More

    ಸಸ್ಯಸಂಗಮ ಉದ್ಯಾನವನ ವ್ಯಾಪ್ತಿ ಸೌಲಭ್ಯ ಕಲ್ಪಿಸಿ

    ವಿಜಯಪುರ: ನಗರ ಹೊರವಲಯದ ಕರಾಡ ದೊಡ್ಡಿ ಬಳಿಯ 540 ಎಕರೆ ಪ್ರದೇಶದಲ್ಲಿ ಅರಣ್ಯ ವೃದ್ಧಿಯ ಉದ್ದೇಶದೊಂದಿಗೆ ಸಸಿಗಳನ್ನು ಬೆಳೆಸಿದ್ದು ಈ ಪ್ರದೇಶದಲ್ಲಿ ವಿವಿಧ ಔಷಧಿಯ ಸಸಿಗಳನ್ನು ಬೆಳೆಸುವ ‘ಸಸ್ಯ ಸಂಗಮ ಉದ್ಯಾನ’ದಲ್ಲಿ ಪೂರಕ ಸೌಲಭ್ಯ ಕಲ್ಪಿಸುವ ಕುರಿತು ಅವಶ್ಯಕ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ತಿಳಿಸಿದರು.
    ಸೋಮವಾರ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಅವರು, ಕೃಷ್ಣಾ ಭಾಗ್ಯ ಜಲ ನಿಗಮ, ಅರಣ್ಯ ವಿಭಾಗದಿಂದ ಜಿಲ್ಲೆಯಲ್ಲಿ ಸಸ್ಯ ಸಂಗಮ ಉದ್ಯಾನ ಅಭಿವೃದ್ಧಿ ಪಡಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ತಕ್ಷಣ ಗ್ಲಾಸ್ ಹೌಸ್ ನಿರ್ಮಾಣ, ನರ್ಸರಿ ಅಭಿವೃದ್ಧಿ ಕುರಿತು ಪ್ರಸ್ತಾವನೆ ಸಲ್ಲಿಸಬೇಕು. ಮೇಲ್ ಜಲಸಂಗ್ರಹಾಗಾರದ ಮಹಡಿಯಲ್ಲಿ 1.5 ಕೋಟಿ ರೂ. ವೆಚ್ಚದ ಅಕ್ವೇರಿಯಮ್ ಸ್ಥಾಪನೆ ಕುರಿತು ನಿಗದಿತ ಅವಧಿಯೊಳಗೆ ಖರ್ಚು ವೆಚ್ಚ ವರದಿ ಸಲ್ಲಿಸಬೇಕು. ಅದರಂತೆ ಸಸ್ಯ ಸಂಗಮ ಔಷಧಿಯ ಸಸಿಗಳು ಮತ್ತು ಸಿವಿಲ್ ಕಾಮಗಾರಿಗಳಿಗೆ ಟೆಂಡರ್ ಕರೆಯಲಾಗಿದ್ದು, ಮೇ- ಜೂನ್ ಮಾಹೆಯಲ್ಲಿ ಕಾಮಗಾರಿ ಆರಂಭಿಸುವಂತೆ ಸೂಚಿಸಿದರು.
    ತೋಟಗಾರಿಕೆ ಇಲಾಖೆಯಿಂದ ತೋಟಗಾರಿಕೆ ಚಟುವಟಿಕೆ ಪ್ರೋತ್ಸಾಹಕ್ಕೆ ಸಂಬಂಧಪಟ್ಟಂತೆ ತಕ್ಷಣ ಕೇಂದ್ರ ಕಚೇರಿಗೆ ವಿವಿಧ ಪ್ರಸ್ತಾವನೆ ಕಳುಹಿಸಿ ಅನುಮೋದನೆ ಪಡೆಯಬೇಕು. ಅದರಂತೆ ಕ್ಯಾಕ್ಟಸ್ ಉದ್ಯಾನವನ ಪ್ರಸ್ತಾವನೆ ಸಹ ಸಲ್ಲಿಸಬೇಕು. ವೃಕ್ಷ ಅಭಿಯಾನ ಸಂಸ್ಥೆಯೊಂದಿಗೆ ಪರಸ್ಪರ ಸಮನ್ವಯತೆಯಿಂದ ಕಾರ್ಯ ನಿರ್ವಹಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.
    ಅರಣ್ಯ ವೃದ್ಧಿಗೆ ಮೀಸಲಿಡಲಾದ ಈ ಪ್ರದೇಶದಲ್ಲಿ ಅರಣ್ಯಕ್ಕೆ ವಿರುದ್ಧವಾದ ಚಟುವಟಿಕೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಬೇಕು. ವಾಣಿಜ್ಯಕರಣಕ್ಕೆ ಹೆಚ್ಚು ಒತ್ತು ನೀಡದೆ ಅರಣ್ಯೀಕರಣಕ್ಕೆ ವಿಶೇಷ ಗಮನ ಹರಿಸಬೇಕೆಂದರು.
    ಅಪರ ಜಿಲ್ಲಾಧಿಕಾರಿ ಡಾ. ಔದ್ರಮ್, ಆಯುಕ್ತ ಶ್ರೀಹರ್ಷಾ ಶೆಟ್ಟಿ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಸಂತೋಷ ಇನಾಮದಾರ ಮತ್ತಿತರರಿದ್ದರು.

    ಸಸ್ಯಸಂಗಮ ಉದ್ಯಾನವನ ವ್ಯಾಪ್ತಿ ಸೌಲಭ್ಯ ಕಲ್ಪಿಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts