More

    ಕೃಷಿ ಕಾಯ್ದೆ ಖಂಡಿಸಿ ಕಪ್ಪು ಬಾವುಟ ಪ್ರದರ್ಶನ

    ವಿಜಯಪುರ: ಕೇಂದ್ರ ಸರ್ಕಾರ ಜಾರಿಗೊಳಿಸಿದ್ದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತಪರ ಸಂಘಟನೆಗಳು ಬುಧವಾರ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಕಪ್ಪು ಬಾವುಟ ಪ್ರದರ್ಶಿಸಿದವು.

    ರೈತ-ಕೃಷಿ ಕಾರ್ಮಿಕರ ಸಂಘಟನೆ (ಆರ್‌ಕೆಎಸ್) ವತಿಯಿಂದ ಆನ್‌ಲೈನ್‌ನಲ್ಲಿ ಪ್ರತಿಭಟಿಸಿ, ಮೋದಿ ಸರ್ಕಾರ ಜಾರಿಗೊಳಿಸಿದ ಕೃಷಿ ಕಾಯ್ದೆಗಳು ರೈತರನ್ನು ದುರ್ಗತಿಗೆ ತಳ್ಳಿವೆ. ರೈತರನ್ನು ನಾಶ ಮಾಡಿ, ಕೇವಲ ಕಾರ್ಪೊರೇಟ್ ಮನೆತನಗಳ ಬೊಕ್ಕಸವನ್ನು ತುಂಬಿಸುವುದೇ ಮೋದಿ ಸರ್ಕಾರದ ಉದ್ದೇಶವಾಗಿದೆ ಎಂದು ಸಂಘಟನೆ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ರೈಲ್ವೆ, ಏರ್‌ಪೋರ್ಟ್, ಬ್ಯಾಂಕ್, ವಿಮೆ, ಬಿಎಸ್‌ಎನ್‌ಎಲ್ ಮುಂತಾದವುಗಳನ್ನು ಕಾರ್ಪೋರೇಟ್ ಮನೆತನಗಳಿಗೆ ಮಾರಾಟ ಮಾಡಲಾಗಿದೆ. ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿವೆ. ತೈಲ ಬೆಲೆ ಗಗನಕ್ಕೇರುತ್ತಿವೆ. ಲಾಕ್‌ಡೌನ್ ಸಂದರ್ಭದಲ್ಲಿ ಉದ್ಯೋಗ ಬಂದ್ ಆಗಿರುವುದರಿಂದ ಕೋಟ್ಯಂತರ ಕಾರ್ಮಿಕರು, ಕಂಪನಿ ಉದ್ಯೋಗಿಗಳು ಮತ್ತು ದಿನಗೂಲಿ ಕಾರ್ಮಿಕರ ಜೀವನ ಸಂಕಟಮಯವಾಗಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಮುಖಂಡರಾದ ಬಿ. ಭಗವಾನರೆಡ್ಡಿ, ಬಾಳು ಜೇವೂರ, ಭೀಮಶಿ ಕಲಾದಗಿ, ಪ್ರಕಾಶ ಹಿಟ್ನಳ್ಳಿ, ಪ್ರಕಾಶ ಕಿಲಾರೆ, ಯಲ್ಲಪ್ಪ ಹರಗೆ, ಸುಮಾ ಹಡಗಲಿ, ಶ್ಯಾಸಪ್ಪ ದಳವಾಯಿ ಅಲ್ಲದೆ ಶಿವಣಗಿ, ರತ್ನಾಪುರ, ಹಡಗಲಿ, ತಾಜಪುರ, ಅತ್ತಾಲಟ್ಟಿ, ಕಣಮುಚನಾಳ, ಕನ್ನಾಳ, ಬುರಣಾಪುರ ಗ್ರಾಮದ ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

    ಮಹಿಳಾ ಸಂಘಟನೆಯಿಂದ ಹೋರಾಟ
    ಇಲ್ಲಿನ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ (ಎಐಎಂಎಸ್‌ಎಸ್) ವತಿಯಿಂದ ಕರಾಳ ದಿನ ಆಚರಿಸಲಾಯಿತು. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ನೀತಿಗಳನ್ನು ವಿರೋಧಿಸಿ ಲಕ್ಷಾಂತರ ರೈತರು ತಮ್ಮ ಪ್ರಾಣವನ್ನು ಲೆಕ್ಕಿಸದೆ ಅಚಲವಾದ ಹೋರಾಟದಲ್ಲಿ ತೊಡಗಿದ್ದಾರೆ. ಅಸಂಖ್ಯಾತ ರೈತ ಮಹಿಳೆಯರು ಕೂಡ ಈ ಹೋರಾಟದ ಮುಂಚೂಣಿಯಲ್ಲಿದ್ದಾರೆ. ಈ ಹೋರಾಟದಲ್ಲಿ 500ಕ್ಕೂ ಹೆಚ್ಚು ರೈತರು ಹುತಾತ್ಮರಾಗಿದ್ದರೂ ಕೇಂದ್ರ ಸರ್ಕಾರ ಮೌನವಹಿಸುವುದು ಖಂಡನಾರ್ಹ ಎಂದು ಸಂಘಟಕರು ಆಕ್ರೋಶ ವ್ಯಕ್ತಪಡಿಸಿದರು. ಎಐಎಂಎಸ್‌ಎಸ್ ಜಿಲ್ಲಾ ಸಂಚಾಲಕಿ ಶಿವಬಾಳಮ್ಮ ಕೊಂಡುಗೂಳಿ, ಸಹ ಸಂಚಾಲಕಿ ಗೀತಾ ಎಚ್. ಸದಸ್ಯರಾದ ಶಿವರಂಜನಿ ಎಸ್.ಬಿ, ಮಹಾದೇವಿ ಧರ್ಮಶೆಟ್ಟಿ, ರಶ್ಮಿ ದೇವರಹಿಪ್ಪರಗಿ, ಲತಾ ತರಾಸೆ, ಕಮಲಾ ತೇಲಿ ಮೊದಲಾದವರು ಭಾಗವಹಿಸಿದ್ದರು.

    ಕಾರ್ಮಿಕ ಸಂಘಟನೆಯಿಂದ ಪ್ರತಿಭಟನೆ
    ಇಲ್ಲಿನ ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್(ಎಐಯುಟಿಯುಸಿ) ಜಿಲ್ಲಾ ಸಮಿತಿ ವತಿಯಿಂದ ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ಖಂಡಿಸಿ ಆನ್‌ಲೈನ್ ಪ್ರತಿಭಟನೆ ನಡೆಸಲಾಯಿತು.

    ಸಂಘಟನೆ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಎಚ್.ಟಿ. ಮಾತನಾಡಿ, ಮೂರು ಕೃಷಿ ಕಾಯ್ದೆಗಳನ್ನು ಹಾಗೂ ವಿದ್ಯುತ್ ಮಸೂದೆ ವಾಪಸ್ ಪಡೆಯಬೇಕು. ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತ್ರಿ ಮಾಡುವ ಕೇಂದ್ರೀಯ ಶಾಸನ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.

    ಜಿಲ್ಲಾ ಕಾರ್ಯದರ್ಶಿ ಸುನೀಲ ಸಿದ್ರಾಮಶೆಟ್ಟಿ, ಉಪಾಧ್ಯಕ್ಷೆ ಕಾಸಿಬಾಯಿ ಜನಗೊಂಡ, ದ್ಯಾಮಣ್ಣ ಬಿರಾದಾರ, ಮಹಾದೇವಿ ಧರ್ಮಶೆಟ್ಟಿ, ಭಾರತಿ ದೇವಕತೆ, ಲಕ್ಷ್ಮೀ ಲಕ್ಷೆಟ್ಟಿ, ಶಶಿಕಲಾ ಮ್ಯಾಗೇರಿ, ಅಂಬಿಕಾ ಒಳಸಂಗ, ಕಾಸಿಬಾಯಿ ತಳವಾರ, ಮಲ್ಲಿಕಾರ್ಜುನ ಹಿರೇಮಠ ಇನ್ನಿತರರು ಪಾಲ್ಗೊಂಡಿದ್ದರು.

    ಜುಮನಾಳದಲ್ಲಿ ರೈತರ ಆಕ್ರೋಶ
    ದೆಹಲಿಯಲ್ಲಿ ರೈತ ಸಂಘಟನೆಗಳು ಕರೆ ನೀಡಿದ್ದ ಕರಾಳ ದಿನಾಚರಣೆಗೆ ಬೆಂಬಲಿಸಿ ವಿಜಯಪುರ ತಾಲೂಕಿನ ಜುಮನಾಳದ ರೈತರು ಕಪ್ಪು ಬಾವುಟ ಪ್ರದರ್ಶಿಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

    ಮುಖಂಡ, ವಕೀಲ ಶ್ರೀನಾಥ ಪೂಜಾರಿ ಮಾತನಾಡಿ, ಅನ್ನ ನೀಡುವ ರೈತ ಹಲವಾರು ತಿಂಗಳುಗಳಿಂದ ಬೀದಿಯಲ್ಲಿ ಕುಳಿತು ಪ್ರತಿಭಟನೆ ನಡೆಸುತ್ತಿದ್ದರೆ ಕೇಂದ್ರ ಸರ್ಕಾರ ಆ ಬಗ್ಗೆ ನಿರ್ಲಕ್ಷೃ ವಹಿಸುತ್ತಿದೆ. ದೇಶದ ಬೆನ್ನೆಲುಬಾದ ರೈತನನ್ನು ಸರ್ಕಾರ ಇಂದು ಬೀದಿಗೆ ತಂದಿದೆ. ಅವನ ಕಷ್ಟವನ್ನು ಕೇಳದಿರುವುದು ದುರ್ದೈವದ ಸಂಗತಿ ಎಂದರು. ಬಸವ ಸೈನ್ಯ ಸಂಘಟನೆ ಜಿಲ್ಲಾ ಪ್ರಮುಖ ಶಾಂತವೀರ ತಾಲಬಾವಡಿ, ಮುಖಂಡರಾದ ದೇವು ದೊಡ್ಡಮನಿ, ರಾಕೇಶ ಕುಮಟಗಿ, ಅಬ್ದುಲ್ ಹಮೀದ್ ಇನಾಮದಾರ, ಶರಣು ಅರಳಗೂಂಡಗಿ ಮುಂತಾದವರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts