More

    ವಿಜಯಪುರ ಪ್ರವೇಶಕ್ಕೆ ನಿರಾಕರಣೆ

    ತೆಲಸಂಗ: ಗ್ರಾಮದ ಹೊರವಲಯದ ಬೆಳಗಾವಿ- ವಿಜಯಪುರ ಗಡಿಯಲ್ಲಿನ ಚೆಕ್‌ಪೋಸ್ಟ್‌ನಲ್ಲಿ ಅನುಮತಿ ಪಡೆದುಕೊಂಡು ಬಂದವರಿಗೂ ವಿಜಯಪುರ ಜಿಲ್ಲೆ ಹೊನಾವಾಡ ಚೆಕ್‌ಪೋಸ್ಟ್ ಸಿಬ್ಬಂದಿ ಪ್ರವೇಶಕ್ಕೆ ನಿರಾಕರಿಸುತ್ತಿದ್ದು, ಸಮಸ್ಯೆಗೆ ಸಿಲುಕಿದ ಕೂಲಿ ಕಾರ್ಮಿಕರನ್ನು ಅಥಣಿ ತಹಸೀಲ್ದಾರ್ ದುಂಡಪ್ಪ ಕೋಮಾರ ಮತ್ತು ತಾಪಂ ಇಒ ರವಿ ಬಂಗಾರೆಪ್ಪನವರ ಭೇಟಿ ಮಾಡಿದರು.

    ಗುಳೆ ಹೋಗಿದ್ದ ವಿಜಯಪುರ ಜಿಲ್ಲೆಯ ಕೂಲಿ ಕಾರ್ಮಿಕರು ನೂರಾರು ಸಂಖ್ಯೆಯಲ್ಲಿ ನಿತ್ಯವೂ ಜಿಲ್ಲೆಯ ಗಡಿ ಮೂಲಕ ಸ್ವಗ್ರಾಮಕ್ಕೆ ತೆರಳಲು ಆಗಮಿಸುತ್ತಿದ್ದಾರೆ. ಮಕ್ಕಳು ಮರಿಗಳೊಂದಿಗೆ ಬಂದಿರುವ ಜನರಿಗೆ ವಿಜಯಪುರ ಜಿಲ್ಲೆ ಹೊನವಾಡ ಚೆಕ್‌ಪೋಸ್ಟ್ ಸಿಬ್ಬಂದಿ ಮಹಾರಾಷ್ಟ್ರದ ಧೂಳಖೇಡ್ ಚೆಕ್‌ಪೋಸ್ಟ್ ಮೂಲಕ ಬರುವಂತೆ ಹೇಳುತ್ತಿದ್ದಾರೆ. ಹೀಗಾಗಿ ಊಟವೂ ಇಲ್ಲದೆ ಇಲ್ಲಿಯೇ ಕಾಯ್ದು ಕುಳಿತುಕೊಳ್ಳುವಂತಾಗಿದೆ ಎಂದು ಕಾರ್ಮಿಕರು ತಮ್ಮ ಅಳಲು ತೋಡಿಕೊಂಡರು.

    ಗ್ರಾಮಕ್ಕೆ ತೆರಳು ಅವಕಾಶ ಕೊಡಿ: ರಾಜ್ಯ ಹೆದ್ದಾರಿ ಮೂಲಕ ಕಲಬುರಗಿ ಗೆ ತೆರಳುವವರನ್ನು ಧೂಳಖೇಡ್ ಚೆಕ್‌ಪೋಸ್ಟ್ ಮೂಲಕವೇ ತೆರಳಲು ಸೂಚಿಸುವುದು ಸೂಕ್ತವಲ್ಲ. ಇನ್ನು ಸ್ವ ಜಿಲ್ಲೆಯ ಕಾರ್ಮಿಕರಿಗೆ ಪ್ರವೇಶ ನಿರಾಕರಿಸಿದರೆ ಹೇಗೆ? ನಮ್ಮ ಜಿಲ್ಲೆಯ ಜನ ಬಂದರೆ ಅವರನ್ನು ಅವರ ಸ್ವ ಗ್ರಾಮದಲ್ಲಿ ಕ್ವಾರಂಟೈನ್ ಮಾಡಲಾಗುತ್ತಿದೆ. ಅನ್ಯ ಜಿಲ್ಲೆಯ ಜನರನ್ನು ನಮ್ಮಲ್ಲಿ ಕ್ವಾರಂಟೈನ್ ಮಾಡಿದರೆ 14 ದಿನಗಳ ನಂತರವೇ ಅವರನ್ನು ಅವರ ಜಿಲ್ಲೆಗೆ ಕಳುಹಿಸುತ್ತೇವೆ. ನಂತರ ಆ ಜಿಲ್ಲೆಯವರು ಅವರನ್ನು ಮತ್ತೆ 14 ದಿನ ಕ್ವಾರಂಟೈನ್ ಮಾಡಿದರೆ ತೊಂದರೆಯಾಗಲಿದೆ ಹೀಗಾಗಿ ಇವರೆಲ್ಲರ ತಪಾಸಣೆ ಮಾಡಿಸಿ ಕಳುಹಿಸಿಕೊಡಿ ಎಂದು ತಹಸೀಲ್ದಾರ್ ಹಾಗೂ ತಾಪಂ ಇಒ, ಚೆಕ್‌ಪೋಸ್ಟ್ ಸಿಬ್ಬಂದಿಗೆ ಸೂಚಿಸಿದರು.

    ಇದಕ್ಕೆ ಪ್ರತಿಕ್ರಿಯಿಸಿದ ಹೊನಾವಾಡ ಚೆಕ್‌ಪೋಸ್ಟ್ ಸಿಬ್ಬಂದಿ, ಧೂಳಖೇಡ್ ಚೆಕ್‌ಪೋಸ್ಟ್‌ನಲ್ಲಿ ವೈದ್ಯಕೀಯ ಪರೀಕ್ಷೆ ಮಾಡಿಸಿಕೊಂಡು ಬಂದವರಿಗೆ ಮಾತ್ರ ಜಿಲ್ಲೆಯಲ್ಲಿ ಪ್ರವೇಶ ನೀಡುವಂತೆ ಜಿಲ್ಲೆಯ ಹಿರಿಯ ಅಧಿಕಾರಿಗಳು ನಮಗೆ ಆದೇಶ ನೀಡಿದ್ದಾರೆ ಎಂದರು. ಅಲ್ಲದೆ, ಕಾರ್ಮಿಕರಿಗೆ ಮುಂದೆ ತೆರಳಲು ನಿರಾಕರಿಸಿದರು.

    ಅಥಣಿ ಉಪ ತಹಸೀಲ್ದಾರ್ ಎಂ.ಎಸ್. ಯತ್ನಟ್ಟಿ, ಪಿಡಿಒ ಬೀರಪ್ಪ ಕಡಗಂಚಿ, ಗ್ರಾಮ ಲೆಕ್ಕಾಧಿಕಾರಿ ಬಿ.ಜಿ. ಇರಕರ್ ಇದ್ದರು.

    ಸ್ಥಳೀಯರಿಂದ ಕಾರ್ಮಿಕರಿಗೆ ಊಟದ ವ್ಯವಸ್ಥೆ

    ಹೊಟ್ಟೆ ಹಸಿದು ಕಣ್‌ಕಣ್ ಬಿಡುತ್ತಿದ್ದ ಕಾರ್ಮಿಕರು, ಪುಟ್ಟ ಕಂದಮ್ಮಗಳನ್ನು ನೋಡಿದ ತೆಲಸಂಗ ಗ್ರಾಮದ ಶಿವಾನಂದ ಬನಗೊಂಡ, ಚೆನ್ನು ದಶಮಾ, ಮುರಗೇಶ ಸಕ್ರಿ, ಜೆ.ಎಂ. ಪಾಟೀಲ, ದಯಾನಂದ ಕುಮಠಳ್ಳಿ, ಸಂತೋಷ ಬಡಿಗೇರ, ಸಿದ್ದು ಸಕ್ರಿ, ವಿನಯ ಗಂಗಾಧರ, ದಾನು ಕರ್ಣಿ, ಸಂಗು ಕುಮಠಳ್ಳಿ, ರಾಜು ಕುಮಠಳ್ಳಿ, ಡಾ. ಎಸ್.ಐ.ಇಂಚಗೇರಿ, ರಸೂಲ ಅತ್ತಾರ ಇವರುಗಳು ಅನ್ನ ಸಾಂಬಾರ ರೊಟ್ಟಿ, ಪಲ್ಲೆ ಬಡಿಸಿ ಮಾನವೀಯತೆ ಮೆರೆದರು.

    ಅನುಮತಿ ಪತ್ರ ಕೊಡುವಾಗ ಅವರಿಗೆ ಯಾವ ಚೆಕ್‌ಪೋಸ್ಟ್ ಮೂಲಕ ತೆರಳಬೇಕು ಎಂಬುದನ್ನು ನಮೂದಿಸಿರುತ್ತಾರೆ. ಅಲ್ಲಿಂದಲೇ ತೆರಳಬೇಕು. ಜಿಲ್ಲೆಯ ಧೂಳಖೇಡ್ ಚೆಕ್‌ಪೋಸ್ಟ್‌ನಲ್ಲಿ ವೈದ್ಯಕೀಯ ಪರೀಕ್ಷೆ ಮಾಡಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಅನುಮತಿ ಪತ್ರದಲ್ಲಿರುವ ಮಾರ್ಗದಲ್ಲಿಯೇ ಪ್ರವೇಶಿಸಲು ಹಾಗೂ ಹೊರಗೆ ಬಿಡಲು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
    | ಸಂತೋಷ ಮ್ಯಾಗೇರಿ ತಹಸೀಲ್ದಾರ್ ತಿಕೋಟಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts