ವಿಜಯಪುರ: ದಲಿತ ಸಿಎಂ ನೈಜ ವಿಚಾರವಲ್ಲ, ಅದೊಂದು ಒಡೆದು ಆಳುವ ನೀತಿ, ಆ ಮೂಲಕ ದಲಿತರು ಸಿಎಂ ಆಗುವುದನ್ನು ತಡೆಯುವುದು ಎಲ್ಲ ಪಕ್ಷಗಳ ಹುನ್ನಾರ ಎಂದು ಮಾಜಿ ಸಚಿವ ಎಚ್.ಸಿ. ಮಹದೇವಪ್ಪ ಬಣ್ಣಿಸಿದರು.
ಸಂವಿಧಾನದಲ್ಲಿ ದಲಿತ, ಮಧ್ಯಮ ಹಾಗೂ ಮುಂದುವರಿದ ಸಿಎಂ ಎಂಬ ವಿಚಾರಗಳಿಲ್ಲ. ಕಾಂಗ್ರೆಸ್‌ನಲ್ಲಿ ಬೇರೆ ಬೇರೆ ರಾಜ್ಯಗಳಲ್ಲಿ ದಲಿತರನ್ನು ಸಿಎಂ ಮಾಡಿದ್ದಾರೆ. ರಾಜ್ಯದಲ್ಲೂ ನಮ್ಮ ಶಾಸಕರು ಮನಸ್ಸು ಮಾಡಿದರೆ ಮಾಡಬಹುದು. ಆದರೆ, ದಲಿತ ಸಿಎಂ ವಿಚಾರ ಮುಂದಿಟ್ಟುಕೊಂಡು ಸಮಾಜವನ್ನು ಒಡೆಯುವ ಹುನ್ನಾರ ನಡೆಯುತ್ತಿದೆಯಷ್ಟೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಪ್ರತಿಕ್ರಿಯಿಸಿದರು.
ಸಂವಿಧಾನ ವಿರೋಧಿ ಸರ್ಕಾರ
ರಾಜ್ಯ ಮತ್ತು ದೇಶದಲ್ಲಿ ಸಂವಿಧಾನ ವಿರೋಧಿ ಪಕ್ಷ ಆಡಳಿತದಲ್ಲಿದೆ. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಏಳು ವರ್ಷ ಆಯಿತು. ಕೇಂದ್ರ ಸರ್ಕಾರಕ್ಕೇನೋ ಜನಮನ್ನಣೆ ಇತ್ತು. ಆದರೆ, ರಾಜ್ಯದಲ್ಲಿ 2008 ಮತ್ತು 2018ರ ಚುನಾವಣೆಯಲ್ಲಿ ಜನ ಮನ್ನಣೆ ಇರಲಿಲ್ಲ. 2008 ರಲ್ಲಿ ರಚನೆಯಾದ ಸಂದರ್ಭ ಶಾಸಕರ ಖರೀದಿ ನಡೆಯಿತು. 2018 ರಲ್ಲೂ ಜೆಡಿಎಸ್-ಕಾಂಗ್ರೆಸ್ ಶಾಸಕರನ್ನು ಸೆಳೆದು ಸರ್ಕಾರ ರಚನೆ ಮಾಡಿತು. ಈ ವಿಷಯದಲ್ಲಿ ನ್ಯಾಯಾಲಯದ ನಿರ್ದೇಶನ ಬಂದಿದ್ದು ನೋಡಿದರೆ ಬಿಜೆಪಿಗೆ ಸಂವಿಧಾನದಲ್ಲಿ ನಿಷ್ಠೆಯಿಲ್ಲ, ಬದ್ಧತೆ ಇಲ್ಲದಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ ಎಂದು ಮಹದೇವಪ್ಪ ಹೇಳಿದರು. ಯಾವ ಸರ್ಕಾರಕ್ಕೆ ನೈತಿಕತೆ ಇಲ್ಲವೋ ಆ ಸರ್ಕಾರ ಜನರ ಪರ ಕೆಲಸ ಮಾಡಲು ಆಗಲ್ಲ ಎಂಬುದು ಸದ್ಯದ ಸ್ಥಿತಿಯೇ ಸಾಕ್ಷಿ ಎಂದರು.
ಆಡಳಿತ ವೈಫಲ್ಯ
ಕರೊನಾ ಸಂದರ್ಭದಲ್ಲಿ ಜನರಿಗೆ ನೆರವಾಗಬೇಕಾಗಿರುವುದು ಸರ್ಕಾರದ ಪ್ರಾಥಮಿಕ ಕರ್ತವ್ಯ. ಜನರ ಆರೋಗ್ಯ ರಕ್ಷಣೆ ಸರ್ಕಾರದ ಪ್ರಮುಖ ಜವಾಬ್ದಾರಿ. ಆದರೆ ಪ್ರಧಾನಿ ನಡವಳಿಕೆಯೇ ಕರೊನಾ ಹಬ್ಬಲು ಕಾರಣವಾಯಿತು. ಪ್ರಧಾನಿ ಅವರು ಹದಿನೆಂಟು ದಿನದಲ್ಲಿ ಮಹಾಭಾರತ ಗೆಲ್ಲುತ್ತೇವೆಂದು ಜಾಗಟೆ ಬಾರಿಸಿ ಗಂಟೆ ಹೊಡೆಯಿರಿ, ದೀಪ ಹಚ್ಚಿ ಎಂಬ ಸಂದೇಶ ನೀಡಿದರು. ಸಾಕಷ್ಟು ತಜ್ಞರಿದ್ದರೂ ಸಲಹೆ ಪಡೆಯಲಿಲ್ಲ. ಮುಂಜಾಗ್ರತೆ ಕ್ರಮ ಕೈಗೊಳ್ಳದಿರುವುದು ದೇಶದ ದೌರ್ಭಾಗ್ಯವೇ ಸರಿ ಎಂದು ಮಹದೇವಪ್ಪ ತಿಳಿಸಿದರು.
ಆರ್ಥಿಕ ದುಸ್ಥಿತಿ
ಸಾಂಕ್ರಾಮಿಕ ಕಾಯಿಲೆಯಿಂದ ಆರ್ಥಿಕವಾಗಿ ಯಾವ ರೀತಿ ಪರಿಣಾಮ ಬೀರಿತು?ಕಾರ್ಮಿಕರು, ಬಡವರ ಬದುಕು ಏನಾಗಿದೆ? ಎಂಬುದರತ್ತ ಪ್ರಧಾನಿ ಮೋದಿ ಗಮನ ಹರಿಸಲಿಲ್ಲ. ಕೋಟ್ಯಂತರ ಜನ ಸಾವು ನೋವಿಗೆ ತುತ್ತಾದ ಮೇಲೆ ಎಚ್ಚೆತ್ತರು. ಮೊದಲನೇ ಅಲೆಯಲ್ಲಿ ಪಾಠ ಕಲಿಯದೆ ಎರಡನೇ ಅಲೆ ಹೆಚ್ಚಾಗಲು ಕಾರಣರಾದರು. ಅನೇಕ ಯುವಕರು ಕರೊನಾಗೆ ಗುರಿಯಾದರು. ಸರ್ಕಾರದ ನಿರ್ಲಕ್ಷೃವೇ ಈ ಸಾವು ನೋವುಗಳಿಗೆ ಕಾರಣ ಎಂದು ಮಹದೇವಪ್ಪ ಆರೋಪಿಸಿದರು.
ಎಪಿಎಂಸಿ ಕಾಯ್ದೆ, ಕೃಷಿ ಕಾಯ್ದೆಗಳನ್ನು ಚರ್ಚೆಯಿಲ್ಲದೆ ಜಾರಿಗೊಳಿಸಿದ್ದು ಜನ ವಿರೋಧಿ ನೀತಿ. ರೈತರ ಆದಾಯ ದ್ವಿಗುಣಗೊಳಿಸುವುದಾಗಿ ಹೇಳುವ ಪ್ರಧಾನಿ, ರೈತರ ಜಮೀನು ದುಡ್ಡಿದ್ದವರು ಯಾರು ಬೇಕಾದರೂ ಕೊಳ್ಳಬಹುದೆಂಬ ಕಾಯ್ದೆ ತಂದು ಇರುವ ಜಮೀನು ಸಹ ಕಿತ್ತುಕೊಳ್ಳಲು ಹೊರಟಿದೆ ಎಂದರು.
ಚುನಾವಣೆಯೊಂದೇ ಪರಿಹಾರ
ರಾಜ್ಯ ಸರ್ಕಾರಕ್ಕೆ ಯಾವುದೇ ನೈತಿಕತೆ ಇಲ್ಲ. ಶಾಸಕರು ಸುಮ್ಮನೆ ಕುಳಿತಿದ್ದರೆ, ಜನಪ್ರತಿನಿಧಿಗಳಾಗಿ ಆಯ್ಕೆಯಾಗದೆ ಇರುವವರು ಆಡಳಿತದ ಮುನ್ನೆಲೆಗೆ ಬರುತ್ತಿದ್ದಾರೆ. ಸಿಎಂ ಸ್ಥಾನ ಬದನೆಕಾಯಿ ವ್ಯಾಪಾರವಾಗಿದೆ. ಸಿಎಂ ಹುದ್ದೆ ಎಂಬುದು ಗೌರವಯುತವಾಗಿದ್ದು, ಹೋರಾಟದ ಮೂಲಕ ಬಂದವರು ಆ ಸ್ಥಾನದಲ್ಲಿ ಕುಳಿತರೆ ಅದಕ್ಕೊಂದು ಗೌರವ. ಹಣ, ಜಾತಿ, ತೋಳ್ಬಲದ ಮೇಲೆ ಅಧಿಕಾರಕ್ಕೆ ಬಂದರೆ ಜನ ಬಳಲುತ್ತಾರೆ. ಇಂಥ ಸಂದರ್ಭದಲ್ಲಿ ಎರಡನೇ ಸ್ವಾತಂತ್ರ್ಯ ಸಂಗ್ರಾಮ ಥರ ಜನ ಎದ್ದೇಳಬೇಕು ಎಂಬುದು ನನ್ನ ಅಭಿಪ್ರಾಯ ಎಂದು ಮಹದೇವಪ್ಪ ಹೇಳಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಜು ಆಲಗೂರ, ಮುಖಂಡರಾದ ಅಡಿವೆಪ್ಪ ಸಾಲಗಲ್ಲ, ಸುನೀಲ ಉಕ್ಕಲಿ, ನಾಗರಾಜ ಲಂಬು, ಸುರೇಶ ಘೊಣಸಗಿ, ಚಂದ್ರಶೇಖರ ಕೊಡಬಾಗಿ, ಸಂಗಪ್ಪ ಚಲವಾದಿ, ರಾಹುಲ ಕುಬಕಡ್ಡಿ, ಬಸವರಾಜ ಬಾದಾಮಿ ಮತ್ತಿತರರಿದ್ದರು.