳು ದೊಡ್ಡ ಪ್ರಮಾಣದಲ್ಲಿ ಕಟ್ಟಿಗೆಗಳನ್ನು ಇಟ್ಟು ಸಾಮೂಹಿಕವಾಗಿ ಕಾಮದಹನ ಮಾಡಿದರು. ತಡರಾತ್ರಿವರೆಗೆ ಹಲಗೆ ಸದ್ದು ಕೇಳಿ ಬರುತ್ತಿತ್ತು.

    ಹಲಗೆ-ಬಣ್ಣ ಮಾರಾಟ ಕುಸಿತ

    ನಗರದ ಮಹಾತ್ಮ ಗಾಂಧಿ ವೃತ್ತದ ಬಳಿಯ ಕೆಸಿ ಮಾರುಕಟ್ಟೆಯ ರಸ್ತೆ, ಸಿದ್ಧೇಶ್ವರ ದೇವಸ್ಥಾನದ ರಸ್ತೆ, ಎಲ್‌ಬಿಎಸ್ ಮಾರುಕಟ್ಟೆ ಒಳಭಾಗದಲ್ಲಿ ಹಲಗೆ ಮಾರಾಟ ಭರ್ಜರಿಯಾಗಿತ್ತು. ವಾರದಿಂದಲೇ ತರಹೇವಾರಿ ಹಲಗೆಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು ಯುವಕರು ಹುರುಪಿನಿಂದಲೇ ಖರೀದಿಸಿ ನಾದ ಹೊಮ್ಮಿಸಿದರು. ಆದರೆ, ಈ ಬಾರಿ ಬಣ್ಣದ ಮಾರಾಟ ಮಾತ್ರ ಕೊಂಚ ತಗ್ಗಿದಂತೆ ಕಂಡು ಬಂತು. ಪಿಚಕಾರಿ, ಬಣ್ಣದ ಆಟಿಕೆಗಳ ಅಬ್ಬರ ಅಷ್ಟಾಗಿ ಕಂಡು ಬರಲಿಲ್ಲ. ನಗದರ ಕೆಸಿ ಮಾರುಕಟ್ಟೆ, ಎಲ್‌ಬಿಎಸ್ ಮಾರುಕಟ್ಟೆ ಮತ್ತಿತರ ಭಾಗಗಳಲ್ಲಿ ಹಣ್ಣು-ಹಂಪಲು, ಹೂ ಮತ್ತು ತಳಿರು ತೋರಣಗಳ ಮಾರಾಟ ಸಾಮಾನ್ಯವೆಂಬಂತಿತ್ತು.

    ಏನೇ ಆಗಲಿ ಬಣ್ಣದ ಆಚರಣೆ ನಿಲ್ಲಿಸಲ್ಲ. ಕೊಂಚ ಅಬ್ಬರ ಕಡಿಮೆಯಾಗಬಹುದಾದರೂ ಅರ್ಥಪೂರ್ಣವಾಗಿಯೇ ಹಬ್ಬ ಆಚರಿಸಲಾಗುತ್ತಿದೆ. ಭಾರತೀಯ ಸಂಸ್ಕೃತಿ ಸಂಪ್ರದಾಯದಂತೆ ಸೌಹಾರ್ದಯುತವಾಗಿ ಹಬ್ಬ ಆಚರಿಸಲಾಗುತ್ತಿದೆ.
    ಸಿ.ಬಿ. ಹಿರೇಮಠ, ಜಲನಗರ ನಿವಾಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts