More

    ಪ್ರಯಾಣಿಕರ ಗಮನಕ್ಕೆ…ಸ್ಯಾಟ್‌ಲೈಟ್ ಇಲ್ಲ !

    ಪರಶುರಾಮ ಭಾಸಗಿ ವಿಜಯಪುರ
    ನಗರದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲೊಂದಾದ ಸ್ಯಾಟ್‌ಲೈಟ್ ಬಸ್ ನಿಲ್ದಾಣ ಉದ್ಘಾಟನೆಗೊಂಡರೂ ಕಾಮಗಾರಿ ಪ್ರಗತಿಯಲ್ಲಿದ್ದು, ಬಸ್ ಕಾರ್ಯಾಚರಣೆ ಇನ್ನೂ ಸುರುಳಿತಗೊಂಡಿಲ್ಲ !
    ನಗರದ ಕೆಎಎಸ್‌ಆರ್‌ಟಿಸಿ ವರ್ಕ್‌ಶಾಪ್ ಬಳಿ 1.65 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಸ್ಯಾಟ್‌ಲೈಟ್ ಬಸ್ ನಿಲ್ದಾಣದಲ್ಲಿ ಬಸ್‌ಗಳ ಕಾರ್ಯಾಚರಣೆಗೆ ಚಾಲನೆ ನೀಡಿ ಮೂರು ದಿನ ಕಳೆದರೂ ಜನರಿಗೆ ಚಿರಪರಿಚಿತವಾಗಿಲ್ಲ. ಹೀಗಾಗಿ ರಸ್ತೆ ಸಾರಿಗೆ ಇಲಾಖೆ ತಾತ್ಕಾಲಿಕವಾಗಿ ಎರಡೂ ನಿಲ್ದಾಣಗಳಲ್ಲಿ ಬಸ್ ಕಾರ್ಯಾಚರಣೆ ನಡೆಸುತ್ತಿದೆ. ಬಹುತೇಕ ಜನ ಕೇಂದ್ರ ಬಸ್ ನಿಲ್ದಾಣವನ್ನೇ ನೆಚ್ಚಿಕೊಳ್ಳುತ್ತಿದ್ದಾರೆ. ಹೀಗಾಗಿ ಸ್ಯಾಟ್‌ಲೈಟ್ ಬಸ್ ನಿಲ್ದಾಣ ಪ್ರಯಾಣಿಕರಿಲ್ಲದೇ ಬಿಕೋ ಎನ್ನುತ್ತಿದೆ.

    ಪ್ರಯಾಣಿಕರ ಗಮನಕ್ಕಿಲ್ಲ

    ಪ್ರಥಮ ಹಂತದಲ್ಲಿ ಅಥಣಿ ಮಾರ್ಗದ ಬಸ್‌ಗಳು ಮಾತ್ರ ಸ್ಯಾಟ್‌ಲೈಟ್ ನಿಲ್ದಾಣ ಮೂಲಕ ಸಂಚರಿಸಲಿವೆ. ಬೆಳಗ್ಗೆ 9ರವರೆಗೆ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿರುವ ಕಾರಣ ಎರಡೂ ನಿಲ್ದಾಣಗಳ ಮೂಲಕ ಬಸ್‌ಗಳು ಸಂಚರಿಸುತ್ತವೆ. ಬಳಿಕ ಸ್ಯಾಟ್‌ಲೈಟ್ ಬಸ್ ನಿಲ್ದಾಣದವರೆಗೆ ಮಾತ್ರ ಕಾರ್ಯಾಚರಣೆ ನಡೆಸುತ್ತಿರುವುದಾಗಿ ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸುತ್ತಾರೆ. ಈ ಮಾರ್ಗ ಸುರುಳಿತಗೊಳ್ಳುತ್ತಿದ್ದಂತೆ ಎರಡನೇ ಹಂತವಾಗಿ ಜಮಖಂಡಿ ಹಾಗೂ ಸೊಲ್ಲಾಪುರ ಮಾರ್ಗದ ಬಸ್‌ಗಳನ್ನು ಸ್ಯಾಟ್‌ಲೈಟ್ ನಿಲ್ದಾಣಕ್ಕೆ ಸೀಮಿತಗೊಳಿಸುವುದಾಗಿ ತಿಳಿಸುತ್ತಾರೆ.

    ಕೇಂದ್ರ ನಿಲ್ದಾಣದಲ್ಲಿ ಗೊಂದಲ

    ನಗರ ಸಾರಿಗೆ ಬಸ್‌ಗಳು ಎರಡ್ಮೂರು ದಿನದಿಂದ ಸ್ಯಾಟ್‌ಲೈಟ್ ನಿಲ್ದಾಣದಲ್ಲಿ ಕಾರ್ಯಾಚರಣೆ ನಡೆಸಿವೆಯಾದರೂ ಪ್ರಯಾಣಿಕರ ಸಂಖ್ಯೆ ನಿರೀಕ್ಷೆಗೆ ತಕ್ಕಂತಿಲ್ಲ. ಇನ್ನೂ ಕಾರ್ಯಾಚರಣೆ ಸಮರ್ಪಕವಾಗಲು ಕನಿಷ್ಠ ವಾರವಾದರೂ ಬೇಕೆನ್ನುತ್ತಾರೆ ಸಿಬ್ಬಂದಿ.
    ಎಲ್ಲಕ್ಕೂ ಮಿಗಿಲಾಗಿ ಕೇಂದ್ರ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಗೊಂದಲ ಸೃಷ್ಟಿಯಾಗುತ್ತಿದೆ. ಸ್ಯಾಟ್‌ಲೈಟ್ ನಿಲ್ದಾಣದಲ್ಲಿ ಬಸ್ ನಿಂತರೆ ಕೇಂದ್ರ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಕಾಯುವ ಸ್ಥಿತಿ ಇದೆ. ಹೀಗಾಗಿ ಕೇಂದ್ರ ಬಸ್ ನಿಲ್ದಾಣದಲ್ಲಿ ಕಾಲ ಕಾಲಕ್ಕೆ ಧ್ವನಿವರ್ಧಕದ ಮೂಲಕ ಮಾಹಿತಿ ನೀಡಬೇಕು. ಜತೆಗೆ ನಗರ ಸಾರಿಗೆ ಬಸ್‌ಗಳ ಚಾಲಕರು ಮತ್ತು ನಿರ್ವಾಹಕರು ಪ್ರಯಾಣಿಕರ ಗಮನ ಸೆಳೆಯಬೇಕು. ಬೆಳಗ್ಗೆ 9ರ ನಂತರ ಸ್ಯಾಟ್‌ಲೈಟ್ ನಿಲ್ದಾಣದಲ್ಲೇ ಬಸ್ ನಿಲ್ಲುವ ಕಾರಣ ಕೇಂದ್ರ ನಿಲ್ದಾಣದಲ್ಲಿ ಪ್ರಯಾಣಿಕ ಗಂಟೆಗಟ್ಟಲೆ ಕಾಯಬೇಕಾದ ಸ್ಥಿತಿ ಇದೆ.

    ಬೆಳಗ್ಗೆ 10 ರಿಂದ ರಾತ್ರಿ 10ರವರೆಗೆ ಸ್ಯಾಟ್‌ಲೈಟ್ ಬಸ್ ನಿಲ್ದಾಣದಿಂದ ಬಸ್‌ಗಳು ಸಂಚರಿಸಲಿವೆ. ಸದ್ಯ ಬೆಳಗ್ಗೆ 9ರ ತನಕ ಎರಡೂ ನಿಲ್ದಾಣಗಳ ಮೂಲಕ ಬಸ್‌ಗಳು ಕಾರ್ಯಾಚರಿಸುತ್ತಿವೆ. ಇನ್ನೂ ಜನರಿಗೆ ರೂಢಿಯಾಗಬೇಕು. ಅಲ್ಲಿವರೆಗೆ ಅಥಣಿ ಮಾರ್ಗದ ಬಸ್‌ಗಳನ್ನು ಮಾತ್ರ ಕಾರ್ಯಾಚರಣೆ ನಡೆಸಲಾಗುವುದು. ಬಳಿಕ ಜಮಖಂಡಿ ಮತ್ತು ಸೊಲ್ಲಾಪುರ ಮಾರ್ಗದ ಬಸ್‌ಗಳಿಗೂ ಅನ್ವಯಿಸಲಾಗುವುದು.
    ಗಂಗಾಧರ, ವಿಭಾಗೀಯ ನಿಯಂತ್ರಣಾಧಿಕಾರಿ, ವಿಜಯಪುರ

    ಸ್ಯಾಟ್‌ಲೈಟ್ ಬಸ್ ನಿಲ್ದಾಣದಿಂದ ಸಾಕಷ್ಟು ಅನುಕೂಲ ಇದೆ. ಆದರೆ, ಸಾರ್ವಜನಿಕರಿಗೆ ವ್ಯಾಪಕ ಮಾಹಿತಿ ಬೇಕು. ಸಿಟಿ ಬಸ್‌ಗಳ ಸಂಖ್ಯೆ ಹೆಚ್ಚಾಗಬೇಕು. ಹಳ್ಳಿಗಳಿಗೆ ಹೋಗುವ ಬಸ್‌ಗಳು ಸ್ಯಾಟ್‌ಲೈಟ್ ಬಸ್ ನಿಲ್ದಾಣಕ್ಕೆ ಬಂದೇ ಹೋಗಬೇಕು.
    ಸುರೇಶ ಮಲಗೊಂಡ, ಪ್ರಯಾಣಿಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts