More

    ಅನುದಾನರಹಿತ ಶಿಕ್ಷಣ ಸಂಸ್ಥೆ ಸಿಬ್ಬಂದಿಗೆ ಪರಿಹಾರ ವಿತರಿಸಿ

    ವಿಜಯಪುರ: ರಾಜ್ಯಾದ್ಯಂತ ಅನುದಾನರಹಿತ ಶಿಕ್ಷಣ ಸಂಸ್ಥೆಯ ಶಾಲೆ-ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬೋಧಕ-ಬೋಧಕೇತರ ಹಾಗೂ ಚಾಲಕರಾದಿಯಾಗಿ ಲಕ್ಷಾಂತರ ಜನ ಕರೊನಾದಿಂದ ಆರ್ಥಿಕ ದುಸ್ಥಿತಿಗೆ ಸಿಲುಕಿದ್ದು, ಯಾರ ಮುಂದೆ ಸಮಸ್ಯೆ ಹೇಳಿಕೊಳ್ಳಲಾಗದಂಥ ಸ್ಥಿತಿಯಲ್ಲಿದ್ದಾರೆ. ಕಾರಣ ಈಗಾಗಲೇ ಎಲ್ಲರಿಗೂ ನೀಡಿರುವ ಪ್ಯಾಕೇಜ್‌ನಂತೆ ಅನುದಾನರಹಿತ ಶಿಕ್ಷಣ ಸಂಸ್ಥೆ ನೌಕರರಿಗೂ ಅನ್ವಯವಾಗುವಂತೆ ಪರಿಹಾರ ಧನ ನೀಡಬೇಕೆಂದು ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ ಅವರು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಒತ್ತಾಯಿಸಿದರು.

    ಅನುದಾನರಹಿತ ಶಾಲೆ- ಕಾಲೇಜು ಶಿಕ್ಷಣ ಸಂಸ್ಥೆ ಸಿಬ್ಬಂದಿ ಜತೆ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಅವರು, ಜಿಲ್ಲಾಧಿಕಾರಿ ವೈ.ಎಸ್. ಪಾಟೀಲರಿಗೆ ಮನವಿ ಸಲ್ಲಿಸಿದರು. ಉಪನ್ಯಾಸಕ ರಾಜೇಂದ್ರಕುಮಾರ ಬಿರಾದಾರ ಮಾತನಾಡಿ, ಶಾಲಾಡಳಿತ ಮಂಡಳಿ ಆರ್ಥಿಕ ಪರಿಸ್ಥಿತಿ ಕೂಡ ಹದಗೆಟ್ಟಿದೆ. ಇಂಥ ಕ್ಲಿಷ್ಟ ಪರಿಸ್ಥಿತಿಯಲ್ಲಿ ಆಡಳಿತ ಮಂಡಳಿಯವರನ್ನು ವೇತನ ನೀಡುವಂತೆ ಒತ್ತಾಯಿಸುವುದು ಸರಿಯಲ್ಲ. ಆ ನಿಟ್ಟನಲ್ಲಿ ಅರುಣ ಶಹಾಪುರ ಅವರು ಈಗಾಗಲೇ ಮುಖ್ಯಮಂತ್ರಿಗಳನ್ನು ಪತ್ರಮುಖೇನ ಒತ್ತಾಯಿಸಿದ್ದು, ಅವರ ಮಾನವೀಯ ಕಳಕಳಿಗೆ ಸಾಕ್ಷಿ ಎಂದು ಹೇಳಿದರು.

    ಉಪನ್ಯಾಸಕ ಶರಣಗೌಡ ಪಾಟೀಲ ಮಾತನಾಡಿ, ಮೂರು ತಿಂಗಳಿಂದ ಅನುದಾರರಹಿತ ಸಂಸ್ಥೆಯಲ್ಲಿನ ಶಿಕ್ಷಕರು, ಉಪನ್ಯಾಸಕರು ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಅವರಿಗೂ ಕೂಡ ಸರ್ಕಾರ ನೆರವಿನಹಸ್ತ ನೀಡಬೇಕಾಗಿದೆ. ಸರ್ಕಾರ ರಾಜ್ಯದ ಎಲ್ಲ ಅನುದಾನಿತ ಶಾಲೆ-ಕಾಲೇಜುಗಳ ಬೋಧಕ, ಬೋಧಕೇತರರ ಪರವಾಗಿ ಪರಿಹಾರ ಧನ ನೀಡಬೇಕೆಂದು ಮನವಿ ಮಾಡಿದರು.

    ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಅನುದಾನ ರಹಿತ ಸಂಸ್ಥೆ ನೌಕರರಾದ ಎ.ಜಿ. ಬಿರಾದಾರ, ಮನೋಹರ ಶಹಾಪುರ, ನಾಗೇಶ ಚವಾಣ್, ಜಿ.ಡಿ. ರಜಪೂತ, ಯಮನೂರಪ್ಪ ಅರಬಿ, ಸುನೀಲ ಬನಸೋಡೆ, ಅವಿನಾಶ ವಿ.ಕೆ., ಎ.ಎಚ್. ಸಗರ, ಸಿದ್ರಾಮ ಪೂಜಾರಿ, ಮಯೂರ ತಿಳಗುಳಕರ, ಮುಸ್ತಾಕ್ ಅಹ್ಮದ್ ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts