More

    ಮಕ್ಕಳ ಆರೋಗ್ಯ ರಕ್ಷಣೆಗೆ ಸಿದ್ಧತೆ ಮಾಡಿಕೊಳ್ಳಿ

    ವಿಜಯಪುರ: ಕರೊನಾ 3ನೇ ಅಲೆ ಎದುರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಬೇಕೆಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ ಸಚಿವೆ ಶಶಿಕಲಾ ಜೊಲ್ಲೆ ಮಕ್ಕಳ ಆರೋಗ್ಯ ರಕ್ಷಣೆಗೆ ಈಗಿನಿಂದಲೇ ಪೂರಕ ತಯಾರಿ ಮಾಡಿಕೊಳ್ಳಲು ತಿಳಿಸಿದರು.

    ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಕರೊನಾ ನಿಯಂತ್ರಣ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ನಡೆಸಿದ ಅವರು, ಕರೊನಾ 3 ನೇ ಅಲೆಗೆ ಮಕ್ಕಳು ಬಾಧಿತವಾಗುವ ಸಾಧ್ಯತೆ ಇರುವುದರಿಂದ ಜಿಲ್ಲಾಸ್ಪತ್ರೆ, ತಾಲೂಕಾಸ್ಪತ್ರೆ ಹಾಗೂ ವಿವಿಧ ಖಾಸಗಿ ಆಸ್ಪತ್ರೆಗಳ ವ್ಯಾಪ್ತಿಯಲ್ಲಿ ಬೆಡ್‌ಗಳ ವ್ಯವಸ್ಥೆ, ಆಕ್ಸಿಜನ್, ವೆಂಟಿಲೇಟರ್ ಸೇರಿದಂತೆ ಸಕಲ ಸಿದ್ಧತೆ ಮಾಡಿಕೊಳ್ಳಬೇಕೆಂದರು.

    ಅನಾಥ ಮಕ್ಕಳಿಗೆ ಆಸರೆ
    ಕರೊನಾದಿಂದ ತಂದೆ ತಾಯಿಯನ್ನು ಕಳೆದುಕೊಂಡ 3 ಮಕ್ಕಳು ಅನಾಥವಾಗಿರುವ ಬಗ್ಗೆ ಗಮನಕ್ಕೆ ಬಂದಿದೆ. ಅಂತಹ ಮಕ್ಕಳ ಪೋಷಣೆ ಬಗ್ಗೆ ನಿಗಾ ಇಡಬೇಕು. ಇಂತಹ ಮಕ್ಕಳ ಭವಿಷ್ಯಕ್ಕಾಗಿ ಈಗಾಗಲೇ ಮುಖ್ಯಮಂತ್ರಿಗಳು ಬಾಲ ಸೇವಾ ಯೋಜನೆ ಜಾರಿಗೊಳಿಸಿದ್ದು, ಇದರಡಿ ಸೌಲಭ್ಯ ಕಲ್ಪಿಸಬೇಕು. ಅದರಂತೆ ತಂದೆ ಮತ್ತು ತಾಯಿ ಇವರಿಬ್ಬರಲ್ಲಿ ಒಬ್ಬರನ್ನು ಕಳೆದುಕೊಂಡ ಜಿಲ್ಲೆಯ 289 ಮಕ್ಕಳ ಬಗ್ಗೆಯೂ ನಿಗಾ ಇಡಬೇಕು. ಅನಾಥರಾಗುವ ಮಕ್ಕಳ ಭವಿಷ್ಯ ರೂಪಿಸಲು ದತ್ತು ನಿಯಮ, ಕಾನೂನು ಅನುಸಾರ ಯಾರಾದರೂ ದಾನಿಗಳು, ಸಂಘ-ಸಂಸ್ಥೆಗಳು, ಶೈಕ್ಷಣಿಕ ಸಂಸ್ಥೆಗಳು ಅವರ ಶಿಕ್ಷಣ ಮತ್ತು ಉದ್ಯೋಗಕ್ಕೆ ಅವಕಾಶ ಕಲ್ಪಿಸಿ ಭವಿಷ್ಯ ರೂಪಿಸಲು ಮುಂದೆ ಬಂದಲ್ಲಿ ದತ್ತು ನಿಯಮ ಪ್ರಕಾರ ಅವರಿಗೆ ಸರ್ಕಾರದಿಂದ ಸಹಕಾರ ಕಲ್ಪಿಸಲಾಗುವುದು ಎಂದರು.

    ಪ್ರವಾಹ ಎದುರಿಸಲು ಸಜ್ಜಾಗಿ
    ಶಾಸಕ ಯಶವಂತರಾಯಗೌಡ ಪಾಟೀಲ ಮಾತನಾಡಿ, ಕರೊನಾ 3ನೇ ಅಲೆ ಎದುರಿಸಲು ಈಗಿನಿಂದಲೇ ಯೋಜನೆ ರೂಪಿಸಬೇಕು. ಸಾವಿನ ಸಂಖ್ಯೆ ಬಗ್ಗೆ ಲೆಕ್ಕ ಪರಿಶೋಧನೆ ನಡೆಸಬೇಕು. ಮುಂದಿನ ದಿನಗಳಲ್ಲಿ ಪ್ರವಾಹ ಪರಿಸ್ಥಿತಿ ಎದುರಿಸಲು ಸಿದ್ಧತೆ ಮಾಡಿಕೊಳ್ಳುವ ಬಗ್ಗೆ ಮತ್ತು ಮಹಾರಾಷ್ಟ್ರ ಸರ್ಕಾರದೊಂದಿಗೆ ಸಂಪರ್ಕದೊಂದಿಗೆ ನಿರ್ವಹಣೆ ಮಾಡಿಕೊಳ್ಳಲು ಸಲಹೆ ನೀಡಿದರು.

    ಜಿಲ್ಲಾಧಿಕಾರಿ ಪಿ.ಸುನೀಲ್‌ಕುಮಾರ್ ಕಪ್ಪು ಶಿಲೀಂಧ್ರ ಪ್ರಕರಣಗಳ ವಿವರ ನೀಡಿದರು. ಸಂಸದ ರಮೇಶ ಜಿಗಜಿಣಗಿ, ಶಾಸಕರಾದ ಸೋಮನಗೌಡ ಪಾಟೀಲ ಸಾಸನೂರ, ಡಾ.ದೇವಾನಂದ ಚವಾಣ್, ಅರುಣ ಶಹಾಪುರ, ಹನುಮಂತ ನಿರಾಣಿ, ರಾಜ್ಯ ಬೀಜ ನಿಗಮ ಹಾಗೂ ಸಾವಯವ ಪ್ರಮಾಣನ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲ, ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪುರ, ಜಿಪಂ ಸಿಇಒ ಗೋವಿಂದ ರೆಡ್ಡಿ, ಎಸ್‌ಪಿ ಅನುಪಮ ಅಗರವಾಲ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts