More

    ವಿನೂತನ ಶಿಕ್ಷಣ ಹಬ್ಬಕ್ಕೆ ವೈಭವದ ತೆರೆ

    ವಿಜಯಪುರ: ಮೂರು ದಿನಗಳ ಹಬ್ಬದಲ್ಲಿ ಪಡೆದ ಮಾಹಿತಿ ಅಪಾರ, ಭವಿಷ್ಯ ರೂಪಿಸಿಕೊಳ್ಳಲು ಇಷ್ಟೊಂದು ಆಯ್ಕೆಗಳಿವೆ ಎಂದು ತಿಳಿಸಿದ ಮಾಧ್ಯಮ ತಂಡ, ಅದರಡಿ ಮಾಹಿತಿ ನೀಡಿದ ಶಿಕ್ಷಣ ಸಂಸ್ಥೆಗಳಿಗೆ ನಾವೆಲ್ಲ ಆಭಾರಿ..

    ಹೊಸ ವಿಷಯಗಳನ್ನು, ಶೈಕ್ಷಣಿಕ ಭವಿಷ್ಯಕ್ಕೆ ಬೇಕಾಗುವ ಮಾಹಿತಿಯನ್ನು ಪಡೆಯಲು ಎಜುಕೇಷನ್ ಎಕ್ಸ್‌ಪೋಗೆ ಬಂದಿದ್ದ ಸಾವಿರಾರು ವಿದ್ಯಾರ್ಥಿಗಳ ಹೃದಯಾಳದ ಮಾತುಗಳಿವು.

    ವಿಜಯವಾಣಿ ಹಾಗೂ ದಿಗ್ವಿಜಯ ವಾಹಿನಿ ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆ ಸಹಯೋಗದಲ್ಲಿ ಹಮ್ಮಿಕೊಂಡ ಎಜುಕೇಷನ್ ಎಕ್ಸ್‌ಪೋ-2022ಗೆ ಭಾನುವಾರ ಸಂಜೆ ಅಪ್ಪು ನಮನ ಕಾರ್ಯಕ್ರಮದೊಂದಿಗೆ ತೆರೆ ಬೀಳುತ್ತಿದ್ದಂತೆ ಚಪ್ಪಾಳೆಗಳ ಸುರಿಮಳೆಯೊಂದಿಗೆ ವಿದ್ಯಾರ್ಥಿಗಳು ಧನ್ಯವಾದ ಸಮರ್ಪಿಸಿದರು.

    ಎರಡು ದಿನಗಳಿಗಿಂತ ಎಕ್ಸ್‌ಪೋದ ಕೊನೆಯ ದಿನವಾದ ಭಾನುವಾರ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು, ಪಾಲಕರು ಆಗಮಿಸಿ ಎಲ್ಲ ಕಾರ್ಯಕ್ರಮಗಳನ್ನೂ ಆಸಕ್ತಿಯಿಂದ ವೀಕ್ಷಿಸಿ ಮಾಹಿತಿ ಪಡೆದರು. ಬೆಳಗ್ಗೆ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತ ಕಾರ್ಯಾಗಾರ ಆರಂಭವಾಗುತ್ತಿದ್ದಂತೆ ಜಿಲ್ಲೆಯ ಬೇರೆ ಬೇರೆ ಭಾಗಗಳಿಂದ ಆಗಮಿಸಿದ್ದ ಜನ ವೇದಿಕೆ ಮುಂಭಾಗದಲ್ಲಿ ಕಿಕ್ಕಿರಿದು ತುಂಬಿದರು. ಅನೇಕ ವಿದ್ಯಾರ್ಥಿನಿಯರು ವೇದಿಕೆ ಮುಂಭಾಗದಲ್ಲಿ ನೆಲಕ್ಕೆ ಕುಳಿತು ಉಪನ್ಯಾಸ ಆಲಿಸಿದರೆ, ಯುವಕರು ವೇದಿಕೆ ಹಿಂಭಾಗದಲ್ಲಿ ತುದಿಗಾಲ ಮೇಲೆ ನಿಂತು ಕಾರ್ಯಕ್ರಮ ವೀಕ್ಷಿಸಿದರು. ನಂತರ ನಡೆದ ಸಂವಾದದಲ್ಲಿ ಶಿಕ್ಷಕರು ಭಾಗವಹಿಸಿ ಎನ್‌ಇಪಿ ಸಾಧಕ ಬಾಧಕಗಳ ಬಗ್ಗೆ ಪ್ರಶ್ನಿಸಿ ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ಪಡೆದರು.

    ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ಬಗ್ಗೆ ಒಂದೂವರೆ ಗಂಟೆಗೂ ಹೆಚ್ಚು ಸಮಯ ನಡೆದ ಎರಡನೇ ಕಾರ್ಯಾಗಾರಕ್ಕೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಸಂಜೆ ಅಪ್ಪು ನಮನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ಮೇಳಕ್ಕೆ ವೈಭವದ ತೆರೆ ಎಳೆಯಲಾಯಿತು. ಮನೆಗೆ ಮರಳುತ್ತಿದ್ದ ವಿದ್ಯಾರ್ಥಿಗಳ ಮುಖದಲ್ಲಿ ಇನ್ನೊಂದೆರಡು ದಿನ ಕಾರ್ಯಕ್ರಮ ನಡೆಯಬೇಕಿತ್ತು ಎಂಬ ಭಾವ ಕಂಡುಬಂತು.

    ಮೂರು ದಿನಗಳವರೆಗೆ ನಡೆದ ಕಾರ್ಯಕ್ರಮದಲ್ಲಿ ಅವಳಿ ಜಿಲ್ಲೆಯ ಬೇರೆ ಬೇರೆ ಭಾಗಗಳ 5 ಸಾವಿರಕ್ಕೂ ಹೆಚ್ಚು ಜನ ಭಾಗವಹಿಸಿ ಮಾಹಿತಿ ಪಡೆದು ಎಕ್ಸ್‌ಪೋ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು. ಉತ್ತಮ ಮಾಹಿತಿ, ಅಪರೂಪದ ಶಿಕ್ಷಣ ಸಂಸ್ಥೆಗಳ ಪರಿಚಯ, ಪ್ರತಿಭೆಗಳಿಗೆ ಒದಗಿಸಿದ ವೇದಿಕೆ, ಆರೋಗ್ಯ ಶಿಬಿರ, ಊಟದ ವ್ಯವಸ್ಥೆ ಎಲ್ಲವೂ ಅಚ್ಚುಕಟ್ಟಾಗಿತ್ತು ಎಂದು ಸಂತಸ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts