More

    ಪತ್ರಿಕೋದ್ಯಮದಲ್ಲಿ ವೈಭವೀಕರಣ ಸಲ್ಲ

    ವಿಜಯಪುರ: ಪತ್ರಿಕೋದ್ಯಮದಲ್ಲಿ ಜನರನ್ನು ಆಕರ್ಷಿಸುವ ಹಾಗೂ ವೈಭವೀಕರಿಸುವ ಭಾಷೆಯನ್ನು ಬಳಸಿದರೆ ಪತ್ರಿಕೆ ಪ್ರಸಿದ್ಧಿ ಪಡೆಯಬಹುದು ಎಂಬುವುದು ತಪ್ಪು ಕಲ್ಪನೆ. ಸರಳ, ನೇರ ಭಾಷೆ ಇಂದಿನ ಮಾಧ್ಯಮಗಳಿಗೆ ಅವಶ್ಯಕ ಎಂದು ಕೆನಡಾದ ಇಂಡಿಯಾ ಆಬ್ಸ್‌ರ್ವರ್ ಕಮ್ಯುನಿಟಿ ಪತ್ರಿಕೆಯ ಸಂಪಾದಕ ಬಿ.ವಿ.ನಾಗರಾಜ ಆಶಯ ವ್ಯಕ್ತಪಡಿಸಿದರು.
    ಇಲ್ಲಿನ ಹೊರವಲಯ ತೊರವಿಯಲ್ಲಿರುವ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಅವರ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮಾಧ್ಯಮ ಭಾಷಾ ಕೌಶಲಗಳು ಕುರಿತ ಕಾರ್ಯಾಗಾರದ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಅವರು ಮಾತನಾಡಿದರು.
    ಭಾಷೆಗೆ ಉತ್ತಮವಾದ ಪರಂಪರೆ ಮತ್ತು ಸಂಸ್ಕೃತಿ ಇದೆ. ಅದನ್ನು ಬೆಳಸಬೇಕೆ ಹೊರತು ಕೊಲೆ ಮಾಡಬಾರದು. ಭಾಷೆಯು ನಮ್ಮ ಸಂಸ್ಕೃತಿಯನ್ನು ಬಿಂಬಿಸುತ್ತದೆ. ನಾವಾಡುವ ಮಾತು ಇನ್ನೊಬ್ಬರಿಗೆ ಮತ್ತು ನಮ್ಮ ವ್ಯವಸ್ಥೆಗೆ ನೋವಾಗುವಂತಿರಬಾರದು ಎಂದು ವಿದ್ಯಾರ್ಥಿನಿಯರಿಗೆ ಸಲಹೆ ನೀಡಿದರು.
    ಪ್ರಸ್ತುತ ದಿನಮಾನಗಳಲ್ಲಿ ಪೈಪೋಟಿ ಮೂಲಕ ಮಾಧ್ಯಮ ಲೋಕದಲ್ಲಿ ಅತ್ಯಂತ ಕೆಟ್ಟ ಶಬ್ದಗಳನ್ನು ಬಳಸುತ್ತಿರುವುದರಿಂದ ಭಾಷಾ ಶುದ್ಧತೆ ಕಡಿಮೆಯಾಗುತ್ತಿದೆ. ಮುಖ್ಯಮಂತ್ರಿಗಳನ್ನು ಏಕವಚನದಲ್ಲಿ ಬರೆಯುವ ಪದ್ಧತಿ ಬೆಳೆಯುತ್ತಿದೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು.
    ಇಂದಿನ ಮಕ್ಕಳು ಇಂಗ್ಲಿಷ್ ಭಾಷೆಗೆ ಹೆಚ್ಚು ಆದ್ಯತೆ ಕೊಡುತ್ತಿರುವುದರಿಂದ ಮಾತೃಭಾಷೆಯನ್ನು ಮರೆಯುತ್ತಿದ್ದಾರೆ. ಆದ್ದರಿಂದ ಪಾಲಕರು ಮಕ್ಕಳಿಗೆ ಮೊದಲು ಮಾತೃಭಾಷೆಯನ್ನು ಕಲಿಸುವ ಅವಶ್ಯಕತೆ ಇದೆ. ಭಾವಿ ಪತ್ರಕರ್ತರು ಮಾಧ್ಯಮ ಭಾಷೆಯ ಕೌಶಲವನ್ನು ಕರಗತ ಮಾಡಿಕೊಂಡರೆ ಮಾಧ್ಯಮದ ವಿಭಿನ್ನ ರಂಗಗಳಲ್ಲೂ ಕಾರ್ಯನಿರ್ವಹಿಸಲು ಸಾಧ್ಯ ಎಂದರು.
    ಮೈಸೂರು ಮಹಾಜನ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ರವಿ ಅಯ್ಯರ್ ಮಾತನಾಡಿದರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಪ್ರೊ.ಓಂಕಾರ ಕಾಕಡೆ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಪ್ರಾಧ್ಯಾಪಕಿ ಡಾ. ತಹಮೀನಾ ಕೋಲಾರ, ಸಹಾಯಕ ಪ್ರಾಧ್ಯಾಪಕ ಸಂದೀಪ ನಾಯಕ ಜತೆಗಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts