More

    ಚುನಾವಣೆ ಪ್ರಜಾಪ್ರಭುತ್ವದ ಜೀವಾಳ

    ವಿಜಯಪುರ: ಚುನಾವಣೆಗಳು ಪ್ರಜಾಪ್ರಭುತ್ವದ ಜೀವಾಳ ಎಂದು ಮನಗೂಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮುಖ್ಯಸ್ಥ ಡಾ. ಎಚ್.ಎ. ಕಟಗೂರ ಹೇಳಿದರು.

    ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ಸ್ನಾತಕೋತ್ತರ ವಿಭಾಗದಲ್ಲಿ ಶನಿವಾರ ಆಯೋಜಿಸಿದ್ದ ‘ಭಾರತದಲ್ಲಿ ಚುನಾವಣೆ ಸುಧಾರಣೆಗಳು’ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ಚುನಾವಣೆಗಳು ಸಮರ್ಪಕವಾಗಿ ನಡೆಯದೆ ಹೋದರೆ ಅಧಿಕಾರ ಅಯೋಗ್ಯರ ಪಾಲಾಗಲಿದೆ. ಯೋಗ್ಯರನ್ನು ಆಯ್ಕೆ ಮಾಡಲು ಚುನಾವಣೆ ಬಹು ಮುಖ್ಯ ಪಾತ್ರ ವಹಿಸುತ್ತದೆ. 1952 ರಿಂದ ಭಾರತದಲ್ಲಿ ಚುನಾವಣೆ ಪದ್ಧತಿ ಜಾರಿಗೆ ಬಂದಿತು. ಅಲ್ಲಿಂದ ಇಲ್ಲಿವರೆಗೆ ಲೋಕಸಭೆಯ 17 ಚುನಾವಣೆಗಳನ್ನು ಎದುರಿಸಿದ್ದೇವೆ. ಪ್ರತಿ ಚುನಾವಣೆಯಲ್ಲೂ ಹೊಸ ಹೊಸ ಪದ್ಧತಿ ಅಳವಡಿಸಿಕೊಂಡು ಬರಲಾಗುತ್ತಿದೆ. ಚುನಾವಣೆ ಸುಧಾರಣೆಗಾಗಿ ಅನೇಕ ಸಮಿತಿಗಳನ್ನು ರಚಿಸಲಾಗಿದೆ. ಸಾರ್ವತ್ರಿಕ ವಯಸ್ಕ ಮತದಾನ ಪದ್ಧತಿ ಮೂಲಕ ಯುವಕರ ಕೈಗೆ ದೇಶದ ಭವಿಷ್ಯ ನಿರ್ಧರಿಸುವ ಅಧಿಕಾರ ನೀಡಲಾಗಿದೆ. ಅದಾಗ್ಯೂ ಚುನಾವಣೆ ಪದ್ಧತಿ ಬಗ್ಗೆ ಅಪಸ್ವರವೇನೂ ನಿಂತಿಲ್ಲ ಎಂದರು.

    ಚುನಾವಣೆ ಪ್ರಕ್ರಿಯೆಯಲ್ಲಿ ಅಕ್ರಮ ಎಸಗಿದರೆ ಕಠಿಣ ಶಿಕ್ಷೆ ವಿಧಿಸುವ ಕಾನೂನು ಜಾರಿಗೆ ತರಲಾಯಿತು. ಅಕ್ರಮ ತಪ್ಪಿಸಲು ವಿದ್ಯುನ್ಮಾನ ಮತಯಂತ್ರ ಅಳವಡಿಸಲಾಯಿತು. ಇದರಿಂದ ಎಣಿಕೆ ಪ್ರಕ್ರಿಯೆಯಲ್ಲೂ ಸಾಕಷ್ಟು ಸುಧಾರಣೆಯಾಯಿತು. ಚುನಾವಣೆ ಗುರುತಿನ ಚೀಟಿ ಕಡ್ಡಾಯಗೊಳಿಸಲಾಯಿತು. ಮತದಾರರ ಪಟ್ಟಿಯಲ್ಲಿ ಭಾವಚಿತ್ರ ಅಳವಡಿಸಲಾಯಿತು. ಇದೀಗ ಮತದಾರರ ಗುರುತಿನ ಚೀಟಿ ಜತೆ ಆಧಾರ್ ಸಂಖ್ಯೆ ಜೋಡಿಸುವ ಮೂಲಕ ಗುರುತರವಾದ ಸುಧಾರಣೆ ತರಲಾಗಿದೆ. ವಿವಿ ಪ್ಯಾಟ್ ಮೂಲಕ ಮತದಾನದ ವಿಶ್ವಾಸಾರ್ಹತೆ ಕೂಡ ಕಾಪಾಡಲಾಗುತ್ತಿದೆ ಎಂದರು.

    ಚುನಾವಣೆ ಪ್ರಕ್ರಿಯೆಯಲ್ಲಿ ಇನ್ನಷ್ಟು ಸುಧಾರಣೆ ತರುವ ಅಗತ್ಯವಿದೆ. ಅಭ್ಯರ್ಥಿಗಳಿಗೆ ಶೈಕ್ಷಣಿಕ ಅರ್ಹತೆ ನಿಗದಿಗೊಳಿಸಬೇಕು. ಠೇವಣಿ ಮೊತ್ತ ಹೆಚ್ಚಿಸಬೇಕು. ಇಬ್ಬರು ಮಕ್ಕಳಿರಬೇಕೆಂಬ ನಿಯಮ ಕಡ್ಡಾಯಗೊಳಿಸಬೇಕು. ಅಪರಾಧಿಗಳಿಗೆ ಸ್ಪರ್ಧಿಸಲು ಅವಕಾಶ ಕೊಡಬಾರದು. ರಾಜಕಾರಣಿಗಳಿಗೂ ನಿವೃತ್ತಿ ವಯಸ್ಸು ನಿಗದಿಗೊಳಿಸಬೇಕೆಂದರು.

    ವಿಭಾಗದ ಮುಖ್ಯಸ್ಥ ಡಾ.ಬಿ.ಎಂ. ಕೋರಬು ಅಧ್ಯಕ್ಷತೆ ವಹಿಸಿದ್ದರು. ಎನ್. ಐ. ಹತ್ತಳ್ಳಿ ಪರಿಚಯಿಸಿದರು. ವಿದ್ಯಾರ್ಥಿ ಸದಾಶಿವ ಕಾತ್ರಾಳ ಪ್ರಾರ್ಥಿಸಿದರು. ಭೀಮಾಶಂಕರ ನಾವಿ ನಿರೂಪಿಸಿದರು. ಶ್ರೀಶೈಲ ಉಪ್ಪಾರ ವಂದಿಸಿದರು. ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts