More

    ಕೌಶಲಾಧಾರಿತ ಶಿಕ್ಷಣ ಅವಶ್ಯ

    ವಿಜಯಪುರ: ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಅನ್ವಯ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿನಿಯರು ಪ್ರವೇಶಾತಿ ಪಡೆದು, ಉತ್ತಮ ಶಿಕ್ಷಣ ಪಡೆಯಬೇಕೆಂದು ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಕೆ. ತುಳಸಿಮಾಲ ಹೇಳಿದರು.

    ನಗರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ-2020ರ ಅನುಷ್ಠಾನ ಕುರಿತು ಸೋಮವಾರ ಆಯೋಜಿಸಿದ್ದ ಆನ್‌ಲೈನ್ ಸಂವಾದದಲ್ಲಿ ಅವರು ಮಾತನಾಡಿದರು.

    ಕೌಶಲಾಧಾರಿತ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿರುವ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲ ಉದ್ದೇಶ ಶೈಕ್ಷಣಿಕ ಕ್ಷೇತ್ರದಲ್ಲಿನ ಅಮೂಲಾಗ್ರ ಬದಲಾವಣೆಯಾಗಿದೆ. ಜತೆಗೆ ಈ ನೀತಿಯ ಅನುಸಾರ ಬಹುಶಿಸ್ತೀಯ ಅಧ್ಯಯನಕ್ಕೆ ಅವಕಾಶವಿದ್ದು, ವಿದ್ಯಾರ್ಥಿನಿಯರು ವಿವಿಧ ಹೊಸ ವಿಷಯಗಳ ಕುರಿತು ಅಧ್ಯಯನ ಮಾಡಲು ಸಹಕಾರಿಯಾಗಿದೆ ಎಂದರು.

    ಮಹಿಳಾ ವಿವಿಯ ಕುಲಸಚಿವೆ ಪ್ರೊ.ಆರ್. ಸುನಂದಮ್ಮ ಮಾತನಾಡಿ, ವಿದ್ಯಾರ್ಥಿನಿಯರು ಸಾಮಾಜಿಕ ಜವಾಬ್ದಾರಿ ಜತೆಗೆ ಸಮಾಜಮುಖಿಯಾಗಿ ಕೆಲಸ ಮಾಡುವಂತೆ ಈ ನೀತಿಯು ಪ್ರೋತ್ಸಾಹ ನೀಡುತ್ತದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿನಿಯರು ಅದರ ಸಂಪೂರ್ಣ ಸದುಪಯೋಗ ಪಡೆದುಕೊಳ್ಳಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು.

    ಸಂವಾದದಲ್ಲಿ ಎನ್‌ಇಪಿ ಟಾಸ್ಕ್‌ಫೋರ್ಸ್‌ನ ಅಧ್ಯಕ್ಷ ಪ್ರೊ. ಪಿ.ಜಿ. ತಡಸದ, ವಿವಿಯ ಮೌಲ್ಯಮಾಪನ ಕುಲಸಚಿವ ಪ್ರೊ. ರಮೇಶ್.ಕೆ, ಆರ್ಥಿಕ ಅಧಿಕಾರಿ ಪ್ರೊ.ಎಸ್.ಬಿ. ಕಾಮಶೆಟ್ಟಿ, ಕಾಲೇಜು ಅಭಿವೃದ್ಧಿ ಮಂಡಳಿ ನಿರ್ದೇಶಕ ಪ್ರೊ.ಜಿ.ಜಿ. ರಜಪೂತ, ಪ್ರೊ. ಅಜೀಜ್ ಮಕಾನದಾರ್, ವಿವಿಧ ನಿಕಾಯಗಳ ಡೀನರು, ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ಎನ್‌ಇಪಿ ಟಾಸ್ಕ್‌ಫೋರ್ಸ್‌ನ ಸದಸ್ಯರು, ರಾಜ್ಯದ ವಿವಿಧ ಕಾಲೇಜುಗಳ ಪ್ರಾಚಾರ್ಯರು, ಅಧ್ಯಾಪಕರು, ವಿದ್ಯಾರ್ಥಿನಿಯರು, ಪಾಲಕರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts