More

    ಆತ್ಮನಿರ್ಭರ ಕಿರುಚಿತ್ರಕ್ಕೆ ರಾಷ್ಟ್ರಮನ್ನಣೆ

    ವಿಜಯಪುರ: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ‘ಆತ್ಮನಿರ್ಭರ’ ಯೋಜನೆಯ ಬಗ್ಗೆ ಕನ್ನಡಿಗರು ನಿರ್ಮಿಸಿದ ಆನ್‌ಲೈನ್ ಕಿರುಚಿತ್ರಕ್ಕೆ ದೇಶದಲ್ಲಿ 4ನೇ ಸ್ಥಾನ ಪಡೆದು ಮನ್ನಣೆಗೆ ಪಾತ್ರವಾಗಿದೆ.

    ಮಹಾಮಾರಿ ಕರೊನಾ ಸಂಕಷ್ಟದಿಂದ ದೇಶ ಚೇತರಿಸಿಕೊಳ್ಳಲು ಸ್ವದೇಶಿ ವಸ್ತುಗಳ ಉತ್ಪಾದನೆ ಹಾಗೂ ಬಳಕೆಗೆ ಎಲ್ಲರೂ ಸಹಕರಿಸುವುದರ ಮೂಲಕ ಆತ್ಮನಿರ್ಭರತೆಯನ್ನು ವೃದ್ಧಿಸಿಕೊಳ್ಳಬೇಕು ಎಂಬ ಪ್ರಧಾನಿಯವರ ಸಂದೇಶದ ಹಿನ್ನೆಲೆ ಭಾರತ ಸರ್ಕಾರದ ಮಿನಿಸ್ಟರಿ ಆಫ್ ಇನ್‌ಫಾರ್ಮೇಷನ್ ಬ್ರಾಡ್‌ಕಾಸ್ಟಿಂಗ್ ವತಿಯಿಂದ ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ (ಎನ್‌ಎಫ್‌ಡಿಸಿ) ಕಳೆದ ತಿಂಗಳು ದೇಶಭಕ್ತಿ ಸಾರುವ ಕಿರುಚಿತ್ರಗಳನ್ನು ಆನ್‌ಲೈನ್‌ನಲ್ಲಿ ಆಹ್ವಾನಿಸಿತ್ತು.

    ಈ ಸ್ಪರ್ಧೆಗೆ ವಿಜಯಪುರದ ಶಿವಾ ಬಿರಾದಾರ ನಿರ್ದೇಶನದಲ್ಲಿ ಹತ್ತು ಜನರ ತಂಡ ಮೂರು ನಿಮಿಷದ ಕಿರುಚಿತ್ರ ಚಿತ್ರಿಸಿ ಸ್ಪರ್ಧೆಗೆ ಕಳಿಸಲಾಗಿತ್ತು. ಆ ಕಿರುಚಿತ್ರಕ್ಕೆ ಈಗ ರಾಷ್ಟ್ರಮನ್ನಣೆಗೆ ಪಾತ್ರವಾಗಿದೆ. ಈ ಕಿರುಚಿತ್ರದಲ್ಲಿ ದೇಶಪ್ರೇಮದ ಬಗ್ಗೆ, ಸ್ವದೇಶಿ ವಸ್ತುಗಳನ್ನು ಬೆಂಬಲಿಸುವ ಬಗ್ಗೆ ತಿಳಿವಳಿಕೆ ನೀಡಲಾಗಿದೆ.

    11 ಕಿರುಚಿತ್ರಗಳು ಮಾತ್ರ ಆಯ್ಕೆ
    ಆನ್‌ಲೈನ್ ಸ್ಪರ್ಧೆಯಲ್ಲಿ ಒಟ್ಟು 866 ಕಿರುಚಿತ್ರಗಳು ಬಂದಿದ್ದು, ಅದರಲ್ಲಿ ಕೇವಲ 11 ಕಿರುಚಿತ್ರಗಳನ್ನಷ್ಟೇ ಆಯ್ಕೆ ಮಾಡಲಾಗಿದೆ. ಪ್ರಥಮ ಬಹುಮಾನ 1 ಲಕ್ಷ ರೂ. (ಬಂಗಾಳಿ, ಕೋಲ್ಕತ್ತಾ) ದ್ವಿತೀಯ ಬಹುಮಾನ 50 ಸಾವಿರ ರೂ. (ಇಂಗ್ಲೀಷ್, ನ್ಯೂ ದೆಹಲಿ), ಮೂರನೇ ಬಹುಮಾನ 25 ಸಾವಿರ ರೂ. (ಮಲಯಾಳಂ, ಕೇರಳ) ನೀಡಲಾಗಿದ್ದು, ಉಳಿದ ಏಳು ಬಹುಮಾನಗಳನ್ನು ಸ್ಪೆಷಲ್ ಮೆನ್ಶ್‌ನ್ ಎಂದು ಪ್ರತಿ ಕಿರುಚಿತ್ರಕ್ಕೆ 10 ಸಾವಿರ ರೂ. ಬಹುಮಾನವಿದೆ. ನಮ್ಮ ಕಿರುಚಿತ್ರ ‘ಸನ್ಮಾನ್-ಎ ಫಾರ್.. ಬಿ ಫಾರ್.’ ರಾಜ್ಯಕ್ಕೆ ಪ್ರಥಮವಾಗಿದ್ದು, ರಾಷ್ಟ್ರಮಟ್ಟದಲ್ಲಿ ನಾಲ್ಕನೇ ಸ್ಥಾನದಲ್ಲಿದೆ.

    ಆಯ್ಕೆಯಾದ ಈ ಎಲ್ಲಾ 11 ಚಿತ್ರಗಳನ್ನು ಮುಂದಿನ ದಿನಗಳಲ್ಲಿ ವಿವಿಧ ಭಾಷೆಗಳಿಗೆ ತರ್ಜುಮೆಗೊಂಡು ಆತ್ಮನಿರ್ಭರ ಪ್ರಚಾರಾರ್ಥ ದೇಶಾದ್ಯಂತ ಪ್ರಚಾರವಾಗಲಿವೆ. ಕರೊನಾ ಹಿನ್ನೆಲೆ ಬಹುಮಾನ ವಿತರಣೆ ಸಮಾರಂಭ ನಡೆದಿಲ್ಲ. ಮುಂದಿನ ದಿನಗಳಲ್ಲಿ ನಡೆಯಲಿದೆ ಎಂದು ಆಯೋಜಕರು ತಿಳಿಸಿರುವುದಾಗಿ ಕಿರುಚಿತ್ರದ ನಿರ್ದೇಶಕ ಶಿವಾ ಬಿರಾದಾರ ಹೇಳಿದರು.

    ಕಿರುಚಿತ್ರದಲ್ಲೇನಿದೆ
    ಭಾರತ ಸ್ವಾವಲಂಬಿಯಾಗಿರಬೇಕು ಹಾಗೂ ಆತ್ಮನಿರ್ಭರವಾಗಿರಬೇಕು ಎಂಬ ಪ್ರಧಾನಿ ನರೇಂದ್ರ ಮೋದಿ ಕಂಡ ಕನಸಿಗೆ ತಕ್ಕಂತೆ ಮಗುವೊಂದು ತನ್ನ ತಂದೆಗೆ ವಿದೇಶಿ ವಸ್ತು ವ್ಯಾಮೋಹ ದೂರವಾಗಿಸುವ ಕಥಾ ಹಂದರ ಕಿರುಚಿತ್ರದಲ್ಲಿ ಬಿಂಬಿತವಾಗಿದೆ. ಜೊತೆಗೆ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ, ಮಹಾನ್ ನಾಯಕರನ್ನು ನೆನಪಿಸುವ ಪ್ರಯತ್ನವನ್ನೂ ಈ ಕಿರುಚಿತ್ರದಲ್ಲಿ ತೋರಿಸಲಾಗಿದೆ. ಜಾತಿ- ಧರ್ಮದ ಎಲ್ಲೆಯನ್ನೂ ಮೀರಿದ ದೇಶಪ್ರೇಮ ಚಿತ್ರದಲ್ಲಿ ರಾರಾಜಿಸುತ್ತಿದೆ.

    ಕಿರು ಚಿತ್ರ ನಿರ್ಮಾಣದ ಜವಾಬ್ದಾರಿಯನ್ನು ರಾಮನಗೌಡ ಯತ್ನಾಳ, ಮಧುಸೂಧನ್ ಯಲಗುದ್ರಿ ಮತ್ತು ಪಾಂಡು ಸಾಹುಕಾರ ದೊಡಮನಿ ಸಹಕಾರ ನೀಡಿದ್ದಾರೆ. ಕಿರುಚಿತ್ರದಲ್ಲಿ ಆಕಾಶ ವಜ್ರದ, ಸ್ವಾತಿ ಪವಾರ, ದಿವ್ಯಾ ಪವಾರ, ಐಶ್ವರ್ಯ ಪವಾರ, ಸಂಜಯ ಪವಾರ, ಮಧುಸೂಧನ್ ಯಲಗುದ್ರಿ, ಭಿಮರಾವ ಕೋಟ್ಯಾಳ, ಶಾರದಾ ಸಾಳುಂಕೆ, ಸಚಿನ್ ಜಾಧವ್, ಓಂಕಾರ ಕಾಳೆ, ಮತ್ತು ಎ.ಎಸ್ ಅಮೋಘಗೌಡ ಪೋಷಕ ಪಾತ್ರದಲ್ಲಿ ಅಭಿನಯಿಸಿದ್ದಾರೆ.

    ಪಾಶ್ಚಾತ್ಯ ಸಂಸ್ಕೃತಿಗೆ ವಿದೇಶಿ ವಸ್ತುಗಳಿಗೆ ಮೋಹಿತರಾಗಿರುವ ನಾವೆಲ್ಲರೂ ಸ್ವದೇಶಿ ವಸ್ತುಗಳನ್ನು ಖರೀದಿಸುವ ಮೂಲಕ ದೇಶಪ್ರೇಮ ಮೆರೆಯಬೇಕು ಹಾಗೂ ನಮ್ಮ ಜವಾಬ್ದಾರಿ ನಿಭಾಯಿಸಬೇಕು ಎಂಬ ಸಂದೇಶ ಈ ಕಿರುಚಿತ್ರ ಸಾರಿದೆ. ಆತ್ಮನಿರ್ಭರ ಸಂದೇಶ ನೋಡಿದ ಮನಸ್ಸುಗಳು ಭವ್ಯ ಭಾರತಕ್ಕಾಗಿ ಬದಲಾಗಬೇಕಿದೆ. ಈ ವಿಡಿಯೋವನ್ನು ವಿಜಯಪುರ ಹುಡುಗರು ನಿರ್ಮಿಸಿರುವುದು ಶ್ಲಾಘನೀಯ.
    ಪಿ. ಸುನೀಲಕುಮಾರ, ವಿಜಯಪುರ ಜಿಲ್ಲಾಧಿಕಾರಿ

    ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಆತ್ಮನಿರ್ಭರ ಕನಸು ನನಸಾಗಿಸುವ ನಿಟ್ಟಿನಲ್ಲಿ ಎನ್‌ಎಫ್‌ಡಿಸಿ ಆನ್‌ಲೈನ್‌ನಲ್ಲಿ ಕರೆದಿದ್ದ ಕಿರುಚಿತ್ರ ಸ್ಪರ್ಧೆಗೆ ವಿಜಯಪುರದ ಸ್ಥಳೀಯ ಕಲಾವಿದರನ್ನೇ ಬಳಸಿ ಅಂದಾಜು 45 ಸಾವಿರ ರೂ. ವೆಚ್ಚದಲ್ಲಿ ಕಿರುಚಿತ್ರ ನಿರ್ಮಿಸಿ ಕಳಿಸಲಾಗಿತ್ತು. ಈ ಚಿತ್ರ ರಾಷ್ಟ್ರಮನ್ನಣೆಗೆ ಪಾತ್ರವಾಗಿರುವುದು ಖುಷಿ ತಂದಿದೆ. ವಿಡಿಯೋ ನೋಡುವ ಮೂಲಕ ನಮ್ಮ ಬೆನ್ನು ತಟ್ಟಿ ಪ್ರೋತ್ಸಾಹಿಸಿ.
    ಶಿವಾ ಬಿರಾದಾರ, ಕಿರು ಚಿತ್ರದ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts