More

    ಸದೃಢ ಸಮಾಜ ನಿರ್ಮಾಣಗೊಳ್ಳಲಿ

    ವಿಜಯಪುರ : ದೇಶದ ಸ್ವಾತಂತ್ರೃಕ್ಕಾಗಿ ಹೋರಾಡಿದ ಪ್ರತಿಯೊಬ್ಬ ವೀರ ಯೋಧರ ತ್ಯಾಗ, ಬಲಿದಾನಗಳ ಬಗ್ಗೆ ಮುಂಬರುವ ಯುವಪೀಳಿಗೆ ಅರಿತುಕೊಳ್ಳಬೇಕು. ಅವರ ಜೀವನ-ಸಾಧನೆಯನ್ನು ನಾವೆಲ್ಲ ಸ್ಫೂರ್ತಿಯಾಗಿ ತೆಗೆದುಕೊಂಡಾಗ ಮಾತ್ರ ಸದೃಢ ಸಮಾಜವನ್ನು ನಿರ್ಮಿಸಲು ಸಾಧ್ಯ ಎಂದು ಹುಬ್ಬಳ್ಳಿಯ ಮಹಿಳಾ ಕಾಲೇಜಿನ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಉಪನ್ಯಾಸಕ ಹರ್ಷವರ್ಧನ ಶೀಲವಂತ ಹೇಳಿದರು.

    ಇಲ್ಲಿನ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಕೋಶದ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ‘ಸ್ವಾತಂತ್ರೃದ ಅಮೃತ ಮಹೋತ್ಸವ’ ವಿಶೇಷ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

    ಭಾರತ ಸ್ವಾತಂತ್ರ್ಯ ಪಡೆಯುವುದಕ್ಕಾಗಿ ಸಾವಿರಾರು ಸೈನಿಕರ ಮಾಡಿದ ತ್ಯಾಗದ ಹೋರಾಟ ಅಜರಾಮರ. ಸ್ವಾತಂತ್ರೃಯೋಧರ ತ್ಯಾಗ ಬಲಿದಾನಗಳ ಬಗ್ಗೆ ತಿಳಿಸಲು ಈ ತರಹದ ಕಾರ್ಯಕ್ರಮಗಳು ಉಪಕಾರಿಯಾಗಿವೆ ಎಂದರು.

    ರಾಷ್ಟ್ರೀಯ ಭಾವೈಕ್ಯತೆ, ದೇಶದ ಸಮಗ್ರತೆ ಮತ್ತು ಸಂವಿಧಾನದ ಆಶಯಗಳ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಲು ಇದು ಉಪಯುಕ್ತವಾಗಿದೆ. 2025ರ ಹೊತ್ತಿಗೆ ನಮ್ಮ ದೇಶವನ್ನು ಗ್ಲೋಬಲ್ ಲೀಡರ್ ಮಾಡುವಲ್ಲಿ ನಾವೆಲ್ಲರೂ ಶ್ರಮಿಸಬೇಕು. ಅಂದಾಗ ಮಾತ್ರ ನಮ್ಮ ದೇಶ ವಿಶ್ವಕ್ಕೆ ಮಾದರಿಯಾಗಿ ನಿಲ್ಲಬಹುದು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ತಮ್ಮ ತಮ್ಮ ನೆಲೆಯಲ್ಲಿ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.

    ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮಹಿಳಾ ವಿವಿ ಕುಲಪತಿ ಪ್ರೊ.ಬಿ.ಕೆ. ತುಳಸಿಮಾಲಾ ಮಾತನಾಡಿ, ಅನೇಕ ಸ್ವಾತಂತ್ರ್ಯ ಯೋಧರ ತ್ಯಾಗ ಬಲಿದಾನದಿಂದಾಗಿ ಇಂದು ನಾವೆಲ್ಲ ಸ್ವಾತಂತ್ರ್ಯವನ್ನು ಅನುಭವಿಸುವಂತಾಗಿದೆ. 75 ವರ್ಷಗಳಲ್ಲಿ ಭಾರತ ಸಾಕಷ್ಟು ಪ್ರಗತಿಯನ್ನು ಸಾಧಿಸಿದೆ. ಆದಾಗ್ಯೂ ಭಾರತವನ್ನು ಮಾದರಿ ದೇಶವನ್ನಾಗಿ ಮಾಡಲು ಪ್ರಸ್ತುತ ಯುವಜನತೆ ಮಾಡಬೇಕಾದ ಕಾರ್ಯಗಳು ಬಹಳಷ್ಟಿವೆ ಎಂದರು.

    ನಮ್ಮ ದೇಶದ ಸರ್ವತೋಮುಖ ಬೆಳವಣಿಗೆಗಾಗಿ ನಾವೆಲ್ಲರೂ ಶ್ರಮಿಸಬೇಕಾಗಿದೆ. ಕೃಷಿ ಕ್ಷೇತ್ರದ ಅಭಿವೃದ್ಧಿ, ಕೈಗಾರಿಕಾಭಿವೃದ್ಧಿ, ಮಾನವ ಸಂಪನ್ಮೂಲ ಅಭಿವೃದ್ಧಿ ಹೀಗೆ ಪ್ರತಿಯೊಂದು ಕ್ಷೇತ್ರದ ಅಭಿವೃದ್ಧಿಗೆ ಬೇಕಾಗಿರುವ ಕೌಶಲ, ಜ್ಞಾನ, ವಿಚಾರಗಳನ್ನು ನಮ್ಮಲ್ಲಿ ನಾವು ಬೆಳೆಸಿಕೊಳ್ಳಬೇಕು. ಆಗ ಮಾತ್ರ ನಮ್ಮ ದೇಶ ಪ್ರಗತಿ ಹೊಂದಲು ಸಾಧ್ಯ ಎಂದರು.

    ಬಳ್ಳಾರಿ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ನರಸಿಂಹ ರಾಯಚೂರು, ಎನ್‌ಎಸ್‌ಎಸ್ ಕಾರ್ಯಕ್ರಮ ಅಧಿಕಾರಿ ಡಾ. ಕಲಾವತಿ ಕಾಂಬ್ಳೆ, ಪ್ರೊ.ನಾಮದೇವ ಗೌಡ, ಜೆನಿರ್ ಸೌಲಮ್ ಹಾಗೂ ವಿವಿಧ ನಿಕಾಯಗಳ ಡೀನರು, ವಿವಿಧ ವಿಭಾಗಗಳ ಮುಖ್ಯಸ್ಥರು, ಸಂಶೋಧನಾ ಮತ್ತು ಸ್ನಾತಕೋತ್ತರ ವಿದ್ಯಾರ್ಥಿನಿಯರು, ಬೋಧಕ-ಬೋಧಕೇತರ ಸಿಬ್ಬಂದಿ, ಶಿಬಿರಾರ್ಥಿಗಳು, ವಿವಿಧ ರಾಜ್ಯಗಳ ಎನ್‌ಎಸ್‌ಎಸ್ ಕಾರ್ಯಕ್ರಮ ಅಧಿಕಾರಿಗಳು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts