More

    ತೈಲ ಬೆಲೆ ಏರಿಕೆಗೆ ಖಂಡನೆ

    ವಿಜಯಪುರ: ಪೆಟ್ರೋಲ್ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಶುಕ್ರವಾರ ವಿಜಯಪುರ ನಗರದ ಅಂಬೇಡ್ಕರ್‌ವೃತ್ತದಲ್ಲಿರುವ ಸಾಯಿಬಾಬಾ ಪೆಟ್ರೋಲ್ ಬಂಕ್ ಮುಂದೆ ಪ್ರತಿಭಟನೆ ನಡೆಸಿ, ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

    ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಜು ಆಲಗೂರ ಮಾತನಾಡಿ, ಕರೊನಾ ಮಹಾಮಾರಿಯಿಂದ ಇಡೀ ರಾಷ್ಟ್ರದ ಜನತೆ ಸಂಕಷ್ಟಕ್ಕೀಡಾಗಿದ್ದಾರೆ. ಆರ್ಥಿಕವಾಗಿ ಬಲಹೀನರಾಗಿದ್ದು ಮುಂದೆ ಜೀವನ ನಡೆಸುವುದು ಕಷ್ಟಕರವಾಗಿದೆ. ಇಂತಹ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಕೇಂದ್ರ ಸರ್ಕಾರ ಜನರ ಜತೆಗೆ ನಿಂತು ಧೈರ್ಯ ತುಂಬಬೇಕಿದೆ. ಆದರೆ, ಕೇಂದ್ರ ಸರ್ಕಾರ ಕರೊನಾ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದೆ.

    ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಏರಿಕೆ ಮಾಡಿ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಇನ್ನಷ್ಟು ಹೊರೆ ಮಾಡಲಾಗಿದೆ. ಅಡುಗೆ ಅನಿಲ ಬೆಲೆ ಒಂದು ಸಿಲಿಂಡರ್ 850 ರೂಗೆ ದಾಟಿದ್ದು, ದಿನ ಬಳಕೆಯ ಅಡುಗೆ ಎಣ್ಣೆ ಕೆಜಿಗೆ 180 ರೂ. ಇದೆ. ಸಿಮೆಂಟ್, ಸ್ಟೀಲ್, ಬಟ್ಟೆ ಹೀಗೆ ಅನೇಕ ದಿನನಿತ್ಯದ ವಸ್ತುಗಳ ಬೆಲೆ ದುಬಾರಿಯಾಗಿದ್ದು, ಕೇಂದ್ರ ಸರ್ಕಾರ ಯಾವುದಕ್ಕೂ ಕಿವಿಗೊಡದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ ಎಂದರು.

    ಪೆಟ್ರೋಲ್ ಬೆಲೆ ಲೀಟರ್‌ಗೆ 100 ರೂ. ದಾಟಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ 65 ರೂ. ತೆರಿಗೆ ವಿಧಿಸುತ್ತಿದೆ. ತೈಲ ರಾಷ್ಟ್ರಗಳಲ್ಲಿ ಕಚ್ಚಾ ತೈಲ ಬೆಲೆ ಹೆಚ್ಚಳವಾಗಿದೆ ಎಂದು ಕೇಂದ್ರ ಸರ್ಕಾರ ಜನರಿಗೆ ಸುಳ್ಳು ಹೇಳುತ್ತಿದೆ. ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡಲಾಗುತ್ತದೆ. ದೇಶದಲ್ಲಿ ‘ಅಚ್ಛೇದಿನ್’ ಬರುತ್ತದೆ ಎಂದು ಹೇಳಿ ಹಗಲುಗನಸು ತೋರಿಸಿ ಜನರನ್ನು ಮೋಸ ಮಾಡುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಕೇಂದ್ರ ಸರ್ಕಾರಕ್ಕೆ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ತಿಳಿಸಿದರು.

    ಮಾಜಿ ಶಾಸಕ ವಿಠ್ಠಲ ಕಟಕಧೋಂಡ, ಮುಖಂಡರಾದ ಅಬ್ದುಲ್ ಹಮೀದ್ ಮುಶ್ರೀಫ್, ಎಸ್.ಎಂ. ಪಾಟೀಲ(ಗಣಿಹಾರ), ಗುರನಗೌಡ ಪಾಟೀಲ, ಮಹ್ಮದ್ ರಫೀಕ್ ಟಪಾಲ, ಶ್ರೀದೇವಿ ಉತ್ಲಾಸರ, ಬಡೇಪೀರ್ ಜುನೇದಿ, ಶ್ರೀಕಾಂತ ಛಾಯಾಗೋಳ, ವಿದ್ಯಾರಾಣಿ ತುಂಗಳ, ಸುರೇಶ ಘೋಣಸಗಿ, ಜಮೀರ್ ಅಹ್ಮದ್ ಬಕ್ಷೀ, ಗಂಗಾಧರ ಸಂಬಣ್ಣಿ, ಆರತಿ ಶಹಾಪೂರ, ವಸಂತ ಹೊನಮೊಡೆ ಇನ್ನಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts