More

    ಅರ್ಹರಿಗೆ ಸರ್ಕಾರಿ ಸೌಲಭ್ಯ ಸಿಗಲಿ

    ವಿಜಯಪುರ: ಆಶಾದೀಪ ಯೋಜನೆಯಡಿ ಖಾಸಗಿ ವಲಯದಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರನ್ನು ನೇಮಕ ಮಾಡಿಕೊಂಡಿರುವ ಬಗ್ಗೆ ವರದಿ ನೀಡುವಂತೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಸೂಚಿಸಿದರು.
    ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಬುಧವಾರ ಆಶಾದೀಪ ಯೋಜನೆಯ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಅವರು, ರಾಜ್ಯ ಸರ್ಕಾರ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಖಾಸಗಿ ವಲಯದಲ್ಲಿ ಉದ್ಯೋಗವಕಾಶ ಕಲ್ಪಿಸುವ ಉದ್ದೇಶದಿಂದ ‘ಆಶಾದೀಪ’ ಯೋಜನೆ ಜಾರಿಗೊಳಿಸಿದೆ. ಈ ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಳ್ಳಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರು.

    ಆಯಾ ಖಾಸಗಿ ವಲಯಗಳಲ್ಲಿ ಕಳೆದ ಏ.1, 2019 ರಿಂದ ಈವರೆಗೆ ನೇಮಕ ಮಾಡಿಕೊಂಡಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಉದ್ಯೋಗಿಗಳ ಮಾಹಿತಿಯನ್ನು ತಕ್ಷಣ ಸಲ್ಲಿಸಬೇಕು. ಅಪ್ರೆಂಟಿಸ್‌ಶಿಪ್ ತರಬೇತಿ ಪಡೆದ ಅಭ್ಯರ್ಥಿಗಳಿಗೆ ಕಾಯಂ ಹುದ್ದೆಗಳಲ್ಲಿ ನೇಮಕಾತಿ ಮಾಡಿಕೊಂಡಲ್ಲಿ ಅಂತಹ ನೌಕರರಿಗೆ ಆಯಾ ಹುದ್ದೆಗಳಿಗೆ ಸರ್ಕಾರ ನಿಗದಿಪಡಿಸಿದ ಕನಿಷ್ಠ ವೇತನ ದರದಲ್ಲಿ ಶೇ. 50ರಷ್ಟು ಮೊತ್ತವನ್ನು ಉದ್ಯೋಗದಾತರಿಗೆ ಗರಿಷ್ಠ 2 ವರ್ಷಗಳ ಅವಧಿಗೆ ಮರುಪಾವತಿ ಮಾಡಲಾಗುತ್ತಿದ್ದು, ಇದರ ಸದುಪಯೋಗ ಪಡೆಯಬೇಕು ಎಂದರು.
    ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ನೇಮಕಾತಿಗಾಗಿ ಉತ್ತೇಜಿಸುವುದು, ನೇಮಕಾತಿ ಮಾಡಿಕೊಂಡ ಸಂಸ್ಥೆಗಳಿಗೆ ಅಂತಹ ನೌಕರರ ಇಎಸ್‌ಐ ಹಾಗೂ ಪಿಎ್ ವಂತಿಕೆಯನ್ನು ಮರುಪಾವತಿಸುವ ಮೂಲಕ ಆರ್ಥಿಕ ಸಹಾಯ ನೀಡುವುದು ಹಾಗೂ ತರಬೇತಿ ಪಡೆಯುವ ಅಪ್ರೆಂಟೈಸ್‌ಗಳಿಗೆ ಶಿಷ್ಯವೇತನ ನೀಡುವಂತಹ ಉದ್ದೇಶ ಈ ಯೋಜನೆಯಡಿ ಹೊಂದಿದ್ದು, ಕರ್ನಾಟಕ ರಾಜ್ಯ ಕಾರ್ಮಿಕರ ಕಲ್ಯಾಣ ಮತ್ತು ಸಾಮಾಜಿಕ ಭದ್ರತಾ (ಆಶಾದೀಪ ಯೋಜನೆ) ಸೊಸೈಟಿ ಮೂಲಕ ಜಾರಿಗೊಳಿಸಲಾಗುತ್ತಿದ್ದು, ಅರ್ಹ ಅಭ್ಯರ್ಥಿಗಳು ಮತ್ತು ಖಾಸಗಿ ವಲಯದ ಉದ್ಯೋಗದಾತರು ಈ ಯೋಜನೆಯ ಸದುಪಯೋಗ ಪಡೆಯುವಂತೆ ನೋಡಿಕೊಳ್ಳಲು ಕಾರ್ಮಿಕ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

    ಖಾಸಗಿ ವಲಯದ ಸಂಸ್ಥೆಗಳಲ್ಲಿ ಹೊಸದಾಗಿ ನೇಮಿಸಿಕೊಳ್ಳುವ ಅರ್ಹ ಉದ್ಯೋಗಿಗಳಿಗೆ ಮಾಲೀಕರು, ಉದ್ಯೋಗದಾತರು ಕಡ್ಡಾಯವಾಗಿ ಪಾವತಿಸಬೇಕಾದ ಶಾಸನಬದ್ಧ ಭವಿಷ್ಯನಿಧಿ ಹಾಗೂ ಇಎಸ್‌ಐ ವಂತಿಕೆಯನ್ನು ಆಯಾ ಉದ್ಯೋಗದಾತರಿಗೆ ಎರಡು ವರ್ಷಗಳ ಅವಧಿಗೆ ಸರ್ಕಾರ ಮರುಪಾವತಿ ಮಾಡಲಿದೆ. ಅದರಂತೆ ಒಂದು ವರ್ಷದ ಅವಧಿಯ ಸಾಮಾನ್ಯ ಮತ್ತು ಎರಡು ವರ್ಷಗಳ ಅವಧಿಯ ಸಮಗ್ರ ಅಪ್ರೆಂಟೈಸ್ ತರಬೇತಿ ಪಡೆಯುತ್ತಿರುವ ಪಜಾ, ಪಪಂ ಅಭ್ಯರ್ಥಿಗಳಿಗೆ ಪಾವತಿಸಬೇಕಾದ ಮಾಸಿಕ ಶಿಷ್ಯವೇತನ ಮೊತ್ತದಲ್ಲಿ ಶೇ.50 ರಷ್ಟು ಗರಿಷ್ಠ ಮಾಸಿಕ 3000 ರೂ.ಗಳನ್ನು ಸಹ ಮರುಪಾವತಿ ಮಾಡಲಾಗುತ್ತಿದ್ದು, ಕಾರ್ಮಿಕ ಇಲಾಖೆ ಅಧಿಕಾರಿಗಳು ಈ ಕುರಿತು ಅರಿವು ಮೂಡಿಸುವ ಜೊತೆಗೆ ಅರ್ಹರಿಗೆ ಸೌಲಭ್ಯ ದೊರೆಯುವಂತೆ ನೋಡಿಕೊಳ್ಳಲು ಸೂಚಿಸಿದರು.
    ಕಾರ್ಮಿಕ ಇಲಾಖೆ ಅಧಿಕಾರಿ-1 ಸೂರ್ಯಪ್ಪ ಡೊಂಬರಮತ್ತೂರ, ಕಾರ್ಮಿಕ ಅಧಿಕಾರಿ-2 ಸಿದ್ದಪ್ಪ ಖೈನೂರ, ಕಾರ್ಮಿಕ ನಿರೀಕ್ಷಕ ಜಗದೇವ ಸಜ್ಜನ, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ರಮೇಶ ದೇಸಾಯಿ ಮತ್ತಿತರಿದ್ದರು.

    ಅರ್ಹರಿಗೆ ಸರ್ಕಾರಿ ಸೌಲಭ್ಯ ಸಿಗಲಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts