More

    ಪ್ರವಾಹ ನಿಯಂತ್ರಣಕ್ಕೆ ಹಣದ ಕೊರತೆ ಇಲ್ಲ

    ವಿಜಯಪುರ: ಪ್ರವಾಹ ನಿಯಂತ್ರಣಕ್ಕೆ ಹಣದ ಕೊರತೆ ಇಲ್ಲ. ಸಾವಿರ ಕೋಟಿ ರೂ.ಗಳಿಗೂ ಅಧಿಕ ಹಣ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ ಕಾಯ್ದಿರಿಸಲಾಗಿದೆ. ಪ್ರವಾಹ ಹಾಗೂ ಕರೊನಾ ನಿರ್ವಹಣೆಗೆ ಹಣಕಾಸಿನ ಕೊರತೆಯಿಲ್ಲ ಎಂದು ಕಂದಾಯ ಸಚಿವ ಆರ್. ಅಶೋಕ ತಿಳಿಸಿದರು.

    ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ 295 ಕೋಟಿ ರೂ. ಎರಡನೇಯ ಕಂತಿನ ಹಣ ಬಿಡುಗಡೆಯಾಗಿದೆ. ಈಗಾಗಲೇ ಎನ್‌ಡಿಆರ್‌ಎ್ 9 ತಂಡಗಳು ಕಾರ್ಯನಿರ್ವಹಿಸುತ್ತಿವೆ. ಪ್ರವಾಹ ನಿರ್ವಹಣೆಗೆ ಹಣಕಾಸಿನ ಅಡಚಣೆಯಾದರೆ ಹೆಚ್ಚುವರಿಯಾಗಿ 5 ಕೋಟಿ ರೂ. ಒದಗಿಸಲಾಗಿದೆ. ಕರ್ನಾಟಕದಲ್ಲಿ ಪ್ರವಾಹ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಬುಧವಾರ ಸುದ್ದಿಗೋಷ್ಟಿಯಲ್ಲಿ ಅವರು ತಿಳಿಸಿದರು.

    ಪ್ರವಾಹ ಪರಿಸ್ಥಿತಿ ನಿಯಂತ್ರಿಸಲು ಕಳೆದೊಂದು ತಿಂಗಳಿಂದ ವ್ಯವಸ್ಥಿತವಾಗಿ ನಿರ್ವಹಣೆ ಮಾಡಲಾಗುತ್ತಿದೆ. ಮುಂಜಾಗ್ರತಾ ಕ್ರಮವಾಗಿ ವಿಪತ್ತು ನಿರ್ವಹಣಾ ಸಮಿತಿ, ಅಗ್ನಿ ಶಾಮಕ ದಳಕ್ಕೆ 20 ಕೋಟಿ ರೂ. ಒದಗಿಸಿ ಬೋಟ್ ಮೊದಲಾದ ಪರಿಕರ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. ಎಲ್ಲ ಅಣೆಕಟ್ಟುಗಳ ಮೇಲೆ ನಿಗಾ ಇರಿಸಲಾಗಿದೆ. ಎಷ್ಟು ಬೇಕೋ ಅಷ್ಟು ಪ್ರಮಾಣದಲ್ಲಿ ಮಾತ್ರ ನೀರಿನ ಶೇಖರಣೆ ಮಾಡಲಾಗುತ್ತಿದೆ. ಪಕ್ಕದ ಗೋವಾ, ಮಹಾರಾಷ್ಟ್ರ ಮೊದಲಾದ ರಾಜ್ಯಗಳಿಗೆ ನಿರಂತರ ಸಂಪರ್ಕ ಸಾಧಿಸಲಾಗುತ್ತಿದ್ದು, ಹೆಚ್ಚಿನ ಅನಾಹುತವಾಗದಂತೆ ಕ್ರಮ ವಹಿಸಲಾಗುತ್ತಿದೆ ಎಂದರು.

    ಮನೆ ಬಾಗಿಲಿಗೆ ಪಿಂಚಣಿ
    ಸರ್ಕಾರ ವಿವಿಧ ಪಿಂಚಣಿ ಯೋಜನೆಗಳಿಗೆ ಪ್ರತಿ ವರ್ಷ 7 ಸಾವಿರ ಕೋಟಿ ರೂ. ಅನುದಾನ ಬಿಡುಗಡೆ ಮಾಡುತ್ತಿದೆ. ಯಾರೊಬ್ಬರೂ ಪಿಂಚಣಿಯಿಂದ ವಂಚಿತವಾಗಬಾರದು ಎಂಬುದು ನನ್ನ ಹಾಗೂ ಸರ್ಕಾರದ ಧ್ಯೇಯ. 60 ವರ್ಷ ಪೂರೈಸಿದವರಿಗೆ ಅರ್ಜಿ ಸಲ್ಲಿಸದೆಯೇ ಅವರ ಮನೆ ಬಾಗಿಲಿಗೆ ಪಿಂಚಣಿ ದೊರಕಿಸುವ ವ್ಯವಸ್ಥೆಯಾಗಬೇಕಿದೆ. ಪೋಸ್ಟ್ ಆಫೀಸ್ ಬದಲಾಗಿ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಪಾವತಿಸಬೇಕು. ಲಾನುಭವಿಗಳು ಸಂಬಂಧಿಸಿದ ಇಲಾಖೆಗಳಿಗೆ ಎಡತಾಕುವುದು, ಅಲೆದಾಡುವುದು ತಪ್ಪಿಸಬೇಕಾಗಿದ್ದು, ಈ ನಿಟ್ಟಿನಲ್ಲಿ ಅಧಿಕಾರಿಗಳು ವಿಶೇಷ ಮುತುವರ್ಜಿ ವಹಿಸಬೇಕು ಎಂದು ಅಶೋಕ ತಿಳಿಸಿದರು.

    ಸಿಎಂ ಯಡ್ಡಿಯೂರಪ್ಪ ಪುತ್ರ ವಿಜಯೇಂದ್ರ ಮೇಲೆ ಮೈಸೂರಲ್ಲಿ ಕಾಂಗ್ರೆಸ್ ವಕ್ತಾರ ಎಂ. ಲಕ್ಷ್ಮಣ ಭ್ರಷ್ಚಾಚಾರ ಆರೋಪ ಹೊರಿಸಿದ ವಿಷಯಕ್ಕೆ ಪ್ರತಿಕ್ರಿಯಿಸಲು ಸಚಿವ ಆರ್. ಅಶೋಕ ನಿರಾಕರಿಸಿದರು. ಅಲ್ಲದೆ, ಮಾಧ್ಯಮಗಳಿಗೆ ಕೈ ಮುಗಿದು ಪ್ರತಿಕ್ರಿಯೆ ನೀಡದೆ ನಿರ್ಗಮಿಸಿದರು.

    ಮುಖ್ಯಮಂತ್ರಿ ವಿರುದ್ಧ ಶಾಸಕ ಯತ್ನಾಳ ಅಸಮಾಧಾನ
    ತಮ್ಮದೇ ಪಕ್ಷದ ಸಿಎಂ ಯಡಿಯೂರಪ್ಪ ವಿರುದ್ಧ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅಸಮಾಧಾನ ಹೊರಹಾಕಿದ್ದು ಈ ಹಿಂದಿನ ಸರ್ಕಾರ ಮಂಜೂರಿಸಿದ ಅನುದಾನವನ್ನು ನಮ್ಮ ಮುಖ್ಯಮಂತ್ರಿಗಳು ತಡೆಹಿಡಿದಿದ್ದಾರೆಂದು ಕಂದಾಯ ಸಚಿವ ಆರ್. ಅಶೋಕ ಎದುರು ಅಳಲು ತೋಡಿಕೊಂಡಿದ್ದಾರೆ.

    ಇಲ್ಲಿನ ಜಿ.ಪಂ. ಸಭಾಂಗಣದಲ್ಲಿ ಕಂದಾಯ ಸಚಿವ ಆರ್. ಅಶೋಕ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ವಿಜಯಪುರ ಮಹಾನಗರ ಪಾಲಿಕೆಗೆ 125 ಕೋಟಿ ರೂ. ಬಂದಿತ್ತು. ಕರೊನಾ ಹೆಸರಿನಲ್ಲಿ ನಮ್ಮ ಮುಖ್ಯಮಂತ್ರಿಗಳು ಅದನ್ನು ತಡೆ ಹಿಡಿದಿದ್ದಾರೆ. ಅದೂ ಇವರು ಮಂಜೂರು ಮಾಡಿದ್ದಲ್ಲ. ಹಿಂದಿನ ಸರ್ಕಾರ ಮಂಜೂರು ಮಾಡಿದ್ದೆಂದು ಕಿಚಾಯಿಸಿದರು.

    ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಆರ್. ಅಶೋಕ ಈ ವಿಷಯವನ್ನು ಸರ್ಕಾರ ಹಾಗೂ ಹಣಕಾಸು ಇಲಾಖೆ ಗಮನಕ್ಕೆ ತರುವುದಾಗಿ ತಿಳಿಸಿದರು.

    ಆದರೆ, ಶಾಸಕ ಯತ್ನಾಳರ ಅಸಮಾಧಾನದ ಹಿಂದೆ ಬೇರೊಂದೇ ಲೆಕ್ಕಾಚಾರ ಕೇಳಿ ಬರುತ್ತಿದೆ. ಹಿಂದಿನ ದಿನವೇ ಸಿಎಂ ಯಡಿಯೂರಪ್ಪ ವೈಮಾನಿಕ ಸಮೀಕ್ಷೆ ಹಾಗೂ ಬಾಗಿನ ಅರ್ಪಣೆ ಹಿನ್ನೆಲೆ ಜಿಲ್ಲೆಗೆ ಆಗಮಿಸಿದ್ದರೂ ಶಾಸಕ ಯತ್ನಾಳ ಗೈರಾಗಿದ್ದು ಕೂಡ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಸಿಎಂ ನಡೆಗೆ ಅಸಮಾಧಾನ ಹೊರಹಾಕಿದ್ದು ಸಿಎಂ ಯಡಿಯೂರಪ್ಪ ಮತ್ತು ಯತ್ನಾಳರ ನಡುವಿನ ಸಂಬಂಧವನ್ನು ಬಹಿರಂಗಗೊಳಿಸಿದಂತಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts