More

    ಅಪ್ರತಿಮ ಹೋರಾಟಗಾರರಿಗೆ ನಮನ

    ವಿಜಯಪುರ: ಅಪ್ರತಿಮ ದೇಶಭಕ್ತರು, ಸ್ವಾತಂತ್ರೃ ಹೋರಾಟಗಾರರು, ಕ್ರಾಂತಿಯ ಕಿಡಿ ಹೊತ್ತಿಸಿ ನಗು ನಗುತ್ತಾ ಗಲ್ಲಿಗೇರಿದ ಭಗತ್ ಸಿಂಗ್, ರಾಜಗುರು ಹಾಗೂ ಸುಖದೇವ ಅವರ ಹುತಾತ್ಮ ದಿನವನ್ನು ಬುಧವಾರ ಆಚರಿಸಲಾಯಿತು.ನಗರದ ವಿವಿಧ ಸಂಘಟನೆಗಳು, ದೇಶಪ್ರೇಮಿಗಳು, ಯುವ ಸಂಘಟನೆಗಳ ಮುಖಂಡರು ಹುತಾತ್ಮರಿಗೆ ವಿಶೇಷ ನಮನ ಸಲ್ಲಿಸಿ ಈ ಮೂವರ ಸಾಧನೆಗಳನ್ನು ಕೊಂಡಾಡಿದರು.

    ನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಎಐಡಿಎಸ್‌ಒ ನೇತೃತ್ವದಲ್ಲಿ ಹುತಾತ್ಮ ದಿನ ಆಚರಿಸಲಾಯಿತು. ನಿವೃತ್ತ ಪ್ರಾಚಾರ್ಯ ಸದಾಶಿವ ಪವಾರ ಮಾತನಾಡಿ, 1931 ಮಾ.23ರಂದು ಭಗತ್‌ಸಿಂಗ್, ರಾಜಗುರು, ಸುಖದೇವ್ ಅವರನ್ನು ಬ್ರಿಟಿಷ್ ಸರ್ಕಾರ ಗಲ್ಲಿಗೇರಿಸಿತು. ಇಡೀ ದೇಶ ಕಣ್ಣೀರಿಟ್ಟ ದಿನವಿದು. ಸ್ವಾತಂತ್ರ್ಯದ ಬಗ್ಗೆ ತಮ್ಮ ವಿಚಾರವನ್ನು ಭಗತ್‌ಸಿಂಗ್ ಎಷ್ಟು ಪ್ರಖರವಾಗಿ ಹರಡಿದ್ದರೆಂದರೆ ಸಾವಿರಾರು ಭಗತ್‌ಸಿಂಗ್‌ರು ಅವರ ವಿಚಾರಗಳನ್ನು ಈಡೇರಿಸಲು ಪ್ರಾಣತ್ಯಾಗಕ್ಕೆ ಸಿದ್ಧರಾಗಿ ಬೀದಿಗಿಳಿದರು ಎಂದರು.

    ಎಐಡಿಎಸ್‌ಒ ಜಿಲ್ಲಾ ಅಧ್ಯಕ್ಷೆ ಸುರೇಖಾ ಕಡಪಟ್ಟಿ ಮಾತನಾಡಿ, ಭಗತ್‌ಸಿಂಗ್ ಅವರು ಗಾಂಧೀಜಿ ಅವರ ತ್ಯಾಗದ ಕುರಿತು ಅಪಾರ ಗೌರವ ಹೊಂದಿದ್ದರೂ ಸ್ವಾತಂತ್ರ್ಯ ಸಾಧಿಸುವ ಅವರ ಮಾರ್ಗದ ಬಗ್ಗೆ ಅತ್ಯಂತ ವಿಮರ್ಶಾತ್ಮಕವಾಗಿದ್ದರು. ಪ್ರಸಕ್ತ ಸಾಮಾಜಿಕ ವ್ಯವಸ್ಥೆಯನ್ನು ಕಿತ್ತೊಗೆದಾಗ ಮಾತ್ರ ತಮ್ಮ ಸ್ವಾತಂತ್ರ್ಯದ ಕನಸು ಈಡೇರಲು ಸಾಧ್ಯ ಎಂದು ಭಗತ್‌ಸಿಂಗ್ ನಂಬಿದ್ದರು ಎಂದರು.

    ಎಐಡಿಎಸ್‌ಒ ಜಿಲ್ಲಾ ಕಾರ್ಯದರ್ಶಿ ಕಾವೇರಿ ರಜಪೂತ ಮಾತನಾಡಿದರು. ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಮುಖಂಡರು ಇದ್ದರು.

    ಹುತಾತ್ಮ ವೃತ್ತದಲ್ಲಿ ಆಚರಣೆ
    ನಗರದ ಹುತಾತ್ಮ ವೃತ್ತದಲ್ಲಿ ಎಐಡಿವೈಒ ನೇತೃತ್ವದಲ್ಲಿ ಭಗತ್‌ಸಿಂಗ್‌ರ 92ನೇ ಹುತಾತ್ಮ ದಿನ ಆಚರಿಸಲಾಯಿತು.

    ರೈತ ಕೃಷಿ ಕಾರ್ಮಿಕ ಸಂಘಟನೆ ಉಪಾಧ್ಯಕ್ಷ ಬಿ.ಭಗವಾನ್‌ರೆಡ್ಡಿ ಮಾತನಾಡಿ, ರಾಜಿ ರಹಿತ ಪಂಥದ ಅಗ್ರಮಾನ್ಯ ನಾಯಕರಾದ ಭಗತ್‌ಸಿಂಗ್ ಬಾಲ್ಯದಿಂದಲೇ ನಿಜವಾದ ರಾಷ್ಟ್ರ ಪ್ರೇಮ ಮೈಗೂಡಿಸಿಕೊಂಡಿದ್ದರು. ಅವರು ತಮ್ಮ ವಿಚಾರ ಹಾಗೂ ಸಿದ್ಧಾಂತಗಳಿಂದ ಸಾಕಷ್ಟು ಪ್ರಬುದ್ಧರಾಗಿದ್ದರು. ಈ ದೇಶವನ್ನು ಬಡವರು, ಕಾರ್ಮಿಕರು, ಶೋಷಿತ ವರ್ಗ ಆಳ್ವಿಕೆ ಮಾಡಬೇಕು ಎಂದು ಕನಸು ಕಂಡಿದ್ದರು ಎಂದರು.

    ಎಐಡಿವೈಒ ರಾಜ್ಯ ಕಾರ್ಯದರ್ಶಿ ಸಿದ್ಧಲಿಂಗ ಬಾಗೇವಾಡಿ ಮಾತನಾಡಿ, ಕಾಕೋರೆ ರೈಲು ದರೋಡೆ, ಗೋಬ್ಯಾಕ್ ಸೈಮನ್ ಆಯೋಗ, ಅಸಂಬ್ಲಿಯಲ್ಲಿ ಬಾಂಬ್ ದಾಳಿ, ಜೈಲಿನಲ್ಲಿ ಉಪವಾಸ ಸತ್ಯಾಗ್ರಹದಂಥ ಚಟುವಟಿಕೆಗಳಿಂದ ದೇಶದ ಯುವಕರಿಗೆ ಭಗತ್‌ಸಿಂಗ್ ಸ್ಫೂರ್ತಿಯಾಗಿದ್ದಾರೆ. ಯುವ ಜನತೆ ಅವರ ಆದರ್ಶ ಅನುಸರಿಸಬೇಕು ಎಂದರು.

    ಶ್ರೀಕಾಂತ ಕೊಂಡಗೂಳಿ, ಶಿವರಾಜ ನಾಗರಹಳ್ಳಿ, ಶ್ರವಣಕುಮಾರ, ಅಶೋಕ, ಗುರು, ಬಾಳು ಜೇವೂರ, ಮಹಾದೇವ ಲಿಗಾಡೆ, ಶಿಕ್ಷಣ ಉಳಿಸಿ ಸಮಿತಿ ಮುಖಂಡ ಭರತ್‌ಕುಮಾರ ಎಚ್.ಟಿ.ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts