More

    ನಿಷೇಧಿತ ಔಷಧ ಮಾರಾಟಕ್ಕೆ ಕಡಿವಾಣ ಹಾಕಿ

    ವಿಜಯಪುರ: ಅನಧಿಕೃತ ಕೀಟ ನಾಶಕಗಳ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸುವ ಜತೆಗೆ ಕೃಷಿ ಅಧಿಕಾರಿಗಳು ಅಂಥ ಕೀಟನಾಶಕಗಳ ಮಾರಾಟಕ್ಕೆ ಕಡಿವಾಣ ಹಾಕಬೇಕೆಂದು ಜಿ.ಪಂ. ಅಧ್ಯಕ್ಷೆ ಸುಜಾತಾ ಕಳ್ಳಿಮನಿ ಹೇಳಿದರು.
    ನಗರದ ಜಿ.ಪಂ. ಆವರಣದಲ್ಲಿ ಗುರುವಾರ ಜಾಗೃತಿ ವಾಹನಕ್ಕೆ ಹಸಿರು ನಿಶಾನೆ ತೋರಿದ ಅವರು, ಜೈವಿಕ ಕೀಟನಾಶಕ, ಅಂದರೆ ಬಯೋ ಪೆಸ್ಟಿಸೈಡ್ ಹೆಸರಿನಲ್ಲಿ ಮಾರಾಟವಾಗುತ್ತಿದ್ದು, ಅನೇಕ ನಿಷೇಧಿತ ರಾಸಾಯನಿಕ ಉಳ್ಳ ಔಷಧಗಳ ಬಗ್ಗೆ ರೈತರು ಎಚ್ಚರಿಕೆ ವಹಿಸಬೇಕು. ಹಲವಾರು ಹೆಸರಿನಲ್ಲಿ ಈ ವಿಷಭರಿತ ಬಯೋ ಪ್ರಾಡಕ್ಟ್‌ಗಳು ಅನಧಿಕೃತವಾಗಿ ಮಾರಾಟವಾಗುತ್ತಿದ್ದು ಅವುಗಳ ನಿಯಂತ್ರಣಕ್ಕೆ ಅಧಿಕಾರಿಗಳೊಂದಿಗೆ ಕೈಜೋಡಿಸಬೇಕೆಂದರು.
    ಈಗಾಗಲೇ ಕೃಷಿ ಬಳಕೆಗೆ ನಿಷೇಧಿಸಲಾಗಿರುವ ಹಲವಾರು ರಾಸಾಯನಿಕಗಳು ಮಾರುಕಟ್ಟೆಯಲ್ಲಿ ಇರುವುದು ತಿಳಿದು ಬಂದಿದೆ. ಪ್ರಯೋಗಾಲಯದಲ್ಲೂ ಸಾಬೀತಾಗಿದೆ. ಇಂಥ ಔಷಧ ಬಳಕೆಯಿಂದ ಬೆಳೆ ಹಾಳಾಗಲಿದೆಯಲ್ಲದೆ ಅಂಥ ಬೆಳೆ ತಿನ್ನುವವರ ಆರೋಗ್ಯದ ಮೇಲೂ ವ್ಯತಿರಿಕ್ತ ಪರಿಣಾಮ ಬೀರಲಿದೆ. ಯಾವುದೇ ಅಂಗಡಿಯಲ್ಲಿ ಅಥವಾ ನಿಮ್ಮ ಮನೆಗೆ ಯಾವುದೇ ವ್ಯಕ್ತಿ ಇಂಥ ಬಯೋ ಔಷಧಗಳನ್ನು ಮಾರಲು ಬಂದರೆ ದಯವಿಟ್ಟು ಖರೀದಿಸಬೇಡಿ ಮತ್ತು ಮೋಸ ಹೋಗಬೇಡಿ. ಜತೆಗೆ ಅಂತಹ ಅಂಗಡಿ ಮತ್ತು ವ್ಯಕ್ತಿಯ ವಿವರಗಳನ್ನು ನಿಮ್ಮ ಹೋಬಳಿ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳಿಗೆ ಅಥವಾ ತಾಲೂಕು ಸಹಾಯಕ ಕೃಷಿ ನಿರ್ದೇಶಕರಿಗೆ ತಿಳಿಸಿ ಎಂದು ತಿಳಿಸಿದರು.
    ಕೃಷಿ ಜಂಟಿ ನಿರ್ದೇಶಕ ಡಾ. ಡಿ. ಡಬ್ಲೂ. ರಾಜಶೇಖರ್ ಮಾತನಾಡಿ, ರೈತರು ನಿಜವಾಗಿಯೂ ಜೈವಿಕ ಪೀಡೆನಾಶಕಗಳನ್ನು ಬಳಸಲು ಇಚ್ಛಿಸಿದರೆ ಟ್ರೈಕೋಡರ್ಮ್, ಸುಡೋಮೊನಾಸ್ ಅಥವಾ ಮೆಟಾರೈಜಿಯಮ್ ನಂತಹ ಜೀವಾಣುಗಳನ್ನು ಬಳಸಬಹುದು ಅಥವಾ ಬೇವಿನ ಎಣ್ಣೆ, ಬೇವಿನ ಹಿಂಡಿ, ಮೆಣಸಿನ ಕಾಯಿ-ಬೆಳ್ಳುಳ್ಳಿ ಕಷಾಯ, ಅಗ್ನಿ ಅಸ್ತ್ರಗಳಂತಹ ಸಾವಯವ ಪೀಡೆನಾಶಕಗಳನ್ನು ಬಳಸಬಹುದು ಎಂದರು.
    ಕೃಷಿ ಉಪ ನಿರ್ದೇಶಕ ಪ್ರಕಾಶ್ ಆರ್. ಚವಾಣ್, ಸಹಾಯಕ ಕೃಷಿ ನಿರ್ದೇಶಕ ಅರಿಾ ಅತ್ತಾರ್, ಎಂ.ಎಚ್. ಯರಜರಿ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts