More

    ಗಡಿಭಾಗದ ಪ್ರಯಾಣಿಕರ ಮೇಲೆ ತೀವ್ರ ನಿಗಾ

    ವಿಜಯಪುರ: ವಿದೇಶದಿಂದ ಜಿಲ್ಲೆಗೆ ಆಗಮಿಸುತ್ತಿರುವ ಜನರ ಮೇಲೆ ತೀವ್ರ ನಿಗಾ ಇಡುವುದರ ಜತೆಗೆ ಜಿಲ್ಲೆಯ ಗಡಿಭಾಗ ಹೊಂದಿರುವ ಕಲಬುರಗಿ, ಮಹಾರಾಷ್ಟ್ರ ಮಧ್ಯೆ ಸಂಚರಿಸುವ ಪ್ರಯಾಣಿಕರ ಮೇಲೆಯೂ ತೀವ್ರ ನಿಗಾ ಇಡುವಂತೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು.
    ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಕರೊನಾ ಮುಂಜಾಗ್ರತೆ ಕುರಿತು ಆರೋಗ್ಯ ಇಲಾಖೆ, ಪೊಲೀಸ್, ಕೆಎಸ್‌ಆರ್‌ಟಿಸಿ ಮತ್ತಿತರ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿದ ಅವರು, ಜಿಲ್ಲೆಗೆ ಈವರೆಗೆ 244 ಜನರು ವಿದೇಶದಿಂದ ಮರಳಿರುವ ಬಗ್ಗೆ ದೃಢಪಡಿಸಲಾಗಿದೆ. ಈ ಪೈಕಿ ಈಗಾಗಲೆ ಐದು ಜನರ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ. ಇನ್ನೂ ಹೆಚ್ಚಿನ ಮುನ್ನೆಚ್ಚರಿಕೆಗಾಗಿ ಜಿಲ್ಲೆಗೆ ಆಗಮಿಸುತ್ತಿರುವ ವಿದೇಶಿಗರ ಜೊತೆಗೆ ಜಿಲ್ಲೆಯ ಗಡಿ ಭಾಗಗಳಲ್ಲಿ ಮತ್ತು ವಿಶೇಷವಾಗಿ ಮಹಾರಾಷ್ಟ್ರ ಮತ್ತು ಕಲಬುರಗಿ ಸೇರಿದಂತೆ ಅಂತಾರಾಜ್ಯಗಳಿಂದ ಬರುವ ಕರೊನಾ ಲಕ್ಷಣವುಳ್ಳ ಜನರ ಬಗ್ಗೆ ತೀವ್ರ ನಿಗಾ ಇರಿಸುವುದರ ಜತೆಗೆ ಸೂಕ್ತ ತಪಾಸಣೆ ಕೈಗೊಳ್ಳಬೇಕು ಎಂದರು.
    ಜಿಲ್ಲೆಯಲ್ಲಿ ಈವರೆಗೆ ಕರೋನಾ ಸೋಂಕಿತ ಪಾಸಿಟಿವ್ ಪ್ರಕರಣಗಳು ದಾಖಲಾಗದೆ ಇರುವುದಕ್ಕೆ ಅಧಿಕಾರಿಗಳ ಮುನ್ನೆಚ್ಚರಿಕೆ ಕ್ರಮವೇ ಕಾರಣ. ಇನ್ನೂ ಹೆಚ್ಚು ಜವಾಬ್ದಾರಿಯಿಂದ ಕಾರ್ಯನಿರ್ವಹಿಸುವ ಸಂದರ್ಭ ಬಂದೊದಗಿದೆ. ಮುಖ್ಯಮಂತ್ರಿಗಳು, ವೈದ್ಯಕೀಯ ಶಿಕ್ಷಣ ಸಚಿವರು ಮಹಾರಾಷ್ಟ್ರದಲ್ಲಿ ಮತ್ತು ಕಲಬುರಗಿಯಲ್ಲಿ ಕರೊನಾ ಸೋಂಕಿತರು ಹೆಚ್ಚಾಗಿ ಕಂಡು ಬಂದ ಕಾರಣ ಅಲ್ಲಿಂದ ಬರುವ ಜನರ ಮೇಲೆ ತೀವ್ರ ನಿಗಾ ಇರಿಸಲು ತಿಳಿಸಿದ್ದಾರೆ. ಹೀಗಾಗಿ ಅಧಿಕಾರಿಗಳು ಈ ಸೂಚನೆ ಪಾಲಿಸಬೇಕು.

    244 ಜನ ವಿದೇಶದಿಂದ ಆಗಮನ

    ಈವರೆಗೆ 244 ಜನರು ವಿದೇಶದಿಂದ ಜಿಲ್ಲೆಗೆ ಆಗಮಿಸಿದ್ದಾರೆ. ಈ ಪೈಕಿ 66 ಜನರು ಹೋಂಕೊರಂಟೈನ್‌ದಲ್ಲಿ 14 ದಿನ ಪೂರ್ಣಗೊಳಿಸಿರುವುದರ ಬಗ್ಗೆ ದೃಢಪಡಿಸಲಾಗಿದೆ. ಅದರಂತೆ 178 ಜನ ಹೋಂಕೊರಂಟೈನ್‌ದಲ್ಲಿದ್ದು, ಅವರ ಮೇಲೆ ನಿಗಾ ಇರಿಸಬೇಕು. ಅವರು 14 ದಿನಗಳ ಕಾಲ ಹೊರಗೆ ಬರದಂತೆ ಕಟ್ಟೆಚ್ಚರ ವಹಿಸಬೇಕು. ನಿರ್ಲಕ್ಷೃ ತೋರುವ ಅಧಿಕಾರಿಗಳ ಏಲೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಎಚ್ಚರಿಸಿದರು.
    ಹೋಂಕೊರಂಟೈನ್‌ದಲ್ಲಿರುವವರು ಭಯಪಡುವ ಅವಶ್ಯಕತೆಯಿಲ್ಲ. ಹೋಂಕೊರಂಟೈನ್‌ದಲ್ಲಿ 14 ದಿನ ಅವಧಿ ಪೂರೈಸಿದ 66 ಜನರ ಮೊಬೈಲ್ ಮೇಲೆ ಅವಲಂಬಿತರಾಗದೆ ಸಂಬಂಧಿಸಿದ ಸಿಬ್ಬಂದಿ ವಿಶೇಷ ನಿಗಾ ಇಡಬೇಕು. ಹೋಂಕೊರಂಟೈನ್, ಐಸೋಲೇಶನ್ ವಾರ್ಡ್‌ಗಳ ವ್ಯವಸ್ಥೆ ಸೇರಿದಂತೆ ಹೋಂಕೊರಂಟೈನ್‌ದಿಂದ ಹೊರಗಿರುವವರ ಬಗ್ಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಪರಿಶೀಲಿಸಲಾಗುವುದು. ಜಿಪಂ ಸಿಇಒ ಅನಿರೀಕ್ಷೀತವಾಗಿ ಭೇಟಿ ನೀಡಲಿದ್ದು, ಲೋಪ ಕಂಡುಬಂದಲ್ಲಿ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.

    ವಿಶೇಷ ತಂಡ ರಚನೆ

    ವಿದೇಶದಿಂದ ಆಗಮಿಸುವ ಪ್ರತಿಯೊಬ್ಬರ ಮೇಲೆ ತೀವ್ರ ನಿಗಾ ಇಡಲಾಗಿದೆ. ಸರ್ವೇಲೆನ್ಸ್ ಮತ್ತು ವಿಶೇಷ ತಂಡಗಳನ್ನು ರಚಿಸಿ ಮಾಹಿತಿ ಪಡೆಯಲಾಗುತ್ತಿದೆ. ಹೋಂಕೊರಂಟೈನ್ ವ್ಯಾಪ್ತಿಯಲ್ಲಿ ಆರೋಗ್ಯ ಮತ್ತು ಪೊಲೀಸ್ ಸಿಬ್ಬಂದಿಯನ್ನು ಮುನ್ನೆಚ್ಚರಿಕೆಯಾಗಿ ನಿಯೋಜಿಸುತ್ತಿದ್ದು, ಸಂಬಂಧಪಟ್ಟವರು ಗಾಬರಿಪಡುವ ಅವಶ್ಯಕತೆಯಿಲ್ಲ. ಮದುವೆ, ಸಭೆ ಸಮಾರಂಭಗಳಲ್ಲಿ ಮುನ್ನೆಚ್ಚರಿಕೆಯಾಗಿ 100 ಜನರಿಗಿಂತ ಹೆಚ್ಚಿನ ಜನರು ಸೇರುವುದಕ್ಕೆ ನಿರ್ಬಂಧ ವಿಧಿಸಲಾಗಿದ್ದು, ಸಾರ್ವಜನಿಕರೂ ಅವಶ್ಯಕ ಮುಂಜಾಗ್ರತಾ ಕ್ರಮ ಕೈಗೊಳ್ಳಲು ತಿಳಿಸಲಾಗಿದೆ.

    ಸಹಾಯವಾಣಿ ಸೌಲಭ್ಯ

    ಕೊರೋನಾ ಸೋಂಕಿತರ ಗಂಟಲು ದ್ರವ ಮಾದರಿ ಪರೀಕ್ಷೆಗಾಗಿ ಮುಂಬರುವ ದಿನಗಳಲ್ಲಿ ಕಲಬುರಗಿಯಲ್ಲಿ ಸ್ಥಾಪಿಸಲಾಗುವ ಲ್ಯಾಬ್‌ದ ಸಹಕಾರ ಪಡೆಯಲು ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಅದರಂತೆ ಈಗಾಗಲೇ ನಗರದ ಅಲ್ ಆಮೀನ್ ಮತ್ತು ಬಿಎಲ್‌ಡಿಇ ಆಸ್ಪತ್ರೆಗಳಲ್ಲಿ ವೆಂಟಿಲೇಟರ್‌ಗಳ ಸೌಲಭ್ಯವಿದ್ದು, ಜಿಲ್ಲಾಸ್ಪತ್ರೆಯಲ್ಲಿ ಅವಶ್ಯಕತೆಯಿರುವ ವೆಂಟಿಲೇಟರ್‌ಗಳ ಪ್ರಸ್ತಾವನೆಯನ್ನು ಸಲ್ಲಿಸುವಂತೆ ವೈದ್ಯಕೀಯ ಶಿಕ್ಷಣ ಸಚಿವರು ತಿಳಿಸಿದ್ದಾರೆ. ಅದರನ್ವಯ ಪ್ರಸ್ತಾವನೆ ಸಲ್ಲಿಸಲಾಗುವುದು. ಸಾರ್ವಜನಿಕರಿಂದ ಕರೊನಾ ಕುರಿತು ದೂರು ಸ್ವೀಕಾರಕ್ಕೆ 1077 ಉಚಿತ ಸಹಾಯವಾಣಿ ಹಾಗೂ 104 ಆರೋಗ್ಯ ಸಹಾಯವಾಣಿ ಸಹ ಲಭ್ಯವಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
    ಜಿಪಂ ಸಿಇಒ ಗೋವಿಂದ ರೆಡ್ಡಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಮ ಅರಸಿದ್ಧಿ, ಡಿಎಚ್‌ಒ ಮಹೇಂದ್ರ ಕಾಪಸೆ, ಜಿಲ್ಲಾ ಶಸ್ತ್ರ ಚಿಕಿತ್ಸಕ ಶರಣಪ್ಪ ಕಟ್ಟಿ ಮತ್ತಿತರರಿದ್ದರು.

    ಹಕ್ಕಿ ಜ್ವರದ ಆತಂಕವಿಲ್ಲ

    ಮೈಸೂರ ಮತ್ತು ದಾವಣಗೆರೆ ಭಾಗಗಳಲ್ಲಿ ಹಕ್ಕಿಜ್ವರ ಬಂದಿರುವ ಬಗ್ಗೆ ಗಮನಕ್ಕೆ ಬಂದಿದೆ. ಜಿಲ್ಲೆಯಲ್ಲಿ ಅಂಥ ಯಾವುದೇ ಆತಂಕ ಇಲ್ಲ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ತಿಳಿಸಿದರು.
    ಹಕ್ಕಿ ಜ್ವರಕ್ಕೆ ಸಂಬಂಧಪಟ್ಟಂತೆ ಯಾವುದೇ ಪಾಸಿಟಿವ್ ಪ್ರಕರಣಗಳು ದಾಖಲಾಗಿಲ್ಲ. ಪಶು ಸಂಗೋಪನಾ ಇಲಾಖೆಯಿಂದ ತೀವ್ರ ನಿಗಾ ಇಡಲಾಗಿದ್ದು, ಬೆಂಗಳೂರು ಲ್ಯಾಬ್‌ಗೆ ಮಾದರಿಗಳನ್ನು ಕಳುಹಿಸಿ, ಪರೀಕ್ಷೆಗೆ ಒಳಪಡಿಸುವ ಮೂಲಕ ನಿಗಾ ಇರಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ತಿಳಿಸಿದರು.
    ಪಶುಸಂಗೋಪನೆ ಇಲಾಖೆ ಅಧಿಕಾರಿ ಪ್ರಾಣೇಶ ಜಾಗೀರದಾರ ಮಾತನಾಡಿ, ತಾಲೂಕಾವಾರು ಪಕ್ಷಿಗಳ ಮಾದರಿಗಳನ್ನು ಲ್ಯಾಬ್‌ಗೆ ನಿರಂತರ ಕಳುಹಿಸಲಾಗುತ್ತಿದ್ದು, ಈವರೆಗೆ ಯಾವುದೇ ಪಾಸಿಟಿವ್ ಪ್ರಕರಣಗಳು ಕಂಡುಬಂದಿಲ್ಲ. ಈ ಕುರಿತು ಅವಶ್ಯಕ ಮುನ್ನೆಚ್ಚರಿಕಾ ಕ್ರಮಗಳನ್ನು ಸಹ ಕೈಗೊಳ್ಳಲಾಗುತ್ತಿದೆ ಎಂದರು.

    ಗಡಿಭಾಗದ ಪ್ರಯಾಣಿಕರ ಮೇಲೆ ತೀವ್ರ ನಿಗಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts