More

    ತೊರವಿಯಲ್ಲಿ ಸೋಂಕಿಗೆ 41 ಜನ ಬಲಿ

    ವಿಜಯಪುರ: ಗ್ರಾಮೀಣ ಭಾಗದಲ್ಲಿ ಕರೊನಾ ಅಟ್ಟಹಾಸ ಹೆಚ್ಚುತ್ತಿದ್ದು ನನ್ನ ತವರೂರಾದ ತೊರವಿಯಲ್ಲಿ 41 ಜನ ಸೋಂಕಿಗೆ ಬಲಿಯಾಗಿದ್ದಾರೆಂದು ಶಾಸಕ ಎಂ.ಬಿ. ಪಾಟೀಲ ತಿಳಿಸಿದರು.

    ಶನಿವಾರ ಜಿಲ್ಲಾಡಳಿತ ಕಚೇರಿಯಲ್ಲಿ ಕರೊನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ಅವರು, ಗ್ರಾಮೀಣ ಭಾಗದಲ್ಲಿ ಕರೊನಾ ವ್ಯಾಪಿಸಿದ್ದು, ಮನೆ ಮನೆಗೆ ಹೋಗಿ ಸಮೀಕ್ಷೆ ನಡೆಸಬೇಕು. ಅನಾರೋಗ್ಯಕ್ಕೆ ಈಡಾದವರಿಗೆ ಚಿಕಿತ್ಸೆ ಪ್ರಾರಂಭಿಸಬೇಕು. ಅಂದಾಗ ವಿಜಯಪುರ ರಾಜ್ಯದಲ್ಲೇ ಮಾದರಿಯಾಗಲು ಸಾಧ್ಯ ಎಂದರು.

    ಕರೊನಾ ಸೋಂಕಿತರ ಮಾಹಿತಿ ವಾಸ್ತವಿಕವಾಗಿ ಸರ್ಕಾರಕ್ಕೆ ತಲುಪುತ್ತಿಲ್ಲ. ತೊರವಿಯಲ್ಲಿ ಈವರೆಗೆ 71 ಜನ ಸಾವಿಗೀಡಾಗಿದ್ದರೆ ಅದರಲ್ಲಿ 41 ಜನ ಸೋಂಕಿತರಿದ್ದಾರೆ. ಇದು ಒಂದೇ ಗ್ರಾಮದ ಸ್ಥಿತಿ. ಹೀಗಿರುವಾಗ ಇಡೀ ಜಿಲ್ಲೆಯ ಎಲ್ಲ ಹಳ್ಳಿಗಳ ಸ್ಥಿತಿ ಹೇಗಿರಬಹುದು? ಎಂದು ಪ್ರಶ್ನಿಸಿದರು.

    ಗ್ರಾಮೀಣ ಪ್ರದೇಶಗಳಲ್ಲಿ ಈ ಹಿಂದೆ ಮೊದಲನೇ ಅಲೆಯಲ್ಲಿ ಅಷ್ಟಾಗಿ ಕಂಡುಬರದ ಕರೊನಾ ಕಾಯಿಲೆ 2ನೇ ಅಲೆಯಲ್ಲಿ ಹೆಚ್ಚಾಗಿ ಬಾಧಿಸುತ್ತಿದೆ. ಇದರಿಂದ ಗ್ರಾಮಗಳಲ್ಲಿ ಸರಣಿ ಸಾವುಗಳು ಸಂಭವಿಸುತ್ತಿವೆ. ಗ್ರಾಮಗಳಲ್ಲಿ ಒಂದಕ್ಕೊಂದು ಅಂಟಿಕೊಂಡಿರುವ ಮನೆಗಳು, ಚಿಕ್ಕದಾದ ಓಣಿಗಳು, ಮನೆಗಳಲ್ಲಿ ಪ್ರತ್ಯೇಕ ಕೋಣೆಗಳ ಕೊರತೆ, ವ್ಯಾದಿ ಬಗ್ಗೆ ಜನರಲ್ಲಿ ಭಯ, ಮೂಢ ನಂಬಿಕೆಗಳು, ರೋಗ ಪತ್ತೆ ಪರೀಕ್ಷೆ, ತಜ್ಞ ವೈದ್ಯರ ಬಳಿ ತಪಾಸಣೆ ಬರಲು ಹಣಕಾಸಿನ ತೊಂದರೆ ಇತ್ಯಾದಿ ಕಾರಣಗಳಿಂದ ಬಳಲುತ್ತಿರುವ ಹಲವರು ಚಿಕಿತ್ಸೆಗೆ ಬರುತ್ತಿಲ್ಲ. ಕೇಲವರು ಸ್ಥಳೀಯ ವೈದ್ಯರಿಂದ ಚಿಕಿತ್ಸೆ ಪಡೆದಿದ್ದರೆ, ಕೆಲವರು ಸ್ವಯಂ ಲಕ್ಷಣಗಳಿಗನುಸಾರ ಅಂಗಡಿಗಳಲ್ಲಿ ದೊರೆಯುವ ಮಾತ್ರೆಗಳನ್ನು ಪಡೆಯುತ್ತಿದ್ದಾರೆ ಎಂದು ವಿವರಿಸಿದರು.

    ಆದ್ದರಿಂದ ಕರೊನಾ ಕಾಯಿಲೆ ಹರಡುವಿಕೆ ತಪ್ಪಿಸಲು ಜಿಲ್ಲಾಡಳಿತ ವತಿಯಿಂದ ಸ್ಥಳೀಯ ಗ್ರಾಪಂ ಸಹಯೋಗದಿಂದ ಮನೆ-ಮನೆ ಸಮೀಕ್ಷೆಯನ್ನು ನಡೆಸಿ, ವ್ಯಕ್ತಿವಾರು ಆರೋಗ್ಯ ಮಾಹಿತಿಯನ್ನು ದಾಖಲಿಸಬೇಕು. ಅನಾರೋಗ್ಯ ಪೀಡಿತರಪಟ್ಟಿ ಸಿದ್ಧಪಡಿಸಿ, ರೋಗ ಲಕ್ಷಣಗಳ ಅನುಸಾರ ಚಿಕಿತ್ಸೆಗೆ ಅಗತ್ಯವಿರುವ ರೋಗಿಗಳನ್ನು ಆಸ್ಪತ್ರೆಗೆ ತರುವುದು ಆರೋಗ್ಯ ಇಲಾಖೆಯಿಂದ ಅಗತ್ಯವಿದ್ದ ಆರ್‌ಟಿಪಿಸಿಆರ್ ತಪಾಸಣೆಗಳನ್ನು ಮಾಡುವುದು. ಎಲ್ಲ ಗ್ರಾಮಗಳನ್ನು ಸ್ಯಾನಿಟೈಸ್ ಮಾಡುವುದು. ಡಂಗುರ ಸಾರಿ ತಿಳಿವಳಿಕೆ ಮೂಡಿಸಬೇಕೆಂದರು.

    ಜಿಲ್ಲಾಧಿಕಾರಿ ಪಿ. ಸುನೀಲ್‌ಕುಮಾರ್ ಮಾತನಾಡಿ, ಶಾಸಕರ ಸಲಹೆ ಯೋಗ್ಯವಾಗಿದ್ದು, ಸೋಮವಾರದಿಂದಲೇ ಕಾರ್ಯಪ್ರವೃತ್ತರಾಗುವುದಾಗಿ ತಿಳಿಸಿದರು.

    ಜಿ.ಪಂ. ಸಿಇಒ ಗೋವಿಂದ ರೆಡ್ಡಿ, ಡಾ. ಮಹೇಂದ್ರ ಕಾಪಸೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಕೆ.ಕೆ. ಚವಾಣ, ಡಾ. ಮಹಾಂತೇಶ ಬಿರಾದಾರ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts