More

  ನಾಳೆ ನಳೀನಕುಮಾರ ಕಟೀಲ ಆಗಮನ

  ವಿಜಯಪುರ: ಪೌರತ್ವ ಕಾಯ್ದೆ ಕುರಿತು ಬಿಜೆಪಿಯಿಂದ ವ್ಯಾಪಕ ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದ್ದು, ತನ್ನಿಮಿತ್ತ ಜ.12 ರಂದು ಬಿಜೆಪಿ ಅಧ್ಯಕ್ಷ ನಳೀನಕುಮಾರ ಕಟೀಲ ನಗರಕ್ಕೆ ಆಗಮಿಸುತ್ತಿದ್ದಾರೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.
  ಅಂದು ಸಂಜೆ 5ಕ್ಕೆ ದರಬಾರ್ ಶಿಕ್ಷಣ ಸಂಸ್ಥೆಯ ಒಳಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದೆ. ಪಕ್ಷದ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ವೇಳೆ ಮುಕ್ತ ಸಂವಾದ ಸಹ ಏರ್ಪಡಲಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
  ಪೌರತ್ವ ಕಾಯ್ದೆಯಿಂದ ದೇಶದ ಅಲ್ಪಸಂಖ್ಯಾತರಿಗೆ ಯಾವುದೇ ತೊಂದರೆಯಿಲ್ಲ. ಕೆಲವರು ಅನವಶ್ಯಕವಾಗಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಅಶಾಂತಿ ಹರಡುತ್ತಿದ್ದಾರೆ. ಹೀಗಾಗಿ ಈ ಕಾಯ್ದೆ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು.
  ಜಿಲ್ಲಾಧ್ಯಕ್ಷ ಚಂದ್ರಶೇಖರ ಕವಟಗಿ ಮಾತನಾಡಿ, ಪೌರತ್ವ ಕಾಯ್ದೆ ಯಾರದ್ದೋ ಹಕ್ಕನ್ನು ಕಿತ್ತುಕೊಳ್ಳುವುದಲ್ಲ. ಬದಲಾಗಿ ಹಕ್ಕು ಕೊಡುವುದು. ಪೌರತ್ವ ಕಾಯ್ದೆಯಿಂದ ಯಾವುದೇ ಸಮುದಾಯಕ್ಕೆ ತೊಂದರೆಯಿಲ್ಲ. ಈ ಕಾಯ್ದೆ ಏಕಾಏಕಿ ಜಾರಿಗೆ ತಂದಿದ್ದಲ್ಲ. ಬಿಜೆಪಿ ಪ್ರಣಾಳಿಕೆಯಲ್ಲೇ ಈ ಅಂಶ ಅಡಗಿತ್ತು. ಮಾತ್ರವಲ್ಲ, ನೆಹರೂ ಕಾಲದಿಂದಲೂ ಕಾಯ್ದೆ ತಿದ್ದುಪಡಿಯಾಗಬೇಕೆಂಬ ಚರ್ಚೆ ನಡೆಯುತ್ತಲೇ ಇತ್ತು. ಇದೀಗ ಜಾರಿಬಂದಿದೆ ಅಷ್ಟೆ ಎಂದರು.
  ಜ.15 ರಿಂದ 20 ರವರೆಗೆ ಜಿಲ್ಲೆಯಲ್ಲಿ ಪೌರತ್ವ ಕಾಯ್ದೆ ಕುರಿತು ಜನಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಮನೆ ಮನೆಗೆ ಕರಪತ್ರ ಹಂಚಲಾಗುತ್ತಿದೆ. ಚಹಾ ಪೇ ಚರ್ಚಾ ಕಾರ್ಯಕ್ರಮ, ಭಾರತ ಮಾತಾ ಪೂಜೆ ಮೂಲಕ ಮಹಿಳೆಯರನ್ನು ಸೇರಿಸಿ ಜಾಗೃತಿ ಮೂಡಿಸಲಾಗುತ್ತಿದೆ. ಪ್ರತಿ ವಿಧಾನ ಸಭೆ ಕ್ಷೇತ್ರದಲ್ಲಿ ಸಹಿ ಸಂಗ್ರಹ ಅಭಿಯಾನ, ಪಂಜಿನ ಮೆರವಣಿಗೆ, ಪತ್ರ ಚಳವಳಿ ಹೀಗೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದರು.
  ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಮುಖಂಡರಾದ ವಿಜುಗೌಡ ಪಾಟೀಲ, ದಯಾಸಾಗರ ಪಾಟೀಲ, ರವಿಕಾಂತ ಬಗಲಿ, ಶ್ರೀಶೈಲಗೌಡ ಬಿರಾದಾರ, ವಿವೇಕ ಡಬ್ಬಿ, ವಿಜಯಕುಮಾರ ಜೋಶಿ ಮತ್ತಿತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts