More

    ಕಾರ್ಮಿಕ ಕಾನೂನು ತಿದ್ದುಪಡಿ ಕೈ ಬಿಡಿ

    ವಿಜಯಪುರ: ಕಾರ್ಮಿಕರ ಕಾನೂನು ತಿದ್ದುಪಡಿ ಕೈಬಿಡುವುದು ಮತ್ತು ವಲಸೆ ಕಾರ್ಮಿಕರ ಜೀವನ ರಕ್ಷಿಸಲು ಆಗ್ರಹಿಸಿ ಜಂಟಿ ಕಾರ್ಮಿಕ ಸಂಘಟನೆ ಕಾರ್ಯಕರ್ತರು ಸೋಮವಾರ ಕಾರ್ಮಿಕ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
    ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಭೀಮಶಿ ಕಲಾದಗಿ ಮಾತನಾಡಿ, ಕರ್ನಾಟಕ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರ ಹಾಗೂ ಮಾಲೀಕರ ಲಾಬಿಯ ಒತ್ತಡಕ್ಕೆ ಮಣಿದು ಕಾರ್ಮಿಕ ಕಾನೂನುಗಳಿಗೆ ಕಾರ್ಮಿಕ ವಿರೋಧಿ ತಿದ್ದುಪಡಿಗಳನ್ನು ತರಲು ಮುಂದಾಗಿದೆ. ರಾಜ್ಯ ಸರ್ಕಾರವು ಈಚೆಗೆ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ರಾಜ್ಯದ ರೈತರನ್ನು ಮುಕ್ತ ಮಾರುಕಟ್ಟೆಯ ಒತ್ತಡಕ್ಕೆ ಗುರಿ ಮಾಡಿದೆ. ಇದರೊಂದಿಗೆ ಎಪಿಎಂಸಿಯಲ್ಲಿ ಕೆಲಸ ಮಾಡುತ್ತಿರುವ ಸಾವಿರಾರು ಕಾರ್ಮಿಕರು ಉದ್ಯೋಗ ಕಳೆದುಕೊಳ್ಳಲಿದ್ದಾರೆ. ಪ್ರಸ್ತುತ ಬಿಕಟ್ಟಿನ ಪರಿಸ್ಥಿತಿಯಲ್ಲಿ ರೈತರು ಬೆಳೆದ ಎಲ್ಲಾ ಬೆಳೆಗಳನ್ನು ಸೂಕ್ತ ವೈಜ್ಞಾನಿಕ ಬೆಲೆ ನೀಡಿ ಸರ್ಕಾರವೇ ಖರೀದಿಸಿ, ಸಾರ್ವಜನಿಕ ವಿತರಣಾ ವ್ಯವಸ್ಥೆಯ ಮೂಲಕ ಗ್ರಾಹಕರಿಗೆ ಹಂಚುವುದೊಂದೇ ಬಿಕ್ಕಟ್ಟಿನ ಪರಿಹಾರವಾಗಿದೆ. ಆದರಿಂದ ರೈತ ವಿರೋಧಿ ಎಪಿಎಂಸಿ ಕಾಯ್ದೆಗೆ ತಿದ್ದುಪಡಿಯನ್ನು ಕೂಡಲೆ ಹಿಂಪಡೆಯುವಂತೆ ಒತ್ತಾಯಿಸಿದರು.

    ಪ್ರಗತಿ ವಿರೋಧಿ ಕ್ರಮ

    ಎಐಟಿಯುಸಿ ಜಿಲ್ಲಾ ಸಮಿತಿ ಸದಸ್ಯ ಸಿ.ಎ. ಗಂಟೆಪ್ಪಗೋಳ ಮಾತನಾಡಿ, ಕಾರ್ಖಾನೆಗಳ ಕಾಯ್ದೆ (ಕೆಲಸದ ಅವಧಿಯನ್ನು 8 ರಿಂದ 12 ಗಂಟೆಗೆ ಹೆಚ್ಚಿಸಲು), ಕೈಗಾರಿಕಾ ವಿವಾದ ಕಾಯ್ದೆ ಮತ್ತು ಗುತ್ತಿಗೆ ಕಾರ್ಮಿಕರ ಕಾಯ್ದೆ (ಕಾಯಂ ಕೆಲಸಗಳನ್ನು ನಾಶಮಾಡಿ, ಗುತ್ತಿಗೀಕರಣ ಹೆಚ್ಚಿಸಲು)ಗಳನ್ನು ತಿದ್ದುಪಡಿ ಮಾಡಲು ಉದ್ದೇಶಿಸಿದೆ. ಈಗಾಗಲೇ ಉತ್ತರ ಪ್ರದೇಶ, ಮಧ್ಯ ಪ್ರದೇಶ ಮತ್ತು ಗುಜರಾತ್ ರಾಜ್ಯದ ಸರ್ಕಾರಗಳು ಬಂಡವಾಳ ಹೂಡಿಕೆಯನ್ನು ಅಕರ್ಷಿಸುವ ನೆಪದಲ್ಲಿ ಕಾರ್ಮಿಕ ಕಾನೂನುಗಳ ಅನುಷ್ಠಾನಕ್ಕೆ ರಜೆ ಘೋಷಿಸುವಂತಹ ಪ್ರತಿಗಾಮಿ ಕ್ರಮಕ್ಕೆ ಮುಂದಾಗಿದೆ. ಇಂತಹ ಪ್ರಗತಿ-ವಿರೋಧಿ ಕ್ರಮವು ಸಮಾಜವನ್ನು ಮಧ್ಯಯುಗಕ್ಕೆ ಕೊಂಡೊಯ್ಯಲಿದೆ ಎಂದು ಟೀಕಿಸಿದರು.

    ಮಾಲೀಕರ ಮೇಲೆ ಕ್ರಮ ಜರುಗಿಸಿ

    ಎಐಯುಟಿಯುಸಿ ಜಿಲ್ಲಾ ಅಧ್ಯಕ್ಷ ಮಲ್ಲಿಕಾರ್ಜುನ ಎಚ್.ಟಿ. ಮಾತನಾಡಿ, ಲಾಕ್ ಡೌನ್ ಅವಧಿಗೆ ವೇತನ ನೀಡುವುದಾಗಿ ಕೇಂದ್ರ ಸರ್ಕಾರ ಸೂಚಿಸಿದ್ದು ಯಾವುದೇ ಮಾಲೀಕರು ಪಾವತಿಸದ ಕಾರಣ ದೇಶಾದ್ಯಂತ ದುಡಿಯುವ ವರ್ಗ ತೀವ್ರ ಸಂಕಷ್ಟಕ್ಕೆ ಗುರಿಯಾಗಿದೆ. ಇದು ಕೋಟ್ಯಂತರ ವಲಸೆ ಕಾರ್ಮಿಕರು ಉದ್ಯೋಗ ಕಳೆದುಕೊಂಡು ಸಾವಿರಾರು ಕಿಲೋಮೀಟರ್ ಕಾಲ್ನಡಿಗೆಯಲ್ಲಿಯೇ ಕ್ರಮಿಸಿ ಊರು ಸೇರುವ ಪರಿಸ್ಥಿತಿ ನಿರ್ಮಿಸಿದೆ. ದೇಶದ ಕಾರ್ಮಿಕ ವರ್ಗ ಬಹುತೇಕ ಅಸಂಘಟಿತ ವಲಯದಲ್ಲಿ ದುಡಿಯುತ್ತಿದ್ದು, ಲಾಕ್ ಡೌನ್ ನಿಂದ ಬದುಕನ್ನು ಕಳೆದುಕೊಂಡು ಮನುಕುಲದ ಅತಿ ದೊಡ್ಡ ಮಾನವೀಯ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಮಾ.29 ರಂದು ಕೇಂದ್ರ ಗೃಹ ಸಚಿವಾಲಯ ಮಾಲೀಕರಿಗೆ ಕಾರ್ಮಿಕರ ಸಂಪೂರ್ಣ ವೇತನವನ್ನು ಯಾವುದೇ ಕಡಿತವಿಲ್ಲದೆ ಲಾಕ್-ಡೌನ್ ಅವಧಿಗೆ ಪಾವತಿಸಬೇಕೆಂದು ಆದೇಶ ನೀಡಿದ್ದರೂ ಅಂತಹ ಸೂಚನೆಯನ್ನು ಉಲ್ಲಂಸಿ ಮಾಲೀಕರು ಕಾರ್ಮಿಕರ ವೇತನ ಪಾವತಿಯನ್ನು ನಿರಾಕರಿಸುತ್ತಿದ್ದಾರೆ. ಆದ್ದರಿಂದ ರಾಜ್ಯ ಸರ್ಕಾರಕ್ಕೆ ಕಾನೂನು ಉಲ್ಲಂಸುವ ಮಾಲೀಕರ ವಿರುದ್ಧ ಕ್ರಮ ಜರುಗಿಸಿ, ಕಾರ್ಮಿಕರ ವೇತನ ಪಾವತಿಸಲು ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಬೇಕೆಂದು ಹೇಳಿದರು.

    ಕಾರ್ಮಿಕರ ಹಿತಾಸಕ್ತಿ ರಕ್ಷಿಸಿ

    ಕೆವಿಜಿ ಬ್ಯಾಂಕ್ ನೌಕರರ ಸಂಘದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಿ.ಜಿ. ಗಾಂಧಿ ಮಾತನಾಡಿ, ಕಾರ್ಮಿಕ ಕಾನೂನುಗಳ ತಿದ್ದುಪಡಿ ಮಾಡಲು ಹೇಳಿರುವಂತೆ ಕೆಲವು ರಾಜ್ಯ ಸರ್ಕಾರಗಳು ಕೇಂದ್ರ ಸರ್ಕಾರದ ಒತ್ತಡಕ್ಕೆ ಮಣಿದು ಕಾರ್ಮಿಕ ಕಾನೂನುಗಳ ಅನುಷ್ಟಾನಕ್ಕೆ ಸಂಪೂರ್ಣ ರಜೆ ಘೋಷಿಸಿವೆ. ಇಂತಹ ಪ್ರತಿಗಾಮಿ ಕ್ರಮದಿಂದ ಕನಿಷ್ಟ ವೇತನ ಪಾವತಿ ಕಾಯ್ದೆಯ ಸೌಲಭ್ಯವೂ ಕಾರ್ಮಿಕರಿಗೆ ಸಿಗುವುದಿಲ್ಲ. ನಮ್ಮ ರಾಜ್ಯ ಸರ್ಕಾರವೂ ಸಹ ಇದೇ ದಾರಿಯಲ್ಲಿ ಸಾಗಿ ಕಾರ್ಖಾನೆಗಳ ಕಾಯ್ದೆ, ಕೈಗಾರಿಕಾ ವಿವಾದ ಕಾಯ್ದೆ ಮತ್ತು ಗುತ್ತಿಗೆ ಕಾರ್ಮಿಕರ ಕಾಯ್ದೆಗಳ ಕಾರ್ಮಿಕ-ವಿರೋಧಿ ತಿದ್ದುಪಡಿಗೆ ಮುಂದಾಗಿದೆ ಎಂದು ತಿಳಿದುಬಂದಿದೆೆ. ಇಂತಹ ಕಾರ್ಮಿಕ ವಿರೋಧಿ ಕ್ರಮವನ್ನು ಸಾರಾ-ಸಗಟಾಗಿ ತಿರಸ್ಕರಿಸಿ ಬಿಕ್ಕಟ್ಟಿನ ಈ ಸಂದರ್ಭದಲ್ಲಿ ಕಾರ್ಮಿಕ ವರ್ಗದ ಹಿತಾಸಕ್ತಿಯನ್ನು ಬಲಪಡಿಸಲು ಕ್ರಮ ವಹಿಸಬೇಕೆಂದರು.
    ಎಸ್‌ಐಎ್ಟಿ ಜಿಲ್ಲಾ ಅಧ್ಯಕ್ಷ ಪ್ರಭುಗೌಡ ಪಾಟೀಲ, ದಲಿತ ವಿದ್ಯಾರ್ಥಿ ಪರಿಷತ್ ರಾಜ್ಯಾಧ್ಯಕ್ಷ ಶ್ರೀನಾಥ ಪೂಜಾರಿ, ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಕ್ಷಣ ಹಂದ್ರಾಳ, ಸುನಿಲ ಸಿದ್ರಾಮಶೆಟ್ಟಿ, ಶಿವಾಜಿ ಇನಾಮದಾರ, ಆಕಾಶ ರಾಮತೀರ್ಥ, ಮಲಿಕಸಾಬ ಟಕ್ಕಳಕಿ, ಸಾಬು ಗುಗದಡ್ಡಿ, ಈರಣ್ಣ ಬೆಳ್ಳುಂಡಗಿ, ಲಾಲಸಾಬ ಕೊರಬು, ಸಕಿನ ಕಾಂಬಳೆೆ, ಸುನಿಲ ನಾಯಕ ಮತ್ತಿತರರಿದ್ದರು.

    ಕಾರ್ಮಿಕ ಕಾನೂನು ತಿದ್ದುಪಡಿ ಕೈ ಬಿಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts