More

    ಸಂದಿಗ್ಧತೆಯಲ್ಲಿ ಉನ್ನತ ಶಿಕ್ಷಣಾರ್ಥಿಗಳು..!


    ಪರಶುರಾಮ ಭಾಸಗಿ
    ವಿಜಯಪುರ:
    ರಾಜ್ಯಾದ್ಯಂತ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆ ಕುರಿತು ಪರ-ವಿರೋಧ ಚರ್ಚೆ ನಡೆಯುತ್ತಿರುವಾಗಲೇ ಪದವಿ ಮತ್ತು ಸ್ನಾತಕೋತ್ತರ ಪದವಿ ಪರೀಕ್ಷೆ ಚರ್ಚೆಯೂ ಮುನ್ನೆಲೆಗೆ ಬಂದಿದೆ.

    ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಇಷ್ಟೊತ್ತಿಗಾಗಲೇ ಪದವಿ ಮತ್ತು ಸ್ನಾತಕೋತ್ತರ ಪದವಿ ಪರೀಕ್ಷೆಗಳು ಮುಗಿದಿರುತ್ತಿದ್ದವು. ಆದರೆ, ಕೆಎಸ್‌ಆರ್‌ಟಿಸಿ ನೌಕರರ ಮುಷ್ಕರದಿಂದಾಗಿ ಮುಂದೂಡಲ್ಪಟ್ಟ ಪರೀಕ್ಷೆಗಳು ಬಳಿಕ ಲಾಕ್‌ಡೌನ್ ಹೊಡೆತಕ್ಕೆ ಸಂಪೂರ್ಣ ಸ್ಥಗಿತಗೊಂಡವು. ಇದೀಗ ಪರೀಕ್ಷೆ ಮುಗಿಯುವ ಮುನ್ನವೇ ಮುಂದಿನ ಸೆಮಿಸ್ಟರ್‌ಗೆ ಆನ್‌ಲೈನ್ ತರಗತಿ ನಡೆಸುವ ಸರ್ಕಾರದ ನಿರ್ಧಾರ ವಿದ್ಯಾರ್ಥಿಗಳನ್ನು ಮಾನಸಿಕವಾಗಿ ಸಂಕಷ್ಟಕ್ಕೆ ದೂಡಿದೆ.

    ಪರೀಕ್ಷೆ ಬಗ್ಗೆ ಸ್ಪಷ್ಟತೆ ಇಲ್ಲ
    ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿವಿ ಹಾಗೂ ರಾಣಿ ಚನ್ನಮ್ಮ ವಿವಿ ಸೇರಿ ವಿವಿಧ ವಿಶ್ವ ವಿದ್ಯಾಲಯಗಳು ಪದವಿ ಮತ್ತು ಸ್ನಾತಕೋತ್ತರ ಪದವಿ ಪರೀಕ್ಷೆಗಳನ್ನು ಪೂರ್ಣಗೊಳಿಸಲಾಗಿಲ್ಲ. ಮಹಿಳಾ ವಿವಿ ಪದವಿಯ 5ನೇ ಸೆಮಿಸ್ಟರ್ ಪ್ರಾಯೋಗಿಕ ಹಾಗೂ ಥಿಯರಿ ಪರೀಕ್ಷೆಗಳು ಪೂರ್ಣಗೊಂಡಿದ್ದು, ಸ್ನಾತಕೋತ್ತರ ಪದವಿಯ ಪ್ರಾಯೋಗಿಕ ಪರೀಕ್ಷೆಗಳು ಮಾತ್ರ ಪೂರ್ಣಗೊಂಡಿವೆ. ಥಿಯರಿ ಪರೀಕ್ಷೆಗಳು ನಡೆಯಬೇಕಿವೆ. ವಿವಿಯ 114 ಕೇಂದ್ರಗಳಲ್ಲಿ ಅಂದಾಜು 20 ಸಾವಿರ ವಿದ್ಯಾರ್ಥಿನಿಯರು(ಪದವಿ ಮತ್ತು ಸ್ನಾತಕೋತ್ತರ ಪದವಿ) ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ. ಹೀಗಾಗಿ ಪರೀಕ್ಷೆ ಬಗ್ಗೆ ಸರ್ಕಾರ ಕೈಗೊಳ್ಳುವ ನಿರ್ಧಾರದತ್ತ ಎಲ್ಲರೂ ಚಿತ್ತ ನೆಟ್ಟಿದ್ದಾರೆ.

    ಆನ್‌ಲೈನ್ ತರಗತಿ ಅವಾಂತರ
    ಅರ್ಧಂಬರ್ಧ ಪರೀಕ್ಷೆ ನಡೆಸಿರುವ ವಿಶ್ವ ವಿದ್ಯಾಲಯ ಮುಂದಿನ ಸೆಮಿಸ್ಟರ್‌ಗಳಿಗೆ ಆನ್‌ಲೈನ್ ತರಗತಿ ಆರಂಭಿಸಿರುವುದು ವಿದ್ಯಾರ್ಥಿಗಳನ್ನು ಮಾನಸಿಕವಾಗಿ ಸಂಕಷ್ಟಕ್ಕೆ ಸಿಲುಕಿಸಿದೆ. ಸಂಭವನೀಯ ಪರೀಕ್ಷೆಗೆ ತಯಾರಿ ನಡೆಸುವುದೋ ಇಲ್ಲಾ ಮುಂದಿನ ಸೆಮಿಸ್ಟರ್‌ನ ತರಗತಿಗಳಿಗೆ ಹಾಜರಾಗುವುದೋ ಎಂಬ ಸಂದಿಗ್ಧತೆಗೆ ಸಿಲುಕಿದ್ದಾರೆ.

    ಪರೀಕ್ಷೆ ನಡೆಸುವುದಾದರೆ ಆನ್‌ಲೈನ್ ತರಗತಿಗಳನ್ನು ನಿಲ್ಲಿಸಬೇಕು. ಇಲ್ಲವಾದರೆ ಇದನ್ನೇ ಆಧಾರವಾಗಿಟ್ಟುಕೊಂಡು ವಿವಿಗಳು ಭೌತಿಕ ತರಗತಿಗಳನ್ನು ನಡೆಸದೇ ಮುಂದಿನ ಸೆಮಿಸ್ಟರ್ ಪರೀಕ್ಷೆ ತಯಾರಿ ನಡೆಸುವ ಸಾಧ್ಯತೆ ಇದೆ. ಕಳೆದ ಬಾರಿ ಬಹುತೇಕ ಕಡೆ ಇಂಥದ್ದೇ ನೀತಿ ಅನುಸರಿಸಿದ್ದಾಗಿ ವಿದ್ಯಾರ್ಥಿಗಳು ಅಸಮಾಧಾನ ಹೊರಹಾಕಿದ್ದಾರೆ. ಹೀಗಾಗಿ ಮೊದಲು ಪರೀಕ್ಷೆಯಾದರೂ ನಡೆಸಿ ಇಲ್ಲಾ ಕಳೆದ ವರ್ಷದಂತೆ ಈ ಬಾರಿಯೂ ಹಿಂದಿನ ಸೆಮಿಸ್ಟರ್ ಫಲಿತಾಂಶದ ಆಧಾರದ ಮೇಲೆ ತೇರ್ಗಡೆಗೊಳಿಸಿ ಆ ಬಳಿಕ ಆನ್‌ಲೈನ್ ತರಗತಿ ಆರಂಭಿಸಿ ಎಂಬುದು ವಿದ್ಯಾರ್ಥಿ, ವಿದ್ಯಾರ್ಥಿನಿಯರ ಅಳಲು.

    ಪರೀಕ್ಷೆಗೆ ಸಾಕಷ್ಟು ತಯಾರಿ ಮಾಡಿಕೊಂಡಿದ್ದೆವು. ಲಾಕ್‌ಡೌನ್‌ನಿಂದಾಗಿ ವಸತಿ ನಿಲಯಗಳನ್ನು ತೊರೆದು ಹಳ್ಳಿ ಸೇರಿದ್ದೇವೆ. ಪಾಲಕರ ಆರ್ಥಿಕ ಸಮಸ್ಯೆ, ನೆಟ್‌ವರ್ಕ್ ಸಮಸ್ಯೆ ಮುಂತಾದ ಕಾರಣಗಳಿಂದಾಗಿ ಎಲ್ಲರಿಗೂ ಆನ್‌ಲೈನ್ ತರಗತಿಗೆ ಹಾಜರಾಗಲಾಗುತ್ತಿಲ್ಲ. ಇತ್ತ ಪರೀಕ್ಷೆ ಬಗ್ಗೆಯೂ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳುತ್ತಿಲ್ಲ. ಪರೀಕ್ಷೆ ನಡೆಸುವುದೇ ಆದರೆ ಆನ್‌ಲೈನ್ ತರಗತಿ ನಿಲ್ಲಿಸಿ ಓದಿಕೊಳ್ಳಲು ಬಿಡಿ. ಯಾವುದೇ ಸ್ಪಷ್ಟತೆ ಇಲ್ಲದೇ ಎರಡು ದೋಣಿಯಲ್ಲಿ ಕಾಲಿಡುವುದು ಸರಿಯಲ್ಲ.
    ಹೆಸರು ಹೇಳಲ್ಲಿಚ್ಚಿಸದ ವಿದ್ಯಾರ್ಥಿನಿ

    ಕರೊನಾ ಪರಿಸ್ಥಿತಿ ತಿಳಿಯಾಗುವವರೆಗೂ ಏನನ್ನೂ ಹೇಳಲಾಗುವುದಿಲ್ಲ. ಪರೀಕ್ಷೆ ಬಗ್ಗೆ ಸರ್ಕಾರ ತೆಗೆದುಕೊಳ್ಳುವ ನಿರ್ಧಾರವೇ ಅಂತಿಮ. ವಿದ್ಯಾರ್ಥಿನಿಯರು ಮಾನಸಿಕವಾಗಿ ಕುಗ್ಗಬೇಕಿಲ್ಲ. ಪರೀಕ್ಷೆ ನಡೆಸುವುದಾದರೆ 15 ದಿನ ಮುಂಚಿತವಾಗಿ ತಿಳಿಸಲಾಗುತ್ತದೆ. ಆನ್‌ಲೈನ್ ತರಗತಿ ಹೊರತಾಗಿಯೂ ಭೌತಿಕ ತರಗತಿ ಮೂಲಕ ಪಠ್ಯಕ್ರಮ ಪೂರ್ಣಗೊಳಿಸಲಾಗುವುದು. ಒಟ್ಟಿನಲ್ಲಿ ವಿದ್ಯಾರ್ಥಿನಿಯರಿಗೆ ಅನಾನುಕೂಲ ಆಗದ ಹಾಗೆ ನೋಡಿಕೊಳ್ಳಲಾಗುವುದು.
    ಪ್ರೊ. ರಮೇಶ ಕೆ. ಮೌಲ್ಯಮಾಪನ ಕುಲಸಚಿವ, ಕರ್ನಾಟಕ ರಾಜ್ಯ ಮಹಿಳಾ ವಿವಿ

    ಸದ್ಯದ ಪರಿಸ್ಥಿತಿಯಲ್ಲಿ ಪರೀಕ್ಷೆಗಳನ್ನು ರದ್ದುಗೊಳಿಸಬೇಕು. ಕಳೆದ ಬಾರಿಯಂತೆ ಈ ಬಾರಿಯೂ ಬಡ್ತಿ ನೀಡಬೇಕು. ಆನ್‌ಲೈನ್ ತರಗತಿಗಳು ಸಮರ್ಪಕವಾಗಿ ನಡೆಯುತ್ತಿಲ್ಲ. ಹಳ್ಳಿಗಳಲ್ಲಿ ವಿದ್ಯಾರ್ಥಿಗಳು ಎದುರಿಸುವ ಸಮಸ್ಯೆಗಳನ್ನು ಸರ್ಕಾರ ಗಮನಿಸಬೇಕು. ಕೇವಲ ತಮ್ಮ ಜವಾಬ್ದಾರಿ ಕಳೆದುಕೊಳ್ಳಲು ಇಲ್ಲದ ನೀತಿ ಅನುಸರಿಸಬಾರದು.
    ಕಾವೇರಿ ರಜಪೂತ, ಎಐಡಿಎಸ್‌ಒ ಉಪಾಧ್ಯಕ್ಷೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts