More

    ಜನಸಾಮಾನ್ಯರಿಗೆ ನ್ಯಾಯ ದೊರಕಲಿ

    ವಿಜಯಪುರ: ಜೀವನದಲ್ಲಿ ಶಿಸ್ತು ಹಾಗೂ ತ್ಯಾಗ ಭಾವನೆಯ ಸೇವೆಯ ಮೂಲಕ ಜನಸಾಮಾನ್ಯರಿಗೆ ನ್ಯಾಯ ಕೊಡಿಸುವಲ್ಲಿ ಸ್ವಯಂ ಸೇವಕರು ಮುಂದೆ ಬರಬೇಕೆಂದು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶ ಸದಾನಂದ ನಾಯಕ ಹೇಳಿದರು.
    ಇಲ್ಲಿನ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿರುವ ಎಡಿಅರ್ ಸಂಕೀರ್ಣದಲ್ಲಿ ಸೋಮವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ನ್ಯಾಯವಾದಿಗಳ ಸಂಘ ಸಂಯುಕ್ತಾಶ್ರಯದಲ್ಲಿ ನಡೆದ ಕಾನೂನು ಸೇವೆಗಳ ದಿನಾಚರಣೆ ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

    ಸ್ವಯಂ ಸೇವಕರಾದವರು ಕಾನೂನು ಸೇವ ಪ್ರಾಧಿಕಾರದ ಮೂಲಕ ವ್ಯಾಜ್ಯ ಬಗೆಹರಿಸಿಕೊಳ್ಳಲು ಜನರಿಗೆ ಪ್ರೇರೇಪಿಸಬೇಕು ಮತ್ತು ಉಚಿತವಾಗಿ ಸಿಗಲಿರುವ ಕಾನೂನು ಅದಾಲತ್, ಅರಿವು, ನೆರವು ಬಗ್ಗೆ ಜನರಲ್ಲಿ ತಿಳುವಳಿಕೆ ನೀಡಿ ನೊಂದ ಜನರಿಗೆ ನ್ಯಾಯ ಒದಗಿಸಲು ನೆರವಾಗಬೇಕೆಂದು ತಿಳಿಸಿದರು.

    ಹಿರಿಯ ನ್ಯಾಯವಾದಿ ಮಲ್ಲಿಕಾರ್ಜುನ ಭೃಂಗಿಮಠ ಮಾತನಾಡಿ, ಸ್ವಯಂ ಸೇವೆ ಮತ್ತು ಮಧ್ಯಸ್ಥಿಕೆ ಇಲ್ಲದೆ ಯಾವುದೇ ನ್ಯಾಯ ಅಥವಾ ಕೆಲಸ ಮಾಡಲು ಅಸಾಧ್ಯ. ಸಂಧಾನ ವಿಲವಾದಾಗ ಮನಸ್ಸು ಬದಲಾಗಿ ಅಪರಾಧಕ್ಕೆ ಪ್ರೇರೇಪಿಸುತ್ತದೆ. ಎಲ್ಲರೂ ಕಾನೂನು ಚೌಕಟ್ಟಿನಲ್ಲೇ ನ್ಯಾಯ ಪಡೆಯತಕ್ಕದ್ದು. ಅದಕ್ಕಾಗಿ ಸ್ವಯಂ ಸೇವಕರು ಜನರಲ್ಲಿ ಕಾನೂನು ಪಾಲನೆ ಮತ್ತು ಕಾನೂನಿನಡಿ ಇರುವ ತಮ್ಮ ಕರ್ತವ್ಯಗಳ ಬಗ್ಗೆ ಜಾಗೃತಿ ಮೂಡಿಸಿ, ಸಮಾಜದ ಸ್ವಾಸ್ಥೃ ಕಾಪಾಡಬೇಕು ಎಂದರು.

    ಡಿವೈಎಸ್ಪಿ ಲಕ್ಷ್ಮಿನಾರಾಯಣ ಮಾತನಾಡಿದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವೆಂಕಣ್ಣ ಬಿ ಹೊಸಮನಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಂ.ಎಸ್. ಖಾಸನೀಸ್, ನಮ್ರತಾ ಹಿರೇಮಠ, ಚಂದ್ರಕಲಾ ಚಿತ್ತಾಪುರ, ಅಂಜುಮ್ ಸುತಾರ, ಎಂ.ಸಿ. ಲೋಗಾವಿ, ಬಿ.ಡಿ. ರಾಠೋಡ ಮುಂತಾದವರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts