More

    ಸಾರಿಗೆ ಸಂಪರ್ಕಕ್ಕೆ ಸಾರ್ವಜನಿಕ ಖುಷ್

    ವಿಜಯಪುರ: ಕಳೆದೊಂದೂವರೆ ತಿಂಗಳಿಂದ ಭಣಗುಡುತ್ತಿದ್ದ ಕೇಂದ್ರ ಬಸ್ ನಿಲ್ದಾಣಕ್ಕೀಗ ಹೊಸ ಕಳೆ ಬಂದಿದ್ದು ಬೆಳ್ಳೆಂಬೆಳಗ್ಗೆ ಬಸ್‌ಗಳು ಫ್ಲಾಟ್‌ಫಾರ್ಮ್‌ಗೆ ಬಂದು ನಿಲ್ಲುತ್ತಿದ್ದಂತೆ ಹಳೇ ಚಿತ್ರಣ ಮರುಕಳಿಸಿತು.
    ಬಸ್ ಓಡಾಟಕ್ಕೆ ಹಸಿರು ನಿಶಾನೆ ಸಿಗುತ್ತಿದ್ದಂತೆ ಇಡೀ ನಿಲ್ದಾಣವನ್ನೂ ಅಚ್ಚುಕಟ್ಟಾಗಿ ವ್ಯವಸ್ಥೆಗೊಳಿಸಿದ್ದ ಸಾರಿಗೆ ಇಲಾಖೆ ಪ್ರತಿ ಫ್ಲಾಟ್‌ಫಾರ್ಮ್‌ನಲ್ಲಿ ಬಿಳಿ ಬಣ್ಣದ ಮೂಲಕ ಚೌಕುಮನೆ ಮಾಡಿ ಪರಸ್ಪರ ಅಂತರದೊಂದಿಗೆ ಬಸ್ ಹತ್ತಲು ವ್ಯವಸ್ಥೆ ಮಾಡಿದ್ದರು. ನಿಲ್ದಾಣ ಶುಚಿಗೊಳಿಸಿ ಅಂಗಡಿ ಮುಂಗಟ್ಟು ತೆರೆಯಲು ಅವಕಾಶ ಕಲ್ಪಿಸಿದ್ದರು. ಹೀಗಾಗಿ ಬಸ್ ನಿಲ್ದಾಣ ಸಹ ಗೃಹಬಂಧನದಿಂದ ಹೊರಬಂದಂತೆ ಭಾಸವಾಯಿತು.

    200ಕ್ಕೂ ಅಧಿಕ ಬಸ್ ಓಡಾಟ

    ಬೆಳಗ್ಗೆ 6 ರಿಂದಲೇ ಬಸ್‌ಗಳ ಓಡಾಟ ಆರಂಭಗೊಂಡಿತು. ಅಂದಾಜು 250 ಬಸ್‌ಗಳ ಕಾರ್ಯಾಚರಣೆ ನಡೆಸಲಾಯಿತು. ಜಿಲ್ಲೆಯ ಆಂತರಿಕ ಹಾಗೂ ಬಾಹ್ಯವಾಗಿ ಬಸ್‌ಗಳನ್ನು ಬಿಡಲಾಗಿತ್ತು. ಜಿಲ್ಲೆ ಎಲ್ಲ ತಾಲೂಕು ಕೇಂದ್ರಗಳಿಗೆ ಮತ್ತು ಅಲ್ಲಿಂದ ಜಿಲ್ಲಾ ಕೇಂದ್ರಗಳಿಗೆ ಬಸ್‌ಗಳನ್ನು ಓಡಿಸಲಾಯಿತು. ನೆರೆಯ ಜಿಲ್ಲೆಗಳಾದ ಬಾಗಲಕೋಟೆ, ಕಲಬುರಗಿ, ರಾಯಚೂರು, ಬೆಳಗಾವಿ, ಚಿಕ್ಕೋಡಿ ಮುಂತಾದ ಭಾಗಗಳಿಗೆ ಬಸ್‌ಗಳ ಕಾರ್ಯಾಚರಣೆ ನಡೆಯಿತು. ಪ್ರಯಾಣಿಕರ ಸಂಖ್ಯೆಗನುಣವಾಗಿ ಬಸ್‌ಗಳನ್ನು ಬಿಡಲಾಯಿತು.

    ಪ್ರಯಾಣಿಕರ ಸಂಖ್ಯೆ ಇಳಿಮುಖ

    ಬಸ್‌ಗಳ ಸಂಖ್ಯೆಗನುಗುಣವಾಗಿ ಪ್ರಯಾಣಿಕರು ಬಾರದಿರುವುದು ಕಂಡು ಬಂತು. ಬೆಳಗ್ಗೆ 6 ರಿಂದ ಮಧ್ಯಾಹ್ನ 1ರವರೆಗೆ ಪ್ರಯಾಣಿಕರ ಸಂಖ್ಯೆ ತೀರ ಕಡಿಮೆಯಾಗಿತ್ತು. ಪ್ರತಿ ಬಸ್‌ನಲ್ಲಿ ಗರಿಷ್ಠ 30 ಜನರಿಗೆ ಮಾತ್ರ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಬಸ್ ನಿಲ್ದಾಣದಲ್ಲಿ ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿತ್ತು ಪ್ರಯಾಣಿಕರ ವಿಳಾಸ ಬರೆದುಕೊಂಡು ಪರಸ್ಪರ ಅಂತರದೊಂದಿಗೆ ಬಸ್‌ನಲ್ಲಿ ಅವರನ್ನು ಹತ್ತಿಸಲಾಯಿತು.
    ನಿಲ್ದಾಣದಲ್ಲಿ ಎಲ್ಲ ಅಂಗಡಿ ಮುಂಗಟ್ಟುಗಳು ಎಂದಿನಂತೆ ತೆರೆದಿದ್ದವು. ಅಂಗಡಿ ಮುಂದೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸೂಚನೆ ನೀಡಲಾಗಿತ್ತಲ್ಲದೆ, ಅದಕ್ಕಾಗಿ ಬಿಳಿ ಬಣ್ಣದಿಂದ ಚೌಕು ಮನೆ ಮಾಡಲಾಗಿತ್ತು. ವ್ಯಾಪಾರ ಮಾತ್ರ ನೀರಸವಾಗಿತ್ತು. ಪ್ರಯಾಣಿಕರಿಗೆ ಮೀಸಲಾದ ಆಸನಗಳ ಮೇಲೆ ಎಲ್ಲಿ ಕುಳಿತುಕೊಳ್ಳಬೇಕೆಂಬ ಚಿಹ್ನೆ ಗುರುತಿಸಲಾಗಿತ್ತು.

    ಆಟೋಗಳಿಂದ ಸುಲಿಗೆ

    ಆಟೋಗಳು ಸಹ ಬೆಳಗ್ಗೆಯೇ ರಸ್ತೆಗಿಳಿದಿದ್ದವು. ಕೇಂದ್ರ ಬಸ್ ನಿಲ್ದಾಣ, ಮಹಾತ್ಮ ಗಾಂಧಿ ವೃತ್ತ, ಬಾಗಲಕೋಟೆ ರಸ್ತೆ, ವಜ್ರಹನುಮಾನ್ ದೇವಸ್ಥಾನ, ಆಶ್ರಮ ರಸ್ತೆ, ಗೋದಾವರಿ ಹೋಟೆಲ್, ಬಂಜಾರಾ ಕ್ರಾಸ್, ಮನಗೂಳಿ ರಸ್ತೆ ಮುಂತಾದೆಡೆ ಆಟೋಗಳು ಕಾರ್ಯಾಚರಿಸಿದವು. ಒಂದು ಆಟೋದಲ್ಲಿ ಇಬ್ಬರಿಗೆ ಮಾತ್ರ ಹತ್ತಿಸಿಕೊಳ್ಳಲು ಅವಕಾಶ ಇತ್ತು. ಇದೇ ನೆಪವೊಡ್ಡಿ ಆಟೋ ಚಾಲಕರು ನಿಗದಿತ ದರಕ್ಕಿಂತ ದುಪ್ಪಟ್ಟು ಹಣ ದೋಚಿದ್ದು ಕಂಡು ಬಂತು.

    ಮೊದಲ ದಿನ ಪ್ರಯಾಣಿಕರ ಸಂಖ್ಯೆ ನೀರಸವಾಗಿತ್ತು. ಪ್ರಯಾಣಿಕರ ಸಂಖ್ಯೆ ನೋಡಿಕೊಂಡು ಬಸ್ ಕಾರ್ಯಾಚರಿಸಲಾಯಿತು. ಬುಧವಾರದಿಂದ ಬೆಂಗಳೂರಿಗೆ ಬಸ್ ಸೇವೆ ಆರಂಭಿಸಲಾಗುವುದು. ಪ್ರಯಾಣಿಕರ ಸುರಕ್ಷತೆ ಆಧರಿಸಿ ಬಸ್ ಸಂಚಾರ ವ್ಯವಸ್ಥೆ ಮಾಡಲಾಗುವುದು.
    ಎಸ್.ಜಿ. ಗಂಗಾಧರ, ವಿಭಾಗೀಯ ನಿಯಂತ್ರಣಾಧಿಕಾರಿ, ವಿಜಯಪುರ

    ಸಾರಿಗೆ ಸಂಪರ್ಕಕ್ಕೆ ಸಾರ್ವಜನಿಕ ಖುಷ್
    ಸಾರಿಗೆ ಸಂಪರ್ಕಕ್ಕೆ ಸಾರ್ವಜನಿಕ ಖುಷ್
    ಸಾರಿಗೆ ಸಂಪರ್ಕಕ್ಕೆ ಸಾರ್ವಜನಿಕ ಖುಷ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts