More

    ರೈತರೊಂದಿಗೆ ಒಂದು ದಿನ ಕಾರ್ಯಕ್ರಮ ನಾಳೆ

    ವಿಜಯಪುರ: ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನಲ್ಲಿ ಬಸರಕೋಡ ಹಾಗೂ ಕವಡಿಮಟ್ಟಿ ಗ್ರಾಮದಲ್ಲಿ ಫೆ.23ರಂದು ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 3 ಗಂಟೆವರೆಗೆ ‘ರೈತರೊಂದಿಗೆ ಒಂದು ದಿನ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ರಾಜಶೇಖರ ವಿಲಿಯಂ ತಿಳಿಸಿದ್ದಾರೆ.

    ಬಸರಕೋಡ ಗ್ರಾಮದ ಶ್ರೀ ಪವಾಡ ಬಸವೇಶ್ವರ ಗುಡಿಯಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ ಪೂಜೆ ಸಲ್ಲಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ನಂತರ ರೈತ ಪವಾಡೆಪ್ಪ ಹಣಮಪ್ಪ ವಡ್ಡರ ಅವರ ಜಮೀನಿನಲ್ಲಿ ಗೋಮಾತೆ ಪೂಜೆ ಮತ್ತು ಮೇವು ಕತ್ತರಿಸಿ ತಿನ್ನಿಸುವುದು, ದೇಸಿ ಕೋಳಿ ಘಟಕ ವೀಕ್ಷಣೆ, ದೇಸಿ ಆಡುಗಳ ವೀಕ್ಷಣೆ, ಶೇಂಗಾ ಬೆಳೆಯಲ್ಲಿ ತುಂತುರು ನೀರಾವರಿ ಘಟಕ ಚಾಲನೆ, ಕೊಟ್ಟಿಗೆ ಗೊಬ್ಬರದ ಘಟಕಕ್ಕೆ ಕಾಂಪೋಸ್ಟ್ ಕಲ್ಚರ್ ಸಿಂಪಡಣೆ ಮಾಡುವುದು, ಅಜೋಲ್ಲಾ ಘಟಕದ ವೀಕ್ಷಣೆ, ಹೈಡ್ರೋಪೊನಿಕ್ಸ್ ಘಟಕ ವೀಕ್ಷಣೆ, ಎರೆಹುಳು ಗೊಬ್ಬರದ ಘಟಕಗಳಿಗೆ ಎರೆಹುಳುಗಳನ್ನು ಬಿಡುವುದು, ಸಾವಯವ ಬಾಳೆ ಬೆಳೆಯಲ್ಲಿ ಬಾಳೆ ಗೊನೆ ಕತ್ತರಿಸುವುದು, ಯಾಂತ್ರಿಕೃತ ಕಾಯಿಪಲ್ಲೆ ಸಸಿಗಳನ್ನು ನೆಡುವುದು, ಆವಿಷ್ಕಾರದ ಬೈಕ್ ಟ್ರಾಲಿಯಿಂದ ಸ್ವಂತ ಮಾರುಕಟ್ಟೆ ಕಂಡುಕೊಂಡಿರುವುದರ ವೀಕ್ಷಣೆ, ಯುವ ರೈತರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಲಿವೆ ಎಂದು ಮಾಹಿತಿ ನೀಡಿದ್ದಾರೆ.

    ಅದರಂತೆ ರೈತ ಸಿದ್ದು ಎಂ.ಮೇಟಿ ಅವರ ಜಮೀನಿನಲ್ಲಿ ಗೋಧಿ ಬೆಳೆಯ ಯಾಂತ್ರಿಕೃತ ಕೊಯ್ಲು ಮಾಡುವುದು, ಕಬ್ಬು ಕಟಾವಿನ ನಂತರ ರವದಿಯನ್ನು ಪೆಂಡಿ ಕಟ್ಟುವುದು. ಶ್ರೀಶೈಲ ಬಸವಂತರಾಯ ಮೇಟಿ ಅವರ ಜಮೀನಿನಲ್ಲಿ ನೆರಳು ಮನೆಯಲ್ಲಿ ವಿಳ್ಯದೆಲೆ ಬೆಳೆ ವೀಕ್ಷಣೆ ಹಾಗೂ ಕೊಯ್ಲು, ಗಿರ್ ತಳಿಯ ಆಕಳು ಘಟಕ ವೀಕ್ಷಣೆ ಹಾಗೂ ಮೇವು ತಿನ್ನಿಸುವುದು, ಟ್ರಾೃಕ್ಟರ್ ಚಾಲಿತ ಮೇವಿನ ಬೀಜ ಬಿತ್ತುವುದು, ಹೇಮರೆಡ್ಡಿ ಬಸವಂತರಾಯ ಮೇಟಿ ಅವರ ಜಮೀನಿನಲ್ಲಿ ಹವಾಮಾನ ಮುನ್ಸೂಚನೆ ಘಟಕ ವೀಕ್ಷಣೆ, ದ್ರಾಕ್ಷಿ ಬೆಳೆಗೆ ಲಘು ಪೋಷಕಾಂಶ ಸಿಂಪಡಣೆ, ರೈತರೊಂದಿಗೆ ಚರ್ಚೆ ಹಾಗೂ ಪ್ರಗತಿಪರ ರೈತರಿಗೆ ಸನ್ಮಾನ ಕಾರ್ಯಕ್ರಮಗಳು ಜರುಗಲಿವೆ ಎಂದು ತಿಳಿಸಿದ್ದಾರೆ.

    ಅದೇ ರೀತಿ ಕವಡಿಮಟ್ಟಿ ಗ್ರಾಮದ ಜಲಪುರ ಕೆರೆಗೆ ಬಾಗಿನ ಅರ್ಪಣೆ ಹಾಗೂ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಗ್ರಾಮದಲ್ಲಿ ಮೆರವಣಿಗೆ, ಕೃಷಿ ವಸ್ತು ಪ್ರದರ್ಶನ ವೀಕ್ಷಣೆ, ವಿವಿಧ ಯೋಜನೆಗಳಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ ಇಲಾಖೆ ಸವಲತ್ತುಗಳನ್ನು ವಿತರಣೆ ಮಾಡುವುದು, ಆತ್ಮಯೋಜನೆಯಡಿ ಪ್ರಶಸ್ತಿ ಪಡೆದ ರೈತರಿಗೆ ಸನ್ಮಾನಿಸಲಾಗುತ್ತದೆ. ಕಾರ್ಯಕ್ರಮದಲ್ಲಿ ರೈತರೊಂದಿಗೆ ಸಂವಾದ ಜರುಗಲಿದೆ. ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ, ಸಂಸದ ರಮೇಶ ಜಿಗಜಿಣಗಿ ಹಾಗೂ ಜಿಲ್ಲೆಯ ಜನಪ್ರತಿನಿಧಿಗಳು, ಅಧಿಕಾರಿಗಳು, ರೈತರು ಪಾಲ್ಗೊಳ್ಳಲಿದ್ದಾರೆ ಎಂದು ವಿವರಿಸಿದ್ದಾರೆ.

    ಆಡಳಿತ ಭವನ ಉದ್ಘಾಟನೆ ಇಂದು
    ಇಂಡಿ ಪಟ್ಟಣದಲ್ಲಿ ಫೆ.22ರಂದು ಬೆಳಗ್ಗೆ 10.30ಕ್ಕೆ ಕೃಷಿ ವಿಜ್ಞಾನ ಕೇಂದ್ರದ ಆಡಳಿತ ಭವನ ಉದ್ಘಾಟನಾ ಸಮಾರಂಭ ಜರುಗಲಿದೆ.

    ಸಚಿವ ಬಿ.ಸಿ.ಪಾಟೀಲ ಕಾರ್ಯಕ್ರಮ ಉದ್ಘಾಟಿಸಲಿದ್ದು, ಶಾಸಕ ಯಶವಂತರಾಯಗೌಡ ಪಾಟೀಲ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಪಂ ಅಧ್ಯಕ್ಷೆ ಸುಜಾತಾ ಕಳ್ಳಿಮನಿ, ಶಾಸಕರಾದ ಎಂ.ಬಿ ಪಾಟೀಲ, ಶಿವಾನಂದ ಪಾಟೀಲ, ಬಸನಗೌಡ ಪಾಟೀಲ, ದೇವಾನಂದ ಚವ್ಹಾಣ, ಸೋಮನಗೌಡ ಪಾಟೀಲ ಸೇರಿದಂತೆ ಇನ್ನಿತರರು ಉಪಸ್ಥಿತರಿರಲಿದ್ದಾರೆ ಎಂದು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts