More

    ಜಮೀನಿನ ಬೆಲೆ ಪರಿಷ್ಕರಣೆಗೆ ಒತ್ತಾಯ

    ವಿಜಯಪುರ: ಕೃಷ್ಣಾ ಮೇಲ್ದಂಡೆ ಯೋಜನೆಯ ಆಲಮಟ್ಟಿ ಜಲಾಶಯವನ್ನು 524.256 ಮೀ. ಹಿನ್ನೀರಿನಲ್ಲಿ ಮುಳುಗಡೆಯಾಗಲಿರುವ ತಾಲೂಕಿನ ಜಮೀನಿನ ಮಾರ್ಗಸೂಚಿ ಬೆಲೆ ಪರಿಸ್ಕರಣೆ ಮಾಡಬೇಕೆಂದು ಬಬಲೇಶ್ವರ ತಾಲೂಕಿನ ರೈತರ ನಿಯೋಗ ಶಾಸಕ ಎಂ.ಬಿ. ಪಾಟೀಲ ಅವರ ನೇತೃತ್ವದಲ್ಲಿ ಸೋಮವಾರ ಬೆಂಗಳೂರಿಗೆ ಭೇಟಿ ನೀಡಿ ಕಂದಾಯ ಸಚಿವ ಆರ್. ಅಶೋಕ ಅವರಿಗೆ ಮನವಿ ಸಲ್ಲಿಸಿತು.

    ಆಲಮಟ್ಟಿ ಅಣೆಕಟ್ಟು 524.256 ಮೀ. ಎತ್ತರಿಸಿ, ನೀರು ನಿಲ್ಲಿಸಿದಾಗ ಅಂದಾಜು 75 ಸಾವಿರ ಎಕರೆ ಪ್ರದೇಶದಷ್ಟು ಜಮೀನು ಮುಳುಗಡೆಯಾಗಲಿದ್ದು, ವಿಜಯಪುರ ಜಿಲ್ಲೆ ಬಬಲೇಶ್ವರ ತಾಲೂಕಿನ 14 ಗ್ರಾಮಗಳು ಮುಳುಗಡೆಯಾಗಲಿವೆ. ಈ ಹಿಂದೆ 2015-16 ರಲ್ಲಿ ಮಾರ್ಗಸೂಚಿ ಬೆಲೆಯನ್ನು ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಯ ಗ್ರಾಮಗಳಿಗೆ ನಿಗದಿಪಡಿಸಿರುತ್ತಾರೆ. ಆದರೆ, ಬಾಗಲಕೋಟೆಯ ಜಮಖಂಡಿ ಮತ್ತು ಬೀಳಗಿ ತಾಲೂಕಿನ ಮಾರ್ಗಸೂಚಿ ಪರಿಷ್ಕರಣೆ ಮಾಡಿರುತ್ತಾರೆ. ಅದರಂತೆ ವಿಜಯಪುರ ಜಿಲ್ಲೆ ಬಬಲೇಶ್ವರ ತಾಲೂಕಿನ 14 ಗ್ರಾಮಗಳ ಜಮೀನುಗಳ ಮಾರ್ಗಸೂಚಿ ಪರಿಷ್ಕರಣೆ ಮಾಡುವಂತೆ ಕಂದಾಯ ಸಚಿವರಿಗೆ ಒತ್ತಾಯಿಸಿದರು.

    ಶಾಸಕ ಎಂ.ಬಿ. ಪಾಟೀಲ ಮಾತನಾಡಿ, ರೈತರ ಬೇಡಿಕೆ ನ್ಯಾಯಯುತವಾಗಿದ್ದು, ಮುಳುಗಡೆಯಾಗುವ ಇತರ ತಾಲೂಕುಗಳಿಗೆ ತಾರತಮ್ಯವಾಗದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಕೋರಿದರು.

    ಮನವಿ ಸ್ವೀಕರಿಸಿದ ಕಂದಾಯ ಸಚಿವ ಆರ್. ಅಶೋಕ ಅವರು, ಸಂತ್ರಸ್ತರ ಮನವಿಯನ್ನು ಸರ್ಕಾರ ಪರಿಶೀಲನೆ ಮಾಡಿ ರೈತರಿಗೆ ಅನುಕೂಲವಾಗುವಂತೆ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದರು.

    ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಶಶಿಕಾಂತಗೌಡ ಪಾಟೀಲ, ಉಪಾಧ್ಯಕ್ಷ ಎಚ್.ಆರ್. ಬಿರಾದಾರ, ಜಿಪಂ ಮಾಜಿ ಅಧ್ಯಕ್ಷ ಬಸವರಾಜ ದೇಸಾಯಿ, ಮಾಜಿ ಉಪಾಧ್ಯಕ್ಷ ಶಿವನಗೌಡ ಪಾಟೀಲ, ಎಚ್.ಎಸ್. ಕೋರಡ್ಡಿ, ರಾಜ್ಯ ಬಾರ್ ಕೌನ್ಸಿಲ್ ಮಾಜಿ ಅಧ್ಯಕ್ಷ ರಾಜೇಂದ್ರ ದೇಸಾಯಿ, ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ನಿರ್ದೇಶಕರಾದ ಸಿದ್ದಣ್ಣ ದೇಸಾಯಿ, ರಾಮಣ್ಣ ಶೇಬಾನಿ, ವೆಂಕಣ್ಣ ಬಿದರಿ ಹಾಗೂ ಮುಖಂಡರಾದ ಪ್ರಭುಸ್ವಾಮಿ ಹಿರೇಮಠ, ಡಾ.ಎಂ.ಎಚ್. ಪಾಟೀಲ ಸೇರಿದಂತೆ ಜೈನಾಪುರ, ದೇವರಗೆಣ್ಣೂರ, ಶಿರಬೂರ, ಹೊಸೂರ, ಜಂಬಗಿ, ಕಣಬೂರ, ಲಿಂಗದಳ್ಳಿ ಹಾಗೂ ಇತರ ಗ್ರಾಮಸ್ಥರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts