More

    ಬಾಕಿ ವೇತನ ಬಿಡುಗಡೆಗೆ ಒತ್ತಾಯ

    ವಿಜಯಪುರ: ಗ್ರಾ.ಪಂ. ನೌಕರರಿಗೆ ಬಾಕಿ ವೇತನ ಬಿಡುಗಡೆಗೊಳಿಸುವಂತೆ ಒತ್ತಾಯಿಸಿ ಗ್ರಾಮ ಪಂಚಾಯಿತಿ ನೌಕರರ ಸಂಘದ ವತಿಯಿಂದ ಗುರುವಾರ ಜಿ.ಪಂ. ಆವರಣದಲ್ಲಿ ಪ್ರತಿಭಟನೆ ನಡೆಯಿತು.

    ಸಂಘದ ರಾಜ್ಯ ಉಪಾಧ್ಯಕ್ಷ ಭೀಮಶಿ ಕಲಾದಗಿ ಮಾತನಾಡಿ, 15ನೇ ಹಣಕಾಸಿನಲ್ಲಿ ವಾಟರ್‌ಮನ್, ಸ್ವಚ್ಛತಾಗಾರರಿಗೆ ವೇತನ ಪಾವತಿಸುವುದಾಗಿ ಸರ್ಕಾರ ತಿಳಿಸಿತ್ತು. ಆದರೆ ಇನ್ನೂ ವೇತನ ಪಾವತಿಯಾಗಿಲ್ಲ. 18 ರಿಂದ 20 ತಿಂಗಳ ವೇತನ ಬಾಕಿ ಇದೆ. ಸರ್ಕಾರ 15ನೇ ಹಣಕಾಸಿನ ವೇತನದ ಬಾಬ್ತು ಹಣ ಕಡಿತ ಮಾಡಿ, ಗ್ರಾಮ ಪಂಚಾಯಿತಿ ಸಿಬ್ಬಂದಿ ಖಾತೆಗೆ ಜಮಾ ಮಾಡಬೇಕು ಎಂದು ಒತ್ತಾಯಿಸಿದರು.

    ಕರೊನಾದಲ್ಲಿ ಕೆಲಸ ನಿರ್ವಹಿಸಿದವರಿಗೆ ಆಸ್ಪತ್ರೆ ಖರ್ಚು, ವೆಚ್ಚವನ್ನು ಸರ್ಕಾರವೇ ನಿರ್ವಹಿಸಬೇಕು ಹಾಗೂ ಅವರಿಗೆ ಆರ್ಥಿಕ ಸಹಾಯ ಮಾಡಬೇಕು. ಗ್ರಾ.ಪಂ. ಬಿಲ್ ಕಲೆಕ್ಟರ್, ಗುಮಾಸ್ತ ಹುದ್ದೆಯಿಂದ ಗ್ರೇಡ್-2 ಕಾರ್ಯದರ್ಶಿ, ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಹುದ್ದೆಗೆ ಆಯ್ಕೆ ಮೂಲಕ ನೇರ ನೇಮಕಾತಿಗೆ ತಡೆ ನೀಡಿದ್ದ ಆದೇಶವನ್ನು ಆರ್ಥಿಕ ಇಲಾಖೆಯು ಸಹಮತ ನೀಡಿದೆ. ಅದರನ್ವಯ ಸರ್ಕಾರವು ನೇಮಕಾತಿ ಆದೇಶ ನೀಡಿ ಮತ್ತೆ ನೇಮಕಾತಿ ಆದೇಶವನ್ನು ಹಿಂಪಡೆದಿರುವುದರಿಂದ 20 ರಿಂದ 25 ವರ್ಷಗಳಿಂದ ಸೇವೆ ಮಾಡಿ ನಿವೃತ್ತಿಯ ಅಂಚಿನಲ್ಲಿರುವ ಸಾವಿರಾರು ನೌಕರರಿಗೆ ಅನ್ಯಾಯ ಮಾಡಿದಂತಾಗಿದೆ ಎಂದು ತಿಳಿಸಿದರು.

    ಸಿಐಟಿಯು ಜಿಲ್ಲಾಧ್ಯಕ್ಷ ಅಣ್ಣಾರಾಯ ಈಳಗೇರ ಮಾತನಾಡಿ, ಕಳೆದ ಎರಡು ವರ್ಷಗಳಿಂದ ಗ್ರಾಮ ಪಂಚಾಯಿತಿ ಸಿಬ್ಬಂದಿಗೆ ಸರಿಯಾಗಿ ವೇತನ ನೀಡುತ್ತಿಲ್ಲ. ಸರ್ಕಾರ 15ನೇ ಹಣಕಾಸಿನಲ್ಲಿ ವೇತನ ನೀಡುವಂತೆ ಮಾರ್ಗಸೂಚಿ ನೀಡಿದರೂ ಕೂಡ ಆ ಪ್ರಕಾರ ಅವರಿಗೆ ವೇತನ ನೀಡಲಾಗುತ್ತಿಲ್ಲ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಅಲ್ಲಿಯ ಆಡಳಿತ ಪ್ರತಿನಿಧಿಗಳು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಸರ್ಕಾರದ ಆದೇಶವನ್ನು ಕಸದ ಬುಟ್ಟಿಗೆ ಹಾಕಿದ್ದಾರೆ. ಈ ಬಗ್ಗೆ ತಕ್ಷಣವೇ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದರು.

    ಮುಖಂಡರಾದ ವಿಠ್ಠಲ ಹೊನಮೋರೆ, ಎಂ.ಕೆ. ಚಳ್ಳಗಿ, ಎಂ.ಎಸ್. ಕೊಂಡಗೂಳಿ, ಅಬ್ದುಲ್ ರಜಾಕ ತಮದಡ್ಡಿ, ಸಂಗಪ್ಪ ಸೀತಿಮನಿ, ಚಂದ್ರಶೇಖರ ವಾಲಿಕಾರ, ಶೇಖು ಲಮಾಣಿ, ಬಸವರಾಜ ಹುಬ್ಬಳ್ಳಿ, ಎಂ.ಎಸ್.ಶೇಖರಣಿ, ಅಯ್ಯನಗೌಡ ಬಾಗೇವಾಡಿ, ಚಂದ್ರಶೇಖರ ವಾಲೀಕಾರ ಮುಂತಾದವರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts