More

    ಮುಂದುವರಿದ ಕರೊನಾ ಮರಣ ಮೃದಂಗ

    ವಿಜಯಪುರ: ಜಿಲ್ಲೆಯಲ್ಲಿ ಬುಧವಾರ ಮತ್ತೆ 121 ಜನರಿಗೆ ಕರೊನಾ ಸೋಂಕು ದೃಢವಾಗಿದ್ದು, ಮತ್ತಿಬ್ಬರು ಕೋವಿಡ್ ಸೋಂಕಿಗೆ ಮೃತಪಟ್ಟಿದ್ದಾರೆ. ಈವರೆಗೆ ಒಟ್ಟು 45 ಜನ ಮೃತಪಟ್ಟಿದ್ದು, ಸೋಂಕಿತರ ಸಂಖ್ಯೆ 4218ಕ್ಕೆ ಏರಿಕೆ ಆಗಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲಕುಮಾರ್ ಮಾಹಿತಿ ನೀಡಿದ್ದಾರೆ.
    ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಮಿಣಜಗಿಯ ನಿವಾಸಿ ಕೋವಿಡ್ ಸೋಂಕಿತ 71 ವರ್ಷ ವಯೋಮಾನದ ವೃದ್ಧ ಚಿಕಿತ್ಸೆಗಾಗಿ ಜು.30ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಮತ್ತೊಬ್ಬ ವೃದ್ಧ ವಿಜಯಪುರದ ರೈಲ್ವೆ ಸ್ಟೇಷನ್ ಸಮೀಪದ 75 ವರ್ಷದ ನಿವಾಸಿ ಜು.29ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಶ್ವಾಸಕೋಶ ತೊಂದರೆ, ಸಕ್ಕರೆ ಕಾಯಿಲೆ, ಅಧಿಕ ರಕ್ತದೊತ್ತಡ ಕಾಯಿಲೆಯಿಂದ ಬಳಲುತ್ತಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಮೃತರ ಅಂತ್ಯ ಸಂಸ್ಕಾರ ಶಿಷ್ಟಾಚಾರದಂತೆ ನೆರವೇರಿಸಲಾಗಿದೆ ಎಂದು ತಿಳಿಸಿದ್ದಾರೆ.

    1369 ಜನರ ವರದಿ ನಿರೀಕ್ಷೆ

    57390 ಜನರ ಗಂಟಲು ದ್ರವ ಪರೀಕ್ಷೆಗೆ ಒಳಪಡಿಸಲಾಗಿದ್ದು, 51,803 ಜನರ ವರದಿ ನೆಗೆಟಿವ್ ಬಂದಿದೆ. 1369 ಜನರ ವರದಿ ಬರಬೇಕಿದೆ. 979 ಸಕ್ರಿಯ ಪ್ರಕರಣಗಳಿದ್ದು, ಸೋಂಕಿತರಿಗೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 42,923 ಜನರ ಮೇಲೆ ನಿಗಾ ವಹಿಸಲಾಗಿದೆ. 38,367 ಜನರು ಕ್ವಾರಂಟೈನ್ ಅವಧಿ ಮುಗಿಸಿದ್ದು, 1317 ಜನರು ರಿಪೋರ್ಟಿಂಗ್ ಅವಧಿಯಲ್ಲಿದ್ದಾರೆ. ಬುಧವಾರ ಮತ್ತೆ 94ಜನರು ಗುಣಮುಖರಾಗಿದ್ದು, ಈವರೆಗೆ 3194 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

    ತಾಲೂಕುವಾರು ಮಾಹಿತಿ

    ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಸಂಖ್ಯೆ ದಿನೇ ದಿನೆ ಹೆಚ್ಚುತ್ತಿದ್ದು, ವಿಜಯಪುರ ತಾಲೂಕು ವ್ಯಾಪ್ತಿ 2543, ಬಸವನಬಾಗೇವಾಡಿ 353, ಬಬಲೇಶ್ವರ 65, ಚಡಚಣ 35, ದೇವರಹಿಪ್ಪರಗಿ 59, ಇಂಡಿ 264, ಕೊಲ್ಹಾರ 56, ಮುದ್ದೇಬಿಹಾಳ 282, ನಿಡಗುಂದಿ 35, ಸಿಂದಗಿ 243, ತಾಳಿಕೋಟೆ 198, ತಿಕೋಟಾ 76 ಹಾಗೂ ಇತರ ಜಿಲ್ಲೆಗಳಿಂದ ಆಗಮಿಸಿದ 9 ಜನರಲ್ಲಿ ಕೋವಿಡ್ ಸೋಂಕು ದೃಢವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts