More

    ವೀಘ್ನೇಶ್ವರನಿಗೂ ಕರೊನಾ ವಿಘ್ನ !

    ಹೀರಾನಾಯ್ಕ ಟಿ. ವಿಜಯಪುರ

    ಮೋದಕ ಪ್ರಿಯ, ವಿಘ್ನ ನಿವಾರಕನಿಗೆ ಈ ಬಾರಿ ವಿಘ್ನ ಉಂಟಾಗಿದೆ. ದೇಶಾದ್ಯಂತ ಕರೊನಾ ಮಹಾಮಾರಿ ಆತಂಕ ಸೃಷ್ಟಿಸುತ್ತಿದ್ದು, ಹಬ್ಬ ಹರಿದಿನಗಳ ಆಚರಣೆ, ಸಂಭ್ರಮ, ಸಡಗರಕ್ಕೆ ಎಳ್ಳುನೀರು ಬಿಟ್ಟಂತಾಗಿದೆ. ಮುಂದಿನ ತಿಂಗಳು ಗಣೇಶ ಚತುರ್ಥಿ ಇದೆ. ಆದರೆ ಬಹುತೇಕ ಕಡೆ ಕಚ್ಚಾವಸ್ತುಗಳ ಲಭ್ಯತೆ ಇಲ್ಲದೆ ಗಣೇಶನ ಮೂರ್ತಿ ತಯಾರಿಸಲು ಕಲಾವಿದರು ಹಿಂದೇಟು ಹಾಕುವಂತಾಗಿದೆ.

    ಕಚ್ಚಾವಸ್ತುಗಳ ಕೊರತೆ

    ಪ್ರತಿವರ್ಷವೂ ಮಹಾರಾಷ್ಟ್ರ ಭಾಗದ ಸಾಂಗಲಿ, ಮಿರಜ್, ಕೊಲ್ಹಾಪುರ, ಸೊಲ್ಲಾಪುರದಿಂದ ಮಣ್ಣು, ಬಣ್ಣ, ನಾರು ಹೀಗೆ ಇನ್ನಿತರ ಸಾಮಗ್ರಿಗಳನ್ನು ತಂದು ಗಣೇಶ ಮೂರ್ತಿ ತಯಾರಿಸಲಾಗುತ್ತದೆ. ಆದರೆ ಈ ಬಾರಿ ಮಹಾರಾಷ್ಟ್ರದಲ್ಲಿ ಲಾಕ್‌ಡೌನ್ ವಿಸ್ತರಿಸಿರುವುದರಿಂದ ಕಚ್ಚಾವಸ್ತುಗಳ ಆಮದು ಮಾಡಿಕೊಳ್ಳಲು ಸಮಸ್ಯೆ ಉಂಟಾಗಿದೆ. ಇದರಿಂದಾಗಿ ನಿಗದಿತ ಪ್ರಮಾಣದಲ್ಲಿ ಗಣೇಶ ಮೂರ್ತಿಗಳನ್ನು ತಯಾರಿಸಲು ಸಾಧ್ಯವಾಗಿಲ್ಲ. ಇನ್ನು ಮಣ್ಣಿನ ಗಣೇಶ ಮೂರ್ತಿಗಳನ್ನು ಗೋಕಾಕ ಸಮೀಪದ ಕೊಣ್ಣೂರಿನಿಂದ ಆಮದು ಮಾಡಿಕೊಳ್ಳಲಾಗುತ್ತದೆ. ಅಲ್ಲಿಯೂ ಕಚ್ಚಾವಸ್ತುಗಳ ಸಮಸ್ಯೆ ಎದುರಾಗಿದೆ ಎಂದು ಗಣೇಶ ಮೂರ್ತಿ ತಯಾರಕರು ಹೇಳುತ್ತಾರೆ.

    ಖರೀದಿ ದರದಲ್ಲಿ ಹೆಚ್ಚಳ

    ಪ್ರತಿ ವರ್ಷಕ್ಕಿಂತ ಈ ವರ್ಷ ಗಣಪತಿ ಮೂರ್ತಿಗಳ ಖರೀದಿ ದರ ಹೆಚ್ಚಳಗೊಳ್ಳುವ ಸಾಧ್ಯತೆ ಹೆಚ್ಚಿದೆ. ಕಚ್ಚಾವಸ್ತುಗಳು ಸಿಗದೆ ಇರುವುದರಿಂದ ಮೂರ್ತಿ ತಯಾರಿಸುವವರ ಸಂಖ್ಯೆ ಕಡಿಮೆಯಾಗಿದ್ದು, ಬೇಡಿಕೆ ಹೆಚ್ಚಾಗುವ ಸಾಧ್ಯತೆ ಇದೆ. ಕಳೆದ ವರ್ಷ 12, 14 ಇಂಚಿನ ಗಣೇಶ ಮೂರ್ತಿಗಳಿಗೆ 100 ರೂ. ದರ ನಿಗದಿಪಡಿಸಲಾಗಿತ್ತು. ಈ ವರ್ಷ 150ರಿಂದ 200 ರೂ. ವರೆಗೆ ದರ ನಿಗದಿ ಪಡಿಸಲಾಗಿದೆ. ಎರಡು ಅಡಿಗಿಂತ ಹೆಚ್ಚಿನ ಗಾತ್ರ, ಬೃಹತ್ ಗಣಪತಿ ಮೂರ್ತಿಗಳ ಪ್ರತಿಷ್ಠಾಪನೆಗೆ ಅವಕಾಶ ಇಲ್ಲ. ಹೀಗಾಗಿ ಗಣಪತಿ ಮೂರ್ತಿ ತಯಾರಿಕೆ ಕೂಡ ಕಡಿಮೆ ಆಗಿದೆ.

    ಸಾರ್ವಜನಿಕ ಪ್ರತಿಷ್ಠಾಪನೆಗೆ ಬ್ರೇಕ್ ?

    ವಿಜಯಪುರ ಜಿಲ್ಲೆಯಲ್ಲಿ ಪ್ರತಿ ವರ್ಷ ಲಕ್ಷಕ್ಕೂ ಅಧಿಕ ಗಣೇಶ ಮೂರ್ತಿಗಳನ್ನು ಮನೆಗಳಲ್ಲಿ ಪ್ರತಿಷ್ಠಾಪನೆ ಮಾಡುತ್ತಾರೆ. ಅಲ್ಲದೆ 5 ಸಾವಿರಕ್ಕೂ ಅಧಿಕ ಸಾರ್ವಜನಿಕ ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತ್ತದೆ. ಅದಕ್ಕೆ ಈ ಬಾರಿ ಬ್ರೇಕ್ ಬೀಳುವ ಸಾಧ್ಯತೆಗಳು ಹೆಚ್ಚಿದೆ. ಜಿಲ್ಲೆಯಲ್ಲಿ ದಿನೇ ದಿನೆ ಕರೊನಾತಂಕ ಹೆಚ್ಚುತ್ತಿದ್ದು, ಸೋಂಕು ನಿಯಂತ್ರಣಕ್ಕೆ ಜಿಲ್ಲಾಡಳಿತ ಅನೇಕ ಕ್ರಮಗಳನ್ನು ಕೈಗೊಳ್ಳುತ್ತಿದೆ. ಆದರೂ ನಿಯಂತ್ರಣ ಆಗುತ್ತಿಲ್ಲ. ಹಾಗಾಗಿ ಸಾರ್ವಜನಿಕವಾಗಿ ಪ್ರತಿಷ್ಠಾಪನೆ, ಸಂಭ್ರಮ, ಸಡಗರದ ಮೆರವಣಿಗೆ ಕೈಗೊಳ್ಳುವುದಕ್ಕೆ ನಿರ್ಬಂಧ ಹೇರುವ ಸಾಧ್ಯತೆ ಹೆಚ್ಚಿದೆ. ಸದ್ಯಕ್ಕೆ ಜಿಲ್ಲಾಡಳಿತ ಈ ಬಗ್ಗೆ ಯಾವುದೇ ನಿರ್ಧಾರಗಳನ್ನು ಕೈಗೊಂಡಿಲ್ಲ. ಮುಂದಿನ ದಿನಗಳಲ್ಲಿ ಮಹಾಮಂಡಳಗಳ ಮುಖಂಡರೊಂದಿಗೆ ಸಭೆ ಕರೆದು ಚರ್ಚಿಸುವ ಸಾಧ್ಯತೆ ಇದೆ. ಪ್ರತಿ ವರ್ಷ ಸಾರ್ವಜನಿಕ ಗಣಪತಿ ಮೂರ್ತಿಗಳಿಗೆ ಹೆಚ್ಚಿನ ಬೇಡಿಕೆ ಇರುತ್ತಿತ್ತು. 5ರಿಂದ 15 ಸಾವಿರ ರೂ. ವರೆಗೆ ಸಾರ್ವಜನಿಕ ಗಣಪತಿ ಮೂರ್ತಿಗಳ ಮಾರಾಟ ಮಾಡಲಾಗುತ್ತಿತ್ತು. ಈ ಬಾರಿ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನುತ್ತಾರೆ ಮೂರ್ತಿ ತಯಾರಕರಾದ ನಾರಾಯಣ ಕಾಳೆ, ಉತ್ತಮ್ ಗಡೇಕರ, ಸಚಿನ್ ಕಾಳೆ.

    ಕಳೆದ 30 ವರ್ಷಗಳಿಂದ ಗಣೇಶ ಮೂರ್ತಿಗಳ ತಯಾರಿಕೆ ಮಾಡುತ್ತಾ ಬಂದಿದ್ದೇನೆ. ಈ ಬಾರಿ ಕರೊನಾದಿಂದಾಗಿ ಕಚ್ಚಾವಸ್ತುಗಳು ಸಿಗುತ್ತಿಲ್ಲ. ಆದರೂ ವೃತ್ತಿಯನ್ನು ಕೈ ಬಿಡಬಾರದೆಂದು ಸೊಲ್ಲಾಪುರದಿಂದ ಮಣ್ಣು, ಇನ್ನಿತರ ಸಾಮಗ್ರಿ ತಂದು 100 ಗಣೇಶ ಮೂರ್ತಿಗಳನ್ನು ತಯಾರಿಸಿದ್ದೇನೆ.
    ಉಮೇಶ ಗಡೇಕರ, ಗಣೇಶ ಮೂರ್ತಿ ತಯಾರಕ
    ವಿಜಯಪುರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts