More

    ಸಾಮಾನ್ಯ ಸಭೆಯಲ್ಲಿ ಮಾತಿನ ಚಕಮಕಿ, ಸದಸ್ಯರ ಆರೋಪಗಳಿಗೆ ಅಧ್ಯಕ್ಷೆ ಸ್ಪಷ್ಟನೆ

    ವಿಜಯವಾಣಿ ಸುದ್ದಿಜಾಲ ವಿಜಯಪುರ
    ಸದಸ್ಯರ ನಡುವೆ ಮಾತಿನ ಚಕಮಕಿ, ಪರಸ್ಪರ ವಾಗ್ವಾದಗಳ ಮೂಲಕ ಗದ್ದಲದ ವಾತಾವರಣ, ಕೆಲ ಸದಸ್ಯರು ಸಭೆ ಬಹಿಷ್ಕಾರಕ್ಕೆ ಮುಂದಾಗಿದ್ದು, ಆಡಳಿತ ಪಕ್ಷ ಜೆಡಿಎಸ್ ಹಾಗೂ ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರ ನಡುವೆ ತೀವ್ರ ವಾಗ್ದಾಳಿ, ಮೂಕಪ್ರೇಕ್ಷಕರಾಗಿದ್ದ ಅಧಿಕಾರಿಗಳು…
    ಇವು ಪುರಸಭೆ ಕಚೇರಿಯಲ್ಲಿ ಅಧ್ಯಕ್ಷೆ ರಾಜೇಶ್ವರಿ ಭಾಸ್ಕರ್ ನೇತೃತ್ವದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಾಮಾನ್ಯ ಸಭೆಯಲ್ಲಿ ಕಂಡು ಬಂದ ದೃಶ್ಯಗಳು.
    ಪುರಸಭೆಯ 1.36 ಕೋಟಿ ರೂ. ಅನುದಾನಕ್ಕೆ ಸಂಬಂಧಿಸಿ ಕ್ರಿಯಾ ಯೋಜನೆಯನ್ನು ಪುರಸಭೆ ಆಡಳಿತದ ಜತೆಗೆ ಶಾಸಕರನ್ನು ಒಳಗೊಂಡಂತೆ ಮರುಪರಿಷ್ಕರಣೆ ಮಾಡಿ ಕಳುಹಿಸಿಕೊಡುವಂತೆ ಜಿಲ್ಲಾಧಿಕಾರಿ ಕಾರ್ಯಾಲಯದಿಂದ ಕಡತ ವಾಪಸ್ ಬಂದಿದ್ದರಿಂದ ಶಾಸಕರನ್ನು ಒಳಗೊಂಡು ಪರಿಷ್ಕರಣೆ ಮಾಡಿದ್ದೇವೆ ಎಂದು ಮುಖ್ಯಾಧಿಕಾರಿ ಮೋಹನ್ ಕುಮಾರ್ ತಿಳಿಸಿದರು. ಈ ವೇಳೆ ಸದಸ್ಯರೆಲ್ಲರನ್ನೂ ಪರಿಗಣನೆಗೆ ತೆಗೆದುಕೊಳ್ಳದೆ ಪರಿಷ್ಕರಣೆ ಮಾಡಿರುವುದು ಸರಿಯಲ್ಲ ಎಂದು ಕೆಲ ಸದಸ್ಯರು ವಿರೋಧ ವ್ಯಕ್ತಪಡಿಸಿದರು.


    ವಾರ್ಡ್‌ನಲ್ಲಿ ಹಲವು ಕೆಲಸಗಳು ನಡೆಯದೇ ಅನುದಾನ ನೀಡಲಾಗಿದೆ. ಈ ಬಗ್ಗೆ ತನಿಖೆ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ನಂದಕುಮಾರ್ ಒತ್ತಾಯಿಸಿದರು.


    6 ತಿಂಗಳಲ್ಲಿ 17ನೇ ವಾರ್ಡ್‌ನಲ್ಲಿ 3 ಕೊಳವೆಬಾವಿಗಳನ್ನು 3 ಬಾರಿ ಮೋಟಾರ್ ಇಳಿಸಿ, ಮತ್ತೆ ಎತ್ತಿ ರಿಪೇರಿಗೆಂದು 1.41 ಲಕ್ಷ ರೂ. ಬಿಲ್ ಮಾಡಿಕೊಳ್ಳಲಾಗಿದೆ ಎಂದು ಬೈರೇಗೌಡ ತಿಳಿಸಿದರು.


    ಪುರಸಭೆ ಪ್ರತಿ ಮಾಸ 5 ಲಕ್ಷ ರೂ.ಗಳನ್ನು ಬೀದಿದೀಪದ ಶುಲ್ಕ ಕಟ್ಟುತ್ತಿದೆ. ಆದರೆ 13ನೇ ವಾರ್ಡಿನಲ್ಲಿ ಹೈಮಾಸ್ಟ್ ದೀಪ ಸರಿಪಡಿಸಿಲ್ಲ ಎಂದು ನಾರಾಯಣಸ್ವಾಮಿ ಆರೋಪಿಸಿದರು.


    ವಾರ್ಡ್‌ನಲ್ಲಿ ಯಾವುದೇ ಕಾಮಗಾರಿ, ತುರ್ತು ಕೆಲಸಗಳ ಬಗ್ಗೆ ಕೇಳಿದರೂ ಸಭೆ ನಡೆಯಬೇಕು. ಟೆಂಡರ್ ಆಗಬೇಕು ಎಂದು ಅಧಿಕಾರಿಗಳು ತಿಳಿಸುತ್ತಾರೆ. 3-4 ತಿಂಗಳಾದರೂ ಸಭೆ ನಡೆಯದಿದ್ದರೆ ವಾರ್ಡ್‌ನಲ್ಲಿ ಅಭಿವೃದ್ಧಿ ಕೆಲಸ ಆಗುವುದಾದರೂ ಹೇಗೆ ಎಂದು ಶಿಲ್ಪಾ ಅಜಿತ್ ಪ್ರಶ್ನಿಸಿದರು.

    ಕಂದಾಯ ಮಾಹಿತಿ: ಪಟ್ಟಣದಲ್ಲಿ ವಾಣಿಜ್ಯ ಕಟ್ಟಡಗಳಿಂದ ವಸೂಲಿಯಾಗಬೇಕಾಗಿರುವ ತೆರಿಗೆ ಕುರಿತು ನೀಡಿರುವ ನೋಟಿಸ್‌ಗಳು, ವಸೂಲಿಯಾಗಿರುವ ತೆರಿಗೆ, ಆಗಬೇಕಾಗಿರುವ ಬಾಕಿ ಹಣದ ಕುರಿತು ಕಂದಾಯ ಅಧಿಕಾರಿ ಚಂದ್ರು ಮಾಹಿತಿ ನೀಡಿದರು. ಪುರಸಭೆ ಸುತ್ತಮುತ್ತಲಿನ 3 ಕಿಮೀ ವ್ಯಾಪ್ತಿಯಲ್ಲಿ ಕಂದಾಯ ಇಲಾಖೆ ಭೂಮಿಯನ್ನು ಯಾವುದೇ ಕಾರಣಕ್ಕೂ ಭೂ ಮಂಜೂರಾತಿ ನೀಡಬಾರದು ಎಂದು ಸಂಬಂಧಪಟ್ಟವರಿಗೆ ಪತ್ರದ ಮೂಲಕ ಒತ್ತಾಯ ಮಾಡಬೇಕೆಂದು ಸದಸ್ಯರು ಸಲಹೆ ನೀಡಿದರು.
    ಪಟ್ಟಣದಲ್ಲಿ ಸರಿಯಾಗಿ ಕಂದಾಯ ವಸೂಲಿ ಮಾಡುತ್ತಿಲ್ಲ. ಜಾಹೀರಾತುಗಳ ತೆರಿಗೆ ವಸೂಲಿ ಮಾಡುತ್ತಿಲ್ಲ. ಕೆಲ ರಾಜಕೀಯ ಮುಖಂಡರು ಸಮಸ್ಯೆ ತಿಳಿಸಿದ ತಕ್ಷಣ ಕಾರ್ಯಪ್ರವೃತ್ತರಾಗುತ್ತೀರಿ, ಅದೇ ಸಮಸ್ಯೆಗಳ ಬಗ್ಗೆ ಸದಸ್ಯರು ಗಮನ ಸೆಳೆದರೆ ವಿಳಂಬ ಮಾಡ್ತೀರಿ, ಹಾಗಾದರೆ ಸದಸ್ಯರ ಪತ್ರಗಳಿಗೆ ಬೆಲೆಯಿಲ್ಲವೇ ಎಂದು ಸದಸ್ಯ ಎ.ಆರ್.ಹನೀುಲ್ಲ ಅಸಮಾಧಾನ ಹೊರಹಾಕಿದರು.

    ಅಂಗನವಾಡಿಗೆ ಜಾಗ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು, ಪಟ್ಟಣದಲ್ಲಿನ 5 ಕಡೆಗಳಲ್ಲಿ ಅಂಗನವಾಡಿ ಕೇಂದ್ರಗಳಿಗೆ ನಿವೇಶನ ಒದಗಿಸುವಂತೆ ಕೋರಿ ಮನವಿ ಪತ್ರ ಸಲ್ಲಿಸಿದರು.

    ಸದಸ್ಯರ ಮನವಿಯಂತೆ ಸಂತೆ ಸ್ವಚ್ಛತೆ: ಸಂತೆ ಮೈದಾನ ಸ್ವಚ್ಛಗೊಳಿಸುವುದಕ್ಕೆ ಹಾಗೂ ವಿದ್ಯುತ್ ದೀಪ ಅಳವಡಿಸುವ ಬಗ್ಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಕ್ರಮ ಕೈಗೊಳ್ಳದ ಪುರಸಭೆ, ಯಾವುದೋ ರಾಜಕೀಯ ಪಾರ್ಟಿ ಮನವಿಗೆ ಸ್ಪಂದಿಸಿದೆ, ಅಂದರೆ ಸದಸ್ಯರ ಮಾತಿಗೆ ಬೆಲೆ ಇಲ್ಲವಾಗಿದೆಯೇ ಎಂದು ಪುರಸಭಾ ಸದಸ್ಯೆ ಭವ್ಯಾ ಪ್ರಶ್ನಿಸಿದರು. ಪುರಸಭಾ ಸದಸ್ಯರ ಮನವಿಯಂತೆ ಸಂತೆ ಮೈದಾನದಲ್ಲಿ ಪುರಸಭೆಯಿಂದ ಸ್ವಚ್ಛತೆ ಹಾಗೂ ವಿದ್ಯುತ್ ದೀಪ ಅಳವಡಿಸಲಾಗಿದೆ ಎಂದು ಅಧ್ಯಕ್ಷೆ ರಾಜೇಶ್ವರಿ ಭಾಸ್ಕರ್ ಸ್ಪಷ್ಟೀಕರಣ ನೀಡಿದರು.

    14-ವಿಜ್.1ಎ
    ವಿಜಯಪುರ ಪುರಸಭೆ ಸಭಾಂಗಣದಲ್ಲಿ ಅಧ್ಯಕ್ಷೆ ರಾಜೇಶ್ವರಿ ಭಾಸ್ಕರ್ ಅಧ್ಯಕ್ಷತೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಾಮಾನ್ಯ ಸಭೆಯಲ್ಲಿ ಉಪಾಧ್ಯಕ್ಷ ಎಂ.ಕೇಶವಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ನಾರಾಯಣಸ್ವಾಮಿ, ಮುಖ್ಯಾಧಿಕಾರಿ ಮೋಹನ್ ಕುಮಾರ್, ಇಂಜಿನಿಯರ್ ಮಹೇಶ್ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts