More

    ಕರೊನಾಗೆ ಕಡಿವಾಣ ಸಾವು ನಿಯಂತ್ರಣ

    ವಿಜಯಪುರ: ಕರೊನಾ ಸೋಂಕು ದಿನೇ ದಿನೆ ಇಳಿಮುಖವಾಗುತ್ತಿದ್ದು ಸಾವಿನ ಪ್ರಮಾಣದಲ್ಲೂ ಕುಂಠಿತಗೊಂಡಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್‌ಕುಮಾರ್ ಸಿಹಿ ಸುದ್ದಿ ಪ್ರಕಟಿಸಿದ್ದಾರೆ.

    ಈ ಮೊದಲು ಶೇ.30 ರಷ್ಟಿದ್ದ ಕರೊನಾ ಸೋಂಕಿನ ದರ ಇದೀಗ ಶೇ. 20ಕ್ಕೆ ಇಳಿಮುಖವಾಗಿದೆ. ಮಾರ್ಚ್ ಅಂತ್ಯದವರೆಗೆ ಜಿಲ್ಲೆಯಲ್ಲಿ 231 ಜನ ಸಾವಿಗೀಡಾಗಿದ್ದರು. ಅಲ್ಲಿಂದೀಚೆಗೆ 150ಕ್ಕೂ ಅಧಿಕ ಜನ ಸಾವಿಗೀಡಾದರು. ಇದೀಗ ಸಾವಿನ ಸಂಖ್ಯೆಯಲ್ಲಿ ಇಳಿಮುಖವಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

    ಈ ಮೊದಲು ನಗರದ ಪ್ರದೇಶದಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗಿತ್ತು. ಇದೀಗ ಗ್ರಾಮೀಣ ಭಾಗದಲ್ಲಿ ಸೋಂಕು ಹೆಚ್ಚುತ್ತಿದೆ. ಈವರೆಗೆ ಶೇ.70ರಷ್ಟು ಪ್ರಕರಣಗಳು ನಗರ ಪ್ರದೇಶದಿಂದ ಇನ್ನುಳಿದವು ಗ್ರಾಮೀಣ ಪ್ರದೇಶದಿಂದ ಬರುತ್ತಿದ್ದವು. ಇದೀಗ ನಗರ ಪ್ರದೇಶದಲ್ಲಿ ಸೋಂಕಿನ ಪ್ರಮಾಣ ಕಡಿಮೆಯಾಗಿದೆ. ಹೀಗಾಗಿ ಗ್ರಾಮೀಣ ಪ್ರದೇಶದತ್ತ ಹೆಚ್ಚು ಗಮನ ಹರಿಸಲಾಗುತ್ತಿದೆ ಎಂದರು.

    ಗ್ರಾಮ ಮಟ್ಟದಲ್ಲಿ ಕಟ್ಟೆಚ್ಚರ
    ಗ್ರಾಮೀಣ ಭಾಗದಲ್ಲಿ ಸೋಂಕು ನಿಯಂತ್ರಣಕ್ಕೆ ವ್ಯಾಪಕ ಕ್ರಮ ಕೈಗೊಳ್ಳಲಾಗಿದೆ. ಗ್ರಾಮ ಮಟ್ಟದ ಕಾರ್ಯ ಪಡೆ ಸಕ್ರಿಯಗೊಳಿಸಲಾಗಿದೆ. ಮನೆ ಮನೆಗೆ ಭೇಟಿ ನೀಡಿ ಆರೋಗ್ಯ ತಪಾಸಿಸಲಾಗುತ್ತಿದೆ. ಸೋಂಕಿನ ಲಕ್ಷಣಗಳು ಕಂಡು ಬಂದಲ್ಲಿ ಕರೊನಾ ಕಾಳಜಿ ಕೇಂದ್ರಕ್ಕೆ ದಾಖಲಿಸಲಾಗುತ್ತಿದೆ. ಈಗಾಗಲೇ 61ಕರೊನಾ ಕಾಳಜಿ ಕೇಂದ್ರ ತೆರೆಯಲಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಔಷಧ ಪೂರೈಸಲಾಗುತ್ತಿದೆ. ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಸಹ ಔಷಧ ತಲುಪಿಸುತ್ತಿದ್ದಾರೆ. ಆದರೂ ಗ್ರಾಮೀಣರು ಸಮರ್ಪಕವಾಗಿ ಸ್ಪಂದಿಸುತ್ತಿಲ್ಲವೆಂದು ಡಿಸಿ ತಿಳಿಸಿದರು.

    ಜಾಗೃತಿ ಕೊರತೆ, ಮೂಢನಂಬಿಕೆಗಳ ಪ್ರಭಾವ ಮತ್ತಿತರ ಕಾರಣದಿಂದ ಗ್ರಾಮೀಣರು ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ. ಲಕ್ಷಣಗಳು ಕಾಣಿಸಿಕೊಂಡ ತಕ್ಷಣ ಚಿಕಿತ್ಸೆಗೆ ಮುಂದಾಗದೆ ರೋಗದ ತೀವ್ರತೆ ಹೆಚ್ಚಾದಾಗ ಆಸ್ಪತ್ರೆ ಬಾಗಿಲು ತಟ್ಟುತ್ತಿದ್ದಾರೆ. ಮಾಸ್ಕ್ ಧರಿಸದೆ, ಪರಸ್ಪರ ಅಂತರ ಕಾಯ್ದುಕೊಳ್ಳದೆ ಲಾಕ್‌ಡೌನ್ ನಿಯಮ ಉಲ್ಲಂಘಿಸಿ ಸಂಚರಿಸುತ್ತಿರುವುದು ಕಂಡು ಬಂದಿದೆ. ಗ್ರಾಮೀಣರು ಸಮರ್ಪಕವಾಗಿ ಸ್ಪಂದಿಸಿದ್ದೆ ಆದಲ್ಲಿ ಕೇವಲ 15 ದಿನದಲ್ಲಿ ಸೋಂಕು ನಿಯಂತ್ರಣಕ್ಕೆ ಬರಲಿದೆ ಎಂದರು.

    ಆರ್‌ಎಂಪಿಗಳಿಗೆ ಎಚ್ಚರಿಕೆ
    ಗ್ರಾಮೀಣ ಭಾಗದಲ್ಲಿ ಆರ್‌ಎಂಪಿ ವೈದ್ಯರು ಸೋಂಕಿತದ ದಾರಿ ತಪ್ಪಿಸುತ್ತಿದ್ದಾರೆ. ತಪ್ಪು ತಿವಳಿಕೆ ನೀಡುತ್ತಿದ್ದಾರೆ. ಅಂಥವರ ಮೇಲೆ ಕಠಿಣ ಕ್ರಮ ಜರುಗಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

    ಗ್ರಾಮ ಮಟ್ಟದ ಕಾರ್ಯ ಪಡೆ ಸದಸ್ಯರು ಮನೆ ಮನೆಗೆ ಭೇಟಿ ನೀಡಿ ಔಷಧ ವಿತರಿಸಿದರೂ ಜನ ಆರ್‌ಎಂಪಿ ವೈದ್ಯರ ಬಳಿ ಹೋಗುತ್ತಿದ್ದಾರೆ. ಸೋಂಕಿನ ಲಕ್ಷಣ ಕಂಡು ಬಂದ ಕೂಡಲೇ ಸಮೀಪದ ಕರೊನಾ ಕಾಳಜಿ ಕೇಂದ್ರಕ್ಕೆ ಕರೆದೊಯ್ಯಲು ಬಂದರೆ ಜನ ನಿರಾಕರಿಸುತ್ತಿದ್ದಾರೆ. ಬದಲಾಗಿ ಆರ್‌ಎಂಪಿ ವೈದ್ಯರಿಂದ ಔಷಧ ತೆಗೆದುಕೊಳ್ಳುತ್ತಿರುವುದು ಕಂಡು ಬಂದಿದೆ. ಹೀಗಾಗಿ ಅಂಥ ರೋಗಿಗಳು ಬಂದರೆ ಕೂಡಲೇ ಪಿಎಚ್‌ಸಿಗಳಿಗೆ ಶಿಫಾರಸು ಮಾಡಲು ಆರ್‌ಎಂಪಿ ವೈದ್ಯರಿಗೆ ತಿಳಿಸಲಾಗಿದೆ ಎಂದರು.

    ಕೆಲವೊಂದು ಕಡೆ ಆರ್‌ಎಂಪಿ ವೈದ್ಯರೇ ರೋಗಿಗಳನ್ನು ಆರೈಕೆ ಮಾಡುತ್ತಿದ್ದಾರೆ. ಹೀಗಾಗಿ ಅನೇಕ ಜನತೆ ಅಲ್ಲಿ ಸೌಲಭ್ಯಗಳಿಲ್ಲದಿದ್ದರೂ ಅವರಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಾಗಿ ರೋಗದ ತೀವ್ರತೆ ಹೆಚ್ಚಾಗುವ ಅಪಾಯವಿದೆ. ಹೀಗಾಗಿ ಕರೊನಾ ಸಂಬಂಧಿತ ಲಕ್ಷಣಗಳಿದ್ದವರನ್ನು ಯಾವುದೇ ಕಾರಣಕ್ಕೂ ಚಿಕಿತ್ಸೆ ನೀಡದಂತೆ ಆರ್‌ಎಂಪಿ ವೈದ್ಯರಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ ಎಂದರು.

    ಕರೊನಾ ಕಾಳಜಿ ಕೇಂದ್ರ
    ಗ್ರಾಮೀಣ ಭಾಗದಲ್ಲಿ ಬಹುತೇಕ ಜನರು ಕರೊನಾ ಕಾಳಜಿ ಕೇಂದ್ರಗಳಲ್ಲಿ ಇರಲು ಒಪ್ಪುತ್ತಿಲ್ಲ, ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ರೋಗಿಗಳನ್ನು ಕಡ್ಡಾಯವಾಗಿ ಕರೊನಾ ಕಾಳಜಿ ಕೇಂದ್ರದಲ್ಲಿ ಇರಿಸಬೇಕಾಗಬಹುದು. ರೋಗಿಗಳು ಅದಕ್ಕೆ ಅವಕಾಶ ಮಾಡಿಕೊಡಬಾರದು. ಕಾಳಜಿ ಕೇಂದ್ರಗಳಲ್ಲಿ ಸಕಲ ವೈದ್ಯಕೀಯ ಸೌಕರ್ಯಗಳಿದ್ದು ಸೂಕ್ತ ಉಪಚಾರ, ಚಿಕಿತ್ಸೆ ದೊರಕುತ್ತದೆ. ಮನೆಯಲ್ಲಿದ್ದರೆ ಸೂಕ್ತ ಚಿಕಿತ್ಸೆ ದೊರಕುವ ಸಾಧ್ಯತೆ ಕಡಿಮೆ. ಹೀಗಾಗಿ ಜನತೆಯ ಆರೋಗ್ಯಕ್ಕಾಗಿ ಅವರನ್ನು ಕಡ್ಡಾಯವಾಗಿ ಕಾಳಜಿ ಕೇಂದ್ರಗಳಲ್ಲಿಯೇ ಇರಿಸುವ ನಿಟ್ಟಿನಲ್ಲಿ ಅಧಿಕಾರ ಬಲ ಪ್ರಯೋಗಿಸುವುದು ಅನಿವಾರ್ಯವಾಗಲಿದೆ ಎಂದರು. ಅಪರ ಜಿಲ್ಲಾಧಿಕಾರಿ ರಮೇಶ ಕಳಸದ ಇದ್ದರು.

    ಕರೊನಾ ಇಳಿಕೆಗೆ ಕಾರಣ
    ಕರೊನಾ ಪ್ರಮಾಣ ಇಳಿಮುಖವಾಗಲು ಜಿಲ್ಲೆಯ ಅಧಿಕಾರಿಗಳ ತಂಡದ ಕಾರ್ಯವೇ ಕಾರಣ. ಬೆಡ್ ಮ್ಯಾನೇಜ್‌ಮೆಂಟ್ ಪೋರ್ಟಲ್, ನೋಡಲ್ ಅಧಿಕಾರಿಗಳ ನೇಮಕ, ಸಹಾಯವಾಣಿ ಹಾಗೂ ಆಕ್ಸಿಜನ್ ಮತ್ತು ರೆಮ್‌ಡೆಸಿವಿರ್ ಸಮರ್ಪಕ ಪೂರೈಕೆಯಿಂದಾಗಿ ಕರೊನಾದಿಂದ ಗುಣಮುಖರಾಗುವವರ ಸಂಖ್ಯೆ ಹೆಚ್ಚಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್‌ಕುಮಾರ್ ತಿಳಿಸಿದರು.

    ಪ್ರತಿದಿನ ಸುಮಾರು 500 ರಿಂದ 600 ಪ್ರಕರಣಗಳು ದಾಖಲಾಗುತ್ತಿದ್ದ ಸಂದರ್ಭದಲ್ಲಿ ಬೆಡ್ ಸಮಸ್ಯೆ ನೀಗಿಸಲು ಹಗಲಿರುಳು ಶ್ರಮಿಸಲಾಯಿತು. ಈ ಹಿಂದೆ ಪ್ರತಿದಿನ ಜಿಲ್ಲಾಸ್ಪತ್ರೆಯೊಂದರಲ್ಲಿಯೇ 130 ಕ್ಕೂ ಹೆಚ್ಚು ಸಿಟಿ ಸ್ಕ್ಯಾನ್ ಮಾಡಲಾಗುತ್ತಿತ್ತು. ಈಗ 60 ರಿಂದ 20 ಜನ ಮಾತ್ರ ಸಿಟಿ ಸ್ಕ್ಯಾನ್ ಮಾಡಿಕೊಂಡಿದ್ದಾರೆ. ರೆಮ್‌ಡೆಸಿವಿರ್ ಪ್ರತಿದಿನ 170 ರಿಂದ 180 ವೈಯಲ್ಸ್‌ಗಳಷ್ಟು ನೀಡಲಾಗುತ್ತಿತ್ತು. ಇದೀಗ 85 ವೈಯಲ್ಸ್ ಮಾತ್ರ ನೀಡಲಾಗುತ್ತಿದೆ ಎಂದರು.

    ಬ್ಲಾೃಕ್ ಫಂಗಸ್ ರೋಗಕ್ಕೆ ಸಂಬಂಧಿಸಿದಂತೆಯೂ ಗಂಭೀರ ಕ್ರಮ ಕೈಗೊಳ್ಳಲಾಗಿದ್ದು, ಈಗಾಗಲೇ 50 ಪ್ರಕರಣ ಪತ್ತೆಯಾಗಿದ್ದು, ಅವಶ್ಯವಿರುವ ಔಷಧ ಪೂರೈಸುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದರು.

    ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಪಂ ಕಾರ್ಯಪಡೆ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. 4 ದಿನಗಳಿಂದ 2000 ಕರೊನಾ ರೋಗ ಲಕ್ಷಣಗಳುಳ್ಳ ರೋಗಿಗಳನ್ನು ಹಳ್ಳಿಗಳಲ್ಲಿ ಪತ್ತೆ ಹಚ್ಚಲಾಗಿದ್ದು, ಅದರಲ್ಲಿ 231 ಪಾಸಿಟಿವ್ ಪ್ರಕರಣಗಳು ಧೃಡಪಟ್ಟಿವೆ. ಗ್ರಾಮೀಣ ಪ್ರದೇಶದಲ್ಲಿ ಕರೊನಾ ಲಕ್ಷಣ ಉಳ್ಳವರನ್ನು ತೀವ್ರಗತಿಯಲ್ಲಿ ಪತ್ತೆ ಹಚ್ಚಲಾಗುತ್ತಿದೆ.
    ಪಿ.ಸುನೀಲ್‌ಕುಮಾರ್, ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts