More

    ವಿದೇಶದಿಂದ ಕಾನ್ಸನ್‌ಟ್ರೇಟ್ ಉಪಕರಣ ಖರೀದಿ

    ವಿಜಯಪುರ: ಆಕ್ಸಿಜನ್ ಪೂರೈಕೆಗೆ ಕಾನ್ಸನ್‌ಟ್ರೇಟ್ ಎಂಬ ಹೊಸ ಉಪಕರಣ ಬಂದಿದ್ದು, ವಿದೇಶಗಳಲ್ಲಿ ಬಳಕೆಯಲ್ಲಿರುವ ಉಪಕರಣಗಳನ್ನು ಖರೀದಿಸಿ ತರಿಸಲು ಕೊಟೇಶನ್ ಸಿದ್ಧಪಡಿಸಲಾಗುತ್ತಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಮುರುಗೇಶ ನಿರಾಣಿ ತಿಳಿಸಿದರು.

    ಕಲಬುರಗಿ ಜಿಲ್ಲಾ ಉಸ್ತುವಾರಿ ಹೊತ್ತ ಬಳಿಕ ಸೋಮವಾರ ಕಲಬುರಗಿಯತ್ತ ಪ್ರಯಾಣ ಬೆಳೆಸಿದ್ದ ನಿರಾಣಿ ಅವರು ಮಾರ್ಗಮಧ್ಯೆ ವಿಜಯಪುರ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಕರೊನಾ ಹಿನ್ನೆಲೆ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಅವರು ಸುದ್ದಿಗೋಷ್ಠಿ ನಡೆಸಿದರು.

    ಕಾನ್ಸನ್‌ಟ್ರೇಟ್ ಎಂಬ 1 ಉಪಕರಣದಲ್ಲಿ 5 ಮತ್ತು 10 ಲೀಟರ್ ಆಕ್ಸಿಜನ್ ತುಂಬಿಸಲು ಅವಕಾಶವಿದೆ. 10 ಲೀಟರ್ ಸಾಮರ್ಥ್ಯದ 1 ಉಪಕರಣದಲ್ಲಿ ಇಬ್ಬರಿಗೆ ಆಕ್ಸಿಜನ್ ಪೂರೈಸಲು ಸಾಧ್ಯವಿದೆ. ಬೇರೆ ಬೇರೆ ದೇಶದಿಂದ ತರಿಸಿ ಪ್ರತಿಯೊಂದು ಜಿಲ್ಲೆಗೆ ತಲುಪಿಸುವ ವ್ಯವಸ್ಥೆ ಸರ್ಕಾರ ಮಾಡುತ್ತಿದೆ ಎಂದರು.

    ಇನ್ನು ಸಕ್ಕರೆ ಕಾರ್ಖಾನೆಗಳಿಂದಲೂ ಆಕ್ಸಿಜನ್ ಉತ್ಪಾದನೆ ಮಾಡಲು ಸಾಧ್ಯವಿದೆಯಾ ಎಂದು ಪರಿಶೀಲಿಸಿ, ಅವರಿಗೂ ಅವಕಾಶ ಕಲ್ಪಿಸಲಾಗುತ್ತಿದೆ. ಖುದ್ದಾಗಿ ನಾನೇ ನನ್ನ ಸಕ್ಕರೆ ಕಾರ್ಖಾನೆಯಿಂದ ಆಕ್ಸಿಜನ್ ಉತ್ಪಾದನೆ ಮಾಡಲು ಕೊಟೇಶನ್ ತರಿಸಿಕೊಳ್ಳುತ್ತಿದ್ದೇನೆ. ಮೂರು ತಿಂಗಳಲ್ಲಿ ವಿಜಯಪುರ- ಬಾಗಲಕೋಟೆಗೆ ಸಾಕಾಗುವಷ್ಟು ಆಕ್ಸಿಜನ್ ಉತ್ಪಾದಿಸಲು ಮುಧೋಳ ಕಾರ್ಖಾನೆಯಲ್ಲಿ ಸಿದ್ಧತೆ ನಡೆದಿದೆ ಎಂದರು.

    ಬಳ್ಳಾರಿಯ ಜಿಂದಾಲ್ ಸ್ಟೀಲ್ ವರ್ಕ್ ಕಂಪನಿಯಿಂದ ರಾಜ್ಯಕ್ಕೆ 400 ಟನ್‌ದಷ್ಟು ಆಕ್ಸಿಜನ್ ಪೂರೈಕೆಯಾಗುತ್ತಿದೆ. ಅದರಲ್ಲಿ 13 ಟನ್ ಆಕ್ಸಿಜನ್‌ನ್ನು ವಿಜಯಪುರ ಜಿಲ್ಲೆಗೆ ತರಿಸಲಾಗುತ್ತಿದೆ. ಬಳ್ಳಾರಿಯಲ್ಲಿ ಇನ್ನೂ ಮೂರ್ನಾಲ್ಕು ಆಕ್ಸಿಜನ್ ಉತ್ಪಾದನೆ ಕಂಪನಿಯಿದ್ದು ಅವುಗಳಿಂದ ಕೈಗಾರಿಕೆ ಬದಲು ಮಾನವ ಬಳಕೆಗೆ ಆಕ್ಸಿಜನ್ ಕೊಡಲು ತಿಳಿಸಲಾಗಿದೆ. ಧಾರವಾಡದ ಕೆಐಜಿಯಿಂದ ಸಹ ಆಕ್ಸಿಜನ್ ತರಿಸಿಕೊಳ್ಳಲಾಗುತ್ತಿದೆ. ಜೊತೆಗೆ ಸ್ಥಳೀಯವಾಗಿಯೂ ಖಾಸಗಿ ಏಜೆನ್ಸಿಗಳಿಂದ ಆಕ್ಸಿಜನ್ ತಕ್ಕಮ್ಮಟ್ಟಿಗೆ ಪಡೆಯಲಾಗುತ್ತಿದೆ ಎಂದು ನಿರಾಣಿ ತಿಳಿಸಿದರು.

    ರೆಮ್‌ಡೆಸಿವಿರ್ ಸಮಸ್ಯೆ
    ಕರೊನಾ ಪಾಸಿಟಿವ್ ಬಂದವರೆಲ್ಲರೂ ರೆಮ್‌ಡೆಸಿವಿರ್ ಚುಚ್ಚುಮದ್ದು ಲಸಿಕೆ ಕೇಳುತ್ತಿದೆ. ಅಸಲು ಈ ಚುಚ್ಚುಮದ್ದು ಲಸಿಕೆ ಎಲ್ಲರಿಗೂ ಅವಶ್ಯವಿಲ್ಲ. ವೈದ್ಯರ ಸಲಹೆ ಇಲ್ಲದೇ ರೆಮ್‌ಡೆಸಿವಿರ್ ಬಳಸಬಾರದು. ರಾಜ್ಯದಲ್ಲಿ ರೆಮ್‌ಡೆಸಿವಿರ್ ಕೊರತೆಯಾಗಿಲ್ಲ. ಸರ್ಕಾರ ಸಹ ಸಾಧ್ಯವಾದಷ್ಟು ಹೆಚ್ಚಿಗೆ ರೆಮ್‌ಡೆಸಿವಿರ್ ಪೂರೈಸುತ್ತಿದೆ.

    ಬಹುಮುಖ್ಯವಾಗಿ ಪ್ರಧಾನಿ ನರೇಂದ್ರ ಮೋದಿ ಅವರು 20 ಕಂಪೆನಿಗಳಿಗೆ ರೆಮ್‌ಡೆಸಿವಿರ್ ತಯಾರು ಮಾಡಲು ಪರವಾನಿಗೆ ಕೊಟ್ಟಿದ್ದು ಅದರಲ್ಲಿ 2 ಕಾರ್ಖಾನೆಗಳು ಕರ್ನಾಟಕದ್ದಾಗಿವೆ. ಒಂದು ಕಿರಣ ಮುಜುಂದಾರ ಅವರ ಬಯೋಕಾನ್, ಇನ್ನೊಂದು ಮುಧೋಳದ ಸತೀಶ ಬಾರಗಿ ಎನ್ನುವವರ ಕಂಪನಿಗೆ ರೆಮ್‌ಡೆಸಿವಿರ್ ತಯಾರಿಸಲು ಅವಕಾಶ ಸಿಕ್ಕಿದೆ ಎಂದರು. ಇನ್ನು ಕರೊನಾ ಲಸಿಕೆ ಅಭಾವ ಇಲ್ಲ. ಹಂತ ಹಂತವಾಗಿ ಲಸಿಕೆ ತರಿಸಲಾಗುತ್ತಿದೆ. ಸದಾನಂದ ಗೌಡರು ಸಹ ಕೇಂದ್ರದಿಂದ ಲಸಿಕೆ ತರಿಸುತ್ತಿದ್ದು, ಇವತ್ತು 1.35 ವೈಲ್ ಲಸಿಕೆ ಕಳುಹಿಸುತ್ತಿದ್ದಾರೆ ಎಂದರು.

    ಸಾವಿನ ಅಂಕಿ ಸಂಖ್ಯೆ ಮುಚ್ಚಿಡುವ ಪ್ರಶ್ನೆಯೇ ಇಲ್ಲ
    ಸಾವಿನ ಅಂಕಿ-ಅಂಶ ಮುಚ್ಚಿಡುವ ಪ್ರಶ್ನೆಯೇ ಇಲ್ಲ. ಸತ್ಯವನ್ನು ನಾವು ಒಪ್ಪಿಕೊಳ್ಳಬೇಕು. ಸಿದ್ದರಾಮಯ್ಯ, ಡಿಕೆಶಿ ಹಾಗೂ ಕುಮಾರಸ್ವಾಮಿ ಅನುಭವಿಕರು. ಅವರೂ ಸರ್ಕಾರ ನಡೆಸಿದ್ದಾರೆ. ಆರೋಪದ ಬದಲು ಸಲಹೆ ಕೊಡಲಿ. ಅವರ ಸಲಹೆ ಸೂಕ್ತವಾಗಿದ್ದಲ್ಲಿ ಅನುಷ್ಟಾನಗೊಳಿಸೋಣ. ಇನ್ನು ಎಂ.ಬಿ. ಪಾಟೀಲ ಅವರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಅವರ ಬಗ್ಗೆ ನನಗೆ ಅಭಿಮಾನವಿದೆ. ಆದರೆ, ಸರ್ಕಾರದ ಬಗ್ಗೆ ಆರೋಪ ಮಾಡುವ ಬದಲು ಸಹಕಾರ ನೀಡಲಿ ಎಂದರು.

    ಮುಖ್ಯಮಂತ್ರಿಗೆ 79 ವರ್ಷ ವಯಸ್ಸಾಗಿದೆ. ಆದರೂ ಹಗಲಿರುಳು ಶ್ರಮಿಸುತ್ತಿದ್ದಾರೆ. ಪ್ರತಿ ಜಿಲ್ಲೆಗೆ ಭೇಟಿ ನೀಡಲು ಅವರಿಗೆ ಸಮಯವಿಲ್ಲ. ಅದರ ಬದಲು ಉಸ್ತುವಾರಿಗಳ ಮೂಲಕ ಕೆಲಸ ಮಾಡಿಸುತ್ತಿದ್ದಾರೆ. ದಿನಕ್ಕೆ ಮೂರು ಬಾರಿ ಸಭೆ ನಡೆಸಿ ಶೇ. 100 ರಷ್ಟು ಶ್ರಮಹಾಕಿ ಕೆಲಸ ಮಾಡುತ್ತಿದ್ದಾರೆಂದು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

    ನೂತನ ಮರಳು ನೀತಿ ಸಿದ್ಧ
    ನೂತನ ಮರಳು ನೀತಿ ಸಿದ್ಧವಾಗಿದೆ. ಈಗಾಗಲೇ ಜಿಲ್ಲಾಡಳಿತಕ್ಕೆ ಅದರ ಪ್ರತಿ ನೀಡಲಾಗಿದೆ. ಏಳು ದಿನದಲ್ಲಿ ಅದರ ಬಗ್ಗೆ ಆಕ್ಷೇಪಣೆ ಇದ್ದರೆ ತಿಳಿಸಲು ಕಾಲಾವಕಾಶ ಇದೆ. ಕೇವಲ 10 ದಿನದಲ್ಲಿ ನೀತಿ ಅನುಷ್ಟಾನಗೊಳ್ಳಲಿದೆ. ವೆಬ್‌ಸೈಟ್‌ನಲ್ಲಿಯೂ ನೂತನ ಪಾಲಿಸಿ ಅಳವಡಿಸಲಾಗಿದೆ. ಯಾರು ಬೇಕಾದರೂ ಸಲಹೆ ಇದ್ದರೆ ಕೊಡಬಹುದು ಎಂದು ಸಚಿವ ನಿರಾಣಿ ತಿಳಿಸಿದರು.

    ಮರಳು ಖರೀದಿಗೆ ಏಕಗವಾಕ್ಷಿ ಪದ್ಧತಿ ಜಾರಿಗೆ ತರಲು ನೂತನ ಮರಳು ನೀತಿಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಮಾರುಕಟ್ಟೆಯಲ್ಲಿ ಮರಳು ಕೊರತೆಯಾಗದಂತೆ ನೋಡಿಕೊಳ್ಳಲಾಗಿದೆ. ಮೈನಿಂಗ್ ಅದಾಲತ್, ಜ್ಯುವೆಲರಿ ಪಾರ್ಕ್, ಬಂದ್ ಬಿದ್ದಿರುವ ಕ್ರಷರ್‌ಗಳನ್ನು ಪುನಃ ಆರಂಭಿಸಲು ತಿಳಿಸಲಾಗಿದೆ. ಕಾರ್ಮಿಕರಿಗೆ ಉದ್ಯೋಗ ಸಿಗಬೇಕೆಂಬ ಕಾರಣಕ್ಕೆ ಕ್ರಷರ್‌ಗಳನ್ನು ಆರಂಭಿಸಲು ಸೂಚಿಸಲಾಗಿದೆ ಎಂದರು.

    ಜಿಲ್ಲಾಧಿಕಾರಿ ಪಿ. ಸುನೀಲಕುಮಾರ, ಬಿಜೆಪಿ ಮುಖಂಡ ಸುರೇಶ ಬಿರಾದಾರ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts