More

    ಹಬ್ಬಗಳಿಗಿದೆ ವಿಶೇಷ ಮಹತ್ವ

    ವಿಜಯಪುರ: ಜಾನಪದ ನುಡಿಗಳಲ್ಲಿ ಸಂಕ್ರಾಂತಿಯ ಹಿರಿಮೆ-ಗರಿಮೆಗಳನ್ನು ಕೇಳುವುದೇ ಆನಂದ. ಸುಗ್ಗಿ ಎಂದರೆ ಸಂಕ್ರಾಂತಿ ಕಾಲ ಎಂದು ಸಿಕ್ಯಾಬ್ ಮಹಿಳಾ ಪದವಿ ಕಾಲೇಜು ಕನ್ನಡ ವಿಭಾಗದ ಮುಖ್ಯಸ್ಥ ಡಾ.ಮಲ್ಲಿಕಾರ್ಜುನ ಮೇತ್ರಿ ಹೇಳಿದರು.
    ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಗುರುವಾರ ಸಂಜೆ ಜಿಲ್ಲಾ ಯುವ ಪರಿಷತ್ ಆಶ್ರಯದಲ್ಲಿ ಆಯೋಜಿಸಿದ್ದ ‘ಸಂಕ್ರಾಂತಿ ಸಂಭ್ರಮ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
    ಸಂಕ್ರಮಣಕ್ಕೆ ಸಾಂಪ್ರದಾಯಿಕ ಹಿನ್ನೆಲೆಯಲ್ಲಿ ಸೂರ್ಯ ಹಾಗೂ ಮತ್ತಿತರ ಕಥೆಗಳಿವೆ, ಕಾರಣಗಳಿವೆ. ಪ್ರತಿ ವರ್ಷ ಜನವರಿ ತಿಂಗಳಲ್ಲಿ ಬರುವ ಸಂಕ್ರಮಣವು ಎಲ್ಲರೊಳು ಹೊಸ ಹರುಷವನ್ನು ತುಂಬುವುದರ ಮೂಲಕ ಬದುಕನ್ನು ಹೊಸ ಹುರುಪಿನೊಂದಿಗೆ ಚಿಗುರಿಸಿ ಉತ್ಸಾಹಿಯನ್ನಾಗಿಸುತ್ತದೆ ಎಂದರು.
    ತಹಸೀಲ್ದಾರ್ ಮೋಹನಕುಮಾರಿ ಮಾತನಾಡಿ, ಮಕ್ಕಳು, ಹಿರಿಯರು, ಕಿರಿಯರೆಲ್ಲ ಸೇರಿ ನಲಿಯುವುದೇ ಹಬ್ಬದ ದಿನಗಳಲ್ಲಿ. ಹಬ್ಬಗಳ ನೆಪದಲ್ಲಿ ಬದುಕನ್ನು ಹಸನುಗೊಳಿಸಿಕೊಳ್ಳಬಹುದು. ಹಬ್ಬಗಳು ನಮ್ಮ ನಿತ್ಯದ ಬದುಕಿಗೆ ಸಂತೋಷದ ಮೆಟ್ಟಿಲುಗಳಿದ್ದಂತೆ ಎಂದರು.
    ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಧ್ಯಾಪಕಿ ವೀಣಾ ಮೈತ್ರಿ ಮಾತನಾಡಿ, ಎಳ್ಳು-ಬೆಲ್ಲ ಹಂಚುವುದು ಸಂಕ್ರಾಂತಿಯ ಪದ್ಧತಿ. ಬನ್ನಿ-ಬಂಗಾರ ನೀಡುವುದು ವಿಜಯದಶಮಿ. ಬೇವು-ಬೆಲ್ಲ ನೀಡುವುದು ಯುಗಾದಿ ಹಬ್ಬದಲ್ಲಿ. ಹೀಗೆ ಬಹುತೇಕ ಹಬ್ಬಗಳೆಲ್ಲ ಸಾಂಕೇತಿಕವಾಗಿ ಏನೇ ಇದ್ದರೂ ಮನುಷ್ಯ ಸಂಬಂಧಗಳನ್ನು ಬೆಸೆದು ಗಟ್ಟಿಗೊಳಿಸುವುದೇ ಆಗಿದೆ. ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳಿಗೆ ವಿಶೇಷ ಮಹತ್ವವಿದೆ ಎಂದು ತಿಳಿಸಿದರು.
    ಚಿತ್ರ ನಿರ್ದೇಶಕಿ ಸುಪ್ರಿಯಾ ನಿಪ್ಪಾಣಿ ಮಾತನಾಡಿದರು. ಕಸಾಪ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಸುರೇಶ ಶೇಡಶ್ಯಾಳ, ಶರಣು ಸಬರದ, ಉಮೇಶ ಕಾರಜೋಳ, ಸಿಪಿಐ ರವೀಂದ್ರ ನಾಯ್ಕೋಡಿ, ದೇವರಹಿಪ್ಪರಗಿ ತಾಪಂ ಅಧ್ಯಕ್ಷೆ ಲಲಿತಾ ದೊಡಮನಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts