More

    ಬದುಕಿದ್ದಾಗಲೇ ಸತ್ತರೆಂದು ಠರಾವು ಮಂಡನೆ..!

    ಪರಶುರಾಮ ಭಾಸಗಿ
    ವಿಜಯಪುರ: ಆಸ್ತಿಗಾಗಿ ಬದುಕಿದ್ದಾಗಲೇ ವೃದ್ಧೆಯನ್ನು ಸಾಯಿಸಿತೇ ಗ್ರಾ.ಪಂ. ಆಡಳಿತ..?
    ಹೌದು. ವೃದ್ಧೆಯೋರ್ವರ ನೋಂದಾಯಿತ ಮರಣ ಪ್ರಮಾಣ ಪತ್ರ ಹಾಗೂ ಗ್ರಾ.ಪಂ. ಠರಾವು ಪ್ರತಿ ಗಮನಿಸಲಾಗಿ ಮರಣ ದಿನಾಂಕದಲ್ಲಿ ಸಾಕಷ್ಟು ವ್ಯತ್ಯಾಸ ಕಂಡು ಬಂದಿದ್ದು ಇಂಥದ್ದೊಂದು ಅನುಮಾನ ಹುಟ್ಟುಹಾಕಿದೆ.

    ಅಂದ ಹಾಗೆ ಇದು ತಿಕೋಟಾ ಗ್ರಾ.ಪಂ. ವ್ಯಾಪ್ತಿಯಲ್ಲಿ ನಡೆದ ಘಟನೆ. ಸ್ಥಳೀಯ ನಿವಾಸಿ ಈರಸಂಗವ್ವ ಚನ್ನಪ್ಪ ಇಂಚಗೇರಿ ಎಂಬುವರ ಮರಣ ದಿನಾಂಕದಲ್ಲಿ ವ್ಯತ್ಯಾಸ ಕಂಡು ಬಂದಿದ್ದು ಮೇಲ್ನೋಟಕ್ಕೆ ಖೊಟ್ಟಿ ಠರಾವು ಮಂಡಿಸಲಾಗಿದೆ ಎಂದು ಮೇಲಾಧಿಕಾರಿಗಳೂ ಸ್ಪಷ್ಟ ಪಡಿಸಿದ್ದಾರೆ. ಆದರೆ, ತಪ್ಪಿತಸ್ಥರು ಯಾರು? ಅವರ ಮೇಲೆ ಏನು ಕ್ರಮ ಕೈಗೊಳ್ಳಲಾಗುತ್ತಿದೆ? ಎಂಬುದಕ್ಕೆ ಅಧಿಕಾರಿಗಳ ಬಳಿ ಸ್ಪಷ್ಟ ಉತ್ತರವಿಲ್ಲ.

    ಪ್ರಕರಣದ ವಿವರ
    ತಿಕೋಟಾದ ನಿವಾಸಿ ಈರಸಂಗವ್ವ ಚನ್ನಪ್ಪ ಇಂಚಗೇರಿ ಇವರು ಜು. 6, 2011ರಂದು ಮೃತಪಟ್ಟಿದ್ದಾಗಿ ಮರಣ ಪ್ರಮಾಣ ಪತ್ರ ದೃಢೀಕರಿಸುತ್ತದೆ. ಅಲ್ಲದೇ, ಜು. 8, 2011ರಂದು ನೋಂದಣಿ ಸಹ ಮಾಡಿಸಲಾಗಿದೆ. ಆದರೆ, ಇದಕ್ಕೂ ಮುನ್ನವೇ ಅಂದರೆ ಏ.30, 2011ರಂದು ಗ್ರಾಪಂ ಸಾಮಾನ್ಯ ಸಭೆಯಲ್ಲಿ ಈರಸಂಗವ್ವ ಮೃತಳಾಗಿದ್ದು ಅವಳ ಆಸ್ತಿಯನ್ನು ಅರ್ಜಿದಾರರಾದ ಮಂಗಲಾ ಶಿವಪ್ಪ ಇಂಚಗೇರಿ ಇವರ ಹೆಸರಿಗೆ ಮಾಡಿ ಠರಾವು ಮಂಡಿಸಿರುವ ದಾಖಲೆ ‘ವಿಜಯವಾಣಿ’ಗೆ ಲಭ್ಯವಾಗಿವೆ.

    ಸದರಿ ಠರಾವು ಗಮನಿಸಲಾಗಿ ಕೈಬರಹದಲ್ಲಿ ಸಾಕಷ್ಟು ವ್ಯತ್ಯಾಸ ಕಂಡು ಬಂದಿದೆ. ಮಾತ್ರವಲ್ಲ, ಬರಹದ ಕೊನೆಯಲ್ಲಿ ‘ಪಿಟಿಒ’ ಎಂದು ನಮೂದಿಸಿದ್ದರೂ ಅದರ ಕೆಳಗಡೆ ಮತ್ತೆ ಕೈ ಬರಹದಿಂದ ವಿವರ ದಾಖಲಿಸಲಾಗಿದೆ. ಮೂಲ ಪ್ರತಿ ಹಾಗೂ ನಂತರದ ಕೈ ಬರಹದಲ್ಲಿ ವ್ಯತ್ಯಾಸವಿದ್ದು ಇದರನ್ನು ತಾ.ಪಂ. ಇಒ ಸಹ ದೃಢೀಕರಿಸಿದ್ದಾರೆ.

    ಹಾಗಾದರೆ ತಪ್ಪಿತಸ್ಥರು ಯಾರು?
    ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದಿನ ಪಿಡಿಒಗಳಾದ ಬಿ.ಒ. ಬಳೂಚಿ ಹಾಗೂ ಎಂ.ಸಿ. ತಳವಾರ ಇವರನ್ನು ವಿಚಾರಣೆಗೆ ಆಹ್ವಾನಿಸಲಾಗಿದೆ. ಆ ಪೈಕಿ ಬಳೂಚಿ ಮಾತ್ರ ವಿಚಾರಣೆಗೆ ಹಾಜರಾಗಿ ‘ಸದರಿ ಕೈ ಬರಹ ತಮ್ಮದಲ್ಲ’ ಎಂದು ಲಿಖಿತವಾಗಿ ಹೇಳಿಕೆ ನೀಡಿದ್ದಾರೆ.

    ಆದರೆ, ಎಂ.ಸಿ. ತಳವಾರ ಮಾತ್ರ ಯಾವುದೇ ವಿಚಾರಣೆಗೆ ಹಾಜರಾಗಿಲ್ಲವೆಂದು ತಾಪಂ ಇಒ ತಿಳಿಸುತ್ತಾರೆ. ಆದರೆ, ಸದರಿ ಅಧಿಕಾರಿ ಮೇಲೆ ಕ್ರಮ ಕೈಗೊಂಡಿಲ್ಲವೇಕೆ? ಎಂಬ ಪ್ರಶ್ನೆಗೆ ಇಒ ಬಿ.ಎಸ್. ರಾಠೋಡ ಆ ಅಧಿಕಾರ ತಮಗಿಲ್ಲವೆನ್ನುತ್ತಾರೆ. ಮುಂದುವರಿದು ಸದರಿ ಠರಾವು ಮಾಡುವ ಅಧಿಕಾರವೂ ತಮಗಿಲ್ಲ. ಈಗಿರುವ ಅಧ್ಯಕ್ಷರಿಗೆ ಮೇಲ್ಮನವಿ ಸಲ್ಲಿಸಬೇಕೆಂದು ತಿಳಿಸಿ ಪ್ರಕರಣ ಮುಕ್ತಾಯಗೊಳಿಸಿದ್ದಾರೆ.

    ಒಟ್ಟಿನಲ್ಲಿ ದಾಖಲೆಗಳನ್ನು ಪರಿಶೀಲಿಸಲಾಗಿ ಈರಸಂಗವ್ವ ಬದುಕಿದ್ದಾಗಲೇ ಮೃತಳೆಂದು ಠರಾವು ಮಂಡಿಸಿರುವ ಅಂಶ ಬಯಲಾಗಿದ್ದು ಈ ಬಗ್ಗೆ ಮೇಲಾಧಿಕಾರಿಗಳು ಯಾವ ಕ್ರಮ ಕೈಗೊಳ್ಳುತ್ತಾರೋ ಕಾದು ನೋಡಬೇಕು.

    ಆಸ್ತಿ ವಿವಾದ
    ತಿಕೋಟಾದ ಈರಸಂಗವ್ವ ಇಂಚಗೇರಿ ಎಂಬುವವರ ಆಸ್ತಿ ಸಂಖ್ಯೆ ನಂ.224/ಡಿ ಗೆ ಸಂಬಂಧಿಸಿದ ವಿವಾದವೇ ಖೊಟ್ಟಿ ಠರಾವಿನ ಅಸಲಿಯತ್ತು ಬಯಲಾಗಲು ಕಾರಣ. ಪ್ರಕರಣದಲ್ಲಿ ಈರಸಂಗವ್ವ ಮಂಗಲಾ ಎಂಬುವರಿಗೆ ಮೃತ್ಯು ಪತ್ರ ಬರೆದಿದ್ದರೆ ಇವರ ಪತಿ ಡಾ. ಚನ್ನಬಸಪ್ಪ ಊರ್ಫ್ ರಾಜು ಬೆಳಗಾವಿ ಎಂಬುವವರಿಗೆ ಮೃತ್ಯು ಪತ್ರ ಬರೆದಿದ್ದರು. ಹೀಗಾಗಿ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು. ಆದರೆ, ವಿವಾದ ಇನ್ನೂ ನ್ಯಾಯಾಲಯದ ಮಟ್ಟದಲ್ಲಿದ್ದು ತಡೆಯಾಜ್ಞೆ ಇರುವಾಗಲೇ ಸ್ಥಳೀಯ ಆಡಳಿತ ಠರಾವು ಮಾಡಿರುವುದು ಗೊಂದಲ ಸೃಷ್ಟಿಸಿದೆ ಎನ್ನುತ್ತಾರೆ ದೂರುದಾರ ಡಾ. ಚನ್ನಬಸಪ್ಪ ಊರ್ಫ್ ರಾಜು ಬೆಳಗಾವಿ.

    ದಾಖಲೆ ಪರಿಶೀಲಿಸಲಾಗಿ ವೃದ್ಧೆ ಇರುವಾಗಲೇ ಸತ್ತಿದ್ದಾಳೆಂದು ಠರಾವು ಮಂಡಿಸಿದ್ದು ಮೇಲ್ನೋಟಕ್ಕೆ ಸಾಬೀತಾಗಿದೆ. ಆದರೆ, ಠರಾವು ರದ್ದುಪಡಿಸುವ ಅಧಿಕಾರ ನನಗಿಲ್ಲ. ಹೀಗಾಗಿ ಅಧ್ಯಕ್ಷರಿಗೆ ಮೇಲ್ಮನವಿ ಸಲ್ಲಿಸಲು ಪತ್ರದಲ್ಲಿ ತಿಳಿಸಲಾಗಿದೆ.
    ಬಿ.ಎಸ್. ರಾಠೋಡ, ಇಒ ತಾಪಂ ವಿಜಯಪುರ

    ಸತತ 18 ತಿಂಗಳ ಕಾಲ ವಿಚಾರಣೆ ನಡೆದು ಇದೀಗ ಠರಾವು ಖೊಟ್ಟಿ ಎಂದು ಅಧಿಕಾರಿಗಳು ತಿಳಿಸುತ್ತಿದ್ದಾರೆ. ಆದರೆ, ಸಂಬಂಧಿಸಿದ ಅಧಿಕಾರಿ ಮೇಲೆ ಕ್ರಮಕ್ಕೆ ಮುಂದಾಗಿಲ್ಲ. ಠರಾವು ರದ್ದು ಪಡಿಸುವ ಅಧಿಕಾರವೂ ತಮಗಿಲ್ಲ ಎನ್ನುತ್ತಿದ್ದಾರೆ. ಇದೀಗ ತಿಕೋಟಾ ಗ್ರಾಪಂ ತಾಲೂಕು ಪಂಚಾಯಿತಿಯಾಗಿ ಮೇಲ್ದರ್ಜೆಗೇರಿದೆ. ಹೀಗಾಗಿ ಸಂಬಂಧಿಸಿದ ಅಧಿಕಾರಿಗಳು ಪ್ರಕರಣದ ಕೂಲಂಕಷ ತನಿಖೆ ನಡೆಸಿ ನ್ಯಾಯ ಒದಗಿಸಿಕೊಡಬೇಕು.
    ಡಾ. ಚನ್ನಬಸಪ್ಪ ರಾಜು ಬೆಳಗಾವಿ, ನೊಂದ ಕುಟುಂಬ ಸದಸ್ಯ

    ಠರಾವು ರದ್ದುಪಡಿಸುವ ಅಧಿಕಾರ ತಾ.ಪಂ. ಅಧ್ಯಕ್ಷರಿಗಿದ್ದು ಭಾದಿಸ್ಥರು ಮೊದಲು ಠರಾವು ರದ್ಧತಿಗೆ ಮೇಲ್ಮನವಿ ಸಲ್ಲಿಸಬೇಕು. ಅಲ್ಲಿವರೆಗೆ ಠರಾವು ಜೀವಂತ ಇರಲಿದೆ. ಠರಾವು ರದ್ದಾದ ಬಳಿಕ ಸಂಬಂಧಿಸಿದ ಅಧಿಕಾರಿ ಮೇಲೆ ಕ್ರಮ ಕೈಗೊಳ್ಳಲಾಗುವುದು.
    ಗೋವಿಂದ ರೆಡ್ಡಿ, ಜಿ.ಪಂ. ಸಿಇಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts