More

    ಕಂದಾಯ ಗ್ರಾಮಗಳಾಗಲಿವೆ ತಾಂಡಾಗಳು

    ವಿಜಯಪುರ: ಸಂತ ಶ್ರೀ ಸೇವಾಲಾಲರು ಸಾರಿದ್ದ ಶ್ರಮ, ಶ್ರದ್ಧೆ, ನಿಷ್ಠೆ ಮೂರು ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ನಾಗರಿಕರಾಗಿ ಬಾಳಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಹೇಳಿದರು.

    ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಂತ ಶ್ರೀ ಸೇವಾಲಾಲ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
    ನೋಡುಗರ ಕಣ್ಣಿಗೆ, ಮನಸ್ಸಿಗೆ ಉತ್ಸಾಹ- ಉಲ್ಲಾಸವನ್ನು ತುಂಬುವಂತಹ ನೃತ್ಯ ಮತ್ತು ವೇಷ-ಭೂಷಣ ಬಂಜಾರ ಸಮುದಾಯದಾಗಿದೆ. ಇದಕ್ಕೆಲ್ಲ ಕಾರಣಿಕರ್ತರು ಸಂತ ಸೇವಾಲಾಲರು ಎಂದು ಬಣ್ಣಿಸಿದರು.

    ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸುವ ನಿರ್ಧಾರವನ್ನು ಹಿಂದಿನ ಸರ್ಕಾರದಲ್ಲಿ ಕೈಗೊಳ್ಳಲಾಗಿತ್ತು. ಈಗಿನ ಸರ್ಕಾರ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಲು ನಿರ್ಣಯ ಕೈಗೊಂಡು ಕಾರ್ಯ ಪ್ರವೃತ್ತವಾಗಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿರುವ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತನೆ ಮಾಡಲಾಗುವುದು ಎಂದು ತಿಳಿಸಿದರು.

    ಗಾಯಕ ಆರ್.ಬಿ ನಾಯಕ ಉಪನ್ಯಾಸ ನೀಡಿ, ಎಲ್ಲ ಸಮುದಾಯದ ಒಳಿತನ್ನು ಬಯಸಿದ ಸಂತ ಸೇವಾಲಾಲರ ತತ್ವಗಳನ್ನು ಎಲ್ಲರೂ ಅಳವಡಿಸಿಕೊಂಡು ಬಾಳಬೇಕು ಎಂದರು. ತಿಡಗುಂದಿ ಬಂಜಾರ ಸಂಸ್ಥೆಯ ವಿದ್ಯಾರ್ಥಿಗಳ ನೃತ್ಯ ಪ್ರದರ್ಶನ ಗಮನ ಸೆಳೆಯಿತು.

    ಜಿಪಂ ಸಿಇಒ ಗೋವಿಂದ ರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಇಸ್ರೋ ವಿಜ್ಞಾನಿ ವಿಲಾಸ ರಾಠೋಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಮಹೇಶ ಪೊದ್ದಾರ, ಸಮಾಜದ ಮುಖಂಡರಾದ ಡಿ.ಎಸ್.ಚವಾಣ್, ಗೋಪಿ ಜಾಧವ, ಕಾಂತಾ ನಾಯಕ, ಡಿ. ಎಲ್. ನಾಯಕ, ಅರ್ಜುನ ಲಮಾಣಿ, ಸುರೇಶ ರಾಠೋಡ, ಧನಸಿಂಗ ರಾಠೋಡ, ಮುಖಂಡ ಅಡಿವೆಪ್ಪ ಸಾಲಗಲ್ಲ ಮತ್ತಿತರರು ಉಪಸ್ಥಿತರಿದ್ದರು.

    ಗಮನ ಸೆಳೆದ ಲಂಬಾಣಿ ನೃತ್ಯ
    ಸಂತ ಸೇವಾಲಾಲರ ಭಾವಚಿತ್ರ ಮೆರವಣಿಗೆ ಅದ್ದೂರಿಯಾಗಿ ಜರುಗಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕ ಮಹೇಶ ಪೊದ್ದಾರ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು. ನಗರದ ಶ್ರೀ ಸಿದ್ಧರಾಮೇಶ್ವರ ದೇವಸ್ಥಾನದಿಂದ ಲಂಬಾಣಿ ನೃತ್ಯ, ಕುಂಭಮೇಳದ ಜತೆಗೆ ಗೊಂಬೆ ನೃತ್ಯ ಸೇರಿ ವಿವಿಧ ವಾದ್ಯಮೇಳಗಳೊಂದಿಗೆ ಮೆರವಣಿಗೆ ಜರುಗಿತು.

    ನಗರದ ಗಾಂಧಿ ಚೌಕ್, ಬಸವೇಶ್ವರ ವೃತ್ತ, ಅಂಬೇಡ್ಕರ್ ವೃತ್ತದ ಮಾರ್ಗವಾಗಿ ಕಂದಗಲ್ ಹನುಮಂತರಾಯ ರಂಗಮಂದಿರಕ್ಕೆ ಮೆರವಣಿಗೆ ಬಂದು ತಲುಪಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts