More

    ರಾಜ್ಯದ 31ನೇ ಜಿಲ್ಲೆ ವಿಜಯನಗರ ಇಂದು ಅಧಿಕೃತ ಮುದ್ರೆ; ನನಸಾದ ದಶಕಗಳ ಕನಸು, ಸಿಎಂ ಅವರಿಂದ ಚಾಲನೆ..

    | ಪ್ರಭು ಹಂಪಾಪಟ್ಟಣ ಹೊಸಪೇಟೆ

    ಅಖಂಡ ಬಳ್ಳಾರಿ ಜಿಲ್ಲೆಯ ಪಶ್ಚಿಮ ತಾಲೂಕುಗಳ ಜನರ ದಶಕಗಳ ಹೋರಾಟ ಫಲವಾಗಿ ರಾಜ್ಯದ 31ನೇ ಜಿಲ್ಲೆಯಾಗಿ ಘೊಷಣೆಯಾಗಿರುವ ವಿಜಯನಗರ ಜಿಲ್ಲೆಗೆ ಅ.2ರ ಗಾಂಧಿ ಜಯಂತಿಯಂದು ಅಧಿಕೃತ ಮುದ್ರೆ ಬೀಳಲಿದೆ. ಹೊಸಪೇಟೆ ನಗರವನ್ನು ಕೇಂದ್ರಸ್ಥಾನವನ್ನಾಗಿಸಿ ವಿಜಯನಗರ ಜಿಲ್ಲೆ ರಚನೆ ಮಾಡಬೇಕೆಂಬ ಕೂಗು 1997ರಿಂದ ಕೇಳಿಬಂದಿತ್ತು. ಹೋರಾಟಕ್ಕೆ ಎರಡು ದಶಕದ ಇತಿಹಾಸವಿದೆ. ವಿಜಯನಗರ ಜಿಲ್ಲಾ ಹೋರಾಟ ಸಮಿತಿಯೊಂದಿಗೆ ಸಂಘ-ಸಂಸ್ಥೆಗಳೂ ಜತೆಗೂಡಿ ದಶಕಗಳ ಕಾಲ ನಿರಂತರ ಪ್ರತಿಭಟನೆ ನಡೆಸಿವೆ. ಹೋರಾಟಕ್ಕೆ ಕೈಜೋಡಿಸಿದ ಆನಂದ ಸಿಂಗ್ ಸಹ ಜಿಲ್ಲೆಯನ್ನಾಗಿಸಲು ಪಣತೊಟ್ಟಿದ್ದರು. ಬಿ.ಎಸ್.ಯಡಿಯೂರಪ್ಪ ಆಡಳಿತವಿದ್ದಾಗ ಜಿಲ್ಲೆಯನ್ನಾಗಿಸುವಂತೆ ಪಟ್ಟು ಹಿಡಿದಿದ್ದರು. ಇದಕ್ಕೆ ಬಿಎಸ್​ವೈ ಭರವಸೆ ನೀಡಿ, ಕೊಟ್ಟ ಮಾತಿನಂತೆ 2021ರ ಫೆ.7ರಂದು ವಿಜಯನಗರ ಜಿಲ್ಲೆಯನ್ನಾಗಿ ಘೊಷಿಸಿದರು. ಈಗ ಜಿಲ್ಲೆಗೆ ಉದ್ಘಾಟನಾ ಸುಸಂದರ್ಭ ಬಂದಿದ್ದು, ಅ.2 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕೃತ ಚಾಲನೆ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸಹ ಪಾಲ್ಗೊಳ್ಳಲಿದ್ದಾರೆ.

    ಬೆಂಗಳೂರಿಗೆ ತೆರಳಿದ್ದ ನಿಯೋಗ: ಎಚ್.ಆರ್.ಗವಿಯಪ್ಪ ಶಾಸಕರಾಗಿದ್ದಾಗ ಅವರ ನೇತೃತ್ವದಲ್ಲಿ ವಿವಿಧ ಪಕ್ಷಗಳ ಮುಖಂಡರು, ಬುದ್ಧಿಜೀವಿಗಳು, ಸಂಘ-ಸಂಸ್ಥೆಗಳ ಹಿರಿಯರ ನಿಯೋಗ ಬೆಂಗಳೂರಿಗೆ ತೆರಳಿ ಅಂದಿನ ಜಿಲ್ಲಾ ಉಸ್ತುವಾರಿ ಮತ್ತು ಗೃಹ ಸಚಿವ ಎಂ.ಪಿ.ಪ್ರಕಾಶರನ್ನು ಭೇಟಿ ಮಾಡಿತ್ತು. ಬಳಿಕ ಸಚಿವರ ಸಮ್ಮುಖದಲ್ಲಿ ಅಂದಿನ ಸಿಎಂ ಎಚ್.ಡಿ.ಕುಮಾರಸ್ವಾಮಿ ಹಾಗೂ ಡಿಸಿಎಂ ಯಡಿಯೂರಪ್ಪರನ್ನು ಭೇಟಿ ಮಾಡಲಾಯಿತು. 2019ರಲ್ಲಿ ಮತ್ತೊಮ್ಮೆ ಬೆಂಗಳೂರಿಗೆ ತೆರಳಿದ ನಿಯೋಗವು ಸಿಎಂ ಆಗಿದ್ದ ಯಡಿಯೂರಪ್ಪಗೆ ಮತ್ತೊಮ್ಮೆ ಮನವಿ ಸಲ್ಲಿಸಿತು. ನಿಯೋಗದಲ್ಲಿ ಉಜ್ಜಯಿನಿ ಪೀಠದ ಸಿದ್ಧಲಿಂಗ ರಾಜದೇಶಿ ಕೇಂದ್ರ ಶಿವಾಚಾರ್ಯರು, ಕೊಟ್ಟೂರುಸ್ವಾಮಿ ಮಠದ ಸಂಗನಬಸವ ಶ್ರೀಗಳು, ನಾನಾ ಮಠಾಧೀಶರು, ಆನಂದ ಸಿಂಗ್, ವಿಪ ಸದಸ್ಯ ಕೆ.ಸಿ.ಕೊಂಡಯ್ಯ, ರಾಜುಗೌಡ, ಸಂಸದ ಜಿ.ಎಂ.ಸಿದ್ದೇಶ್ವರ, ನಿಂಬಗಲ್ ರಾಮಕೃಷ್ಣ, ವೈ.ಯಮುನೇಶ್ ಇದ್ದರು.

    ಹೀಗೆ ಒಟ್ಟಾರೆ ಸರ್ವಸಮುದಾಯಗಳು, ಪಕ್ಷಾತೀತ ಹೋರಾಟದ ಫಲವಾಗಿ ಜಿಲ್ಲೆ ಘೊಷಣೆಯಾಗಿದೆ. ಉದ್ಘಾಟನೆ ಹಿನ್ನೆಲೆಯಲ್ಲಿ ಪಶ್ಚಿಮ ತಾಲೂಕುಗಳಲ್ಲಿ ಸಂಭ್ರಮ ಮನೆ ಮಾಡಿದೆ. ಕೇಂದ್ರ ಸ್ಥಾನ ಹೊಸಪೇಟೆ ನಗರವು ಮಧುವಣಗಿತ್ತಿಯಂತೆ ಸಿಂಗಾರಗೊಂಡಿದೆ. ಉದ್ಘಾಟನಾ ಸಮಾರಂಭ ಅದ್ದೂರಿಯಾಗಿ ನಡೆಸಬೇಕೆಂದು ಸಚಿವ ಆನಂದ ಸಿಂಗ್ ಉದ್ದೇಶಿಸಿದ್ದರು. ಕೋವಿಡ್ ಕಾರಣದಿಂದಾಗಿ ಎರಡು ದಿನಗಳಿಗೆ ಕಾರ್ಯಕ್ರಮ ಸೀಮಿತಗೊಳಿಸಲಾಗಿದೆ. ಬಹುತೇಕ ಸಚಿವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಗಾಯಕರಾದ ವಿಜಯಪ್ರಕಾಶ್, ಎಂ.ಡಿ.ಪಲ್ಲವಿ, ಶಮಿತಾ ಮಲ್ನಾಡ್, ಪ್ರವೀಣ್ ಗೋಡ್ಖಿಂಡಿ ಪ್ರೇಕ್ಷಕರನ್ನು ರಂಜಿಸಲಿದ್ದಾರೆ.

    ಹೋರಾಟದ ಹಾದಿ: 1997ರಲ್ಲಿ ಜಿಲ್ಲೆ ವಿಂಗಡಣೆ ಸಂದರ್ಭದಲ್ಲಿಯೇ ವಿಜಯನಗರ ಜಿಲ್ಲೆ ರಚನೆಯಾಗಬೇಕಿತ್ತು. ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ಇದು ಕನಸಾಗೇ ಉಳಿಯಿತು. ತದನಂತರ ಡಾ.ಉಳ್ಳೇಶ್ವರ್, ಮಲ್ಲಾರಿ ದೀಕ್ಷಿತ್, ಮಲ್ಲಿನಾಥ ಮುಂತಾದವರು ಜಿಲ್ಲೆ ರಚನೆ ಸಾಧ್ಯತೆ ಬಗ್ಗೆ ರ್ಚಚಿಸಿದರೂ ಹೋರಾಟಕ್ಕೆ ತಾತ್ವಿತ ಸ್ವರೂಪ ದೊರೆತಿರಲಿಲ್ಲ. ಜಿಲ್ಲಾ ರಚನೆ ಬೇಡಿಕೆಗೆ ವ್ಯಾಪಕ ಸ್ವರೂಪ ನೀಡಲು 2006-07ರಲ್ಲಿ ನಗರದ ಗಂಗಾಪರಮೇಶ್ವರಿ ಸಮುದಾಯ ಭವನದಲ್ಲಿ ಪ್ರಮುಖ ಸಂಘ-ಸಂಸ್ಥೆಗಳ ಮುಖಂಡರ ಸಭೆ ಆಯೋಜಿಸಲಾಗಿತ್ತು. ಪ್ರತ್ಯೇಕ ಜಿಲ್ಲೆ ರಚನೆ ಮಾಡಲೇಬೇಕೆಂಬ ಹೋರಾಟದ ಪಯಣ ಆರಂಭವಾಗಿದ್ದು ಇದೇ ಸಮುದಾಯ ಭವನದಿಂದ.

    ವಿಜಯನಗರ ಜಿಲ್ಲೆಗಾಗಿ ಮಠಮಾನ್ಯಗಳ ಶ್ರೀಗಳು, ಹೋರಾಟಗಾರರು, ಸಂಘ- ಸಂಸ್ಥೆಗಳು ನೂರಾರು ದಿನಗಳ ಕಾಲ ಉಪವಾಸ ಸತ್ಯಾಗ್ರಹ ಮಾಡಿದ್ದಾರೆ. ಇದರ ಫಲವಾಗಿ ನನ್ನ ಅವಧಿಯಲ್ಲಿ ಜಿಲ್ಲೆ ಘೊಷಣೆ ಆಗಿರುವುದು ನನ್ನ ಜೀವನದ ಸೌಭಾಗ್ಯ.

    | ಆನಂದ ಸಿಂಗ್ ಪರಿಸರ, ಪ್ರವಾಸೋದ್ಯಮ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts